ಭಾರತೀಯ ಪರಂಪರೆಯಲ್ಲಿ ವಿಶ್ವಕರ್ಮರಿಗೆ ವಿಶಿಷ್ಟ ಸ್ಥಾನವಿದೆ. ದೇವಶಿಲ್ಪಿಯಾಗಿ ಪರಿಗಣಿಸಲ್ಪಡುವ ವಿಶ್ವಕರ್ಮರು ತಮ್ಮ ಅಪೂರ್ವ ಶಿಲ್ಪಕೌಶಲ್ಯ, ಸೃಜನಶೀಲತೆ ಮತ್ತು ನಿರ್ಮಾಣ ಕಲೆಯಿಂದ ಪುರಾಣಗಳಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ದ್ವಾರಕಾ ನಗರ ಹಾಗೂ ಇಂದ್ರನ ಭವನ ನಿರ್ಮಾಣದೊಂದಿಗೆ ವಿಶ್ವಕರ್ಮರ ಹೆಸರು ಚಿರಸ್ಥಾಯಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ್ ಹೇಳಿದರು.
ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಕರ್ಮರು ಕೇವಲ ಶಿಲ್ಪಕಲೆಯ ಪ್ರತೀಕವಲ್ಲ; ಕಾಯಕ, ಕೌಶಲ್ಯ, ಪರಿಶ್ರಮ ಮತ್ತು ಸೃಜನಶೀಲತೆಯ ಸಂಕೇತ. ಅವರ ಹೆಸರಿನಲ್ಲಿ ಆಚರಿಸಲಾಗುವ ಜಯಂತಿ ವೃತ್ತಿ ಕೌಶಲ್ಯಕ್ಕೆ ಗೌರವ ಸಲ್ಲಿಸುವ ದಿನವಾಗಿದೆ. ಇಂದಿನ ಯುವಜನತೆ ವಿಶ್ವಕರ್ಮರ ಕಾಯಕ ತತ್ವವನ್ನು ಅಳವಡಿಸಿಕೊಂಡು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಉಪನ್ಯಾಸ ನೀಡಿದ ಕಾಶೀನಾಥ ಕೋಣೆನವರ, ವಿಶ್ವಕರ್ಮರ ಶಿಲ್ಪ, ಕಲೆ ಮತ್ತು ನಿರ್ಮಾಣ ಕೌಶಲ್ಯದ ಪರಂಪರೆ ಇಂದಿಗೂ ಪ್ರಸ್ತುತವಾಗಿದೆ. ಯಾವುದೇ ವೃತ್ತಿಯನ್ನು ಕೀಳಾಗಿ ಕಾಣದೆ, ಕಾಯಕದಲ್ಲಿ ನೈಪುಣ್ಯ ಸಾಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿಶ್ವಕರ್ಮರ ಪರಿಶ್ರಮ, ಸೃಜನಶೀಲತೆ ಹಾಗೂ ವೃತ್ತಿಪರ ನೈಪುಣ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೋಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀದೇವಿ ಪತ್ತಾರ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮೂರುಸಾವರ ಮಹೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮೋಹನ ಕಟ್ಟಿಮನಿ, ಜಿಲ್ಲಾ ಪಂಚಾಯಿತಿ ಉಪ ನಿರ್ದೇಶಕ ನಾಗಭೂಷಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ, ವಲಯ ಉಪ ಆಯುಕ್ತ ಮೋಹನ ಜಾಧವ, ಮನೋಹರ ಪತ್ತಾರ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವಿಶ್ವಕರ್ಮ ಜಯಂತಿ ಕೇವಲ ಆಚರಣೆಯಲ್ಲ; ಕಾಯಕ, ಕೌಶಲ್ಯ ಮತ್ತು ಸೃಜನಶೀಲತೆಗೆ ಸಮಾಜ ನೀಡುವ ಗೌರವ ಎಂಬ ಸಂದೇಶ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿತು.




