ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ ಒಟ್ಟು 10 ತಾಲೂಕುಗಳು ಬರಪೀಡಿತ ಪಟ್ಟಿ ಸೇರಿದ್ದು, ಕೇಂದ್ರ ಸರ್ಕಾರದ ಬರ ನಿರ್ವಹಣಾ ನಿಯಮಾವಳಿಗಳ ಅನ್ವಯ ಜಿಲ್ಲೆಯ ಮುದ್ದೇಬಿಹಾಳ, ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಉಳಿದಂತೆ ಇಂಡಿ, ಚಡಚಣ ಹಾಗೂ ತಾಳಿಕೋಟೆ ತಾಲೂಕುಗಳನ್ನೂ ಕೇಂದ್ರ ಸರ್ಕಾರದ ನಿಯಮಾವಳಿ, ಲಭ್ಯ ಮಾಹಿತಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಈ ವರ್ಷ ಮಳೆ ಅಭಾವದಿಂದ ವಿಜಯಪುರ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸೆಟಲೈಟ್ ಮಾಹಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾಹಿತಿಗಳನ್ನು ಆಧರಿಸಿ ಹಂತ ಹಂತವಾಗಿ ಬರಪೀಡಿತ ತಾಲೂಕುಗಳನ್ನು ಗುರುತಿಸಿ ಘೋಷಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 53 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ವಿಜಯಪುರ ಜಿಲ್ಲೆಯ ನಾಲ್ಕು ತಾಲೂಕುಗಳು ಇದರಲ್ಲಿ ಸೇರಿವೆ.
ಮುದ್ದೇಬಿಹಾಳ, ಆಲಮೇಲ ಹಾಗೂ ದೇವರಹಿಪ್ಪರಗಿ ತಾಲೂಕುಗಳನ್ನು ಮಧ್ಯಮ ಬರಪೀಡಿತ ತಾಲೂಕುಗಳೆಂದು ಹಾಗೂ ಸಿಂದಗಿ ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೇತೃತ್ವದಲ್ಲಿ ರೈತರ ಹಿತದೃಷ್ಟಿಯಿಂದ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.
ಬರಪೀಡಿತ ತಾಲೂಕುಗಳ ಘೋಷಣೆಗೆ ಆಗ್ರಹಿಸಿ ವಿವಿಧ ತಾಲೂಕುಗಳಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟಗಳ ಹಿನ್ನೆಲೆಯಲ್ಲಿ, ಇದೀಗ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದರಿಂದ ಹೋರಾಟ ಕೈಬಿಡುವಂತೆ ಸಚಿವ ಎಂ.ಬಿ ಪಾಟೀಲ ರೈತ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.
ಇನ್ನುಳಿದ ತಾಲೂಕುಗಳನ್ನೂ ನಿಯಮಾನುಸಾರ ಬರಪೀಡಿತ ಎಂದು ಘೋಷಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.




