ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು ಈ ಸಂತ್ರಸ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಜಾಪ್ರಭುತ್ವದ ಅತ್ಯುನ್ನತ ಪೀಠದಲ್ಲಿರುವ ಅವರು, ತಮ್ಮ ಸ್ವಕ್ಷೇತ್ರದ ಈ ದಶಕದ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕಿದೆ. ಕೂಡಲೇ ಭೂಮಿಯ ಸರ್ವೇ ನಂಬರ್ ಗುರುತಿಸಿ, ಗೊಂದಲ ರಹಿತವಾಗಿ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಬಡವರ ಬದುಕಿಗೆ ಶಾಶ್ವತ ನೆರಳು ಕಲ್ಪಿಸುವುದು ಜನಪ್ರತಿನಿಧಿಗಳು ಮತ್ತು ಸ್ಥಳೀಯ ಆಡಳಿತದ ತುರ್ತು ಕರ್ತವ್ಯವಾಗಿದೆ.
“ನನ್ನ ಮೊಮ್ಮಕ್ಕಳು ಲಗ್ನ ಆಗಾಕ ಬಂದ್ರು, ನಮ್ಮ ತಂದಿ-ತಾಯಿ ತೀರ್ಕಂಡ್ರು, ಅಜ್ಮುತ್ಯಾರ ತೀರ್ಕಂಡ್ರು, ನಿಮಗ ಜಾಗ ಕೊಡ್ತಿವಿ ಅಂತ ಹೇಳಿ ಹಕ್ಕುಪತ್ರ ಕೊಟ್ರು, ರೆಜಿಸ್ಟರ್ ಮಾಡಿಸಾಕ ಕಿವಿಯಾನ್ ಸಾಮಾನ್ ಮಾರಿ ಕೊಟ್ವಿ. ಹನ್ಯಾಡು, ಹದ್ಮೂರು ವರ್ಷ ಆತು ಅಲ್ಲಿಂದ ಇಲ್ಲಿ ವರ್ಗೂ
ಹ್ಯಾಂಗ್ ಇರ್ಬೇಕು ಹೇಳ್ರಿ. ನಮ್ಗೂ ಕಷ್ಟ ಆಗುತ್ತಿಲ್ರಿ. ಗೌಡ್ರ ಜಾಗದಾಗ ಅದೀವಿ. ಅವರು ಇಂದಲ್ಲ ನಾಳೆ ಕಿತ್ತು ಒಗೆಯೋರ. ನಮಗ ಇರಾಕ ನೆಳ್ಳಿಲ್ಲ. ಇದ್ದೌವ್ರ ಯಾರರ ಕರದ್ರ ಅವರ ಮನಿಗೆ ಹೋಗಿ ಕಸ-ಮುಸ್ರಿ ಬಂಡೆ ತಿಕ್ಕಿ ಜೀವ್ನ ಸಾಗಿಸೋರು. ನಮಗೇನ್ ಆಧಾರ್ ಐತಿ. ಇದ್ರು ಇಲ್ಲಾರ್ದಂಗ ಐತಿ. ಇಲ್ಲಿ ಕುಡಿಯಾಕ ನೀರಿಲ್ಲ, ಮಕ್ಳಿಗೆ ಓದಾಕ ಕರೆಂಟ್ ಇಲ್ಲ. ಆ ಮಕ್ಳಿಗೆ ಆ ಸೌಭಾಗ್ಯನೂ ಇಲ್ಲ, ನಮಗೂ ಇಲ್ಲ” ಎಂದು ಜನತ್ತಬಿ ಕರ್ನೂಲ ತಮ್ಮ ನೋವನ್ನು ತೋಡಿಕೊಂಡರು.
ಇತ್ತೀಚಿಗೆ ವಿಧಾನಸಭೆಯ ನೂತನ ಸಭಾಧ್ಯಕ್ಷ ಹುದ್ದೆ ಅಲಂಕರಿಸಿದ ಜಿ ಎಸ್ ಪಾಟೀಲ್ ಅವರ ವಿಧಾನಸಭಾ ಕ್ಷೇತ್ರ ರೋಣ ಪಟ್ಟಣದಲ್ಲಿ ನಿವೇಶನ ರಹಿತರಿಗೆ ‘ನಿವೇಶನ ಹಕ್ಕುಪತ್ರ ನೀಡಿ, ಹದಿಮೂರು ವರ್ಷಗಳು ಕಳೆದರೂ ಇನ್ನೂ ನಿವೇಶನ ಸಿಗದ ಎಂಬತ್ತು ವರ್ಷದ ಜನತ್ತಬಿ ಕರ್ನೂಲ್ ಅವರ ಒಡಲಾಳದ ನೋವಿನ ಮಾತುಗಳು ಕೇಳಿದ್ರೆ ಯಾರಿಗಾದರು ಕರಳು ಚುರ್ ಎನ್ನದೇ ಇರಲೂ ಸಾಧ್ಯವೆ…?
ಗದಗ ಜಿಲ್ಲೆಯ ರೋಣ ಪಟ್ಟಣದ ಮೆಹಬೂಬ್ ನಗರ, ಗಾಂಧಿ ನಗರ ಸೇರಿದಂತೆ ಪಟ್ಟಣದಲ್ಲಿ ಸ್ವಂತ ಜಾಗ ಇಲ್ಲದೆ, ಯಾರ್ಯಾರದೋ, ಖಾಸಗಿ ಜಾಗದಲ್ಲಿ ಪುಟ್ಟಪುಟ್ಟ ತಗಡಿನ ಶೀಟ್ ಹೊದಿಕೆಯ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಮನೆಯ ಸುತ್ತ ಗಬ್ಬು ವಾಸನೆ, ಇಲ್ಲಿ ವಾಸಿಸುವ ಕುಟುಂಬಗಳಿಗೆ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಮೂವತ್ತು ನಲವತ್ತು ವರ್ಷಗಳಿಂದ ಬದುಕುತ್ತಿರುವ ಜನರಿಗೆ ಇವತ್ತೋ, ಇಲ್ಲವೇ ನಾಳೆಯೋ ಅಥವಾ ನಾಡಿದ್ದೊ… ಒಕ್ಕಲೆಬ್ಬಿಸುವ ಭಯಲ್ಲಿಯೇ ಇದ್ದಾರೆ. ಪ್ರವಾಹದೊಳಗೆ ಸಿಲುಕಿದವರಿಗೆ ಹುಲ್ಲು ಕಡ್ಡಿ ಆಸರೆಯಂತೆ ‘ನಿವೇಶನ ಹಕ್ಕುಪತ್ರ’ ಹಿಡಿದು ಶಾಸಕರ ಮನೆಗೊಮ್ಮೆ, ತಹಶೀಲ್ದಾರರ ಕಚೇರಿಗೆ, ಪುರಸಭೆ ಕಚೇರಿಗೊಮ್ಮೆ ಅಲೆದು ಅಲೆದು ಯೌವ್ವನವೇ ಮುಪ್ಪಾದವರು, ಮುಪ್ಪಾಗುತ್ತಿದ್ದವರೂ, ನನಗಲ್ಲದಿದ್ದರೂ ನನ್ನ ಮಕ್ಕಳು, ಮೊಮ್ಮಕ್ಕಳು ಸ್ವಂತ ಜಾಗದಲ್ಲಿ ನೆಮ್ಮದಿಯಿಂದ ಬದುಕಬೇಕೆಂದು ಮತ್ತೆ ಮತ್ತೆ ‘ನಿವೇಶನ ಹಕ್ಕುಪತ್ರ’ ಹಿಡಿದು ಅದೇ ಕಚೇರಿ, ಅದೇ ಅಧಿಕಾರಿಗಳ…. ಬಳಿ ಹೋಗಿ ನಿವೇಶನ ಕೊಡಿ ಎಂದು ಅಂಗಲಾಚುವ ದುಃಸ್ಥಿತಿ ಎದುರಾಗಿದೆ.

ಮೂಲಭೂತ ಸೌಕರ್ಯವಿಲ್ಲ: ಪಟ್ಟಣದ ಮೆಹಬೂಬ್ ನಗರ ಹಾಗೂ ಗಾಂಧಿ ನಗರದ ಖಾಸಗಿ ಜಾಗದಲ್ಲಿ ಮೂವತ್ತು ನಲವತ್ತು ವರ್ಷಗಳಿಂದ ವಾಸಿಸುವ ಕುಟುಂಬಗಳಿದ್ದು, ಎಸ್‌ಸಿ/ಎಸ್‌ಟಿ, ಕುರುಬ, ಮುಸ್ಲಿಂ ಸಮುದಾಯಗಳು ಸೇರಿದಂತೆ ಹಿಂದುಳಿದ ವರ್ಗದ ಸಮುದಾಯದವರು ಬದುಕುತ್ತಿದ್ದಾರೆ. ಇವರಿಗೆ ಯಾವುದೇ ರೀತಿಯ ಮೂಲಸೌಲಭ್ಯವಿಲ್ಲ. ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಇಲ್ಲ. ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳೂ ಈವರೆಗೆ ಅಲ್ಲಿಯ ಜನರಿಗೆ ದೊರಕಿಲ್ಲ. ಕುಡಿಯುವ ನೀರಿಗಾಗಿ ಅಲೆಯಬೇಕಾಗಿದೆ. ಮೆಹಬೂಬ ನಗರದ ಚೌಡಮ್ಮನ ಗುಡಿಯಲ್ಲಿ ಒಂದೇ ಒಂದು ಕರೆಂಟ್ ಪ್ಲಗ್ ಇದ್ದು, ಎಲ್ಲರೂ ಅಲ್ಲಿಯೇ ಮೊಬೈಲ್ ಚಾರ್ಜ್ ಮಾಡಿಕೊಂಡು, ಮಿಕ್ಸಿ ಮಾಡಿಕೊಳ್ಳಬೇಕು. ಇಲ್ಲಿಯ ಎಲ್ಲ ಮಕ್ಕಳು ಈ ಗುಡಿಗೆ ಬಂದು ಓದಿಕೊಳ್ಳುವ ಪರಿಸ್ಥಿತಿ ಇದೆ. ಪಕ್ಕದಲ್ಲಿಯೇ ಗಟಾರದ ಗಬ್ಬುವಾಸನೆಗೆ ಸೊಳ್ಳೆಗಳು ಜಾಸ್ತಿ ಆಗಿದ್ದರಿಂದ ಸ್ಥಳೀಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.
846 ನಿವೇಶನ ಹಕ್ಕುಪತ್ರ ವಿತರಣೆ: ರೋಣ ಪಟ್ಟಣದ ಮೆಹಬೂಬ್ ನಗರ, ಗಾಂಧಿ ನಗರ ಸೇರಿದಂತೆ ನಗರದಲ್ಲಿರುವ ನಿವೇಶನರಹಿತ ಕುಟುಂಬಗಳು ನಿವೇಶನಕ್ಕಾಗಿ ಅರ್ಜಿಸಲ್ಲಿಸಿದ್ದರು. ವಾಜಪೇಯಿ ನಗರ ನಿವೇಶನ ಯೋಜನೆ ಅಡಿಯಲ್ಲಿ 2013ರಲ್ಲಿ 1039 ಫಲಾನುಭವಿಗಳಲ್ಲಿ 846 ಫಲಾನುಭವಿಗಳಿಗೆ ‘ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ. “ಈ ನಿವೇಶನ ಹಕ್ಕು ಪತ್ರದಲ್ಲಿ ಫಲಾನುಭವಿಗಳಿಗೆ ನೀಡಿ ಹನ್ನೆರಡು ಹದಿಮೂರು ವರ್ಷಗಳು ಕಳೆದರೂ ಇನ್ನೂ ಹಂಚಿಕೆಯಾಗಿಲ್ಲ” ಎಂಬುದು ಸಂತ್ರಸ್ತ ಫಲಾನುಭವಿಗಳ ಕಳವಳವಾಗಿದೆ.
ನಿವೇಶನ ಹಕ್ಕು ಪತ್ರದಲ್ಲಿ ಸರ್ವೇ ನಂಬರ್ ಇಲ್ಲ: ನಿವೇಶನ ರಹಿತರಿಗೆ ನೀಡಿರುವ ‘ನಿವೇಶನ ಹಕ್ಕುಪತ್ರ’ ವಿತರಿಸಲಾಗಿದ್ದು, ಅದರಲ್ಲಿ ಒಬ್ಬೊಬ್ಬರಿಗೆ 600 ಚದರ ಅಡಿ(20×30) ಜಾಗ ನಮೂದಿಸಲಾಗಿದೆ. ಕ್ರಮ ಸಂಖ್ಯೆಯನ್ನೂ ನಮೂದಿಸಲಾಗಿದೆ. ಆದರೆ ಸರ್ವೇ ನಂಬರ್ ಹಾಕದೆ(ಖಾಲಿ ಬಿಟ್ಟಿದ್ದಾರೆ) ಹಾಗೆ ಬಿಟ್ಟು ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಫಲಾನುವಭವಿಗಳಲ್ಲಿ ಗೊಂದಲ ಉಂಟಾಗಿದೆ.

ನಿವೇಶನ ಹಕ್ಕುಪತ್ರ ನೊಂದಣಿ: ನಿವೇಶನ ಹಕ್ಕುಪತ್ರ ಪಡೆದ ಫಲಾನುಭವಿಗಳು ಕೆಲವರು ಸಬ್ ರಿಜಿಸ್ಟರ್ ನಲ್ಲಿ ನೊಂದಿಣಿ ಮಾಡಿ ಕೊಂಡಿರುವರು. ಕೆಲವರು ಮಾಡಿಕೊಂಡಿಲ್ಲ. ಎಲ್ಲರಿಗೂ ನಿವೇಶನ ಹಂಚಿಕೆ ಮಾಡಬೇಕು ಎಂದು ಸ್ಲಂ ಜನಾಂದೋಲನ ತಾಲೂಕುಮುಖಂಡ ಬಸವರಾಜ ಕುರಿ ಒತ್ತಾಯಿಸಿದರು.
36 ಎಕರೆ 10 ಗುಂಟೆ ಜಾಗ ಖರೀದಿ: ನಿವೇಶನ ಹಕ್ಕು ಪತ್ರ ವಿತರಿಸಲಾದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಮುದೇನಗುಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ 36 ಎಕರೆ 10 ಗುಂಟೆ ಜಾಗವನ್ನು ಸರ್ಕಾರ ಖರೀದಿ ಮಾಡಿ ಸುಮಾರು ವರ್ಷಗಳೇ ಕಳೆದಿವೆ. ಈಗ ಈ ಜಾಗದಲ್ಲಿ ಮುಳ್ಳು-ಕಂಟಿ ಬೆಳೆದು ನಿಂತಿದೆ.
ಈ ದಿನ.ಕಾಮ್ ಜತೆಗೆ ನಿವೇಶನ ಹಕ್ಕುಪತ್ರ ಪಡೆದ ಫಲಾನುಭವಿ ಸಾಯಿರಾಬಾನು ತರಪದಾರ ಮಾತನಾಡಿ, “ಶಾಸಕರು ಜಿ ಎಸ್ ಪಾಟೀಲ್ ಅವರ ಜಾಗದಾಗ ತಗಡ ಹಾಕ್ಕೊಂಡು ಇದೀವಿ. ಅವರು ಕಿತ್ಗೊಂಡು ಹೋಗ್ರಿ ಅನ್ನುಮಟ ಇಲ್ಲೇ ಇರ್ತಿವಿ. ಒಂದು ಆಶ್ರಯ ಮನಿ ಇಲ್ಲರೀ, ಏನಂದ್ರ ಏನಿಲ್ಲರಿ. ಕರೆಂಟ್ ಇಲ್ಲ, ಮಳಿ ಆದ್ರ ಬಾಳ ಸಮಸ್ಯೆ ಆಗ್ತೈತ್ರಿ. ನಮ್ಮ ಮಕ್ಳಿಗೆ ಸ್ಕಾಲರ್ ಶಿಫ್ ಇಲ್ಲರಿ. ಏನು ಸೌಲತ್ತಿಲ್ಲ. ಹದಿಮೂರು ವರ್ಷ ಆತ್ರಿ ಹಕ್ಕುಪತ್ರ ಕೊಟ್ಟು. ನಿವೇಶನ ಕೊಡ್ರಿ ಅಂತ ಅಧಿಕಾರಿಗಳನ್ನ ಕೇಳಿದ್ರ ಕೊಡ್ತಿವಿ ಕೊಡ್ತಿವಿ ಅಂತ ಹೇಳ್ತಾನ ಬಂದಿದ್ದಾರ್ರಿ. ಇನ್ನೂ ಕೊಟ್ಟಿಲ್ಲ” ಎಂದು ಹೇಳಿದರು.

ಈ ದಿನ.ಕಾಮ್ ಜತೆಗೆ ಮಾತನಾಡಿದ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರು ಇಮ್ತಿಯಾಜ ಆರ್ ಮಾನ್ವಿ ಮಾತನಾಡಿ, “2013ರಲ್ಲಿ ಗದಗ ಜಿಲ್ಲೆಯ ರೋಣ ಪಟ್ಡಣದಲ್ಲಿ ನೂರಾರು ಬಡ ಕುಟುಂಬದ ನಿವೇಶನರಹಿತ ಕುಟುಂಬಗಳಿಗೆ ತಹಶೀಲ್ದಾರ್ ಅವರು ನಿವೇಶನ ಹಕ್ಕುಪತ್ರವನ್ನು ಹಂಚಿಕೆ ಮಾಡಿದ್ದಾರೆ. ಆದರೆ ನಿವೇಶನ ಹಕ್ಕುಪತ್ರದಲ್ಲಿ ರೋಣ ಪಟ್ಟಣದಲ್ಲಿ ಯಾವ ಸರ್ವೇ ನಂಬರ್‌ನಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬುದೂ ಇಲ್ಲ. ನಿವೇಶನ ಹಕ್ಕುಪತ್ರ ಪಡೆದುಕೊಂಡಿರುವ ನೂರಾರು ಫಲಾನುಭವಿಗಳು ಕಚೇರಿಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಯಾವ ಸರ್ವೇ ನಂಬರ್‌ನಲ್ಲಿ ಹಕ್ಕುಪತ್ರಗಳನ್ನು ಹಂಚಿಕೆ ಮಾಡಿದ್ದಾರೆಂಬುದನ್ನು ತಿಳಿಸಬೇಕು. ನಿವೇಶನ ಹಕ್ಕುಪತ್ರದ ಪ್ರಕಾರ ಭೂಮಿಯನ್ನು ಗುರುತಿಸಿ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು. ನೂತನ ಸಭಾಧ್ಯಕ್ಷರಾಗಿರುವ ಜಿ ಎಸ್ ಪಾಟೀಲರ ಕ್ಷೇತ್ರದಲ್ಲಿ ನಿವೇಶನ ಹಕ್ಕುಪತ್ರ ಕೊಟ್ಟು ಹದಿಮೂರು ವರ್ಷಗಳು ಕಳೆದರೂ ಇಂದಿಗೂ ನಿವೇಶನ ಹಂಚಿಕೆ ಮಾಡಿಲ್ಲ. ತಾವೂಗಳು ಈಗ ಸಭಾಧ್ಯಕ್ಷರಾಗಿದ್ದೀರಿ ಅವರಿಗೆ ನಿವೇಶನ ಹಂಚಿಕೆಮಾಡಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ” ಎಂದು ಒತ್ತಾಯಿಸಿದರು.
ರೋಣ ಪಟ್ಟಣದಲ್ಲಿ ವಾಸಿಸುವ ನಿವೇಶನ ರಹಿತ ಕುಟುಂಬಗಳು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ ಬದುಕು ನಡೆಸುತ್ತಿದ್ದಾರೆ. ಇವರಿಗೆ ನಿವೇಶನ ಹಕ್ಕುಪತ್ರ ನೀಡಿ, ಹದಿಮೂರು ವರ್ಷಗಳು ಕಳೆದರೂ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಅವರಿಗೆ ನಿವೇಶನ ಹಂಚಿಕೆ ಮಾಡಿ ಅವರ ಬದುಕಿಗೆ ದಾರಿ ಮಾಡಿ ಕೊಡುವರೇ ಕಾದುನೋಡಬೇಕು.
ರೋಣ ಪಟ್ಟಣದ ಬಡ ಕುಟುಂಬಗಳ ಈ ದುಃಸ್ಥಿತಿಯು ಕೇವಲ ಆಡಳಿತಾತ್ಮಕ ವಿಳಂಬವಲ್ಲ, ಬದಲಿಗೆ ಬಡವರ ಬದುಕಿನ ಹಕ್ಕಿನ ಮೇಲಾದ ತೀವ್ರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಹನ್ನೆರಡು-ಹದಿಮೂರು ವರ್ಷಗಳ ಹಿಂದೆ ‘ಹಕ್ಕುಪತ್ರ’ ಎಂಬ ಭರವಸೆಯ ಬೆಳಕು ನೀಡಿದ ಸರ್ಕಾರ, ಸರ್ವೇ ನಂಬರ್ ಸಹ ನಮೂದಿಸದೆ ಬಡವರ ಆಶೋತ್ತರಗಳನ್ನು ಅತಂತ್ರ ಸ್ಥಿತಿಗೆ ತಳ್ಳಿರುವುದು ಅತ್ಯಂತ ಶೋಚನೀಯ.
ಇದನ್ನೂ ಓದಿದ್ದೀರಾ? ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ ಪೆರಿಯಾರ್ ಯಾರು?
ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್ ಮತ್ತು ಶೌಚಾಲಯಗಳಿಂದ ವಂಚಿತರಾಗಿ, ಖಾಸಗಿ ಜಾಗದಿಂದ ಒಕ್ಕಲೆಬ್ಬಿಸುವ ಭೀತಿಯಲ್ಲಿ ದಿನ ದೂಡುತ್ತಿರುವ ಈ ಜನರ ಆಕ್ರೋಶ ಹಾಗೂ ಕಣ್ಣೀರು ನ್ಯಾಯಯುತವಾದದ್ದು. ತಾಲೂಕು ಆಡಳಿತ ಈಗಾಗಲೇ 36 ಎಕರೆ 10 ಗುಂಟೆ ಜಾಗವನ್ನು ಖರೀದಿ ಮಾಡಿದ್ದರೂ, ಅದು ಮುಳ್ಳುಕಂಟಿ ಬೆಳೆದು ಪಾಳುಬಿದ್ದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು ಈ ಸಂತ್ರಸ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಜಾಪ್ರಭುತ್ವದ ಅತ್ಯುನ್ನತ ಪೀಠದಲ್ಲಿರುವ ಅವರು, ತಮ್ಮ ಸ್ವಕ್ಷೇತ್ರದ ಈ ದಶಕದ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕಿದೆ. ಕೂಡಲೇ ಭೂಮಿಯ ಸರ್ವೇ ನಂಬರ್ ಗುರುತಿಸಿ, ಗೊಂದಲ ರಹಿತವಾಗಿ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಬಡವರ ಬದುಕಿಗೆ ಶಾಶ್ವತ ನೆರಳು ಕಲ್ಪಿಸುವುದು ಜನಪ್ರತಿನಿಧಿಗಳು ಮತ್ತು ಸ್ಥಳೀಯ ಆಡಳಿತದ ತುರ್ತು ಕರ್ತವ್ಯವಾಗಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



