ಮೊಬೈಲ್ ಫೋನ್ ಖರೀದಿಸಿ ಅದರ ಕಂತು (ಇಎಂಐ) ಕಟ್ಟದಿದ್ದಕ್ಕೆ ಯುವಕನೊಬ್ಬನನ್ನು ಅಪಹರಿಸಿ, ಬಲವಂತವಾಗಿ ರಕ್ತ ತೆಗೆಸಿ ಮಾರಾಟ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ.
ನಾಲ್ಕು ದಿನಗಳ ಕಾಲ ಯುವಕನನ್ನು ಕೂಡಿಹಾಕಿ, ಆತನಿಂದ ಬಲವಂತವಾಗಿ ಕೂಲಿ ಕೆಲಸ ಮಾಡಿಸಿದ ಆರೋಪದ ಮೇಲೆ ಇಬ್ಬರು ಸಾಲ ವಸೂಲಾತಿ ಏಜೆಂಟರನ್ನು (ರಿಕವರಿ ಏಜೆಂಟ್) ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರನ್ನು ಖಾಸಗಿ ಕ್ರೆಡಿಟ್ ಫೈನಾನ್ಸ್ ಕಂಪನಿಯೊಂದರ ಹಣಕಾಸು ವ್ಯವಸ್ಥಾಪಕ ಸುಶಾಂತ್ ಶರ್ಮಾ (31) ಹಾಗೂ ವಸೂಲಾತಿ ಏಜೆಂಟ್ ಅನಿಕೇತ್ ಸಿಂಗ್ (26) ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ, ಫೀಲ್ಡ್ ಏಜೆಂಟ್ ಆಗಿರುವ ಶುಭಂ ಸಿಂಗ್ ತಲೆಮರೆಸಿಕೊಂಡಿದ್ದಾನೆ. ನೆವಲ್ ಕುಮಾರ್ ಎಂಬುವವರೇ ಕಿರುಕುಳಕ್ಕೊಳಗಾದ ಯುವಕ.
ನೆವಲ್ ಕುಮಾರ್ ಅವರು ಫೈನಾನ್ಸ್ ಮೂಲಕ ಮೊಬೈಲ್ ಖರೀದಿಸಿದ್ದು, ಅದರ ಕಂತುಗಳನ್ನು ಪಾವತಿಸದೆ ಸುಸ್ತಿದಾರರಾಗಿದ್ದರು. ಬಾಕಿ ಹಣ ವಸೂಲಿಗಾಗಿ ಆರೋಪಿಗಳು ಹಲವು ಬಾರಿ ನೆವಲ್ ಮನೆಗೆ ಅಲೆದಾಡಿದ್ದರು. ಆದರೆ, ಆತ ಸಿಕ್ಕಿರಲಿಲ್ಲ. ಮನೆಗೆ ಪದೇ ಪದೇ ಅಲೆದಾಡಿ ವಾಹನದ ಇಂಧನ ಖರ್ಚಾಗಿದ್ದರಿಂದ ತೀವ್ರ ಕೋಪಗೊಂಡಿದ್ದ ಆರೋಪಿಗಳು, ಆತನಿಗೆ ತಕ್ಕ ‘ಬುದ್ಧಿ ಕಲಿಸಲು’ ನಿರ್ಧರಿಸಿದ್ದರು.
ಅಂತೆಯೇ ನೆವಲ್‌ನನ್ನು ಅಪಹರಿಸಿದ್ದ ಆರೋಪಿಗಳು, ತಮಗೆ ಪರಿಚಯವಿದ್ದ ರಕ್ತದಾನ ಕೇಂದ್ರವೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಯುವಕನ ಒಪ್ಪಿಗೆಯಿಲ್ಲದೆ ಬಲವಂತವಾಗಿ ಒಂದು ಯುನಿಟ್ ರಕ್ತ ತೆಗೆಸಿ, ಇತರ ಸಹಚರರ ನೆರವಿನೊಂದಿಗೆ ಅದನ್ನು ಮಾರಾಟ ಮಾಡಿದ್ದಾರೆ. ಈ ಅಕ್ರಮ ಕೃತ್ಯದಲ್ಲಿ ರಕ್ತದಾನ ಕೇಂದ್ರದ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಲಖನೌ ದಕ್ಷಿಣ ವಿಭಾಗದ ಡಿಸಿಪಿ ಮೊಹಮ್ಮದ್ ಮುಷ್ತಾಕ್ ತಿಳಿಸಿದ್ದಾರೆ.
ರಕ್ತ ಮಾರಾಟ ಮಾಡಿದ ಬಳಿಕ ಆರೋಪಿಗಳು ನೆವಲ್‌ನನ್ನು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಶುಭಂ ಸಿಂಗ್‌ನ ಮನೆಗೆ ಕರೆದೊಯ್ದು 4 ದಿನಗಳ ಕಾಲ ಕೂಡಿಹಾಕಿದ್ದರು. ಅಲ್ಲದೆ, ಮನೆಯ ಛಾವಣಿಯ ಪ್ಲಾಸ್ಟರ್ ಒಡೆಯುವ ಕೂಲಿ ಕೆಲಸವನ್ನು ಆತನಿಂದ ಬಲವಂತವಾಗಿ ಮಾಡಿಸಿದ್ದಾರೆ. ಇದರ ಜತೆಗೆ, ಆತನಿಂದ ಬಾಕಿ ಇದ್ದ ಮೊಬೈಲ್ ಕಂತಿನ ಹಣವನ್ನೂ ವಸೂಲಿ ಮಾಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ತಮ್ಮ ಮಗ ನಾಪತ್ತೆಯಾಗಿರುವ ಕುರಿತು ನೆವಲ್ ತಾಯಿ ಜದುರಾಯ್ ಅವರು ನಿಗೊಹಾನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 143(3), 146, 127(3) ಹಾಗೂ 115(2) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತಲೆಮರೆಸಿಕೊಂಡಿರುವ ಶುಭಂ ಪತ್ತೆಗಾಗಿ ಶೋಧ ಮುಂದುವರಿದಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಸುಳಿವು ನೀಡಿದವರಿಗೆ ₹25,000 ಬಹುಮಾನ ನೀಡುವುದಾಗಿಯೂ ಪೊಲೀಸರು ಘೋಷಿಸಿದ್ದಾರೆ. ಆರೋಪಿಗಳು ತಮ್ಮ ವೃತ್ತಿಪರ ಹುದ್ದೆಯನ್ನು ಬಳಸಿಕೊಂಡು ಸಾಲ ಸುಸ್ತಿದಾರರ ಮಾಹಿತಿಯನ್ನು ಪಡೆದು, ಈ ರೀತಿಯ ಅಪರಾಧ ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ.




