ವಿಶ್ವಮಟ್ಟದ ವೈದ್ಯಕೀಯ ಸೇವೆಗಳನ್ನು ಉತ್ತರ ಕರ್ನಾಟಕ ಭಾಗದ ಜನತೆಗೆ ಒದಗಿಸುವ ಉದ್ದೇಶದಿಂದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ. ಹೊಸ 3D ಮತ್ತು 4K ಅನುಕೂಲ ಹೊಂದಿದ ವ್ಯವಸ್ಥೆಗಳು ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ರೋಗಿ ಸೇವೆಯಲ್ಲಿ ಮಹತ್ತರ ಬದಲಾವಣೆ ತರಲಿವೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹೇಳಿದರು.
ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ನೂತನವಾಗಿ ಅಳವಡಿಸಲಾಗಿರುವ ಅತ್ಯಾಧುನಿಕ ಲ್ಯಾಪ್ರೊಸ್ಕೋಪಿ ಮತ್ತು ಆರ್ಥ್ರೊಸ್ಕೋಪಿ ಯಂತ್ರಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
“ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ವೈದ್ಯಕೀಯ ತಜ್ಞರು, ಈ ತಂತ್ರಜ್ಞಾನದಿಂದ ರೋಗಿಗಳಿಗೆ ಇನ್ನಷ್ಟು ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿದ್ದು, ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಸೇವೆಗಳು ಮತ್ತಷ್ಟು ಬಲವಾಗಲಿವೆ. ಸುಧಾರಿತ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಹತ್ವದ ಆರೋಗ್ಯ ಸೇವೆ ರೋಗಿಗಳಿಗೆ ಒದಗಿಸಲಾಗುತ್ತದೆ” ಎಂದು ಅವರು ಹೇಳಿದರು.
“ಜನರಲ್ ಸರ್ಜರಿ ವಿಭಾಗಕ್ಕೆ ಅತ್ಯಾಧುನಿಕ ಕಾರ್ಲಸ್ಟೋರ್ಜ್ ರುಬಿನಾ ಲ್ಯಾಪ್ರೊಸ್ಕೊಪಿ ಸೆಟ್(‘Karl Storz Rubina Laparoscopy Set) ಗಾಲ್ ಬ್ಲಾಡರ್ ಚಿಕಿತ್ಸೆ, ಅಪೆಂಡಿಕ್ಸ್, ಹರ್ನಿಯಾ ಸೇರಿದಂತೆ ನಾನಾ ಜಟಿಲ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚು ನಿಖರವಾಗಿ ನಡೆಸಲು ಅನುಕೂಲವಾಗಿದೆ. ಅಲ್ಲದೇ, ಆರ್ಥೊಸ್ಕೋಪಿಕ್ ಶಸ್ತ್ರ ಚಿಕಿತ್ಸೆಗೆ ಬಳಸಲಾಗುವ ಕೀಲುದರ್ಶಕ ಯಂತ್ರ(ಸ್ಟ್ರೈಕರ್ ಆರ್ಥೊಸ್ಕೋಪಿ) ಎಲುಬು ಮತ್ತು ಕೀಲು ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ವರದಾನವಾಗಲಿದೆದ. ಈ ತಂತ್ರತ್ರಜ್ಞಾನ ಬಳಕೆಯಿಂದ ರೋಗಿಗಳಿಗೆ ಕಡಿಮೆ ನೋವು, ಕಡಿಮೆ ರಕ್ತಸ್ರಾವ ಹಾಗೂ ವೇಗವಾದ ಚೇತರಿಕೆ ಸಾಧ್ಯವಾಗಲಿದೆ. ಗ್ರಾಮೀಣ ಹಾಗೂ ಬಡ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ ತಲುಪಿಸಬೇಕು ಎನ್ನುವ ನಮ್ಮ ಸಂಕಲ್ಪಕ್ಕೆ ಇದು ಮತ್ತೊಂದು ಬಲವಾದ ಹೆಜ್ಜೆಯಾಗಿದೆ” ಎಂದು ಸಚಿವರು ಹೇಳಿದರು.
ಇದನ್ನೂ ಓದಿ>ವಿಜಯಪುರ | ₹300 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಎಂ ಬಿ ಪಾಟೀಲ್ ಭೂಮಿಪೂಜೆ
ಈ ಸಂದರ್ಭದಲ್ಲಿ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ ಎಂ ಜಯರಾಜ, ಕುಲಪತಿ ಡಾ. ಅರುಣ ಚಂ ಇನಾಮದಾರ, ಕುಲಸಚಿವ ಡಾ. ಆರ್ ವಿ ಕುಲಕರ್ಣಿ, ಕಾಲೇಜಿನ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲ್ಲಭ, ಹಿರಿಯ ಉಪಪ್ರಚಾರ್ಯ ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಟಿ. ಕಲ್ಯಾಣಪ್ಪಗೋಳ, ಉಪಪ್ರಾಚಾರ್ಯ ಡಾ. ಆನಂದ ಅಂಬಲಿ, ವೈದ್ಯಕೀಯ ಅಧೀಕ್ಷಕ ಡಾ. ಎಸ್ ಎನ್ ಬೆಂಟೂರ್ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿಭಾಗದ ಮುಖ್ಯಸ್ಥರು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.




