ವಡಗೇರಾ ತಾಲೂಕಿನ ಕುರಕುಂದಿ ಗ್ರಾಮದ ಶ್ರೀ ದಂಡಗುಂಡ ಬಸವೇಶ್ವರ ಆಗ್ರೋ ಸಂಸ್ಥೆಯಲ್ಲಿ ರೈತರಿಗೆ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಗಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಲಾಗಿದ್ದು, ಜಿಎಸ್‌ಟಿ ನಿಯಮಾನುಸಾರ ಬಿಲ್ ನೀಡದೆ ನಕಲಿ ಬಿಲ್ ನೀಡಲಾಗಿದೆ ಎಂದು ಆರೋಪಿಸಿ, ಸಂಸ್ಥೆಯ ಲೈಸೆನ್ಸ್ ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸುವಂತೆ ಕರ್ನಾಟಕ ರೈತ ಪ್ರಾತ ಸಂಘವು ಶುಕ್ರವಾರ ಶಾಹಪುರದ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಸಂಘದ ಗ್ರಾಮ ಘಟಕದ ಅಧ್ಯಕ್ಷ ಭೀಮರಾಯ ಸಾಹುಕಾರ್ ಕುರಕುಂದಾ ಮಾತನಾಡಿ, ಕುರಕುಂದಿ ಗ್ರಾಮದ ರೈತ ಈರಣ್ಣ ಸಾಹುಕಾರ ಪ್ಯಾಟಿ ಅವರು ಶ್ರೀ ದಂಡಗುಂಡ ಬಸವೇಶ್ವರ ಆಗ್ರೋ ಸಂಸ್ಥೆಯಿಂದ ಒಂದು ಚೀಲ ಡಿಎಪಿ ಹಾಗೂ ಒಂದು ಚೀಲ ಯೂರಿಯಾ ಖರೀದಿಸಿದ್ದು, ಗರಿಷ್ಠ ಚಿಲ್ಲರೆ ಬೆಲೆಗಿಂತ ಹೆಚ್ಚಿನ ದರವನ್ನು ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಖರೀದಿ ವೇಳೆ ಜಿಎಸ್‌ಟಿ ನಿಯಮಾನುಸಾರ ಅಧಿಕೃತ ಬಿಲ್ ನೀಡದೆ ನಕಲಿ ಬಿಲ್ ನೀಡಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ ಎಂದು ಹೇಳಿದರು.
ಈ ಕುರಿತು ಕೃಷಿ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಬೇಕು. ಆರೋಪಗಳು ಸಾಬೀತಾದಲ್ಲಿ ಸಂಬಂಧಿತ ಆಗ್ರೋ ಸಂಸ್ಥೆಯ ಲೈಸೆನ್ಸ್ ರದ್ದುಪಡಿಸಿ, ಕಪ್ಪುಪಟ್ಟಿಗೆ ಸೇರಿಸುವುದರೊಂದಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ರೈತರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಬಸ್ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ
ಈ ಪ್ರಕರಣದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ರೈತರ ಹಿತಾಸಕ್ತಿಗಾಗಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರೈತ ಪ್ರಾತ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.




