ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಸಾಮಾಜಿಕ ಅಸ್ಪೃಶ್ಯತೆ, ಭೂಮಿ ಹಾಗೂ ಮೂಲಭೂತ ಸೌಲಭ್ಯಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ನಡೆಯಬೇಕಾದ ದಲಿತ ಸಭೆಗಳು ಕೇವಲ ಹಾಜರಾತಿ, ಚಹಾ ಹಾಗೂ ಫೋಟೋ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು ಎಂದು ದಸಂಸ ಅಂಬೇಡ್ಕರ್ ಮಾರ್ಗ ಜಿಲ್ಲಾ ಯುವ ಮುಖಂಡ ವಿಶ್ವ ನಾಟೇಕಾರ್ ಆಗ್ರಹಿಸಿದರು.
ನಗರದಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿ ಮಾತನಾಡಿದ ಅವರು, ‘ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ನಿಯಮಿತವಾಗಿ ದಲಿತ ಸಭೆಗಳನ್ನು ನಡೆಸಿ, ದಲಿತ ಸಮುದಾಯದ ಜನರನ್ನು ವ್ಯಾಪಕವಾಗಿ ಆಹ್ವಾನಿಸಿ ಅವರ ನೈಜ ಸಮಸ್ಯೆಗಳನ್ನು ಆಲಿಸಬೇಕು. ಸಭೆಯಲ್ಲಿ ಪ್ರಸ್ತಾಪವಾಗುವ ಪ್ರತಿಯೊಂದು ಸಮಸ್ಯೆಯನ್ನು ದಾಖಲಿಸಿ, ಸಂಬಂಧಪಟ್ಟ ಇಲಾಖೆಗೆ ಕಳುಹಿಸುವುದರ ಜೊತೆಗೆ, ಸಮಸ್ಯೆ ಪರಿಹಾರವಾಗುವವರೆಗೆ ಅಧಿಕಾರಿಗಳು ನಿರಂತರವಾಗಿ ಹಿಂಬಾಲಿಸಬೇಕು’ ಎಂದು ಒತ್ತಾಯಿಸಿದರು.
‘ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆಯುವ ಕೆಲವು ದಲಿತ ಸಭೆಗಳಲ್ಲಿ ಕೆಲವೇ ಮುಖಂಡರನ್ನು ಆಹ್ವಾನಿಸಿ, ಹಾಜರಾತಿ ಪಡೆದು, ಚಹಾ ಕುಡಿದು ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮಗಳಾಗುತ್ತಿವೆ ಎಂಬ ಆರೋಪಗಳಿವೆ. ಇಂತಹ ಸಭೆಗಳಿಂದ ದಲಿತ ಸಮುದಾಯದ ನೈಜ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ. ಸಭೆಯ ಉದ್ದೇಶವೇ ವಿಫಲವಾಗುತ್ತದೆ’ ಎಂದು ಅವರು ಟೀಕಿಸಿದರು.
‘ಪ್ರತಿ ತಿಂಗಳ ಎರಡನೇ ಭಾನುವಾರದಂದು ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ದಲಿತ ಸಭೆಗಳನ್ನು ನಡೆಸಬೇಕು. ಸಭೆಯ ನಡವಳಿ, ಚರ್ಚೆಯಾದ ಸಮಸ್ಯೆಗಳು, ಕೈಗೊಂಡ ನಿರ್ಣಯಗಳು ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳ ವಿವರಗಳನ್ನು ದಾಖಲಿಸಿ, ಮುಂದಿನ ಸಭೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಗ್ರಾಮೀಣ ಪ್ರದೇಶದ ದಲಿತ ಕುಟುಂಬಗಳಿಗೂ ಸಭೆಯ ಮಾಹಿತಿ ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
This video cannot be played in your browser. Open the video directly
‘ದೌರ್ಜನ್ಯ ಪ್ರಕರಣಗಳಲ್ಲಿ ‘ಕೌಂಟರ್ ಕೇಸ್’ ದಾಖಲಿಸುವ ಮೂಲಕ ಮೂಲ ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ಎರಡೂ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು’ ಎಂದು ವಿಶ್ವ ನಾಟೇಕಾರ್ ಆಗ್ರಹಿಸಿದರು.
‘ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಕಾನೂನು ನೆರವು, ರಕ್ಷಣೆ ಹಾಗೂ ಸರ್ಕಾರದ ನಿಯಮಾನುಸಾರ ದೊರೆಯಬೇಕಾದ ಪರಿಹಾರಧನವನ್ನು ವಿಳಂಬವಿಲ್ಲದೆ ಒದಗಿಸಬೇಕು. ಪರಿಹಾರಕ್ಕಾಗಿ ಸಂತ್ರಸ್ತರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರಿ ವಹಿಸಬೇಕು’ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ; 19 ಮಂದಿ ವಿರುದ್ಧ ಪ್ರಕರಣ ದಾಖಲು
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಸಮಿತಿ ಸದಸ್ಯರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಅವುಗಳನ್ನು ಆಡಳಿತದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ದಲಿತ ಸಭೆಗಳು ಹಾಗೂ ದೌರ್ಜನ್ಯ ತಡೆ ಸಮಿತಿಗಳು ಕೇವಲ ಕಾಗದದ ಮೇಲಿನ ವ್ಯವಸ್ಥೆಯಾಗದೆ, ದಲಿತರ ಹಕ್ಕುಗಳು ಮತ್ತು ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿ ವೇದಿಕೆಗಳಾಗಬೇಕು’ ಎಂದು ಅವರು ಒತ್ತಾಯಿಸಿದರು.





