ಗಣಿನಾಡು ಬಳ್ಳಾರಿಯಲ್ಲಿ ಪತ್ನಿ ಮೇಲಿನ ಅನುಮಾನಕ್ಕಾಗಿ 7 ತಿಂಗಳ ಮಗು ಹಾಗೂ ಮಡದಿ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದ ಕ್ರೂರಿಯೊಬ್ಬ ವಿಕೃತಿ ಮೆರೆದಿದ್ದಾನೆ. ಬಳ್ಳಾರಿಯ ಅಂದ್ರಾಳ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಆರೋಪಿ ಹೊನ್ನೂರಪ್ಪ (28) ತನ್ನ ಪತ್ನಿ ರಾಜೇಶ್ವರಿ(24) ಹಾಗೂ ಏಳು ತಿಂಗಳ ಮಗಳು ಆಶ್ವಿನಿಯನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪತ್ನಿಯ ಶೀಲದ ಬಗ್ಗೆ ಹೊನ್ನೂರಪ್ಪ ಅನುಮಾನ ವ್ಯಕ್ತಪಡಿಸುತ್ತಿದ್ದನಂತೆ. ಅಲ್ಲದೆ, ಕಿರಿಯ ಮಗಳು ತನ್ನ ಸಂತಾನವಲ್ಲವೆಂದು ಆಗಾಗ ಜಗಳ ಮಾಡುತ್ತಿದ್ದನಂತೆ. ಇದೇ ಅನುಮಾನಗಳು ದಂಪತಿ ನಡುವೆ ಆಗಾಗ್ಗೆ ಕಲಹಕ್ಕೆ ಕಾರಣವಾಗುತ್ತಿದ್ದವು. ಈಗ ಕ್ಷುಲಕ ಕಾರಣಕ್ಕೆ ಕೌಟುಂಬಿಕ ಕಲಹ ಪ್ರಾರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಸುದ್ದಿ ತಿಳಿದ ಕೂಡಲೇ ಎಪಿಎಂಸಿ ಠಾಣೆ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಅವರು, “ಕೊಲೆ ಆರೋಪಿ ಹೊನ್ನೂರಪ್ಪನನ್ನು ಬಂಧಿಸಲಾಗಿದೆ. ಆರೋಪಿ ಮದುವೆಯಾದ ಪ್ರಾರಂಭದಿಂದಲೂ ಹೆಂಡತಿಯ ಮೇಲೆ ಅನುಮಾನ ಪಡುತ್ತಿದ್ದ. ಈ ಹಿಂದೆ ಹಲವು ಬಾರಿ ಶೀಲಶಂಕಿಸಿ ಜಗಳದ ಘಟನೆಗಳು ನಡೆದಾಗ, ಅಕ್ಕಪಕ್ಕದ ಮನೆಯವರು ಬಂದು ಜನಗಳನ್ನು ಬಿಡಿಸಿದ್ದಾರೆ. ಇದೇ ರೀತಿ ಜಗಳ ಶುರುವಾಗಿ ಈಗ ಕೊಲೆಯಲ್ಲಿ ಅಂತ್ಯವಾಗಿದ್ದು, ಆರೋಪಿಯ ತಾಯಿ ಲಕ್ಷ್ಮಿ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ” ಎಂದರು.
ಇದನ್ನೂ ಓದಿದ್ದೀರಾ? ಯಾದಗಿರಿ | ಹಾಸ್ಟೆಲ್ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ
ದೂರು ದಾಖಲಿಸಿದ ಮೃತಳ ಅಣ್ಣ ಸುರೇಶ್, ಯಾವುದೇ ವರದಕ್ಷಿಣೆಯ ವಿಷಯ ಪ್ರಸ್ತಾಪ ಮಾಡಿಲ್ಲವೆಂದು ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿ ಹೊನ್ನೂರಪ್ಪನನ್ನ ಬಂಧಿಸಿರುವ ಎಪಿಎಂಸಿ ಪೊಲೀಸರು ತನಿಖೆ ಮುಂದುವರಿಸಿದ್ದು, ಕೊಲೆಯ ಅಸಲಿ ಕಾರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.




