ನಮ್ಮ ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಭೀಮಜ್ಯೋತಿ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಭೀಮಾಶಂಕರ ಎಂ. ಯರಗೋಳ ಹೇಳಿದರು.
ತಾಲೂಕಿನ ಯರಗೋಳ ಗ್ರಾಮದಲ್ಲಿ ಗಾನ ಲಹರಿ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಗುರುಮಠಕಲ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಜಾನಪದ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸ್ಥಳೀಯ ಕಲೆಗಳನ್ನು ಉಳಿಸುವುದರ ಜತೆಗೆ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು” ಎಂದರು.
ಮುಖ್ಯ ಅತಿಥಿ ಯರಗೋಳ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಬಾಬು ಚವ್ಹಾಣ ಮಾತನಾಡಿ, “ಇಂದಿನ ದಿನಮಾನದಲ್ಲಿ ಜಾನಪದ ಕಲೆಗಳನ್ನು ಮರೆಯಬಾರದು. ಜಾನಪದ ಹಾಡುಗಳು ಅರ್ಥಗರ್ಭಿತವಾಗಿದ್ದು, ಅವು ಜೀವನದ ಮೌಲ್ಯಗಳನ್ನು ತಿಳಿಸಿಕೊಡುತ್ತವೆ” ಎಂದರು.
ಕಾರ್ಯಕ್ರಮದಲ್ಲಿ ಸೇವಂತಿ ಹಾಗೂ ಸಂಗಡಿಗರಿಂದ ಭರತನಾಟ್ಯ ಮತ್ತು ಸಮೂಹ ನೃತ್ಯ, ಸಾವಿತ್ರಿ ಹಾಗೂ ಸಂಗಡಿಗರಿಂದ ಜಾನಪದ ನೃತ್ಯ, ಕಾವೇರಿ ಹಾಗೂ ಸಂಗಡಿಗರಿಂದ ಜಾನಪದ ಹಾಡುಗಳು, ಗಾಯತ್ರಿ ಹಾಗೂ ಸಂಗಡಿಗರಿಂದ ಜಾನಪದ ಸಮೂಹ ನೃತ್ಯ, ಲಕ್ಷ್ಮಿ ಹಾಗೂ ಸಂಗಡಿಗರಿಂದ ಸಾಂಪ್ರದಾಯಿಕ ಹಾಡುಗಳು ಹಾಗೂ ಪೃಥ್ವಿ ಮತ್ತು ಸಂಗಡಿಗರಿಂದ ನಾಟಕ ಪ್ರದರ್ಶನ ನಡೆಯಿತು.
ಇದನ್ನು ಓದಿದ್ದೀರಾ? ಕಲಬುರಗಿ | ಎಸ್‌ಐಆರ್ ಪ್ರಕ್ರಿಯೆ ದೋಷಪೂರಿತ ಹಾಗೂ ಅವೈಜ್ಞಾನಿಕವಾಗಿದೆ : ನೂರ್ ಶ್ರೀಧರ್
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗಾಧರ ಚವ್ಹಾಣ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ದೇವಣ್ಣ, ಸದಸ್ಯೆ ಮಾಲಾಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.




