ಭೂಮಿ, ವಸತಿ ನಿವೇಶನಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಮತ್ತು ವಸತಿ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗುರುವಾರ ಯಾದಗಿರಿ ಜಿಲ್ಲಾ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮುಖಂಡ ಹತ್ತಿಗುಡೂರು ಶರಣರೆಡ್ಡಿ ಮಾತನಾಡಿ, “ಕಳೆದ ಮೂರು ವರ್ಷಗಳಿಂದ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಭೂ ಮಾಲೀಕರು ಭೂಮಿ ನೀಡಿದ್ದರೂ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಮಿಟಿ ಸಭೆ ನಡೆಸಿ ಭೂಮಿ ಇಲ್ಲದ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಬಡ ದಲಿತ ಕುಟುಂಬಗಳು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಶಹಾಪುರ ತಾಲೂಕಿನ ಹತ್ತಿಗುಡೂರು, ಕೊಂಗಂಡಿ ಹಾಗೂ ವಡಗೇರಾ ತಾಲೂಕಿನ ಯಕ್ಷತಿ, ಅನವಾರ, ಅಯ್ಯಳಕ್ಕೆ, ತುಮಕೂರು, ಬೊಮ್ಮನಹಳ್ಳಿ, ಕಾಡುಮಗೇರಾ, ಬೇರನೂರು, ಮರಕಲ್ಲು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಳೆದ 50 ವರ್ಷಗಳಿಂದ ದಲಿತ ಕುಟುಂಬಗಳಿಗೆ ಸಮರ್ಪಕ ವಸತಿ ಸೌಲಭ್ಯ ದೊರಕಿಲ್ಲ. ಕೃಷಿ ಮಾಡಲು ಭೂಮಿಯಿಲ್ಲದೆ ಕೂಲಿ ಕೆಲಸವನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ. ಅಲ್ಲದೆ, ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ಸ್ಮಶಾನ ಭೂಮಿಯೂ ಇಲ್ಲದೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ” ಎಂದು ತಿಳಿಸಿದರು.
“ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿ ಹೋರಾಟ ನಡೆಸಿದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ತಕ್ಷಣವೇ ಕಮಿಟಿ ಸಭೆ ನಡೆಸಿ ಭೂಮಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ದಲಿತ ಕುಟುಂಬಗಳಿಗೆ ವಸತಿ ನಿವೇಶನ, ಕೃಷಿ ಭೂಮಿ ಹಾಗೂ ಸ್ಮಶಾನ ಭೂಮಿ ಒದಗಿಸಬೇಕು” ಎಂದು ಒತ್ತಾಯಿಸಿದರು.
This video cannot be played in your browser. Open the video directly
“ಸರ್ಕಾರ ಮತ್ತು ಜಿಲ್ಲಾಡಳಿತ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸಂಬಂಧಪಟ್ಟ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮತ್ತು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮೂಲಕ ಅರ್ಥಪೂರ್ಣ ಜನ್ಮದಿನ ಆಚರಣೆ
ಪ್ರತಿಭಟನೆಯಲ್ಲಿ ಶರಣಪ್ಪ ಚಲವಾದಿ, ಸಿದ್ದಪ್ಪ ಹೊಸ್ಮನಿ, ಮಹಾಲಕ್ಷ್ಮಿ, ಜೇಜಮ್ಮ, ಮರಿಯಮ್ಮ ಸೇರಿದಂತೆ ಸಾಕಷ್ಟು ಮಹಿಳೆಯರು, ಯುವಕರು ಇನ್ನಿತರರು ಭಾಗವಹಿಸಿದರು.





