ಶಹಾಪೂರ ತಾಲೂಕಿನ ವಿಭೂತಿಹಳ್ಳಿ ಗ್ರಾಮ ದಲಿತರ ಕೇರಿಗೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ನಿರ್ಮಾಣ ವಿಚಾರವಾಗಿ ಉಂಟಾದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾಮಗಾರಿ ತಡೆಗಟ್ಟಲಾಗಿದೆ ಎಂದು ಆರೋಪಿಸಿ ದಲಿತ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ತಾಲೂಕು ಪಂಚಾಯತ್ ಕಚೇರಿ ಎದುರು ದೀಡಿರ್ ಪ್ರತಿಭಟನೆ ನಡೆಸಿದರು.
2024-25ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯ ಎಸ್‌ಸಿಪಿ ಅನುದಾನದಡಿ ದಲಿತರ ಕೇರಿಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಹಲವು ಲಕ್ಷ ರೂ. ವೆಚ್ಚದ ಕಾಮಗಾರಿಗೆ ಕಳೆದ ಒಂದು ವಾರದಿಂದ ಅರ್ಥ್‌ವರ್ಕ್ ಕಾರ್ಯ ನಡೆಯುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಅಗತ್ಯ ಸಾಮಗ್ರಿಗಳನ್ನೂ ಸ್ಥಳಕ್ಕೆ ತರಲಾಗಿತ್ತು. ಆದರೆ ರಸ್ತೆ ಕಾಮಗಾರಿ ಆರಂಭಿಸುವ ವೇಳೆ ಗ್ರಾಮದ ಕೆಲವರು ಸ್ಥಳಕ್ಕೆ ಬಂದು ಕಾಮಗಾರಿ ತಡೆಯಲು ಮುಂದಾದರು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ, ಹಲ್ಲೆಗೆ ಯತ್ನಿಸಲಾಗಿದೆ ಎಂದು ದೂರಿದ ಪ್ರತಿಭಟನಾಕಾರರು, ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರೆಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಯುವ ಮುಖಂಡ ವಿಶ್ವ ನಾಟೇಕರ್ ಮಾತನಾಡಿ, “ಇದು ಕೇವಲ ರಸ್ತೆ ವಿಚಾರವಲ್ಲ; ದಲಿತರ ಹಕ್ಕು ಮತ್ತು ಗೌರವದ ಪ್ರಶ್ನೆಯಾಗಿದೆ. ಸರ್ಕಾರದಿಂದ ಅನುಮೋದನೆಗೊಂಡ ಕಾಮಗಾರಿಯನ್ನು ತಡೆಯುವುದು ಸಂವಿಧಾನ ವಿರೋಧಿ ನಡೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾವು ಶಾಸಕರ ಅನುದಾನಕ್ಕೇ ಕಾಯುವುದಿಲ್ಲ. ದಲಿತರ ಒಗ್ಗೂಡಿಕೆಯೇ ನಮ್ಮ ಶಕ್ತಿ. ಅಗತ್ಯವಿದ್ದರೆ ನಮ್ಮ ಹಣದಿಂದಲೇ ರಸ್ತೆ ನಿರ್ಮಾಣ ಮಾಡುತ್ತೇವೆ” ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ರಸ್ತೆ ಕಾಮಗಾರಿ ತಕ್ಷಣ ಆರಂಭಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತ ಪರಿಣಾಮ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಬಳಿಕ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಇದನ್ನು ಓದಿದ್ದೀರಾ? ಕಲಬುರಗಿ | ಮುಂಗಾರು ಅಧಿವೇಶನ ಬದಲು ಚಳಿಗಾಲದ ಅಧಿವೇಶನ ನಡೆಸಲಿ: ಕೆಪಿಆರ್‌ಎಸ್ ಆಗ್ರಹ
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ ಹೋಸ್ಮನಿ, ಭೀಮರಾಯ ತಳವಾರ, ಶಿವಪುತ್ರ ಜವಳಿ, ಅಶೋಕ ಹೋಸ್ಮನಿ, ಹೊನ್ನಪ್ಪ ಗಂಗನಾಳ, ಮಹಾದೇವ ದಿಗ್ಗಿ, ಶರಣು ದೋರನಹಳ್ಳಿ, ಮಾಳಪ್ಪ ಸಲಾದಪೂರ, ಶರಬಣ್ಣ ರಸ್ತಾಪೂರ, ಶರಣಪ್ಪ ಬೂತಾಳಿ, ನಿಂಗಪ್ಪ ನಾಟೇಕರ್, ಶಂಕ್ರೇಪ್ಪ ನಾಟೇಕಾರ್, ಹೈಯ್ಯಾಳಪ್ಪ ನಾಟೇಕಾರ್, ಮರೇಪ್ಪ ನಾಟೇಕಾರ್, ಮರೇಪ್ಪ ಟಿ. ನಾಟೇಕಾರ್, ಬಸವರಾಜ್ ಹಾರಣಗೇರ ನಾಟೇಕಾರ್, ಶರಣಪ್ಪ ನಾಟೇಕಾರ್, ಹೊನ್ನಪ್ಪ ನಾಟೇಕಾರ್, ದೇವೀಂದ್ರಪ್ಪ ನಾಟೇಕಾರ್, ದ್ಯಾವಪ್ಪ ನಾಟೇಕಾರ್, ಲಕ್ಷ್ಮಣ ನಾಟೇಕಾರ್, ನಿಂಗಯ್ಯ ನಾಟೇಕಾರ್ ಸೇರಿದಂತೆ ದಲಿತ ಸಮುದಾಯದ ಮಹಿಳೆಯರು, ಯುವಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




