ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡ ಕುಟುಂಬಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮಳಿಗೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಬರೋಬ್ಬರಿ 197 ಚೀಲಗಳಲ್ಲಿದ್ದ 11,320 ಕೆ.ಜಿ. ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ನಗರದ ಗಂಜ್ ಪ್ರದೇಶದ ಅಂಗಡಿ ಸಂಖ್ಯೆ 77ರಲ್ಲಿರುವ ಅಕ್ಷತಾ ಟ್ರೇಡರ್ಸ್ ಮಳಿಗೆಯ ಮೇಲೆ ಬುಧವಾರ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 11.32 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಅಕ್ಕಿಯ ಅಂದಾಜು ಮೌಲ್ಯ ₹2,63,303 ಎಂದು ತಿಳಿದುಬಂದಿದೆ.
ಆಹಾರ ನಿರೀಕ್ಷಕರಾದ ವಿಠಲ ಬಂದಾಳ, ರಾಜೇಶ್ವರಿ ಡಂಬಳ ಹಾಗೂ ಆಹಾರ ಶಿರಸ್ತೇದಾರ ಮಹೇಶ ಎಂ.ಜಿ. ಅವರು ಪೊಲೀಸ್ ಸಿಬ್ಬಂದಿಯ ನೆರವಿನೊಂದಿಗೆ ಪಂಚರ ಸಮ್ಮುಖದಲ್ಲಿ ಮಳಿಗೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಳಿಗೆಯಲ್ಲಿ ಪಡಿತರ ಅಕ್ಕಿಯ ಚೀಲಗಳು ಪತ್ತೆಯಾಗಿವೆ. ಬಸವರಾಜ ಬಳಿಚಕ್ರ ಅವರು ವಿಜಯ ಪಾಟೀಲ್ ಅವರೊಂದಿಗೆ ಸೇರಿ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಏಳು ದಿನಗಳ ಅಹೋರಾತ್ರಿ ಧರಣಿಗೂ ಸ್ಪಂದಿಸದ ಸರ್ಕಾರದ ವಿರುದ್ಧ ರೈತರ ಆಕ್ರೋಶ; ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ಅಧಿಕಾರಿಗಳು ಜಪ್ತಿ ಮಾಡಿದ ಅಕ್ಕಿಯನ್ನು ಯಾದಗಿರಿ ಗಂಜ್‌ನ ಕೆಎಫ್‌ಟಿಎಸ್ಸಿ ಕೇಂದ್ರಕ್ಕೆ ಸಾಗಿಸಿದ್ದಾರೆ. ಸಾರ್ವಜನಿಕರಿಗೆ ತಲುಪಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಆರೋಪದ ಮೇಲೆ ಬಸವರಾಜ ಬಳಿಚಕ್ರ ಮತ್ತು ವಿಜಯ ಪಾಟೀಲ್ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3, 6 ಮತ್ತು 7ರ ಅಡಿಯಲ್ಲಿ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




