ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಅಕ್ರಮವಾಗಿ ಬಳಸುತ್ತಿದ್ದ ಹೋಟೆಲ್ ಮತ್ತು ಡಾಬಾಗಳ ಮೇಲೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಒಟ್ಟು 13 ಗ್ಯಾಸ್ ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದಾರೆ.
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಡಿ.17ರಂದು ಉಪನಿರ್ದೇಶಕರು ಹಾಗೂ ಆಹಾರ ನಿರೀಕ್ಷಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ವಿವಿಧ ಹೋಟೆಲ್, ಖಾನಾವಳಿ ಮತ್ತು ಡಾಬಾಗಳ ಮೇಲೆ ಜಂಟಿ ತಪಾಸಣೆ ನಡೆಸಿತು. ಈ ಸಂದರ್ಭದಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಬೇಕಾದ ಸಿಲಿಂಡರ್‌ಗಳ ಬದಲಾಗಿ ಸಬ್ಸಿಡಿ ಸಹಿತ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವುದು ಪತ್ತೆಯಾಗಿದೆ.
ದಾಳಿಯ ವೇಳೆ ಒಟ್ಟು 13 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳಲ್ಲಿ 12 ಇಂಡೇನ್ ಕಂಪನಿಯ ಹಾಗೂ ಒಂದು ಎಚ್‌ಪಿ ಕಂಪನಿಯ ಸಿಲಿಂಡರ್ ಸೇರಿವೆ. ಜಪ್ತಿ ಮಾಡಲಾದ ಎಲ್ಲ ಸಿಲಿಂಡರ್‌ಗಳನ್ನು ಹತ್ತಿಕುಣಿ ಗ್ರಾಮದ ಸುಚಿತ್ ಗ್ಯಾಸ್ ಏಜೆನ್ಸಿಗೆ ಹಸ್ತಾಂತರಿಸಲಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ರೈತರ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಬರ ಪರಿಹಾರ ಬಿಡುಗಡೆ ಮಾಡಿ: ಭೀಮಣ್ಣ ಮೇಟಿ
ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ನಿಯಮಬಾಹಿರವಾಗಿದ್ದು, ಇಂತಹ ಅಕ್ರಮಗಳ ವಿರುದ್ಧ ಇಲಾಖೆ ನಿರಂತರ ನಿಗಾ ವಹಿಸಲಿದೆ. ನಿಯಮ ಉಲ್ಲಂಘಿಸಿ ಸಿಲಿಂಡರ್‌ಗಳನ್ನು ಬಳಸುತ್ತಿರುವವರ ವಿರುದ್ಧ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.




