ಜುಲೈ 20ರಂದು ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾತ್ರದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾಡಿದ ಆರೋಪಗಳಿಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಬೆಂಬಲ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಆಗ್ರಹಿಸಿದ್ದಾರೆ.
ಸಾರ್ವಜನಿಕ ಪರೀಕ್ಷೆಗಳಲ್ಲಿನ ಅಕ್ರಮ ತಡೆಗೆ ಸಂಬಂಧಿಸಿದ ಮಸೂದೆ ಕುರಿತ ಚರ್ಚೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ನಮ್ಮ ವಿದ್ಯಾರ್ಥಿಗಳ ದೇಹಕ್ಕೆ ಪೆಲೆಟ್‌ಗಳನ್ನು ಹೊಕ್ಕುವಂತೆ ಮಾಡಿದವರು ಅಮಿತ್ ಶಾ. ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಆದೇಶ ನೀಡಿದವರು ಅವರೇ” ಎಂದು ಆರೋಪಿಸಿದ್ದರು. ಪೊಲೀಸ್ ಪಡೆಗಳು ಬಲಪ್ರಯೋಗ ನಡೆಸಲು ಗೃಹ ಸಚಿವ ಅಥವಾ ಪ್ರಧಾನಿಯ ಮಟ್ಟದಲ್ಲೇ ಅನುಮತಿ ಸಿಗುತ್ತದೆ ಎಂದು ಅವರು ಹೇಳಿದ್ದರು.
ಈ ಹೇಳಿಕೆಯನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸಿಜೆಪಿ ವಕ್ತಾರ ಸೌರವ್ ದಾಸ್, ” ಜುಲೈ 20ರ ಪೊಲೀಸ್ ದೌರ್ಜನ್ಯದ ಹಿನ್ನೆಲೆ ಗೃಹಸಚಿವರನ್ನು ಹೊಣೆಗಾರರನ್ನಾಗಿ ಮಾಡಲೇಬೇಕು. ಪ್ರತಿಯೊಂದು ಜೀವವೂ ಅಮೂಲ್ಯ. ಗೃಹ ಸಚಿವರ ಆದೇಶದಿಂದ ಒಬ್ಬ ವಿದ್ಯಾರ್ಥಿ ಜೀವನಪೂರ್ತಿ ದೃಷ್ಟಿ ಕಳೆದುಕೊಂಡಿದ್ದಾನೆ. ಈಗ ಉತ್ತರಿಸಿ” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿರುವ ಆರೋಪವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, “ಪೆಲೆಟ್ ಬಳಸಲು ಗೃಹ ಸಚಿವರು ಆದೇಶ ನೀಡಿರಬೇಕು. ಇಲ್ಲವೇ ಅವರಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಮಾಹಿತಿ ಇರಲಿಲ್ಲ ಎಂದಾದರೆ ಅದು ಅವರ ಅಸಮರ್ಥತೆಯನ್ನೇ ತೋರಿಸುತ್ತದೆ” ಎಂದು ಹೇಳಿದ್ದರು.
ರಾಹುಲ್ ಗಾಂಧಿಯ ಆರೋಪಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಗೃಹ ಸಚಿವರು ಗುಂಡು ಹಾರಿಸಲು ಆದೇಶ ನೀಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ಯಾವ ಸಾಕ್ಷ್ಯವಿದೆ? ಆದೇಶವಿದ್ದರೆ ತೋರಿಸಿ. ಇಂತಹ ಗಂಭೀರ ಆರೋಪಗಳನ್ನು ಯಾವುದೇ ಆಧಾರವಿಲ್ಲದೆ ಮಾಡುವುದು ಜವಾಬ್ದಾರಿಯುತ ನಡೆ ಅಲ್ಲ” ಎಂದಿದ್ದರು.
ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಕ್ಷಮೆ ಕೇಳಬೇಕು ಎಂದು ರಿಜಿಜು ಆಗ್ರಹಿಸಿದರು. ಲೋಕಸಭಾಧ್ಯಕ್ಷ ಓಂ ಬಿರ್ಲಾ ಕೂಡ ಯಾವುದೇ ಸಾಕ್ಷ್ಯ ಅಥವಾ ಪೂರ್ವ ನೋಟಿಸ್ ಇಲ್ಲದೆ ಸಂಸತ್ತಿನಲ್ಲಿ ಆರೋಪ ಮಾಡುವುದು ನಿಯಮಬಾಹಿರ ಎಂದು ಆಗ್ರಹಿಸಿದ್ದರು. ಚರ್ಚೆಗೆ ಉತ್ತರಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, “ಜುಲೈ 20ರಂದು ಯಾವುದೇ ಗುಂಡಿನ ದಾಳಿ ನಡೆದಿಲ್ಲ. ಅಶ್ರುವಾಯು ಮಾತ್ರ ಬಳಸಲಾಗಿದೆ” ಎಂದರು.
ಇದನ್ನೂ ಓದಿ: ಕಾವೇರಿ ನಿಯಮ ಉಲ್ಲಂಘನೆ ಆರೋಪ; ಕರ್ನಾಟಕದ ಮೇಕೆದಾಟು DPR ವಾಪಸ್ ಕಳಿಸಿದ CWC
“ಗುಂಡು ಹಾರಿಸದಿದ್ದಾಗ ಅದಕ್ಕೆ ಆದೇಶ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂಥ ಆದೇಶ ನೀಡುವ ಅಧಿಕಾರ ಸಚಿವರಿಗೆ ಅಲ್ಲ, ಸ್ಥಳದಲ್ಲಿರುವ ಮ್ಯಾಜಿಸ್ಟ್ರೇಟ್ ಅಥವಾ ಉಪವಿಭಾಗಾಧಿಕಾರಿಗೆ (SDM) ಇರುತ್ತದೆ” ಎಂದು ಅವರು ಹೇಳಿದರು.
ಆದರೆ, ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೊಸ ದಾಖಲೆಗಳು ಹೊರಬಂದಿವೆ. ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯ ಡೈರಿ ದಾಖಲೆಯ ಪ್ರಕಾರ, ಜುಲೈ 20ರಂದು ದೆಹಲಿ ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಅವರ ಆದೇಶದ ಮೇರೆಗೆ ಕನಿಷ್ಠ ಎರಡು ಸುತ್ತು ಪೆಲೆಟ್‌ಗಳನ್ನು ಹಾರಿಸಲಾಗಿತ್ತು ಎಂದು ದಾಖಲಿಸಲಾಗಿದೆ. ಜುಲೈ 22ರಂದು ಬೆಳಗಿನ ಜಾವ 1.24ಕ್ಕೆ ಪೊಲೀಸ್ ಉಪನಿರೀಕ್ಷಕರೊಬ್ಬರು ದಾಖಲಿಸಿರುವ ಈ ಡೈರಿ ನಮೂದು, ವಿದ್ಯಾರ್ಥಿಗಳ ಸಂಸತ್ ಚಲೋ ಪ್ರತಿಭಟನೆಯ ವೇಳೆ ಪೆಲೆಟ್ ಬಳಕೆಯಾಗಿದೆ ಎಂಬುದನ್ನು ಉಲ್ಲೇಖಿಸುವ ಮೊದಲ ಅಧಿಕೃತ ದಾಖಲೆಯಾಗಿದೆ.
ಇದರೊಂದಿಗೆ ಜುಲೈ 20ರ ಪೊಲೀಸ್ ಕ್ರಮ, ಪೆಲೆಟ್ ಬಳಕೆ ಹಾಗೂ ಅದಕ್ಕೆ ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆ ಇದೀಗ ಮತ್ತಷ್ಟು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.




