ಉತ್ತರ ಪ್ರದೇಶದ ಬರೇಲಿಯಲ್ಲಿ ಬಿಜೆಪಿ ಮೇಯರ್ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಉಡುಗೊರೆ ಪಡೆಯಲು ಮಹಿಳೆಯರು ಮುಗಿಬಿದ್ದ ಪರಿಣಾಮ ಕಾಲ್ತುಳಿತದಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ನೂಕುನುಗ್ಗಲು ಹಾಗೂ ತೀವ್ರ ಸೆಖೆಯಿಂದಾಗಿ ಹಲವು ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಗಾಯಗೊಂಡವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.
ರಕ್ಷಾಬಂಧನದ ಹಿಂದಿನ ದಿನ ಬರೇಲಿ ಕ್ಲಬ್ ಮೈದಾನದಲ್ಲಿ ಮೇಯರ್ ಉಮೇಶ್ ಗೌತಮ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸೀರೆ ವಿತರಣೆಯ ಕಾರ್ಯಕ್ರಮವಿದ್ದ ಕಾರಣ ಮೈದಾನದಲ್ಲಿ ಸುಮಾರು 20,000ಕ್ಕೂ ಹೆಚ್ಚು ಮಹಿಳೆಯರು ಜಮಾಯಿಸಿದ್ದರು. ಆದರೆ, ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮದ ಬಗ್ಗೆ ಆಯೋಜಕರು ಮುಂಚಿತವಾಗಿ ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅನುರಾಗ್ ಆರ್ಯ ತಿಳಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮುಂಜಾನೆಯಿಂದಲೇ ಮಹಿಳೆಯರು ಸಾಗರೋಪಾದಿಯಲ್ಲಿ ಹರಿದುಬಂದಿದ್ದರು. ಉಚಿತ ಸೀರೆ ಪಡೆಯಲು ಆಯೋಜಕರು ಮುಂಚಿತವಾಗಿಯೇ ಕೂಪನ್ಗಳನ್ನು ವಿತರಿಸಿದ್ದರು. ಹೀಗಾಗಿ, ಮಹಿಳೆಯರು ತಮ್ಮ ಮಕ್ಕಳು ಹಾಗೂ ವೃದ್ಧರೊಂದಿಗೆ ಆಗಮಿಸಿದ್ದರು. ಬಿರುಬಿಸಿಲು ಹಾಗೂ ವಿಪರೀತ ಸೆಖೆಯ ನಡುವೆ ಜನದಟ್ಟಣೆ ಮಿತಿಮೀರಿದ್ದರಿಂದ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿತ್ತು. ಮೈದಾನದಲ್ಲಿ ಕಾಲಿಡಲೂ ಜಾಗವಿಲ್ಲದಂತಾಗಿ, ಬ್ಯಾರಿಕೇಡ್ಗಳನ್ನು ಮುರಿದು ಮಹಿಳೆಯರು ವೇದಿಕೆಯತ್ತ ಒಮ್ಮೆಲೇ ನುಗ್ಗಲು ಯತ್ನಿಸಿದಾಗ ಭಾರಿ ಗದ್ದಲ ಉಂಟಾಗಿದೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಮೇಯರ್ ಉಮೇಶ್ ಗೌತಮ್, ಜನಸಂದಣಿಯನ್ನು ಚದುರಿಸಲು ಯತ್ನಿಸಿದರು. ತಮ್ಮ ಪುತ್ರ ಪಾರ್ಥ್ ಗೌತಮ್ ಅವರನ್ನು ಮೈದಾನದ ಮುಖ್ಯ ದ್ವಾರದ ಬಳಿ ಕಳುಹಿಸಿ, ಅಲ್ಲೇ ರಾಖಿ ಕಟ್ಟಿಸಿಕೊಳ್ಳುವ ವ್ಯವಸ್ಥೆ ಮಾಡಿದರು. ಆದರೂ, ವೇದಿಕೆಯ ಬಳಿ ಉಡುಗೊರೆ ಪಡೆಯುವ ಧಾವಂತದಲ್ಲಿ ಮಹಿಳೆಯರ ನೂಕುನುಗ್ಗಲು ಕಡಿಮೆಯಾಗಲಿಲ್ಲ. ಈ ನೂಕಾಟದಲ್ಲಿ ಹಲವು ಮಕ್ಕಳು ಪೋಷಕರಿಂದ ದೂರವಾಗಿದ್ದು, ಅವರನ್ನು ಹುಡುಕಿಕೊಡುವಂತೆ ಧ್ವನಿವರ್ಧಕದ ಮೂಲಕ ನಿರಂತರ ಘೋಷಣೆಗಳನ್ನು ಮಾಡಲಾಗುತ್ತಿತ್ತು. ಮೈದಾನದಾದ್ಯಂತ ಒಡೆದ ಬಳೆಗಳು, ಚಪ್ಪಲಿಗಳು ಹಾಗೂ ಇತರ ವೈಯಕ್ತಿಕ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ನೂಕುನುಗ್ಗಲಿನ ಭೀಕರತೆಯನ್ನು ವಿವರಿಸಿದ ವೃದ್ಧೆಯೊಬ್ಬರು, “ಜನರ ಮಧ್ಯೆ ಸಿಲುಕಿ ಉಸಿರುಗಟ್ಟುತ್ತಿದ್ದ ಯುವತಿಯೊಬ್ಬಳನ್ನು ಐದು ನಿಮಿಷಗಳ ಸತತ ಪ್ರಯತ್ನದ ನಂತರ ರಕ್ಷಿಸಲಾಯಿತು. ಈ ಗದ್ದಲದಲ್ಲಿ ನನ್ನ ಕೈ ಮತ್ತು ಕಾಲುಗಳಿಗೂ ಗಾಯಗಳಾಗಿವೆ” ಎಂದರು. ಭೂತಾ ಪ್ರದೇಶದಿಂದ ಬಂದಿದ್ದ ಮತ್ತೋರ್ವ ಮಹಿಳೆ ಪ್ರತಿಕ್ರಿಯಿಸಿ, “ವೇದಿಕೆಯತ್ತ ಸಾಗುವಾಗ ಯಾರೋ ನನ್ನ ಕೈಯನ್ನು ಬಲವಾಗಿ ಎಳೆದರು. ಗುಂಪಿನ ತಳ್ಳಾಟದಲ್ಲಿ ನನ್ನ ಚಪ್ಪಲಿ ಹಾಗೂ ಕಾಲುಂಗುರವೂ ಕಳೆದುಹೋಯಿತು” ಎಂದು ಅಳಲು ತೋಡಿಕೊಂಡರು.
ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರನ್ನು ಆಹ್ವಾನಿಸಿದ್ದರೂ, ಜನದಟ್ಟಣೆ ನಿಯಂತ್ರಣಕ್ಕೆ ಯಾವುದೇ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಉರಿಬಿಸಿಲಿನಲ್ಲಿ ಕುಡಿಯಲು ನೀರಿರಲಿಲ್ಲ, ಸುರಕ್ಷಿತವಾಗಿ ಓಡಾಡಲು ದಾರಿಯಿರಲಿಲ್ಲ. ಉಡುಗೊರೆ ವಿತರಣೆ ವೇಳೆ ಜನರನ್ನು ನಿಯಂತ್ರಿಸುವಲ್ಲಿ ಆಯೋಜಕರು ಸಂಪೂರ್ಣ ವಿಫಲರಾಗಿದ್ದಾರೆ” ಎಂದು ಮಹಿಳೆಯರು ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.




