ಕೇರಳದ ನೂತನ ರಾಜ್ಯಪಾಲರಾದ ಓಂ ಪ್ರಕಾಶ್ ಮಾಥುರ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ‘ಬಿಜೆಪಿ’ ಹೆಸರನ್ನು ಬಳಸಲಾಗಿದೆ ಎಂದು ಆರೋಪಿಸಿ, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಐಫ್ಐ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಧಿಕೃತ ದೂರು ಸಲ್ಲಿಸಿದೆ.
ಎಸ್ಎಫ್ಐ ತಿರುವನಂತಪುರಂ ಜಿಲ್ಲಾ ಕಾರ್ಯದರ್ಶಿ ನಂದನ್ ಎಂ. ಎ. ಅವರು ಇಮೇಲ್ ಮೂಲಕ ರಾಷ್ಟ್ರಪತಿಗೆ ಈ ದೂರನ್ನು ರವಾನಿಸಿದ್ದಾರೆ. ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರ ಇನ್ಸ್ಟಾಗ್ರಾಮ್ ಖಾತೆಯ ಬಳಕೆದಾರ ಹೆಸರು @ommathurbjp ಎಂದಿದ್ದು, ಇದು ರಾಜಕೀಯ ಪಕ್ಷವೊಂದರ ಸಂಕೇತವನ್ನು ಒಳಗೊಂಡಿದೆ ಎಂದು ಎಸ್ಎಫ್ಐ ದೂರಿದೆ.
ಇದನ್ನೂ ಓದಿ: ಕೇಂದ್ರ-ರಾಜ್ಯ ಸಂಬಂಧ, ರಾಜ್ಯಪಾಲರ ಅಧಿಕಾರ; ಕುರಿಯನ್ ಜೋಸೆಫ್ ಸಮಿತಿಯ ಶ್ವೇತಪತ್ರ ಹೇಳುವುದೇನು?
ರಾಜ್ಯಪಾಲರ ಹುದ್ದೆಯು ಸಂವಿಧಾನಿಕವಾದದ್ದು ಮತ್ತು ರಾಜಕೀಯ ತಟಸ್ಥತೆಯನ್ನು ಕಾಯ್ದುಕೊಳ್ಳಬೇಕಾದ ಸ್ಥಾನವಾಗಿದೆ. ರಾಜ್ಯದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷದ ಹೆಸರನ್ನು ಇಟ್ಟುಕೊಳ್ಳುವುದು ಸಂವಿಧಾನದ ಮೌಲ್ಯಗಳಿಗೆ ಮತ್ತು ರಾಜಕೀಯ ತಟಸ್ಥತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ದೂರಿನಲ್ಲಿ ಎಸ್ಎಫ್ಐ ಪ್ರತಿಪಾದಿಸಿದೆ. ಈ ವಿಷಯದಲ್ಲಿ ರಾಷ್ಟ್ರಪತಿಯವರು ತಕ್ಷಣವೇ ಮಧ್ಯಪ್ರವೇಶಿಸಿ ಸಂವಿಧಾನಿಕ ಹುದ್ದೆಯ ಘನತೆಯನ್ನು ಎತ್ತಿಹಿಡಿಯಬೇಕು ಎಂದು ಆಗ್ರಹಿಸಲಾಗಿದೆ.
ರಾಜಸ್ಥಾನ ಮೂಲದ ಹಿರಿಯ ಬಿಜೆಪಿ ನಾಯಕರಾಗಿದ್ದ ಓಂ ಪ್ರಕಾಶ್ ಮಾಥುರ್ ಅವರು ಇತ್ತೀಚೆಗಷ್ಟೇ ಕೇರಳದ 29ನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಹಿಂದೆ ಸಿಕ್ಕಿಂ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಆರ್ಎಸ್ಎಸ್ ಮತ್ತು ಬಿಜೆಪಿಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ಹಿನ್ನೆಲೆ ಹೊಂದಿದ್ದಾರೆ. ಪ್ರಸ್ತುತ ಎಸ್ಎಫ್ಐ ನೀಡಿದ ದೂರಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಭವನದಿಂದ (ರಾಜ್ ಭವನ್) ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ಲಭ್ಯವಾಗಿಲ್ಲ.




