ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟರು ಜಯ ಗಳಿಸಿದ್ದಾರೆ. ಅಮೆರಿಕದ ಸಂಸತ್ತು ಎನಿಸಿರುವ ಕಾಂಗ್ರೆಸ್ನಲ್ಲಿ ಬಹುಮತ ಪಡೆದಿದ್ದಾರೆ. ಸಾಮಾನ್ಯವಾಗಿ ಮಧ್ಯಂತರ ಚುನಾವಣೆಗಳಲ್ಲಿ ಅಧಿಕಾರದಲ್ಲಿರುವ ಅಧ್ಯಕ್ಷರ ಪಕ್ಷದ ಸಾಧನೆ ಕಳಪೆಯಾಗಿರುತ್ತದೆ. ಆದರೆ ರಿಪಬ್ಲಿಕನ್ ಪಕ್ಷದ ಈ ಭಾರೀ ಸೋಲು ಟ್ರಂಪ್ ಪಾಲಿಗೆ ಆಘಾತಕಾರಿ.
ರಿಪಬ್ಲಿಕನ್ ಪಕ್ಷದ ಸೋಲಿನ ಹಿಂದೆ ಮುಖ್ಯವಾಗಿ ಈ ಐದು ಕಾರಣಗಳಿವೆ:
1. ಹಣದುಬ್ಬರದ ಹೊಡೆತ
ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಅಮೆರಿಕದ ಮತದಾರರು ತತ್ತರಿಸಿದ್ದಾರೆ. ಅವರ ಆಕ್ರೋಶ ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಾಣಿಸಿತು. “ಪೆಟ್ರೋಲ್ನಿಂದ ಹಿಡಿದು ದಿನಸಿವರೆಗೆ ಎಲ್ಲವೂ ದುಬಾರಿಯಾಗುತ್ತಿದೆ” ಎಂಬ ಅಮೆರಿಕನ್ನರ ಅಸಮಾಧಾನ ಟ್ರಂಪ್ ಪಕ್ಷವನ್ನು ತರಗೆಲೆಯಂತೆ ಗಾಳಿಗೆ ತೂರಿದೆ.
ತೈಲ ಮತ್ತು ಅನಿಲದ ಬೆಲೆ ಏರಿಕೆಯಿಂದ ಕಳೆದ ಒಂದು ವರ್ಷದಲ್ಲಿ ಹಣದುಬ್ಬರ ದರದಲ್ಲಿ ಶೇ 3.7ರಷ್ಟು ಏರಿಕೆಯಾಗಿದೆ. ಮತದಾರರ ಸಮೀಕ್ಷೆಯಲ್ಲಿ ಶೇ 79ರಷ್ಟು ಮಂದಿ, ಅಂದರೆ ಹತ್ತರಲ್ಲಿ ಸುಮಾರು ಎಂಟು ಮಂದಿ, ಹಣದುಬ್ಬರದಿಂದ ತಾವು ಕಷ್ಟನಷ್ಟಗಳನ್ನು ಎದುರಿಸಿದ್ದಾರೆ. .
ಸಮೀಕ್ಷೆಯಲ್ಲಿ ಪ್ರತಿ ಹತ್ತರಲ್ಲಿ ಆರಕ್ಕೂ ಹೆಚ್ಚು ಮಂದಿ ತಮ್ಮ ಕಷ್ಟನಷ್ಟಕ್ಕೆ ಟ್ರಂಪ್ರನ್ನು ಹೊಣೆ ಮಾಡಿದ್ದರು. ಬೆಲೆ ಏರಿಕೆಗೆ ಅಧ್ಯಕ್ಷ ಟ್ರಂಪ್ ಅವರ ನೀತಿಗಳೇ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದ್ದರು..
2. ಇರಾನ್ ಜೊತೆಗಿನ ಯುದ್ಧ
ಹಣದುಬ್ಬರ ಏರಿಕೆಗೆ ಇರಾನ್ ಜೊತೆಗಿನ ಯುದ್ಧ ಪ್ರಮುಖ ಕಾರಣಗಳಲ್ಲಿ ಒಂದು. ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಈ ಯುದ್ಧವನ್ನು ಆರಂಭಿಸಿದ್ದವು.
ಪ್ರತಿಯಾಗಿ ಇರಾನ್ ಹೋರ್ಮುಝ್ ಜಲಸಂಧಿಯನ್ನು ಮುಚ್ಚಿತು. ಇದರಿಂದ ಇಂಧನ ಬೆಲೆಗಳು ಗಗನಕ್ಕೇರಿದವು. ಜಗತ್ತಿನ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆಗೆ ಈ ಜಲಮಾರ್ಗ ಅತ್ಯಂತ ಮುಖ್ಯ. ಅಂದಿನಿಂದ ಅಮೆರಿಕದ ಮತದಾರರು ಇದರ ಹೆಚ್ಚುವರಿ ಹೊರೆಯನ್ನು ಹೊರಲಾರದೆ ಹೊತ್ತಿದ್ದಾರೆ.
ಯುದ್ಧಕ್ಕೆ ಇಳಿಯುವ ನಿರ್ಧಾರ ಬಹುತೇಕ ಅಮೆರಿಕನ್ನರಿಗೆ ಒಪ್ಪಿಗೆ ಇಲ್ಲ. ‘ಅಮೆರಿಕಾ ಫಸ್ಟ್’ ಅಭಿಯಾನದಲ್ಲಿ ಹೊಸ ಯುದ್ಧಗಳಿಗೆ ಇಳಿಯುವುದಿಲ್ಲ ಎಂದು ಟ್ರಂಪ್ ಭರವಸೆ ನೀಡಿದ್ದರು. ಇರಾನ್ ವಿರುದ್ಧದ ಕ್ರಮದಿಂದ ಆ ಭರವಸೆ ಮುರಿಯಿತು.
ಮತದಾರರ ಸಮೀಕ್ಷೆಯೊಂದರಲ್ಲಿ ಶೇ.63ರಷ್ಟು ಮಂದಿ ಇರಾನ್ ವಿರುದ್ಧ ಅಮೆರಿಕ ಕೈಗೊಂಡ ಸೇನಾ ಕ್ರಮ ತಪ್ಪು ಎಂದು ಹೇಳಿದರು. ಸೋಲಿನಲ್ಲಿ ಯುದ್ಧದ ಪಾತ್ರ ದೊಡ್ಡದಿತ್ತು ಎಂದು ಟ್ರಂಪ್ ಒಪ್ಪಿಕೊಂಡಿದ್ದಾರೆ. ಆದರೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯಲು ಮಧ್ಯಪ್ರವೇಶವೊಂದೇ ದಾರಿಯಾಗಿತ್ತು ಎಂದು ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಸಮರ್ಥಿಸಿಕೊಂಡಿದ್ದಾರೆ.
3. ಡೆಮಾಕ್ರಟರ ಚುನಾವಣಾ ತಂತ್ರ
ಕೆಲವು ಬಲಿಷ್ಠ ಉಮೇದುವಾರರು ಡೆಮಾಕ್ರಟಿಕ್ ಪಕ್ಷದ ಅಲೆಯನ್ನು ವಿಸ್ತರಿಸಲು ನೆರವಾಗಿದ್ದಾರೆ. ಈ ಅಭ್ಯರ್ಥಿಗಳು ಪ್ರಾಮಾಣಿಕರು ಮತ್ತು ವಿಶ್ವಾಸಾರ್ಹರು ಎಂಬ ಭಾವನೆಯನ್ನು ಅವರು ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳಲ್ಲೂ ಮೂಡಿಸಿದರು. ಏರುತ್ತಿರುವ ಜೀವನ ವೆಚ್ಚ ಮತ್ತು ಎಲ್ಲರಿಗೂ ಆರೋಗ್ಯ ಸೇವೆ ಲಭ್ಯವಾಗಬೇಕು ಎಂಬ ಬೇಡಿಕೆಯನ್ನು ಡೆಮಾಕ್ರಟರು ನಿರಂತರ ಮುಂಬೆಳಕಿನಲ್ಲಿಟ್ಟರು.
ಜೇಮ್ಸ್ ಟಲರಿಕೊ ಮತ್ತು ಪಾದ್ರಿ ಆಡಂ ಹ್ಯಾಮಿಲ್ಟನ್ ಜನರ ಬದುಕಿಗೆ ನೇರವಾಗಿ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿದರು. ಅವು ಟೆಕ್ಸಾಸ್ ಮತ್ತು ಕಾನ್ಸಸ್ನ ಮತದಾರರನ್ನು ಮುಟ್ಟಿದ್ದವು.
ದಕ್ಷಿಣ ಕ್ಯಾರೊಲೈನಾದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಆ್ಯನಿ ಆಂಡ್ರ್ಯೂಸ್ ಅಚ್ಚರಿಯ ಗೆಲುವು ಸಾಧಿಸಿದರು. ಮಕ್ಕಳ ವೈದ್ಯೆಯಾಗಿದ್ದ ಅವರು ಆರೋಗ್ಯ ಸೇವೆಯನ್ನು ಕೈಗೆಟುಕುವಂತೆ ಮಾಡುವುದಕ್ಕೆ ಒತ್ತು ನೀಡಿದರು. ಈಗಿನ ಆರೋಗ್ಯ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊಂದಿದ್ದ ಮತದಾರರಿಗೆ ಈ ವಿಚಾರ ಹಿಡಿಸಿತು.
ಸಾರ್ವಜನಿಕ ಆರೋಗ್ಯ ಇಲಾಖೆಯ ಮಾಜಿ ಅಧಿಕಾರಿ ಅಬ್ದುಲ್ ಅಲ್-ಸಯ್ಯದ್ ಮಿಶಿಗನ್ನಲ್ಲಿ ಗೆದ್ದು, ಆ ಸ್ಥಾನವನ್ನು ಡೆಮಾಕ್ರಟಿಕ್ ಪಕ್ಷದ ಬಳಿಯೇ ಉಳಿಸಿಕೊಂಡರು. ರಾಜಕೀಯದಲ್ಲಿ ಹಣದ ಪ್ರಭಾವವನ್ನು ತೊಡೆದುಹಾಕುವ ಬಗ್ಗೆ ಸಯ್ಯದ್ ಗಟ್ಟಿ ದನಿ ಎತ್ತಿದ್ದರು..
ಜಾರ್ಜಿಯಾದಲ್ಲಿ ಡೆಮಾಕ್ರಟಿಕ್ ಸೆನೆಟರ್ ಜಾನ್ ಆಸಾಫ್ ಮರು ಆಯ್ಕೆಯಾದರು. ಬೆಲೆ ಏರಿಕೆ ಮತ್ತು ಭ್ರಷ್ಟಾಚಾರವನ್ನು ಅವರು ಪ್ರಚಾರದ ಮುಖ್ಯ ವಿಷಯಗಳನ್ನಾಗಿ ಮಾಡಿಕೊಂಡಿದ್ದರು. ಟ್ರಂಪ್ ಈ ರಾಜ್ಯದಲ್ಲಿ ಎರಡು ಬಾರಿ ಗೆದ್ದಿದ್ದರು. ಇಲ್ಲಿ 39 ವರ್ಷದ ಆಸಾಫ್ ಸುಲಭವಾಗಿ ಜಯ ಗಳಿಸಿದ್ದು, 2028ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಕಣಕ್ಕಿಳಿಯಬಹುದು ಎಂಬ ಊಹಾಪೋಹಕ್ಕೆ ಮತ್ತಷ್ಟು ಬಲ ನೀಡಿದೆ.
ಟೆಕ್ಸಾಸ್ನ ಕೆನ್ ಪ್ಯಾಕ್ಸ್ಟನ್ ಅವರಂತಹ ಕೆಲವು ರಿಪಬ್ಲಿಕನ್ ಅಭ್ಯರ್ಥಿಗಳು ಟೀಕೆಗೆ ಗುರಿಯಾದರು. ಅವರ ಪ್ರಚಾರದಲ್ಲಿ ಮತದಾರರ ಕಳವಳಗಳಿಗೆ ಸಾಕಷ್ಟು ಗಮನ ಸಿಕ್ಕಿರಲಿಲ್ಲ ಎಂಬುದು ಟೀಕೆಯಾಗಿತ್ತು.
4. ಕುಸಿಯುತ್ತಿರುವ ಟ್ರಂಪ್ ಜನಪ್ರಿಯತೆ ಹೊರಲಾರದ ಹೊರೆ
ಬೆಲೆ ಏರಿಕೆ ಮತ್ತು ಇರಾನ್ ಯುದ್ಧ ಮತದಾರರಲ್ಲಿ ಹೆಚ್ಚು ಅಸಮಾಧಾನ ಹುಟ್ಟಿಸಿದ ಎರಡು ವಿಷಯಗಳು. ಈ ಎರಡೂ ಅಧ್ಯಕ್ಷ ಟ್ರಂಪ್ರೊಂದಿಗೆ ನೇರವಾಗಿ ಬೆಸೆದುಕೊಂಡಿದ್ದವು. ರಿಪಬ್ಲಿಕನ್ ಮತದಾರರ ನಡುವೆಯೂ ಟ್ರಂಪ್ರ ಜನಪ್ರಿಯತೆ ಕುಸಿದಿತ್ತು. ಇದರ ಪರಿಣಾಮವಾಗಿ 2024ರಲ್ಲಿ ಅವರು ಗೆದ್ದಿದ್ದ ರಾಜ್ಯಗಳಲ್ಲೂ ಪಕ್ಷ ಉತ್ತಮ ಸಾಧನೆ ಮಾಡಲಿಲ್ಲ.
ತಮ್ಮ ಬೆಂಬಲಿಗರನ್ನು ಒಗ್ಗೂಡಿಸಲು, ತಾವೇ ಚುನಾವಣಾ ಕಣದಲ್ಲಿದ್ದೇವೆ ಎಂದು ಭಾವಿಸಿ ಮತ ಚಲಾಯಿಸುವಂತೆ ಟ್ರಂಪ್ ಕರೆ ನೀಡಿದ್ದರು.
ಹತ್ತು ವರ್ಷಕ್ಕೂ ಹೆಚ್ಚು ಕಾಲ ಅಮೆರಿಕದ ರಾಜಕೀಯದ ಕೇಂದ್ರದಲ್ಲಿದ್ದ ಟ್ರಂಪ್ರ ಪ್ರಭಾವ ಈಗ ಮಸುಕಾಗುತ್ತಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ ಎಂದು ಕೆಲವರು ಭಾವಿಸುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು; ಭಾರತೀಯ ವಲಸಿಗರ ರಾಜಕೀಯ ಆಷಾಢಭೂತಿತನ!
ಜನರಲ್ಲಿ ಅಸಮಾಧಾನವಿದ್ದಾಗ ಟ್ರಂಪ್ರನ್ನೇ ರಿಪಬ್ಲಿಕನ್ ಪ್ರಚಾರದ ಕೇಂದ್ರಕ್ಕೆ ತರುವುದು ಅಪಾಯದ ತಂತ್ರವಾಗಿತ್ತು. ಆ ದಾಳ ಉಲ್ಟಾ ಹೊಡೆದಂತೆ ಕಾಣುತ್ತಿದೆ.
ಏರುತ್ತಿರುವ ಬೆಲೆಗಳ ಬಗ್ಗೆ ತಮ್ಮ ಕಳವಳಕ್ಕೆ ಟ್ರಂಪ್ ಕಿವಿಗೊಡಬೇಕು ಎಂದು ಅನೇಕ ಅಮೆರಿಕನ್ನರು ಬಯಸಿದ್ದನ್ನು ಮತದಾನಕ್ಕೂ ಮುನ್ನಿನ ತಿಂಗಳುಗಳ ಸಮೀಕ್ಷೆಗಳು ಸೂಚಿಸಿದ್ದವು.
5. ಹಿಸ್ಪಾನಿಕ್ ಮತ್ತು ಕಪ್ಪು ಮತದಾರರ ಒಲವು ಬದಲಾಯಿತು
ಎರಡು ವರ್ಷಗಳ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವು ಹಿಸ್ಪಾನಿಕ್ ಮತ್ತು ಕಪ್ಪು ಮತದಾರರು ರಿಪಬ್ಲಿಕನ್ ಪಕ್ಷದತ್ತ ಒಲವು ತೋರಿದ್ದರು. ಅದು ಟ್ರಂಪ್ರ ನಿರ್ಣಾಯಕ ಗೆಲುವಿಗೆ ನೆರವಾಗಿತ್ತು. ಮಧ್ಯಂತರ ಚುನಾವಣೆಯಲ್ಲಿ ಒಲವು ಡೆಮಾಕ್ರಟರತ್ತ ಹೊರಳಿರುವುದು ನಿಚ್ಚಳ.
ಟೆಕ್ಸಾಸ್–ಮೆಕ್ಸಿಕೊ ಗಡಿಯಲ್ಲಿರುವ, ಹಿಸ್ಪಾನಿಕ್ ಸಮುದಾಯದ ಬಹುಸಂಖ್ಯಾತ ಜನಸಂಖ್ಯೆ ಹೊಂದಿರುವ ಕ್ಷೇತ್ರಗಳಲ್ಲಿ ಪ್ರತಿನಿಧಿಗಳ ಸದನದ ಮೂರೂ ಸ್ಥಾನಗಳನ್ನು ಡೆಮಾಕ್ರಟರು ಗೆದ್ದರು.
‘ದಿ ನ್ಯೂಯಾರ್ಕ್ ಟೈಮ್ಸ್’ ವಿಶ್ಲೇಷಣೆಯ ಪ್ರಕಾರ, 2024ರ ಅಧ್ಯಕ್ಷೀಯ ಚುನಾವಣೆಗೆ ಹೋಲಿಸಿದರೆ ಹಿಸ್ಪಾನಿಕ್ ಬಹುಸಂಖ್ಯಾತ ಕೌಂಟಿಗಳಲ್ಲಿ ರಿಪಬ್ಲಿಕನ್ ಸೆನೆಟ್ ಅಭ್ಯರ್ಥಿಗಳ ವಿರುದ್ಧದ ಮತಗಳ ಅಂತರ 22 ಶೇಕಡಾ ಅಂಕಗಳಿಗಿಂತ ಹೆಚ್ಚು!!
ಈ ಬದಲಾವಣೆಯ ಹಿಂದೆ ಟ್ರಂಪ್ ಅವರ ಕಟ್ಟರ್ ವಾದಿ ವಲಸೆ ನೀತಿಯೂ ಇತ್ತು. ಪ್ಯೂ ಸಂಶೋಧನಾ ಕೇಂದ್ರದ ಪ್ರಕಾರ, ಶೇ 56ರಷ್ಟು ಅಮೆರಿಕನ್ನರು ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಕಪ್ಪು ಸಮುದಾಯದ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲೂ ಸೆನೆಟ್ ಚುನಾವಣೆಯಲ್ಲಿ ಮತದಾರರು ಗಣನೀಯವಾಗಿ ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಒಲಿದಿದ್ದಾರೆ.
ಮಿಸಿಸಿಪಿಯ ಸೆನೆಟ್ ಚುನಾವಣೆಯಲ್ಲಿ ತೀವ್ರ ಪೈಪೋಟಿ ಇದೆ. ಅಲ್ಲಿನ ಮತದಾರರಲ್ಲಿ ಸುಮಾರು ಶೇ 37ರಷ್ಟು ಮಂದಿ ಕಪ್ಪು ಸಮುದಾಯದವರು. ಅಮೆರಿಕದ ಇತರ ಎಲ್ಲ ರಾಜ್ಯಗಳಿಗಿಂತ ಈ ಪ್ರಮಾಣ ಹೆಚ್ಚು.
ಸ್ಕಾಟ್ ಕೊಲಂ ಗೆದ್ದರೆ, 1982ರ ಬಳಿಕ ಮಿಸಿಸಿಪಿಯಿಂದ ಸೆನೆಟ್ಗೆ ಆಯ್ಕೆಯಾಗುವ ಮೊದಲ ಡೆಮಾಕ್ರಟಿಕ್ ಅಭ್ಯರ್ಥಿಯಾಗಲಿದ್ದಾರೆ



