ದೇಶದಲ್ಲಿ ಪ್ರಮುಖ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿರುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. 1977ರ ಪ್ರಸಿದ್ಧ ಬಾಲಿವುಡ್ ಚಿತ್ರದ ‘ಕ್ಯಾ ಹುಆ ತೇರಾ ವಾದಾ’ (ಏನಾಯಿತು ನಿಮ್ಮ ಭರವಸೆ?) ಎಂಬ ಗೀತೆಯ ಸಾಲುಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕರು ಮೋದಿ ಅವರ ಮೌನವನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. “ದೇಶಾದ್ಯಂತ ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿರುವುದು ಮಧ್ಯಮ ಮತ್ತು ಬಡ ವರ್ಗದವರಿಗೆ ತೀವ್ರ ತೊಂದರೆ ಉಂಟು ಮಾಡಿದೆ. ದೈನಂದಿನ ಅಗತ್ಯ ವಸ್ತುಗಳ ಬೆಲೆಗಳು ಆಕಾಶಕ್ಕೆ ಮುಟ್ಟುತ್ತಿದ್ದು, ಸಾಮಾನ್ಯ ಜನರ ಜೀವನವನ್ನು ದುಸ್ತರಗೊಳಿಸಿವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ಪ್ರತಿಭಟನೆ: ಮೋದಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ
ಹಾಗೆಯೇ, “ಕೇವಲ ಕಳೆದ ಒಂದು ತಿಂಗಳಲ್ಲೇ ಸಾಂಬಾರ ಪದಾರ್ಥಗಳ ಬೆಲೆಗಳು ಶೇ.10ರಿಂದ ಶೇ. 25ರಷ್ಟು ಏರಿಕೆಯಾಗಿವೆ. ಹಸಿ ಏಲಕ್ಕಿಯ ಬೆಲೆ ಪ್ರತಿ ಕೆಜಿಗೆ ₹4,000 ರಿಂದ ₹4,400ಕ್ಕೆ, ಕಪ್ಪು ಏಲಕ್ಕಿ ₹2,400ರಿಂದ ₹2,800ಕ್ಕೆ ಮತ್ತು ಜೀರಿಗೆಯ ಬೆಲೆ ₹360ರಿಂದ ₹400ಕ್ಕೆ ಏರಿದೆ. ಜಾಪತ್ರೆಯ (mace) ಬೆಲೆ ನೇರವಾಗಿ ಪ್ರತಿ ಕೆಜಿಗೆ ₹2,500ರಿಂದ ₹3,000ಕ್ಕೆ ಜಿಗಿದಿದೆ. ತೊಗರಿ ಬೇಳೆಯ ಬೆಲೆ ಪ್ರತಿ ಕೆಜಿಗೆ ₹100ರಿಂದ ₹130ಕ್ಕೆ, ಕಡಲೆ ಬೇಳೆ ₹70ರಿಂದ ₹100ಕ್ಕೆ ಮತ್ತು ಉದ್ದಿನ ಬೇಳೆ ₹120ರಿಂದ ₹140ಕ್ಕೆ ಏರಿಕೆಯಾಗಿದೆ. ಸಾಸಿವೆ ಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ ₹190ರಿಂದ ₹210ಕ್ಕೆ ಏರಿದ್ದರೆ, ಸಫೊಲಾ ಎಣ್ಣೆಯ ಬೆಲೆ ₹240ರಿಂದ ₹280ಕ್ಕೆ ತಲುಪಿದೆ” ಎಂದು ಜೈರಾಮ್ ರಮೇಶ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಜೂನ್ ಮತ್ತು ಸೆಪ್ಟೆಂಬರ್ ನಡುವೆ, ಈರುಳ್ಳಿಯ ಅಖಿಲ ಭಾರತ ಸರಾಸರಿ ಚಿಲ್ಲರೆ ಮಾರಾಟದ ಬೆಲೆ ಪ್ರತಿ ಕೆಜಿಗೆ ₹29.50ರಿಂದ ₹53.78ಕ್ಕೆ ಏರಿಕೆಯಾಗಿದೆ — ಅಂದರೆ ಕೇವಲ ಮೂರೂವರೆ ತಿಂಗಳಲ್ಲಿ ಶೇ. 82.3 ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಸಮಾಜದ ಬಡ ವರ್ಗದ ಕುಟುಂಬಗಳಿಗೆ ಬೇಳೆಕಾಳುಗಳು ಮತ್ತು ಅಗತ್ಯ ಆಹಾರ ಪದಾರ್ಥಗಳನ್ನು ಖರೀದಿಸುವುದು ಕಷ್ಟಕರವಾಗುತ್ತಿದೆ. ಆದರೂ, ಪ್ರಧಾನ ಮಂತ್ರಿಯವರು ಹಣದುಬ್ಬರದ ವಿಷಯದಲ್ಲಿ ಮೌನವಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ವೇಳೆ ದೇಶ ಪ್ರಶ್ನಿಸುತ್ತಿದೆ. ಪ್ರಧಾನ ಮಂತ್ರಿಗಳೇ, ಆ ‘ಅಚ್ಛೆ ದಿನ್’ (ಒಳ್ಳೆಯ ದಿನಗಳು) ಎಲ್ಲಿಗೆ ಹೋದವು? ಅವು ಈಗ ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿವೆಯೇ? ಸರ್ಕಾರ ಮೌನವಾಗಿರುವಾಗ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಇದೇನಾ ‘ನವ ಭಾರತ’? ‘ಕ್ಯಾ ಹುವಾ ತೇರಾ ವಾದಾ, ವೋ ಕಸಮ್ ವೋ ಇರಾದಾ’? (ನಿಮ್ಮ ಆ ಭರವಸೆಗೆ ಏನಾಯಿತು? ಆ ಪ್ರತಿಜ್ಞೆ, ಆ ಸಂಕಲ್ಪಕ್ಕೆ ಏನಾಯಿತು?)” ಎಂದು ಹಾಡಿನ ಮೂಲಕ ಪ್ರಶ್ನಿಸಿದ್ದಾರೆ.
ಹಾಗೆಯೇ, “ನಿಯಂತ್ರಣವಿಲ್ಲದ ಈ ಹಣದುಬ್ಬರವನ್ನು ತಡೆಗಟ್ಟಲು ಮತ್ತು ಸಾಮಾನ್ಯ ಜನರಿಗೆ ಪರಿಹಾರ ಒದಗಿಸಲು ಮೋದಿ ಸರ್ಕಾರವು ತಕ್ಷಣವೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



