ಆನ್‌ಲೈನ್ ಬ್ಯಾಂಕಿಂಗ್ ಮತ್ತು UPI ಮೂಲಕ ನಡೆಯುವ ಸೈಬರ್ ವಂಚನೆಗಳಿಗೆ ಬ್ರೇಕ್ ಹಾಕಲು RBI ಇತ್ತೀಚೆಗೆ ಮಹತ್ವದ ಚರ್ಚಾ ಪತ್ರವೊಂದನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 10,000 ರೂಪಾಯಿಗಿಂತ ಹೆಚ್ಚಿನ ಆನ್‌ಲೈನ್ ವಹಿವಾಟುಗಳಿಗೆ 1 ಗಂಟೆಯ ಕಾಲಾವಕಾಶ ನೀಡುವ ಪ್ರಸ್ತಾಪವೂ ಸೇರಿತ್ತು. ಆದರೆ, ಈ ನಿಯಮಕ್ಕೆ ಬ್ಯಾಂಕರ್‌ಗಳು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ನಿಯಮಗಳ ಮರುಪರಿಶೀಲನೆಗೆ ಒತ್ತಾಯಿಸಿದ್ದಾರೆ.
ಹಿರಿಯ ಸಾರ್ವಜನಿಕ ವಲಯದ ಬ್ಯಾಂಕರ್ ಒಬ್ಬರ ಪ್ರಕಾರ, ಸದ್ಯದ ಮಾರುಕಟ್ಟೆಯಲ್ಲಿ ಉದಯೋನ್ಮುಖ ಮತ್ತು ಪ್ರೀಮಿಯಂ ಗ್ರಾಹಕರಿಗೆ 10,000 ರೂಪಾಯಿ ತೀರಾ ಸಣ್ಣ ಮೊತ್ತವಾಗಿದೆ. ಈ ಮಿತಿಯನ್ನು ಕನಿಷ್ಠ 25,000 ರೂಪಾಯಿಗಳಿಗೆ ಹೆಚ್ಚಿಸದಿದ್ದರೆ ಇದು UPI ವಹಿವಾಟುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದರೊಂದಿಗೆ, ತೆರಿಗೆ ಪಾವತಿಗಳು, ಆಸ್ಪತ್ರೆ ಖರ್ಚುಗಳು ಅಥವಾ ಇತರ ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಹಣ ವರ್ಗಾವಣೆಯಾಗಬೇಕಿರುವುದರಿಂದ ಇಂತಹ ತುರ್ತು ಪ್ರಕರಣಗಳನ್ನು ಈ ನಿಯಮದಿಂದ ಹೊರಗಿಡಬೇಕು ಎಂದು ಬ್ಯಾಂಕರ್‌ಗಳು ಮನವಿ ಮಾಡಿದ್ದಾರೆ. ಅಲ್ಲದೆ, ವಂಚನೆ ಪತ್ತೆಯಾದ ತಕ್ಷಣ ವಹಿವಾಟನ್ನು ರದ್ದುಗೊಳಿಸುವ ‘ಕಿಲ್ ಸ್ವಿಚ್’ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ತಾಂತ್ರಿಕವಾಗಿ ಹಿಂದುಳಿದಿರುವ ಕೆಲವು ಸಣ್ಣ ಬ್ಯಾಂಕುಗಳಿಗೆ ತೀವ್ರ ಸವಾಲಾಗಲಿದೆ ಎಂದು ಬ್ಯಾಂಕುಗಳು ಹೇಳಿವೆ.
ಕಳೆದ ತಿಂಗಳು ಆರ್‌ಬಿಐ ಬಿಡುಗಡೆ ಮಾಡಿದ್ದ ಚರ್ಚಾ ಪತ್ರದಲ್ಲಿ ಸೈಬರ್ ವಂಚನೆ ತಡೆಯಲು ನಾಲ್ಕು ಪ್ರಮುಖ ಸೂತ್ರಗಳನ್ನು ಮುಂದಿಡಲಾಗಿತ್ತು. ದೊಡ್ಡ ಮೊತ್ತದ ಹಣ ವರ್ಗಾವಣೆಗೆ ನಿರ್ದಿಷ್ಟ ಅವಧಿಯವರೆಗೆ ‘ವಿಳಂಬ ಕ್ರೆಡಿಟ್’ ನೀಡುವುದು, ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ನಂಬಿಕಸ್ಥ ವ್ಯಕ್ತಿಯ ಮೂಲಕ ಹೆಚ್ಚುವರಿ ದೃಢೀಕರಣ ಪಡೆಯುವುದು, ಸೂಕ್ತವಾಗಿ ಪರಿಶೀಲನೆಗೆ ಒಳಪಟ್ಟ ಖಾತೆಗಳಿಗೆ ಮಾತ್ರ ದೊಡ್ಡ ಮೊತ್ತದ ಹಣ ಸ್ವೀಕರಿಸಲು ಅನುಮತಿ ನೀಡುವುದು ಮತ್ತು ಗ್ರಾಹಕರೇ ನಿಯಂತ್ರಿಸಬಹುದಾದ ಡಿಜಿಟಲ್ ನಿಯಂತ್ರಣಗಳನ್ನು ಅಳವಡಿಸುವುದು ಇದರಲ್ಲಿ ಸೇರಿದ್ದವು.
ಆದರೆ, ಪರಿಶೀಲನೆಗೆ ಒಳಪಟ್ಟ ಖಾತೆಗಳಿಗೆ ಮಾತ್ರ 25 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಕ್ರೆಡಿಟ್ ನೀಡಬೇಕು ಎಂಬ ಆರ್‌ಬಿಐನ ನಿಯಮ ಪ್ರಾಯೋಗಿಕವಾಗಿ ಅಸಾಧ್ಯ ಎಂದು ಪಾವತಿ ಉದ್ಯಮದ ತಜ್ಞರು ಹೇಳಿದ್ದಾರೆ. ವಂಚಕರು ಈ ನಿಯಮದಿಂದ ತಪ್ಪಿಸಿಕೊಳ್ಳಲು 25 ಲಕ್ಷಕ್ಕಿಂತ ಕಡಿಮೆ ಮೊತ್ತದ ಹೂಡಿಕೆ ಇರುವ ಹತ್ತಾರು ನಕಲಿ ಖಾತೆಗಳನ್ನು ತೆರೆಯುವ ಸಾಧ್ಯತೆ ಇರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ʼಡಾನ್ 3ʼ ವಿವಾದ: ಚಿತ್ರರಂಗದಿಂದ ಬ್ಯಾನ್ ಆದರೆ ರಣವೀರ್ ಸಿಂಗ್ ಮುಂದಿನ ನಡೆ ಏನು?
ಬ್ಯಾಂಕುಗಳು ನಿಯಮಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ, ದೇಶದಲ್ಲಿ ಡಿಜಿಟಲ್ ವಂಚನೆಗಳ ಗ್ರಾಫ್ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಭಾರತದಲ್ಲಿ ಡಿಜಿಟಲ್ ವಂಚನೆಗಳ ಸಂಖ್ಯೆ 2024 ರಲ್ಲಿ 24 ಲಕ್ಷದಷ್ಟಿದ್ದರೆ, ಅದು 2025 ರಲ್ಲಿ 28 ಲಕ್ಷ ಪ್ರಕರಣಗಳಿಗೆ ಏರಿಕೆಯಾಗಿದೆ. ಇನ್ನು ವಂಚನೆಯ ಒಟ್ಟು ಮೊತ್ತವು 2024 ರಲ್ಲಿದ್ದ 22,848 ಕೋಟಿ ರೂಪಾಯಿಗಳಿಂದ 2025 ರಲ್ಲಿ 22,931 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ.
ಗ್ರಾಹಕರ ಸುರಕ್ಷತೆ ಮತ್ತು ಡಿಜಿಟಲ್ ಪಾವತಿಯ ಸುಲಭತೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಈಗ ಆರ್‌ಬಿಐ ಮುಂದಿರುವ ದೊಡ್ಡ ಸವಾಲು. ಬ್ಯಾಂಕುಗಳ ಈ ತೀವ್ರ ವಿರೋಧದ ಹಿನ್ನೆಲೆ ಕೇಂದ್ರ ಬ್ಯಾಂಕ್ ಅಂತಿಮ ನಿಯಮಾವಳಿಗಳಲ್ಲಿ ಯಾವ ರೀತಿಯ ಬದಲಾವಣೆ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.




