ಕೇಂದ್ರ ಸರ್ಕಾರವು ಗ್ರೇಟ್ ನಿಕೋಬಾರ್ ಯೋಜನೆಯನ್ನು ಸಮರ್ಥಿಸಿಕೊಂಡ ಕೆಲವು ದಿನಗಳ ಬೆನ್ನಲ್ಲೇ ಯೋಜನೆಯ ನಿರ್ವಹಣೆಯ ಬಗ್ಗೆ ಸರ್ಕಾರದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಹಕ್ಕುಗಳ ಕಾಯ್ದೆ, 2006 ಅನ್ನು ಈ ಯೋಜನೆ ಉಲ್ಲಂಘಿಸುತ್ತದೆ ಎಂದು ಹೇಳಿರುವ ಜೈರಾಮ್ ರಮೇಶ್ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುಯಲ್ ಓರಾಮ್ ಅವರಿಗೆ ಪತ್ರ ಬರೆದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬುಡಕಟ್ಟು ಹಿತಾಸಕ್ತಿಗಳನ್ನು ರಕ್ಷಿಸಲಾಗುತ್ತಿದೆ ಮತ್ತು ಯಾವುದೇ ಬುಡಕಟ್ಟು ಸ್ಥಳಾಂತರ ಸಂಭವಿಸುತ್ತಿಲ್ಲ ಎಂಬ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಹೇಳಿಕೆಗಳನ್ನು ರಮೇಶ್ ಪ್ರಶ್ನಿಸಿದ್ದಾರೆ. ಹಾಗೆಯೇ ಸಂರಕ್ಷಿತ ಅರಣ್ಯ ಮತ್ತು ಬುಡಕಟ್ಟು ಸಮುದಾಯದ ಭೂಮಿಯ ದೊಡ್ಡ ಭಾಗವನ್ನು ಯೋಜನೆಗಾಗಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗ್ರೇಟ್ ನಿಕೋಬಾರ್ ಯೋಜನೆ ‘ಪರಿಸರ ವಿಪತ್ತು’ – ರಾಜನಾಥ್ ಸಿಂಗ್‌ಗೆ ಪತ್ರ ಬರೆದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
“ಯೋಜನೆಯ ಕಾಡನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲು ಸ್ಥಳೀಯ ನಿಕೋಬಾರೀಸ್ ಮತ್ತು ಶೋಂಪೆನ್ ಬುಡಕಟ್ಟು ಸಮುದಾಯದ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಸ್ಥಳೀಯ ಆಡಳಿತವು ಬುಡಕಟ್ಟು ರಹಿತ ವಸಾಹತುಗಾರರನ್ನು ಒಳಗೊಂಡ ಗ್ರಾಮ ಸಭೆಯಿಂದ ‘ಕಾನೂನುಬಾಹಿರ ಹಾಗೂ ಸುಳ್ಳು ಒಪ್ಪಿಗೆ’ ಪಡೆದಿದೆ” ಎಂದು ರಮೇಶ್ ಆರೋಪಿಸಿದ್ದಾರೆ.
ಸರ್ಕಾರವು ಈ ಯೋಜನೆಯಿಂದ ಯಾವುದೇ ಆದಿವಾಸಿಗಳು ಸ್ಥಳಾಂತರಗೊಳ್ಳುವುದಿಲ್ಲ ಎಂದು ಹೇಳುತ್ತಿದೆ. ಆದರೆ ಈ ವಿಚಾರದಲ್ಲಿ ಸರ್ಕಾರ ಪೂರ್ಣ ಸತ್ಯ ಹೇಳುತ್ತಿಲ್ಲ ಎಂದು ರಮೇಶ್ ದೂರಿದ್ದಾರೆ. ದ್ವೀಪದ ಆಡಳಿತವು ಈಗಾಗಲೇ ಆದಿವಾಸಿ ಕುಟುಂಬಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ‘ಕರಡು ಯೋಜನೆ’ಯನ್ನು ಸಿದ್ಧಪಡಿಸಿದೆ. ಇದು ಸರ್ಕಾರದ ದ್ವಂದ್ವ ನಿಲುವನ್ನು ತೋರಿಸುತ್ತದೆ. ಒಟ್ಟು 84.10 ಚದರ ಕಿಲೋಮೀಟರ್ ಆದಿವಾಸಿ ಮೀಸಲು ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ರಮೇಶ್ ತಿಳಿಸಿದ್ದಾರೆ.
ಇನ್ನು ಈ ಹಿಂದೆ ಜೈರಾಮ್ ರಮೇಶ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೂ ಪತ್ರ ಬರೆದಿದ್ದರು. ಸ್ತುತ ರೂಪದಲ್ಲಿರುವ ಈ ಯೋಜನೆಯು ‘ಪಾರಿಸಾರಿಕ ಮಹಾವಿಪತ್ತು’ (Ecological Disaster) ತರಲಿದೆ ಎಂದು ಎಚ್ಚರಿಸಿದ್ದರು.
ದೇಶದ ಭದ್ರತೆಯ ದೃಷ್ಟಿಯಿಂದ ದ್ವೀಪವನ್ನು ಬಲಪಡಿಸುವುದಕ್ಕೆ ತಮ್ಮ ವಿರೋಧವಿಲ್ಲ, ಆದರೆ ಅದಕ್ಕಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಅರಣ್ಯ ನಾಶ ಮಾಡುವ ಅಗತ್ಯವಿಲ್ಲ. ಸದ್ಯ ದ್ವೀಪದಲ್ಲಿರುವ ರಕ್ಷಣಾ ಪಡೆಯ ನೆಲೆಗಳಾದ ‘ಐಎನ್ಎಸ್ ಬಾಜ್’ (INS Baaz) ಮುಂತಾದ ಅಸ್ತಿತ್ವದಲ್ಲಿರುವ ಮಿಲಿಟರಿ ಮೂಲಸೌಕರ್ಯಗಳನ್ನೇ ವಿಸ್ತರಿಸುವ ಮೂಲಕ ಪರಿಸರ ಹಾನಿಯನ್ನು ಕಡಿಮೆ ಮಾಡಬಹುದು ಎಂದು ರಮೇಶ್ ಪರ್ಯಾಯ ಸಲಹೆ ನೀಡಿದ್ದಾರೆ.





