"ರಾಜಸ್ಥಾನದಲ್ಲಿ ಹೆಣ್ಣುಮಕ್ಕಳು ಹಗಲು-ರಾತ್ರಿ ಎನ್ನದೆ ನಿರ್ಭೀತಿಯಿಂದ ಓಡಾಡುವಂತೆ ಮಾಡುವುದು ನಮ್ಮ ಜವಾಬ್ದಾರಿ" ಎಂದು ಪ್ರತಿಜ್ಞೆ ಮಾಡಿದ್ದರು ಅಮಿತ್ ಶಾ. "ನಮ್ಮ ಸರ್ಕಾರ ಬಂದರೆ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಣ್ಗಾವಲು ಮತ್ತು ಕಠಿಣ ಕಾನೂನು ಜಾರಿ ಮಾಡಲಾಗುತ್ತದೆ" ಎಂದಿದ್ದರು ಪ್ರಧಾನಿ ಮೋದಿ. ಆದರೆ ಈಗ ಬಾಲಕಿ ಮೇಲೆ 30 ಮಂದಿ ಅತ್ಯಾಚಾರ ಎಸಗಿರುವುದರ ವಿರುದ್ಧ ಮೌನ ಮುರಿದು 'ಮೋಶಾ' ಮಾತನಾಡುವುದು ಯಾವಾಗ?
ಆಕೆ ಕೇವಲ 13 ವರ್ಷದ ಬಾಲಕಿ. ಇನ್ನೂ ಈ ಪ್ರಪಂಚದ ಕಪಟತನ ಅರಿಯದ ಮುಗ್ಧೆ. ಆಕೆಯನ್ನು ಐದು ದಿನಗಳ ಕಾಲ ದಿಗ್ಬಂಧನದಲ್ಲಿಟ್ಟರು, 30ಕ್ಕೂ ಹೆಚ್ಚು ನರಾಧಮರು ಸರಣಿ ಅತ್ಯಾಚಾರ ನಡೆಸಿದರು. ಇದು ಇತ್ತೀಚೆಗೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದ ಘಟನೆ. ಇಂತಹ ಅದೆಷ್ಟೋ ನೀಚ ಕೃತ್ಯಗಳ ಸುದ್ದಿಗೆ ನಾವು ದಿನಬೆಳಗಾಗುತ್ತಿದ್ದಂತೆ ಕಿವಿಯಾಗಬೇಕಾದ ಸಮಾಜ ಈಗಾಗಲೇ ಸೃಷ್ಟಿಯಾಗಿದೆ. ಇಲ್ಲಿ ಕಾನೂನು ಸುವ್ಯವಸ್ಥೆಯ ವೈಫಲ್ಯವೂ ಇದೆ, ಸಮಾಜದ ಸಾಮೂಹಿಕ ವಿಕೃತ ಮನಸ್ಥಿತಿಯ ಪ್ರತಿಬಿಂಬವೂ ಇದೆ.
ಈ 13ರ ಬಾಲೆ ಐದು ದಿನಗಳ ಕಾಲ ಅನುಭವಿಸಿದ ನರಕಯಾತನೆ, ಆಕೆಯ ಮುಖದಲ್ಲಿ ಮೂಡಿದ ಭಯ ಮತ್ತು ಆಕೆಯ ಜೀವನ್ಮರಣದ ಹೋರಾಟವನ್ನು ಕಲ್ಪಿಸಿಕೊಂಡರೆ ಕರುಳು ಹಿಂಡಿದಂತಾಗುತ್ತದೆ. ಇಂತಹ ಘಟನೆಗಳು ಕೇವಲ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಇಂತಹ ಭೀಕರ ಪ್ರಕರಣಗಳು ಹೆಚ್ಚು ಮುಖ್ಯಾಂಶಗಳಿಗೆ ಬರುತ್ತಿರುವುದನ್ನು ನಾವು ಅಲ್ಲಗಳೆಯಲಾಗದು. ಅದರಲ್ಲೂ ನಾವು NCRB (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) ಅಂಕಿ-ಅಂಶಗಳನ್ನು ನೋಡಿದಾಗ ಉತ್ತರ ಭಾರತದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲಿನ ದೌರ್ಜನ್ಯಗಳ ಗ್ರಾಫ್ ನಿರಂತರವಾಗಿ ಏರುತ್ತಲೇ ಇದೆ ಎಂಬುದು ಆತಂಕಕಾರಿ. ಇಷ್ಟೆಲ್ಲ ನಡೆಯುತ್ತಿದ್ದರೂ ರಾಜಸ್ಥಾನದಲ್ಲಿ ಮಹಿಳೆಯರಿಗೆ ಸುರಕ್ಷತೆ ನೀಡುವುದಾಗಿ ಪ್ರತಿಜ್ಞೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತ್ರ ತಮ್ಮ ಮೌನ ಮುರಿಯುತ್ತಿಲ್ಲ.
ಇದನ್ನೂ ಓದಿ: ಘೋರ ಕೃತ್ಯ | ಪತಿ, ಮಗನ ಎದುರೇ ಬುಡಕಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಐದು ದಿನಗಳ ಕಾಲ ಬಾಲಕಿಗೆ ನರಕಯಾತನೆ
ಜೂನ್ ತಿಂಗಳ ಕೊನೆಯ ವಾರದಲ್ಲಿ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಕೇವಲ 13 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ, ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿ, ಸತತ ಐದು ದಿನಗಳ ಕಾಲ ಕತ್ತಲ ಕೋಣೆಯಲ್ಲಿಟ್ಟು ಮೂವತ್ತಕ್ಕೂ ಹೆಚ್ಚು ಕಾಮುಕರು ಆಕೆಯ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿತ್ತು.
ಬಾಲಕಿಯೊಬ್ಬಳು ತನ್ನ ಸ್ನೇಹಿತೆಯನ್ನು ಭೇಟಿಯಾಗಿ ಹಿಂದಿರುಗುವಾಗ ಇ-ರಿಕ್ಷಾ ಚಾಲಕನೊಬ್ಬ ಆಕೆಯನ್ನು ಅಪಹರಿಸಿದ್ದು, ನಗರದ ಹೋಟೆಲ್ ಮಾಲೀಕರಿಗೆ ಮಾರಾಟ ಮಾಡಿದ್ದ. ಜೂನ್ 18ರಿಂದ ಜೂನ್ 23ರ ನಡುವೆ ಬಾಲಕಿಯನ್ನು ಶ್ರೀಗಂಗಾನಗರದ ವಿವಿಧ ಹೋಟೆಲ್‌ಗಳಲ್ಲಿ ಕೂಡಿಟ್ಟು, ಸುಮಾರು 30ರಿಂದ 32 ನರಾಧಮರು ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದರು. ಬಾಲಕಿ ನೋವಿನಿಂದ ಕಿರುಚಾಡಬಾರದು ಮತ್ತು ಯಾರಿಗೂ ವಿಷಯ ತಿಳಿಸಬಾರದು ಎಂಬ ಕಾರಣಕ್ಕೆ ಆಕೆಗೆ ಬಲವಂತವಾಗಿ ಮದ್ಯ ಕುಡಿಸಲಾಗುತ್ತಿತ್ತು ಎಂಬ ವಿಚಾರವೂ ಎಫ್‌ಐಆರ್‌ನಲ್ಲಿ ದಾಖಲಾಗಿದೆ.
ಬಾಲಕಿಯ ತಾಯಿ ನೀಡಿದ ನಾಪತ್ತೆ ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹೋಟೆಲ್ ಒಂದರ ಮೇಲೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಯಿತು. ವಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಒತ್ತಡಕ್ಕೆ ಒಳಗಾದ ಬಿಜೆಪಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ, 14 ಮಂದಿಯನ್ನು ಬಂಧಿಸಿದೆ. ಸದ್ಯ ಉಳಿದ ಆರೋಪಿಗಳ ಪತ್ತೆಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಬಾಲಕಿಯ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ನಡೆಸಲು ಸಹಕರಿಸಿದ ಹಾಗೂ ಕಾನೂನುಬಾಹಿರವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಶ್ರೀಗಂಗಾನಗರದ ಮೂರು ಪ್ರಮುಖ ಹೋಟೆಲ್‌ಗಳನ್ನು (ಹೋಟೆಲ್ ಖುಂಗರ್, ಹೋಟೆಲ್ ಜಾಯ್ ಇನ್, ಹೋಟೆಲ್ ಸಫೈರ್) ಜಿಲ್ಲಾಡಳಿತವು ಬುಲ್ಡೋಜರ್ ಬಳಸಿ ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗ ಮಧ್ಯಪ್ರವೇಶಿಸಿದ್ದು ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಅತ್ಯಾಚಾರ ಪ್ರಕರಣ ದಾಖಲಾತಿ ರಾಜಸ್ಥಾನದಲ್ಲಿ ಅಧಿಕ
ಎನ್‌ಸಿಆರ್‌ಬಿ ವರದಿಗಳ ಪ್ರಕಾರ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನವು ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ. ಆದರೆ, ಇದಕ್ಕೆ ಕೇವಲ ಅಪರಾಧಗಳ ಹೆಚ್ಚಳವಷ್ಟೇ ಕಾರಣವಲ್ಲ, ಬದಲಿಗೆ ರಾಜಸ್ಥಾನದಲ್ಲಿ ಪೊಲೀಸರು ಜಾರಿಗೆ ತಂದ ‘ಕಡ್ಡಾಯ ಎಫ್‌ಐಆರ್ ದಾಖಲಾತಿ’ ನೀತಿಯೂ ಒಂದು ಪ್ರಮುಖ ಕಾರಣ ಎನ್ನುವ ವಿಶ್ಲೇಷಕರು ಇದ್ದಾರೆ. ಆದರೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಆರೋಪಿಗಳು ಪ್ರಬಲ ಜಾತಿ, ಹಣಬಲ ಅಥವಾ ರಾಜಕೀಯ ಹಿನ್ನೆಲೆ ಹೊಂದಿದ್ದರೆ, ಇಂದಿಗೂ ಪೊಲೀಸರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ ಎಂಬುದು ವಾಸ್ತವ.
ಎಫ್‌ಐಆರ್ ದಾಖಲಾದ ನಂತರವೂ ಸಂತ್ರಸ್ತ ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರದ ಬೆದರಿಕೆ ಹಾಕುವುದು, ಪಂಚಾಯತ್‌ಗಳ ಮೂಲಕ ರಾಜಿ ಸಂಧಾನಕ್ಕೆ ಒತ್ತಾಯಿಸುವುದು ಇಂದಿಗೂ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸುವ ಮುನ್ನವೇ ಸಂತ್ರಸ್ತೆಯ ಚಾರಿತ್ರ್ಯ ವಧೆ ಮಾಡುವುದು ಅಥವಾ ದೂರು ನೀಡದಂತೆ ಪರೋಕ್ಷವಾಗಿ ಒತ್ತಡ ಹೇರುವ ನಿದರ್ಶನಗಳು ವರದಿಯಾಗುತ್ತಲೇ ಇವೆ.
ಪ್ರಧಾನಿ ಮೋದಿ, ಅಮಿತ್ ಶಾ ಮೌನವೇಕೆ?
ಚುನಾವಣಾ ಸಂದರ್ಭಗಳಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ದೊಡ್ಡ ಭರವಸೆಗಳನ್ನು ನೀಡುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ಪ್ರಮುಖ ನಾಯಕರು ಇಂತಹ ಭೀಕರ ಘಟನೆ ನಡೆದಾಗಲೂ ಮೌನವಾಗಿರುವುದು ಸದ್ಯ ತೀವ್ರ ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಹಾಗೆಯೇ ಚುನಾವಣೆ ವೇಳೆ ಪ್ರಧಾನಿ ಮೋದಿ, ಅಮಿತ್ ಶಾ ನೀಡಿದ್ದ ಹೇಳಿಕೆಗಳೂ ವೈರಲ್ ಆಗುತ್ತಿವೆ.
2023ರಲ್ಲಿ ರಾಜಸ್ಥಾನದಲ್ಲಿ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವೆಡೆ ರ‍್ಯಾಲಿಗಳನ್ನು ನಡೆಸಿದ್ದರು. ಜೈಪುರದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, “ಬಿಜೆಪಿಯ ಏಕೈಕ ಸಂಕಲ್ಪವೆಂದರೆ ರಾಜಸ್ಥಾನವನ್ನು ಅಪರಾಧ ಮುಕ್ತಗೊಳಿಸುವುದು ಮತ್ತು ಹೆಣ್ಣುಮಕ್ಕಳ ಘನತೆಯನ್ನು ಎತ್ತಿಹಿಡಿಯುವುದು. ನಮ್ಮ ಸರ್ಕಾರ ಬಂದರೆ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಣ್ಗಾವಲು ಮತ್ತು ಕಠಿಣ ಕಾನೂನು ಜಾರಿ ಮಾಡಲಾಗುತ್ತದೆ” ಎಂದು ಭರವಸೆ ನೀಡಿದ್ದರು.
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಉದಯಪುರ ಮತ್ತು ಅಲ್ವಾರ್‌ನಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ, “ಗೆಹ್ಲೋಟ್ ಸರ್ಕಾರವು ರಾಜಸ್ಥಾನವನ್ನು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಇಂತಹ ನಾಚಿಕೆಗೇಡಿನ ವ್ಯವಸ್ಥೆಯನ್ನು ಕೊನೆಗಾಣಿಸಲು ಬಿಜೆಪಿ ಸಿದ್ಧವಾಗಿದೆ” ಎಂದಿದ್ದರು.
ಬಿಜೆಪಿಯ ಸಂಕಲ್ಪ ಪತ್ರ (ಪ್ರಣಾಳಿಕೆ) ಬಿಡುಗಡೆ ಹಾಗೂ ರ‍್ಯಾಲಿಗಳ ವೇಳೆ ಮಾತನಾಡುತ್ತಾ, “ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ, ಪ್ರತಿ ಜಿಲ್ಲೆಯಲ್ಲೂ ಮಹಿಳಾ ಸುರಕ್ಷತಾ ಸೆಲ್ ಮತ್ತು ಆಂಟಿ-ರೋಮಿಯೋ ಸ್ಕ್ವಾಡ್‌ಗಳನ್ನು ರಚಿಸಲಾಗುವುದು. ಹೆಣ್ಣುಮಕ್ಕಳು ಹಗಲು-ರಾತ್ರಿ ಎನ್ನದೆ ನಿರ್ಭೀತಿಯಿಂದ ಓಡಾಡುವಂತೆ ಮಾಡುವುದು ನಮ್ಮ ಜವಾಬ್ದಾರಿ” ಎಂದು ಪ್ರತಿಜ್ಞೆ ಮಾಡಿದ್ದರು ಅಮಿತ್ ಶಾ. ಆದರೆ ಈಗ ಬಾಲಕಿ ಮೇಲೆ 30 ಜನ ಅತ್ಯಾಚಾರ ಎಸಗಿರುವುದರ ವಿರುದ್ಧ ಮೌನ ಮುರಿದು ಮಾತನಾಡುವುದು ಯಾವಾಗ?
ಅಂದು ಪ್ರಧಾನಿ ಮೋದಿ, ಅಮಿತ್ ಶಾ ನೀಡಿದ ಇದೇ ಭರವಸೆಗಳನ್ನು ಮುಂದಿಟ್ಟುಕೊಂಡು ಈಗ ವಿಪಕ್ಷಗಳು ಪ್ರಶ್ನಿಸುವಂತಾಗಿದೆ. “ಅಧಿಕಾರಕ್ಕೆ ಬಂದರೆ ಸುರಕ್ಷತೆ ನೀಡುವುದಾಗಿ ಹೇಳಿದ ನಾಯಕರು, ಈಗ ತಮ್ಮದೇ ಸರ್ಕಾರವಿರುವಾಗ ಇಷ್ಟು ದೊಡ್ಡ ಕೃತ್ಯ ನಡೆದರೂ ಯಾಕೆ ಮಾತನಾಡುತ್ತಿಲ್ಲ” ಎಂಬ ಪ್ರಶ್ನೆ ನಮ್ಮಲ್ಲೂ ಹುಟ್ಟಲೇಬೇಕು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



