ರಸ್ತೆ ಅಪಘಾತ ಪರಿಹಾರ ಪ್ರಕರಣಗಳು ಕ್ರಿಮಿನಲ್ ವಿಚಾರಣೆಗಳಲ್ಲ. ಹೀಗಾಗಿ ಅಪಘಾತವನ್ನು ‘ಸಂಶಯಕ್ಕೆ ಅವಕಾಶವಿಲ್ಲದಂತೆ’ ಸಾಬೀತುಪಡಿಸುವ ಅಗತ್ಯವಿಲ್ಲ. ಲಭ್ಯವಿರುವ ಸಾಕ್ಷ್ಯಗಳು ಮತ್ತು ಘಟನೆ ಸಂಭವಿಸಿರುವ ಸಾಧ್ಯತೆಗಳ ಆಧಾರದಲ್ಲಿ ಪರಿಹಾರ ಪ್ರಕರಣಗಳನ್ನು ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 2002ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂವರು ಶಿಕ್ಷಕರ ಕುಟುಂಬಗಳಿಗೆ ಒಟ್ಟು 1.42 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
2002ರ ಜನವರಿ 30ರ ರಾತ್ರಿ ಅಲಹಾಬಾದ್ನಿಂದ ಒರೈ ಕಡೆಗೆ ತೆರಳುತ್ತಿದ್ದ ಮಾರುತಿ ಕಾರು ಮತ್ತು ಭಾರೀ ಟ್ಯಾಂಕರ್ ನಡುವೆ ಸರ್ಸೌಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಶಿಕ್ಷಕರಾದ ಮಾತಾ ಪ್ರಸಾದ್, ಅಜೀತ್ ಸಿಂಗ್ ಮತ್ತು ರೂಪ್ ಸಿಂಗ್ ಮೃತಪಟ್ಟಿದ್ದರು. ಡಾ. ದಿಲೀಪ್ ಕುಮಾರ್ ಕಟಿಯಾರ್ ಗಂಭೀರವಾಗಿ ಗಾಯಗೊಂಡಿದ್ದರು.
ಮೃತರ ಕುಟುಂಬಗಳು ಪರಿಹಾರ ಕೋರಿ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದವು. ಆದರೆ, ಅಪಘಾತಕ್ಕೆ ಕಾರಿನ ಚಾಲಕನೇ ಕಾರಣ ಎಂದು ಅಭಿಪ್ರಾಯಪಟ್ಟ ನ್ಯಾಯಮಂಡಳಿ, ಪರಿಹಾರ ಅರ್ಜಿಗಳನ್ನು ತಿರಸ್ಕರಿಸಿತ್ತು. 2024ರಲ್ಲಿ ಅಲಹಾಬಾದ್ ಹೈಕೋರ್ಟ್ ಕೂಡ ಈ ತೀರ್ಪನ್ನು ಎತ್ತಿಹಿಡಿದಿತ್ತು. ಬಳಿಕ ಕುಟುಂಬಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.
ಸಂತ್ರಸ್ತ ಕುಟುಂಬಗಳ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠ ವಿಚಾರಣೆ ನಡೆಸಿದೆ. “ಮೋಟಾರು ಅಪಘಾತ ಪರಿಹಾರ ಪ್ರಕರಣಗಳು ನಾಗರಿಕ ಸ್ವರೂಪದ ವಿಚಾರಣೆಗಳಾಗಿವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಅನುಸರಿಸುವ ಕಠಿಣ ಸಾಕ್ಷ್ಯದ ಮಾನದಂಡವನ್ನು ಇಂತಹ ಪ್ರಕರಣಗಳಿಗೆ ಅನ್ವಯಿಸುವಂತಿಲ್ಲ” ಎಂದು ಹೇಳಿದೆ.
“ಅಪಘಾತದ ಸುಮಾರು 10ರಿಂದ 12 ಗಂಟೆಗಳ ಬಳಿಕ ತೆಗೆದ ವಾಹನಗಳ ಫೋಟೊಗಳನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದ ನ್ಯಾಯಮಂಡಳಿ ಮತ್ತು ಹೈಕೋರ್ಟ್ ಗಂಭೀರ ತಪ್ಪು ಮಾಡಿವೆ. ಯಾಕೆಂದರೆ, ಹಲವು ಗಂಟೆಗಳ ಬಳಿಕ ತೆಗೆದ ಫೋಟೊಗಳು ಅಪಘಾತದ ಸಮಯದಲ್ಲಿ ವಾಹನಗಳು ಇದ್ದ ನಿಖರ ಸ್ಥಾನವನ್ನು ಪ್ರತಿಬಿಂಬಿಸುವುದಿಲ್ಲ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರತ್ಯಕ್ಷ ಸಾಕ್ಷಿ ಡಾ. ದಿಲೀಪ್ ಕುಮಾರ್ ಕಟಿಯಾರ್ ಅವರ ಹೇಳಿಕೆಯನ್ನು ನ್ಯಾಯಾಲಯ ವಿಶ್ವಾಸಾರ್ಹವೆಂದು ಪರಿಗಣಿಸಿದೆ. “ಕಾರು ಸರಿಯಾದ ಮಾರ್ಗದಲ್ಲಿ ನಿಯಂತ್ರಿತ ವೇಗದಲ್ಲಿ ಚಲಿಸುತ್ತಿದ್ದಾಗ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು” ಎಂದು ಅವರು ಹೇಳಿದ್ದರು.
ಈ ಲೇಖನ ಓದಿದ್ದೀರಾ?: ಹಾರ್ಮುಜ್ನಲ್ಲಿ ಟ್ರಂಪ್ ‘ದಾದಾಗಿರಿ’: ಅಮೆರಿಕದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ಯನ್ನು ಇರಾನ್ ವಶಕ್ಕೆ ಪಡೆದರೆ ಹೇಗಿರುತ್ತದೆ?
ರಾತ್ರಿ ವೇಳೆ ಪಾರ್ಕಿಂಗ್ ದೀಪ, ಅಪಾಯ ಸೂಚಕ ದೀಪ ಅಥವಾ ಪ್ರತಿಫಲಕ ಎಚ್ಚರಿಕೆ ಫಲಕಗಳಿಲ್ಲದೆ ಭಾರೀ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸುವುದು ನಿರ್ಲಕ್ಷ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಮತ್ತು ಅಲಹಾಬಾದ್ ಹೈಕೋರ್ಟ್ ತೀರ್ಪುಗಳನ್ನು ರದ್ದುಗೊಳಿಸಿರುವ ನ್ಯಾಯಾಲಯ, ಮೃತರ ಮೂರು ಕುಟುಂಬಗಳಿಗೆ ಕ್ರಮವಾಗಿ 65.58 ಲಕ್ಷ ರೂ., 41.66 ಲಕ್ಷ ರೂ. ಹಾಗೂ 35.36 ಲಕ್ಷ ರೂ. ಪರಿಹಾರ ನೀಡುವಂತೆ ಟ್ಯಾಂಕರ್ನ ವಿಮಾ ಕಂಪನಿಗೆ ನಿರ್ದೇಶಿಸಿದೆ.
ಪರಿಹಾರ ಅರ್ಜಿ ಸಲ್ಲಿಸಿದ ದಿನದಿಂದ ಸಂಪೂರ್ಣ ಮೊತ್ತ ಪಾವತಿಯಾಗುವವರೆಗೆ ವಾರ್ಷಿಕ 6%ರಷ್ಟು ಬಡ್ಡಿಯನ್ನೂ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.



