ಭಾರತವು 2025ರಲ್ಲಿ 65 ಬಾರಿ ಇಂಟರ್‌ನೆಟ್ ಸ್ಥಗಿತವನ್ನು ಎದುರಿಸಿದೆ. ಗಮನಾರ್ಹವಾಗಿ, ಇದು 2017ರ ನಂತರ ದೇಶದಲ್ಲಿ ದಾಖಲಾದ ಅತ್ಯಂತ ಕಡಿಮೆ ಸಂಖ್ಯೆಯ ಸ್ಥಗಿತವಾಗಿದೆ. ಆದಾಗ್ಯೂ, ಅತೀ ಹೆಚ್ಚು ಇಂಟರ್‌ನೆಟ್ ಸ್ಥಗಿತವನ್ನು ಕಂಡಿರುವ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ. ಇದು, ಆತಂಕಕಾರಿ ಮಟ್ಟದಲ್ಲಿದೆ ಎಂದು ಜಾಗತಿಕ ಡಿಜಿಟಲ್ ಹಕ್ಕುಗಳ ಪ್ರತಿಪಾದನಾ ಸಂಸ್ಥೆ ‘ಆಕ್ಸೆಸ್ ನೌ’ ವರದಿ ಹೇಳಿದೆ.
ಆಕ್ಸೆಸ್ ನೌ 2016ರಿಂದಲೂ ಇಂತಹ ದತ್ತಾಂಶಗಳನ್ನು ಸಂಗ್ರಹಿಸಲು ಆರಂಭಿಸಿದೆ. ಈಗ, ‘ರೈಸಿಂಗ್ ರಿಪ್ರೆಷನ್ ಮೀಟ್ಸ್ ಗ್ಲೋಬಲ್ ರೆಸಿಸ್ಟೆನ್ಸ್: ಇಂಟರ್ನೆಟ್ ಶಟ್‌ಡೌನ್ಸ್ ಇನ್-2025’ ಎಂಬ ಶೀರ್ಷಿಕೆಯಡಿ ವರದಿ ಬಿಡುಗಡೆ ಮಾಡಿದೆ. ಕಳೆದ ವರ್ಷ 52 ದೇಶಗಳಲ್ಲಿ ನಡೆದ 313 ಉದ್ದೇಶಪೂರ್ವಕ ಇಂಟರ್ನೆಟ್ ಸ್ಥಗಿತಗಳನ್ನು ವರದಿಯಲ್ಲಿ ದಾಖಲಿಸಲಾಗಿದೆ. ಈ ಪೈಕಿ, ಮ್ಯಾನ್ಮಾರ್‌ನಲ್ಲಿ 95 ಬಾರಿ ಇಂಟರ್‌ನೆಟ್ ಸ್ಥಗಿತಗೊಂಡಿದ್ದರೆ, ಭಾರತದಲ್ಲಿ 65 ಬಾರಿ ಸ್ಥಗಿತ ಘಟನೆಗಳು ಜರುಗಿವೆ. ಆದಾಗ್ಯೂ, 2016ರಿಂದ ಈವರೆಗಿನ ಒಟ್ಟಾರೆ 2,102 ಬಾರಿಯ ಇಂಟರ್‌ನೆಟ್ ಸ್ಥಗಿತದಲ್ಲಿ ಭಾರತವೇ 920 ಬಾರಿ ಸ್ಥಗಿತವನ್ನು ಎದುರಿಸಿದೆ. ಇದರೊಂದಿಗೆ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
ಭಾರತವು 2016ರಲ್ಲಿ 30 ಸ್ಥಗಿತಗಳನ್ನು ಕಂಡಿತು, ಇದು 2017ರಲ್ಲಿ 69ಕ್ಕೆ ಏರಿ ದುಪ್ಪಟ್ಟಾಯಿತು. ಈ ಸಂಖ್ಯೆಯು 2018ರಲ್ಲಿ 134ಕ್ಕೆ ತಲುಪಿ ಗರಿಷ್ಠ ಮಟ್ಟಕ್ಕೇರಿತು, ನಂತರ 2019ರಲ್ಲಿ 121, 2020 ಮತ್ತು 2021ರಲ್ಲಿ ತಲಾ 108, 2022ರಲ್ಲಿ 85, 2023ರಲ್ಲಿ 116 ಹಾಗೂ 2024ರಲ್ಲಿ 84 ಇತ್ತು. ಕಳೆದ ವರ್ಷ 2025ರಲ್ಲಿ 65ಕ್ಕೆ ಇಳಿಕೆಯಾಗಿದೆ.
ವರದಿಯ ಪ್ರಕಾರ, 2025ರ 65 ಸ್ಥಗಿತಗಳು ಭಾರತದಾದ್ಯಂತ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲೆ ಪರಿಣಾಮ ಬೀರಿವೆ. ಈ ಇಂಟರ್‌ನೆಟ್ ಸ್ಥಗಿತವನ್ನು ಮುಖ್ಯವಾಗಿ ‘ಪ್ರತಿಭಟನೆಗಳು, ಸಂಘರ್ಷಗಳು, ಕೋಮು ಹಿಂಸಾಚಾರ ಮತ್ತು ಧಾರ್ಮಿಕ ರಜೆಗಳ’ ಸಮಯದಲ್ಲಿ ಹೇರಲಾಗಿದೆ.
This video cannot be played in your browser. Open the video directly
“ತಾಂತ್ರಿಕವಾಗಿ ಕಾನೂನಿನ ಪ್ರಕಾರ ಸ್ಥಗಿತದ ಆದೇಶಗಳನ್ನು ಪ್ರಕಟಿಸಬೇಕಾಗುತ್ತದೆ. ಆದರೂ, ಭಾರತವು ಜನರ ಧ್ವನಿಗಿಂತ ನಿಯಂತ್ರಣವನ್ನೇ ಆರಿಸಿಕೊಳ್ಳುತ್ತಿದೆ. ಇಂಟರ್‌ನೆಟ್ ಸ್ಥಗಿತಗಳು ಮೂಲಭೂತವಾಗಿ ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುದನ್ನು ಸರ್ಕಾರ ಮರೆತಿದೆ ” ಎಂದು ಆಕ್ಸೆಸ್ ನೌ ಹೇಳಿದೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಮಮತಾ-ಅಭಿಷೇಕ್ ಜಂಟಿ ತಂತ್ರ – ಒಂಟಿ ಪ್ರಚಾರ; ಬಿಜೆಪಿ ಅತಂತ್ರ?
2025ರ ಡಿಸೆಂಬರ್ 29ರಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ ಸೆಕ್ಷನ್ 163ರ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ‘ಅನಧಿಕೃತ ವಿಪಿಎನ್ ಬಳಕೆಯ ಮೇಲೆ ಎರಡು ತಿಂಗಳ ನಿಷೇಧ’ ಹೇರಲಾಗಿತ್ತು ಎಂದು ವರದಿ ಉಲ್ಲೇಖಿಸಿದೆ. ಈ ಆದೇಶದ ನಂತರ, ಪೊಲೀಸರು ಸುಮಾರು 800 ಬಳಕೆದಾರರಿಗೆ ದಂಡ ವಿಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ‘ನಿಷೇಧಿತ ಅಪ್ಲಿಕೇಶನ್‌ಗಳಿಗಾಗಿ ಫೋನ್ ಶೋಧನೆ’ ಕೂಡ ನಡೆದಿದೆ ಎಂದು ವರದಿ ವಿವರಿಸಿದೆ.
ಜಾಗತಿಕವಾಗಿ, ಏಷ್ಯಾ ಪೆಸಿಫಿಕ್ ಪ್ರದೇಶವು ಇಂಟರ್‌ನೆಟ್ ಸ್ಥಗಿತದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಅಂದರೆ, ಈ ಭಾಗದ 11 ದೇಶಗಳಲ್ಲಿ 195 ಸ್ಥಗಿತಗಳು ನಡೆದಿವೆ. ಈ ಪ್ರದೇಶದ ಪ್ರಜಾಪ್ರಭುತ್ವ ರಾಷ್ಟ್ರಗಳು ‘ಅಶಾಂತಿಗೆ ಪ್ರತಿಕ್ರಿಯೆಯಾಗಿ ಇಂಟರ್‌ನೆಟ್ ಸ್ಥಗಿತವನ್ನೇ ಅವಲಂಬಿಸುತ್ತಿವೆ’ ಎಂದು ಆಕ್ಸೆಸ್ ನೌ ಹೇಳಿದೆ.
ಪಾಕಿಸ್ತಾನದ 20 ಸ್ಥಗಿತಗಳನ್ನು ಉಲ್ಲೇಖಿಸಿರುವ ವರದಿಯು, “ಪ್ರತಿಭಟನೆಗಳು, ಧಾರ್ಮಿಕ ಘಟನೆಗಳು ಹಾಗೂ ರಾಜಕೀಯವಾಗಿ ಸೂಕ್ಷ್ಮ ಕ್ಷಣಗಳಲ್ಲಿ ಸಂಪರ್ಕ ಕಡಿತಗೊಳಿಸುವುದು ಈಗ ಸಾಮಾನ್ಯವಾಗುತ್ತಿದೆ. ಇಲ್ಲಿ ಪಾರದರ್ಶಕತೆ ಅಥವಾ ಹೊಣೆಗಾರಿಕೆಯ ಕೊರತೆಯಿದೆ” ಎಂದು ತಿಳಿಸಿದೆ.




