ಅಣ್ಣನ 70 ಸಾವಿರ ರೂ. ಸಾಲ ತೀರಿಸಲು ನೆರವಾಗುವ ಉದ್ದೇಶದಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ತೆರಳಿದ್ದ 25 ವರ್ಷದ ಯುವಕ ಕುದಿಯುತ್ತಿದ್ದ ಬೆಲ್ಲದ ಪಾಕದ ಬಾಣಲೆಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ಉತ್ತರ ಪ್ರದೇಶದ ಲಖಿಂಪುರ ಜಿಲ್ಲೆಯ ಈಸಾನಗರದ ಮೂಡಿ ಗ್ರಾಮದ ದಾನಿಶ್ ಎಂದು ಗುರುತಿಸಲಾಗಿದೆ. ಸುಮಾರು ನಾಲ್ಕು ತಿಂಗಳ ಹಿಂದೆ 15 ಮಂದಿ ಕಾರ್ಮಿಕರೊಂದಿಗೆ ದಾನಿಶ್ ಮಹಾರಾಷ್ಟ್ರಕ್ಕೆ ತೆರಳಿದ್ದರು. ಆಗಸ್ಟ್ 21ರಂದು ಬೆಲ್ಲ ತಯಾರಿಕಾ ಘಟಕದಲ್ಲಿ ಎರಡು ದೊಡ್ಡ ಬಾಣಲೆಗಳಲ್ಲಿ ಪಾಕ ಕುದಿಯುತ್ತಿದ್ದ ವೇಳೆ ದಾನಿಶ್ ಬಾಣಲೆಯ ಅಂಚಿನ ಬಳಿ ನಿಂತಿದ್ದರು. ಈ ವೇಳೆ ತಲೆ ಸುತ್ತಿದಂತಾಗಿ ಸಮತೋಲನ ಕಳೆದುಕೊಂಡು ಕುದಿಯುತ್ತಿದ್ದ ಪಾಕಕ್ಕೆ ಬಿದ್ದಿದ್ದಾರೆ. ಬಾಣಲೆಯೊಳಗೆ ಸಿಲುಕಿದ್ದ ಅವರು ‘ಅಣ್ಣಾ, ಕಾಪಾಡಿ’ ಎಂದು ಕೂಗಿದ್ದಾರೆ. ಕೂಡಲೇ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿ ಸೌಟಿನ ಸಹಾಯದಿಂದ ಅವರನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಬಳಿಕ ಕೆಲ ಕಾರ್ಮಿಕರು ತಮ್ಮ ಜೀವದ ಅಪಾಯವನ್ನೂ ಲೆಕ್ಕಿಸದೆ ದಾನಿಶ್ ಅವರನ್ನು ಬಾಣಲೆಯಿಂದ ಹೊರಗೆಳೆದಿದ್ದಾರೆ. ತೀವ್ರವಾಗಿ ಸುಟ್ಟಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದಾನಿಶ್ ಸಹಾಯಕ್ಕಾಗಿ ಕೂಗುತ್ತಿರುವ ದೃಶ್ಯ ವೈರಲ್ ಆಗಿದೆ. ದಾನಿಶ್‌ಗೆ ಮದುವೆಯಾಗಿ ಎರಡು ವರ್ಷಗಳಾಗಿದ್ದು, ಎರಡು ತಿಂಗಳ ಪುಟ್ಟ ಮಗುವಿದೆ. ಪತ್ನಿ, ಮಗು, ತಂದೆ-ತಾಯಿ ಹಾಗೂ ಅಣ್ಣ-ತಂಗಿಯನ್ನು ಅಗಲಿದ್ದಾರೆ. ಕುಟುಂಬಕ್ಕೆ ನೆರವಾಗಲು ಸಾಲ ತೀರಿಸುವ ಉದ್ದೇಶದಿಂದ ದುಡಿಯಲು ತೆರಳಿದ್ದ ಯುವಕನ ಬದುಕು ದುರಂತದಲ್ಲಿ ಅಂತ್ಯಗೊಂಡಿದೆ.
ಇದನ್ನೂ ಓದಿ: 20 ಬಂಡಾಯ ಸಂಸದರ ಅನರ್ಹತೆಗೆ ಆಗ್ರಹ: ಸುಪ್ರೀಂ ಕೋರ್ಟ್‌ಗೆ ಅಭಿಷೇಕ್ ಬ್ಯಾನರ್ಜಿ ಅರ್ಜಿ
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಗ್ರಾಮಕ್ಕೆ ಕಳುಹಿಸಲಾಗಿತ್ತು. ಮೃತದೇಹ ಗ್ರಾಮಕ್ಕೆ ತಲುಪಿದ ವೇಳೆ ಕುಟುಂಬಸ್ಥರು ಆಕ್ರಂದನ ಮುಗಿಲುಮುಟ್ಟಿದ್ದರು. ಘಟನೆ ಸಂಬಂಧ ಈವರೆಗೆ ಯಾರ ವಿರುದ್ಧವೂ ಲಿಖಿತ ದೂರು ಬಂದಿಲ್ಲ ಎಂದು ಈಸಾನಗರದ ಸಿಒ ಶಂಶೇರ್ ಬಹಾದೂರ್ ಸಿಂಗ್ ತಿಳಿಸಿದ್ದಾರೆ.




