ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಚಿಲ್ಲರೆ ವ್ಯಾಪಾರಿಗಳಿಗೆ ₹2,700ಕ್ಕೆ ಪೂರೈಕೆಯಾಗುವ ಔಷಧಿಗೆ ₹27,000 MRP ನಿಗದಿಪಡಿಸಿರುವುದನ್ನು ಉಲ್ಲೇಖಿಸಿದ ನ್ಯಾಯಾಲಯ, ಇದನ್ನು ‘ಹಗಲು ದರೋಡೆ’, ʼಹತ್ಯಾಕಾಂಡʼ ಎಂದು ಕಟುವಾಗಿ ಟೀಕಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಮಂಗಳವಾರ ಕಡ್ಡಾಯವಾಗಿ ಜೆನೆರಿಕ್ ಔಷಧಿಗಳನ್ನು ಶಿಫಾರಸು ಮಾಡುವುದು, ನಿಗದಿತ ಬೆಲೆ ನಿಯಂತ್ರಣದ ವ್ಯಾಪ್ತಿಗೆ ಒಳಪಡದ ಔಷಧಿಗಳು ಹಾಗೂ ವೈದ್ಯಕೀಯ ಸಾಧನಗಳ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು, ಕ್ಯಾನ್ಸರ್‌ಗೆ ಅಗತ್ಯವಿರುವ ಔಷಧಿಯೊಂದರ ಎಂಆರ್‌ಪಿ ₹27 ಸಾವಿರವಾಗಿದ್ದು, ಅದೇ ಔಷಧಿ ಚಿಲ್ಲರೆ ವ್ಯಾಪಾರಿಗೆ ₹2,700ಕ್ಕೆ ಪೂರೈಕೆಯಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದರು. ₹2,700ಕ್ಕೆ ತಯಾರಕರು ಚಿಲ್ಲರೆ ವ್ಯಾಪಾರಿಗೆ ನೀಡುವ ಔಷಧಿಗೆ ₹27 ಸಾವಿರ ಎಂಆರ್‌ಪಿ ಹೇಗೆ ನಿಗದಿಯಾಗುತ್ತದೆ? ಇದರಿಂದ ರೋಗಿಗೆ ಮೋಸವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಈ ಕುರಿತು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನವಾಗಿರುವುದು ಆಶ್ಚರ್ಯಕರ ಎಂದು ಪೀಠ ಹೇಳಿತು. “ಇದು ಸಂಪೂರ್ಣ ಅರಾಜಕತೆ ಮತ್ತು ರೋಗಿಗಳೊಂದಿಗೆ ಹಗಲು ದರೋಡೆ” ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣದ ದುರ್ಬಳಕೆಯ ಸ್ಪಷ್ಟ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಎಲ್ಲ ಔಷಧಿಗಳ MRPಯನ್ನು ಚಿಲ್ಲರೆ ವ್ಯಾಪಾರಿಗೆ ನಿಗದಿಯಾಗಿರುವ ಬೆಲೆಯ (PTR) ಮೇಲೆ ಗರಿಷ್ಠ ಶೇ.16ರಷ್ಟು ಹೆಚ್ಚಳಕ್ಕೆ ಮಾತ್ರ ಸೀಮಿತಗೊಳಿಸುವ ಏಕರೂಪದ ನಿಯಮವನ್ನು ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರ ಪರಿಶೀಲಿಸಬೇಕು ಎಂದು ಪೀಠ ಸೂಚಿಸಿತು.
ಸರ್ಕಾರದ ಆಯುಷ್ಮಾನ್ ಭಾರತ್ ಸೇರಿದಂತೆ ಆರೋಗ್ಯ ಯೋಜನೆಗಳಡಿ ಚಿಕಿತ್ಸೆ ಪಡೆಯುವ ರೋಗಿಗಳ ಔಷಧಿ ವೆಚ್ಚವನ್ನು ಸರ್ಕಾರವೇ ಮರುಪಾವತಿಸುವ ಸಂದರ್ಭದಲ್ಲಿ, ಹೆಚ್ಚಿನ ಬೆಲೆಯ ಔಷಧಿಗಳ ಹೊರೆ ಅಂತಿಮವಾಗಿ ತೆರಿಗೆದಾರರ ಮೇಲೆಯೇ ಬೀಳುತ್ತದೆ ಎಂದು ನ್ಯಾಯಾಲಯ ಗಮನಿಸಿತು. ಇಂತಹ ವ್ಯವಸ್ಥೆಯಲ್ಲಿ ಅತಿಯಾದ ಬೆಲೆ ನಿಗದಿ ಮಾಡಿದರೆ ಸಾರ್ವಜನಿಕ ಹಣದ ಮೇಲೂ ಪರಿಣಾಮ ಬೀರುತ್ತದೆ ಎಂದು ಪೀಠ ಹೇಳಿತು.
ಪ್ರಸ್ತುತ ಡ್ರಗ್ಸ್ ಪ್ರೈಸ್ ಕಂಟ್ರೋಲ್ ಆರ್ಡರ್ (DPCO) ಅಡಿಯಲ್ಲಿ ಸುಮಾರು ಶೇ.82ರಷ್ಟು ಔಷಧಿಗಳು ಗರಿಷ್ಠ ಬೆಲೆ ನಿಯಂತ್ರಣದ ವ್ಯಾಪ್ತಿಯಿಂದ ಹೊರಗಿವೆ ಎಂದು ವಿಚಾರಣೆ ವೇಳೆ ನ್ಯಾಯಾಲಯ ಗಮನಿಸಿತು. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಸುಮಾರು 1,000 ನಿಗದಿತ ಔಷಧಿಗಳ ಬೆಲೆಯನ್ನು ನಿಯಂತ್ರಿಸುತ್ತದೆ. ಆದರೆ ನಿಗದಿತ ಪಟ್ಟಿಗೆ (Scheduled drugs) ಸೇರದ ಔಷಧಿಗಳಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಗರಿಷ್ಠ ಬೆಲೆ ನಿಗದಿಪಡಿಸುವ ಯಾವುದೇ ಕಾನೂನುಬದ್ಧ ಮಿತಿ ಇಲ್ಲ . ಈ ಬೆಲೆ ನಿಯಂತ್ರಣದ ಕೊರತೆಯನ್ನೇ ಬಳಸಿಕೊಂಡು ಔಷಧ ಕಂಪನಿಗಳು ಹೆಚ್ಚಿನ ಎಂಆರ್‌ಪಿ ನಿಗದಿಪಡಿಸಿ ಭಾರೀ ಲಾಭಾಂಶಕ್ಕೆ ಅವಕಾಶ ಮಾಡಿಕೊಳ್ಳುತ್ತಿವೆ ಎಂದು ಅರ್ಜಿದಾರ ಕಿಶನ್ ಚಂದ್ ಜೈನ್ ವಾದಿಸಿದರು.
ಇದನ್ನೂ ಓದಿ: ಬೊಫೋರ್ಸ್ ಹಗರಣ | 40 ವರ್ಷಗಳ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ರದ್ದು
ಇದೇ ವೇಳೆ, ಕೆಲವು ಕಾರ್ಪೊರೇಟ್ ಆಸ್ಪತ್ರೆಗಳು ರೋಗಿಗಳು ತಮ್ಮ ಆಸ್ಪತ್ರೆಯಲ್ಲಿರುವ ಇನ್‌ಹೌಸ್ ಫಾರ್ಮಸಿಗಳಿಂದಲೇ ಔಷಧ ಖರೀದಿಸಬೇಕು ಎಂದು ಒತ್ತಾಯಿಸುತ್ತಿರುವ ಕುರಿತು ಕೂಡ ನ್ಯಾಯಾಲಯ ಪ್ರಶ್ನಿಸಿತು. ರೋಗಿಗಳಿಗೆ ಹೊರಗಿನ ಔಷಧ ಅಂಗಡಿಗಳಿಂದ ಕಡಿಮೆ ದರದಲ್ಲಿ ಔಷಧ ಖರೀದಿಸುವ ಅವಕಾಶ ಇರಬೇಕೇ ಎಂಬುದನ್ನು ಕೇಂದ್ರ ಪರಿಶೀಲಿಸಬೇಕು ಎಂದು ಸೂಚಿಸಿತು.
ನ್ಯಾಯಾಲಯದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಸರ್ಕಾರ ಕೈಗೆಟುಕುವ ದರದಲ್ಲಿ ಔಷಧಿಗಳು ದೊರೆಯುವಂತೆ ಮಾಡಲು ಬದ್ಧವಾಗಿದೆ. ಜನೌಷಧಿ ಕೇಂದ್ರಗಳ ಮೂಲಕ ಕಡಿಮೆ ದರದಲ್ಲಿ ಔಷಧಿಗಳನ್ನು ಒದಗಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಲು ಸರ್ಕಾರ ಪರಿಶೀಲಿಸಲಿದೆ ಎಂದು ಹೇಳಿದರು.
“ಔಷಧಿ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು” ಎಂಬುದು ಸರ್ಕಾರದ ಉದ್ದೇಶವಾಗಿದೆ. ಈ ವಿಚಾರದಲ್ಲಿ ಸರ್ಕಾರ ಗಂಭೀರವಾಗಿದ್ದು, ಸಂಘರ್ಷಾತ್ಮಕವಲ್ಲದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದೂ ಹೇಳಿದರು.
ಔಷಧಿಗಳ ಬೆಲೆಯಲ್ಲಿ ಭಾರೀ ಅಂತರದಿಂದಾಗಿ ಅನೇಕ ಕುಟುಂಬಗಳು ಚಿಕಿತ್ಸೆ ವೆಚ್ಚ ಭರಿಸಲು ಆಸ್ತಿ, ಆಭರಣಗಳನ್ನು ಮಾರಾಟ ಮಾಡುವಂತಹ ಪರಿಸ್ಥಿತಿಗೆ ಸಿಲುಕುತ್ತಿವೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಇದೇ ವೇಳೆ, ಸಾರ್ವಜನಿಕ ಆರೋಗ್ಯ ಯೋಜನೆಗಳಡಿ ಸರ್ಕಾರದಿಂದ ಮರುಪಾವತಿ ಪಡೆಯುವ ಸಂದರ್ಭದಲ್ಲಿ ಹೆಚ್ಚಿನ ಔಷಧಿ ಬೆಲೆಗಳು ಸಾರ್ವಜನಿಕ ಹಣದ ಮೇಲೂ ಹೆಚ್ಚುವರಿ ಹೊರೆ ಉಂಟುಮಾಡುತ್ತವೆ ಎಂದು ವಾದಿಸಲಾಯಿತು. ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಲಾಗಿದೆ.




