ಬಹುಕಾಲದಿಂದ ಬಾಕಿ ಉಳಿದಿದ್ದ ಬೊಫೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಹಿಂದೂಜಾ ಸಹೋದರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದ್ದ ದೆಹಲಿ ಹೈಕೋರ್ಟ್‌ನ 2005ರ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ಡಿವಾಲಾ ಹಾಗೂ ವಿನೋದ್ ಕೆ. ಚಂದ್ರನ್ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ, ಅರ್ಜಿಯನ್ನು ಮುಂದುವರಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದ್ದು, ಅರ್ಜಿಯನ್ನು ವಜಾಗೊಳಿಸಿದೆ.
1986ರಲ್ಲಿ ಭಾರತ ಸರ್ಕಾರ ಸ್ವೀಡನ್‌ನ ಶಸ್ತ್ರಾಸ್ತ್ರ ತಯಾರಕ ಕಂಪನಿ ಬೊಫೋರ್ಸ್‌ನಿಂದ 1,437 ಕೋಟಿ ರೂ. ಮೌಲ್ಯದ ಫೀಲ್ಡ್ ಹೌವಿಟ್ಜರ್ ಫಿರಂಗಿಗಳನ್ನು ಖರೀದಿಸಿತ್ತು. ಈ ಒಪ್ಪಂದದಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಅಕ್ರಮವಾಗಿ ಬೃಹತ್ ಮೊತ್ತದ ಕಮಿಷನ್ ಪಾವತಿಸಲಾಗಿದೆ ಎಂಬ ಆರೋಪ ದೇಶದ ರಾಜಕೀಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಇದೇ ಆರೋಪದ ಕಾರಣದಿಂದಾಗಿ, 1989ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ಅವರ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು.
ಬೊಫೋರ್ಸ್ ಹಗರಣವನ್ನು ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು. ಸಿಬಿಐ ತನಿಖೆ ಪ್ರಕಾರ, ಬೊಫೋರ್ಸ್ ಕಂಪನಿಯಿಂದ ಸುಮಾರು 64 ಕೋಟಿ ರೂ. ಕಿಕ್‌ಬ್ಯಾಕ್ ಪಾವತಿಸಲಾಗಿದ್ದು, ಅದರ ಒಂದು ಭಾಗ ಹಿಂದೂಜಾ ಸಹೋದರರಿಗೆ ತಲುಪಿದೆ ಎಂದು ಆರೋಪಿಸಲಾಗಿತ್ತು. ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿದ್ದ ‘ಲೋಟಸ್’ ಮತ್ತು ‘ಟುಲಿಪ್’ ಎಂಬ ಕೋಡ್ ಹೆಸರುಗಳು ಹಿಂದೂಜಾ ಕುಟುಂಬದೊಂದಿಗೆ ಸಂಬಂಧ ಹೊಂದಿದ್ದವು ಎಂಬ ಆರೋಪವೂ ತನಿಖೆಯ ಭಾಗವಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, 2005ರಲ್ಲಿ ಹಿಂದೂಜಾ ಸಹೋದರರ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ರದ್ದುಪಡಿಸಿತ್ತು. ಆರೋಪಗಳನ್ನು ಸಮರ್ಥಿಸುವಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ಅವರ ವಿರುದ್ಧದ ಪ್ರಕ್ರಿಯೆಯನ್ನು ಕೈಬಿಟ್ಟಿತ್ತು.
ಈ ತೀರ್ಪನ್ನು ಪ್ರಶ್ನಿಸಿ ವಕೀಲ ಅಜಯ್ ಕೆ. ಅಗರ್ವಾಲ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೇ ವೇಳೆ ಸಿಬಿಐ ಕೂಡ ಪ್ರತ್ಯೇಕವಾಗಿ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಈ ಹಿಂದೆಯೇ ಸಿಬಿಐನ ಮೇಲ್ಮನವಿ ರದ್ದಾಗಿತ್ತು. ಆದಾಗ್ಯೂ, ಅಜಯ್ ಅಗರ್ವಾಲ್ ಸಲ್ಲಿಸಿದ್ದ ಅರ್ಜಿ ಬಾಕಿ ಉಳಿದಿತ್ತು.
ಇದೀಗ ಅಜಯ್ ಅಗರ್ವಾಲ್ ಅವರ ಅರ್ಜಿಯ ವಿಚಾರಣೆಯೂ ಪೂರ್ಣಗೊಂಡಿದೆ. ವಿಚಾರಣೆ ವೇಳೆ ಅರ್ಜಿದಾರರು, ಪ್ರಕರಣದಲ್ಲಿದ್ದ ಕೆಲ ಪ್ರತಿವಾದಿಗಳು ಮೃತಪಟ್ಟಿರುವುದರಿಂದ ಅವರ ಹೆಸರನ್ನು ಕೈಬಿಡಲು ನಾಲ್ಕು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು.
ಆದರೆ, ನ್ಯಾಯಮೂರ್ತಿ ಪಾರ್ಡಿವಾಲಾ ಅವರು, “ಇದು ಹಿಂದೂಜಾ ಸಹೋದರರು ಮತ್ತು ಸಿಬಿಐಗೆ ಸಂಬಂಧಿಸಿದ ಹಳೆಯ ಪ್ರಕರಣ. ದೆಹಲಿ ಹೈಕೋರ್ಟ್ ಈಗಾಗಲೇ ಎಲ್ಲ ಪ್ರಕ್ರಿಯೆಗಳನ್ನೂ ರದ್ದುಪಡಿಸಿದೆ. ಇನ್ನೂ ಎಷ್ಟು ವರ್ಷ ಈ ಪ್ರಕರಣ ಮುಂದುವರಿಯಬೇಕು” ಎಂದು ಪ್ರಶ್ನಿಸಿದರು.
“1986ರಲ್ಲಿ ನಡೆದ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಮತ್ತೆ ಮುಂದೂಡಲು ಅವಕಾಶ ನೀಡುವುದಿಲ್ಲ. ಇದು 2018ರಿಂದ ಬಾಕಿಯಿರುವ ಪ್ರಕರಣ. ಮತ್ತಷ್ಟು ಮುಂದೂಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿದೆ.



