ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) 2026 ಶನಿವಾರ ನಡೆದಿದೆ. ಈ ಪರೀಕ್ಷೆ ವೇಳೆಯೂ NTA ಅಧ್ವಾನ ಮುಂದುವರೆದಿದೆ. ತಾಂತ್ರಿಕ ದೋಷದಿಂದಾಗಿ ದೇಶಾದ್ಯಂತ 3,765 ವಿದ್ಯಾರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಹಾಗೆಯೇ ಈ ದೋಷದಿಂದಾಗಿ ಪರೀಕ್ಷೆ ಆರಂಭವಾಗುವುದು ಎರಡು ಗಂಟೆಗಳಿಗೂ ಹೆಚ್ಚು ವಿಳಂಬವಾಗಿತ್ತು. ಕೆಲವು ಕೇಂದ್ರಗಳಲ್ಲಿ ಪರೀಕ್ಷೆಯನ್ನೇ ರದ್ದುಗೊಳಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಈ ಅಧ್ವಾನವು ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಹೆಚ್ಚಿಸಿದೆ.
ವಿಳಂಬವಾಗಿದ್ದರೂ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಯಿತು ಎಂದು ಹೇಳುವ ಮೂಲಕ ಎನ್ಟಿಎ ಈ ಹಿಂದೆ ಸತ್ಯವನ್ನು ಮುಚ್ಚಿಡಲು ಯತ್ನಿಸಿತ್ತು. ಆದರೆ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ ಸದ್ಯ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಬೇರೆ ದಿನಾಂಕದಂದು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುವುದಾಗಿ ಎನ್ಟಿಎ ತಿಳಿಸಿದೆ. ಈ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿದೆ.
ಇದನ್ನು ಓದಿದ್ದೀರಾ? NTA ಎಂಬ ವ್ಯವಸ್ಥಿತ ವೈಫಲ್ಯ; ಮೋದಿ ಸರ್ಕಾರದ ಮಹಾ ಅಧ್ವಾನ
ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 64ರಲ್ಲಿರುವ ಆದರ್ಶ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಅನೇಕ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ದಿನವಿಡೀ ಕಾದು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೆ ಪರೀಕ್ಷಾ ಕೇಂದ್ರದಿಂದ ತೆರಳಿದ್ದಾರೆ.
“3,765 ಅಭ್ಯರ್ಥಿಗಳು ಹಾಜರಿದ್ದು ಬಯೋಮೆಟ್ರಿಕ್ ನೋಂದಣಿಯನ್ನು ಪೂರ್ಣಗೊಳಿಸಿದ್ದರು. ಆದರೆ ಪರೀಕ್ಷೆ ವಿಳಂಬವಾಗಿದ್ದು ನೋಡಿ ಪರೀಕ್ಷಾ ಕೇಂದ್ರದಿಂದ ತೆರಳಿದ್ದಾರೆ” ಎಂದು ಎನ್ಟಿಎ ಹೇಳಿದೆ. ಆದರೆ ಎನ್ಟಿಎ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ಪರೀಕ್ಷೆಯನ್ನೂ ಸರಿಯಾಗಿ ನಡೆಸದ ಎನ್ಟಿಎ ಮೇಲಿನ ನಂಬಿಕೆಯೇ ಇಲ್ಲದಂತಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
“ಆದರ್ಶ ಪರೀಕ್ಷಾ ಕೇಂದ್ರ ನೋಯ್ಡಾ ಸೆಕ್ಟರ್ 64ರ ವಿದ್ಯಾರ್ಥಿಗಳನ್ನು ಹೊರಹೋಗಿ ಎಂದು ಹೇಳಲಾಗಿದೆ. ಆದರೆ ಎರಡನೇ ಪಾಳಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಹೋಗಿ ಎಂದಷ್ಟೇ ಹೇಳಿದ್ದಾರೆ. ಕೇಂದ್ರದಿಂದ 30 ಕಿ.ಮೀ ದೂರದಲ್ಲಿ ವಾಸಿಸುವ ಮತ್ತು ಈಗಾಗಲೇ ಮನೆಗೆ ತಲುಪಿರುವವರು ಮತ್ತೆ ಪರೀಕ್ಷಾ ಕೇಂದ್ರಕ್ಕೆ ಬರಲು ಸಾಧ್ಯವೇ” ಎಂದು ಎಕ್ಸ್ ಬಳಕೆದಾರ ತಾರಕ್ ಶರ್ಮಾ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? CUET-UG ಪರೀಕ್ಷೆ ಮುಂದೂಡಿಕೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ
“ನನ್ನ ಸಹೋದರನ ಪರೀಕ್ಷಾ ಕೇಂದ್ರ ನೋಯ್ಡಾದಲ್ಲಿತ್ತು. ಅವರನ್ನು 2 ರಿಂದ 2.30 ಗಂಟೆಗಳ ಕಾಲ ಕಾಯಿಸಲಾಗಿದೆ. ಬಳಿಕ ವಾಪಸ್ ಹೋಗುವಂತೆ ಹೇಳಿದ್ದಾರೆ. ಪರೀಕ್ಷೆಯನ್ನು ಬೇರೆ ಯಾವುದಾದರೂ ದಿನದಲ್ಲಿ ನಡೆಸಲಾಗುವುದು ಎಂದು ಹೇಳಿದ್ದಾರೆ” ಎಂದು ಮತ್ತೊಬ್ಬ ಬಳಕೆದಾರ ರಾಹುಲ್ ಧನ್ವಾರಿಯಾ ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್ಟಿಎ (NTA) ಆರಂಭವಾದಾಗಿನಿಂದ ಇಂದಿನವರೆಗೂ ಒಂದಲ್ಲ ಒಂದು ಎಡವಟ್ಟು ನಡೆಸುತ್ತಲೇ ಇದೆ. ಪೇಪರ್ ಸೋರಿಕೆ, ಪರೀಕ್ಷೆ ರದ್ದು, ಗ್ರೇಸ್ ಮಾರ್ಕ್ಸ್ ವಿವಾದ, ಅಂಕಗಳ ಹಗರಣ, ಕೊನೆ ಕ್ಷಣದಲ್ಲಿ ಪರೀಕ್ಷೆ ಮುಂದೂಡಿಕೆ- ಹೀಗೆ ಹಲವು ಗೊಂದಲಗಳ ನೆಲೆ ಎನ್ಟಿಎ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶುರು ಮಾಡಿದ ಈ NTA ಎಂಬ ಮಹಾ ಅಧ್ವಾನ ಈಗ ಮತ್ತೆ ಮತ್ತೆ ವಿದ್ಯಾರ್ಥಿಗಳ ತಲೆ ಮೇಲೆ ಚಪ್ಪಡಿ ಎಳೆಯುತ್ತಿದೆ. ಇತ್ತೀಚೆಗೆ ನೀಟ್ ಪರೀಕ್ಷೆಯಲ್ಲೂ ಅಧ್ವಾನ ನಡೆದಿದೆ. ಪೇಪರ್ ಸೋರಿಕೆಯಿಂದಾಗಿ ಪರೀಕ್ಷೆಯನ್ನೇ ರದ್ದುಗೊಳಿಸಲಾಗಿದೆ. ಈಗ CUET ಪರೀಕ್ಷೆಯನ್ನೂ ಸರಿಯಾಗಿ ನಡೆಸದ NTA ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನೀಟ್, ಸಿಬಿಎಸ್ಇ, ಎಸ್ಎಸ್ಸಿ ಮತ್ತು ಸಿಯುಇಟಿ – ಹೀಗೆ ಎಲ್ಲ ಪರೀಕ್ಷೆಗಳಲ್ಲೂ ಎನ್ಟಿಎ ಅಧ್ವಾನವೇ ಮೇಳೈಸುತ್ತಿದೆ.




