ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಭಾವ ಭಿತ್ತಿಗಿಳಿಸುವ ‘ಡೆರ್ಸು ಉಜಾಲಾ’ ಅಪರೂಪದ ಚಿತ್ರ. ಸಿನೆಮಾವನ್ನು ಕೇವಲ ಮನರಂಜನೆಯಾಗಿ ನೋಡುವವರಿಗಿಂತ, ಅದನ್ನು ಒಂದು ಕಲಾತ್ಮಕ ಅನುಭವವಾಗಿ ಅನುಭವಿಸಲು ಬಯಸುವವರಿಗಾಗಿ ಈ ಚಿತ್ರ.
ಜಪಾನ್ ನಿರ್ದೇಶಕ ಅಕಿರಾ ಕುರೊಸಾವಾ, ಸೋವಿಯತ್ ನಿರ್ಮಾಣ ಸಂಸ್ಥೆ ಮತ್ತು ನನೈ ಬುಡಕಟ್ಟು ಆದಿವಾಸಿಯ ಕಥೆ- ಈ ಮಿಶ್ರಣವೇ ‘ಡೆರ್ಸು ಉಜಾಲಾ’(Dersu Uzala). ಈ ಮೂವರ ಸಮ್ಮಿಲನವೇ ಈ ಚಿತ್ರಕ್ಕೆ ವಿಶಿಷ್ಟತೆಯನ್ನು, ಅಂತಾರಾಷ್ಟ್ರೀಯ ಸ್ವರೂಪವನ್ನು ತಂದುಕೊಟ್ಟಿದೆ. ಇದು ಜಾಗತಿಕ ಸಿನೆಮಾದಲ್ಲಿ ಸಂಸ್ಕೃತಿಗಳ ಸಮಾಗಮದ ಅಪರೂಪದ ಉದಾಹರಣೆಯಾಗಿ ದಾಖಲಾಗಿದೆ.
70ರ ದಶಕದ ಆರಂಭದಲ್ಲಿ, ಜಪಾನ್ ನ ಖ್ಯಾತ ಚಿತ್ರನಿರ್ದೇಶಕ ಅಕಿರಾ ಕುರೊಸಾವಾರ ವೈಯಕ್ತಿಕ ಮತ್ತು ವೃತ್ತಿಬದುಕಿನಲ್ಲಿ ಏರುಪೇರು ಉಂಟಾಗಿತ್ತು. ಅಪಾರ ಸಮಯ ಮತ್ತು ಶ್ರಮ ಸುರಿದಿದ್ದ ‘ಟೋರಾ! ಟೋರಾ! ಟೋರಾ!ʼ ಎಂಬ ಪರ್ಲ್ ಹಾರ್ಬರ್ ಮಹಾಕಾವ್ಯ ಚಿತ್ರದಿಂದ ಹಾಲಿವುಡ್ ಅವರನ್ನು ಕೈಬಿಟ್ಟಿತ್ತು. ಅವರ ಮೊದಲ ಬಣ್ಣದ ಚಿತ್ರ ‘ಡೊಡೆಸ್’ಕಾ-ಡೆನ್ʼ ವಿಮರ್ಶಕರ ಕಟುಟೀಕೆಗೆ ಗುರಿಯಾಗಿತ್ತು ಹಾಗೂ ವಾಣಿಜ್ಯಾತ್ಮಕವಾಗಿ ವಿಫಲವಾಗಿತ್ತು. ಜಪಾನಿನ ಚಲನಚಿತ್ರೋದ್ಯಮವೇ ಸಂಕಷ್ಟಕ್ಕೆ ಸಿಲುಕಿ, ಅವರ ಸಿನಿಮಾಗಳಿಗೆ ಹಣಕಾಸು ಒದಗಿಸುವುದು ಅಸಾಧ್ಯವಾಗಿತ್ತು. ಮನಸ್ಸು ಘಾಸಿಗೊಳಗಾಗಿತ್ತು. ಪರಿಣಾಮವಾಗಿ ಅವರು ಆತ್ಮಹತ್ಯೆಗೂ ಯತ್ನಿಸಿ ವಿಫಲರಾಗಿದ್ದರು. ಹಾಗಾಗಿ ತಮ್ಮ ಸಾರ್ವಜನಿಕ ವ್ಯಕ್ತಿತ್ವವನ್ನು ಮರು ರೂಪಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು.
ಕುತೂಹಲಕರ ಸಂಗತಿ ಎಂದರೆ, ಅಕಿರಾ ಕುರೊಸಾವಾ 1950ರಲ್ಲಿಯೇ ‘ರೊಶೊಮನ್’ ಎಂಬ ಚಿತ್ರ ಮಾಡಿ ಜಗದ್ವಿಖ್ಯಾತರಾಗಿದ್ದರು. ಆನಂತರ ಇಕಿರು, ಸೆವೆನ್ ಸಮುರಾಯ್, ಸೆಂಜಿರೊ, ಥ್ರೋನ್ ಆಫ್ ಬ್ಲಡ್, ಯೊಜಿಂಬೊ, ಹೈ ಅಂಡ್ ಲೋ, ರೆಡ್ ಬಿಯರ್ಡ್ ಗಳಂತಹ ಒಂದಕ್ಕಿಂತ ಒಂದು ಭಿನ್ನವಾದ ಚಿತ್ರಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದರು. ಜಾರ್ಜ್ ಲ್ಯೂಕಾಸ್, ಫ್ರಾನ್ಸಿಸ್ ಫೋರ್ಡ್ ಕೊಪೊಲಾ, ಸ್ಟೀವನ್ ಸ್ಪೀಲ್ಬರ್ಗ್ ಮುಂತಾದ ವಿಶ್ವವಿಖ್ಯಾತ ನಿರ್ದೇಶಕರಿಗೆ ಇವರು ಸ್ಫೂರ್ತಿಯಾಗಿದ್ದರು.
1950ರಿಂದ 65ರತನಕ ಜಗತ್ತಿನ ಸಿನಿಪ್ರಿಯರ ನಾಲಗೆಯ ಮೇಲೆ ನಲಿದಾಡುತ್ತಿದ್ದ ಕುರೊಸಾವಾ, ಆನಂತರ ಇದ್ದಕ್ಕಿದ್ದಂತೆ ಚಿತ್ರಗಳಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ಕಷ್ಟಕ್ಕೆ ಸಿಲುಕಿದರು. ಇಂತಹ ವನವಾಸದಲ್ಲಿಯೇ 5 ವರ್ಷ ಸವೆಸಿ 1970ರಲ್ಲಿ ಒಂದು ಚಿತ್ರ ಮಾಡಿದರು. ಅದು ಕೂಡ ಫ್ಲಾಪ್, ಅದೃಷ್ಟ ಕೂಡ ಕೈಕೊಟ್ಟಿತು.

ಅದೇ ಸಂದರ್ಭದಲ್ಲಿ, 1972ರಲ್ಲಿ ಸೋವಿಯತ್ ಯೂನಿಯನ್ನಿಂದ ಸಿನೆಮಾ ನಿರ್ಮಿಸಲು ಆಹ್ವಾನ, ಹುಡುಕಿಕೊಂಡು ಬಂದಿತ್ತು. ಜೊತೆಗೆ ನಿರ್ಮಾಣ ಸಂಸ್ಥೆ ಕೆಲ ಷರತ್ತು ಮತ್ತು ಬೇಡಿಕೆಗಳನ್ನು ಇಟ್ಟಿತ್ತು. ಸ್ವಾಭಿಮಾನಕ್ಕೆ ಧಕ್ಕೆಯಾದರೂ, ಬಜೆಟ್ಗೆ ತಕ್ಕಂತೆ ಜಪಾನಿನ ತಾಂತ್ರಿಕ ಸಿಬ್ಬಂದಿ ಸಂಖ್ಯೆ ಮಿತಿಗೊಳಿಸಬೇಕಾಯಿತು. ಅದನ್ನೆಲ್ಲ ಒಪ್ಪಿ ಮಾಡಿದ ಚಿತ್ರವೇ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು.
ಇದನ್ನು ಓದಿದ್ದೀರಾ?: ಅಮೂರ್ತ ಮತ್ತು ಅಸಂಗತ ಸಿನೆಮಾಗಳು
ಅದೇ ‘ಡೆರ್ಸು ಉಜಾಲಾʼ. ಅದಕ್ಕೆ ಕಾರಣವೂ ಇತ್ತು. ಕುರೊಸಾವಾ, ತಮ್ಮ ಯೌವನದ ದಿನಗಳಲ್ಲಿ ನನೈ ಬುಡಕಟ್ಟು ಸಮುದಾಯದ ಆದಿವಾಸಿ ಬೇಟೆಗಾರನ ಕತೆಯನ್ನು ಬಹುವಾಗಿ ಮೆಚ್ಚಿ, ಚಿತ್ರ ಮಾಡಬೇಕೆಂದು ಬಯಸಿದ್ದರು. 1923ರಲ್ಲಿ ಪ್ರಕಟವಾದ ಆ ಕೃತಿಯು ರಷ್ಯನ್ ಸೇನೆಯ ಎಂಜಿನಿಯರ್ ಕ್ಯಾಪ್ಟನ್ ವ್ಲಾಡಿಮಿರ್ ಅರ್ಸೆನ್ಯೆವ್ ಅವರ ಆತ್ಮಕಥನವಾಗಿತ್ತು. ಬೇಟೆಗಾರ ಡೆರ್ಸು ಉಜಾಲಾನೊಂದಿಗೆ ಬೆಳೆದ ಸ್ನೇಹವನ್ನು ಅದು ದಾಖಲಿಸಿತ್ತು. 20ನೇ ಶತಮಾನದ ಆರಂಭದಲ್ಲಿ ಪೂರ್ವ ಸೈಬೀರಿಯಾದ ದೂರದ ಪ್ರದೇಶಗಳಲ್ಲಿ ನಡೆದ ಸಮೀಕ್ಷಾ ಯಾತ್ರೆಯಲ್ಲಿ ಮಾರ್ಗದರ್ಶಕರಾಗಿದ್ದ ಡೆರ್ಸು, ಎರಡು ಬಾರಿ ಅರ್ಸೆನ್ಯೆವ್ ಅವರ ಜೀವವನ್ನು ಉಳಿಸಿದ ನಿಜಘಟನೆಗಳನ್ನು ಅದು ಆಧರಿಸಿತ್ತು.
ಇದನ್ನೇ ಸೋವಿಯತ್ ಯೂನಿಯನ್ ನಿರ್ಮಾಣ ಸಂಸ್ಥೆ ಚಿತ್ರ ಮಾಡಲು ಕೇಳಿಕೊಂಡಾಗ, ಕುರೊಸಾವಾ ಖುಷಿಯಿಂದಲೇ ಒಪ್ಪಿಕೊಂಡಿದ್ದರು. ‘ಡೆರ್ಸು ಉಜಾಲಾ’ ಚಿತ್ರದ ಚಿತ್ರೀಕರಣ, ರಷ್ಯಾದ ಪೂರ್ವ ಭಾಗದ ಕಾಡಿನಲ್ಲಿ ಒಂಭತ್ತು ತಿಂಗಳ ಕಾಲ ನಡೆಯಿತು. ಮಂಜು, ಚಳಿ, ಗಾಳಿ, ಮಳೆಯಿಂದಾಗಿ ಯೋಜಿಸಿದ್ದ ಅನೇಕ ದೃಶ್ಯಗಳನ್ನು ಚಿತ್ರೀಕರಿಸುವುದು ಸವಾಲಿನ ಕೆಲಸವಾಗಿತ್ತು. ಈ ಮಧ್ಯೆ ತಂತ್ರಜ್ಞರು ಅನಾರೋಗ್ಯಕ್ಕೆ ತುತ್ತಾದರು. ಅಂತೂ 1975ರ ಜನವರಿಯಲ್ಲಿ ಚಿತ್ರೀಕರಣ ಮುಕ್ತಾಯಗೊಂಡಿತು. ಚಿತ್ರದ ಪ್ರಥಮ ಪ್ರದರ್ಶನವು 9ನೇ ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆಯಿತು. ನಂತರ ಅದೇ ವರ್ಷದಲ್ಲಿ ಸೋವಿಯತ್ ಯೂನಿಯನ್ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. 1976ರ ಫೆಬ್ರವರಿಯಲ್ಲಿ ಅಮೆರಿಕಾದಲ್ಲಿ ಪ್ರದರ್ಶನಗೊಂಡ ಈ ಚಿತ್ರ, ನಂತರ ಆಸ್ಕರ್ ಅವಾರ್ಡ್ ನಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಿತ್ರದ ಪ್ರಶಸ್ತಿಯನ್ನು ಗಳಿಸಿತು.
ಕುರೊಸಾವಾ ಅವರ ಹಿಂದಿನ ಚಿತ್ರಗಳನ್ನು ಮೆಚ್ಚಿದ್ದ ಹಲವಾರು ಗಂಭೀರ ಸಿನಿ ವಿಮರ್ಶಕರು ‘ಡೆರ್ಸು ಉಜಾಲಾ’ ಚಿತ್ರವನ್ನು ಅಷ್ಟಾಗಿ ಒಪ್ಪಲಿಲ್ಲ. ಆನಂತರ ಬಂದ ಅಕಾಡೆಮಿಕ್ ವಿಶ್ಲೇಷಣೆಗಳು, ಚಿತ್ರವು ಅದ್ಭುತ ದೃಶ್ಯ ವೈಭವ ಮತ್ತು ಆಧ್ಯಾತ್ಮಿಕ ಸೌಂದರ್ಯದಿಂದ ಕೂಡಿದೆ ಎಂದವು. ಕಾಡು-ನಾಡು, ಡೆರ್ಸು ಎಂಬ ಮಾನವೀಯ ಪಾತ್ರ ರಚನೆ ಮುನ್ನಲೆಗೆ ಬರತೊಡಗಿತು. ಚಿತ್ರ ನಿಧಾನವಾಗಿ ಪ್ರಚಾರ ಪಡೆಯಿತು.
ಕಳೆದವಾರ ನಮ್ಮ ನಡುವಿನ ಸಿನೆಮಾ ಚರಿತ್ರಕಾರ ಡಾ. ಕೆ. ಪುಟ್ಟಸ್ವಾಮಿಯವರೊಂದಿಗೆ ಮಾತನಾಡುತ್ತಿದ್ದಾಗ, ಅಕಿರಾ ಕುರೊಸಾವಾರ ‘ಡೆರ್ಸು ಉಜಾಲಾ’ ಉಲ್ಲೇಖಿಸಿದರು. ಡೆರ್ಸು ಪಾತ್ರವನ್ನು ಕನ್ನಡದ ಕಾದಂಬರಿಯ ಒಂದು ಪಾತ್ರಕ್ಕೆ ಹೋಲಿಸಿ, ಅಲ್ಲೂ-ಇಲ್ಲೂ ಇರುವ ‘ಅನ್ಯʼ ಮನಸ್ಕತೆ ಕುರಿತು ವಿವರಿಸಿದರು. ಆ ತಕ್ಷಣ ನೋಡಬೇಕೆನಿಸಿತು.
‘ಡೆರ್ಸು ಉಜಾಲಾ’ ನನೈ ಬುಡಕಟ್ಟು ಸಮುದಾಯದ ಆದಿವಾಸಿ ಬೇಟೆಗಾರನೊಬ್ಬನ ಕತೆ. ಕಾಡಿನಲ್ಲಿ ಬದುಕುವ, ಕಾಡಿನ ಭಾಷೆ ಬಲ್ಲ ಮುಗ್ಧಮಾನವ ಡೆರ್ಸುಗೆ ಮರ-ಗಿಡಗಳು, ನದಿ-ತೊರೆಗಳು, ಪ್ರಾಣಿ-ಪಕ್ಷಿಗಳು ಸಹಜೀವಿಗಳು. ಅವನು ಪ್ರಕೃತಿಯನ್ನು ‘ಸಂಪತ್ತಾಗಿ’ ಅಲ್ಲ, ‘ಸಹಜೀವಿಯಾಗಿ’ ನೋಡುತ್ತಾನೆ. ಆತನೊಂದಿಗೆ ಸ್ನೇಹ ಬೆಳೆಸುವ ಕ್ಯಾಪ್ಟನ್ಗೆ ಕಾಡಿನೊಂದಿಗೆ ಬದುಕುವುದನ್ನು ಕಲಿಸುತ್ತಾನೆ. ಈ ಚಿತ್ರದ ವಿಶೇಷತೆ ಕೇವಲ ಕಥೆ ಮಾತ್ರವಲ್ಲ, ಅದರ ದೃಷ್ಟಿಕೋನ, ನಿರೂಪಣೆ, ತತ್ವಚಿಂತನೆ ಮತ್ತು ಪ್ರಕೃತಿಯೊಂದಿಗೆ ಕಟ್ಟಿದ ಸಂಬಂಧದಲ್ಲಿದೆ. ನಾಗರಿಕ ಸಮಾಜ ಮತ್ತು ಕಾಡಿನ ಸಹಜ ಜೀವನದ ನಡುವಿನ ಸಂಘರ್ಷವನ್ನು ಚಿತ್ರ ಸೂಕ್ಷ್ಮವಾಗಿ ಹಿಡಿದಿಡುತ್ತದೆ.

ಕ್ಯಾಪ್ಟನ್ ಅರ್ಸೆನ್ಯೆವ್ ಮತ್ತು ಡೆರ್ಸು ನಡುವಿನ ಸ್ನೇಹವೇ ಚಿತ್ರದ ಆತ್ಮ. ನಾಗರಿಕತೆಯ ಪ್ರತಿನಿಧಿಯಾದ ಸೇನಾ ಅಧಿಕಾರಿ ಮತ್ತು ಕಾಡಿನ ಸಂತನಾದ ಡೆರ್ಸು ನಡುವಿನ ಆತ್ಮೀಯತೆ, ಮಾನವ ಶುದ್ಧ ಸಂಬಂಧವನ್ನು ತೆರೆದಿಡುತ್ತದೆ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ವಿಧಾನ ಮನಸ್ಸಿಗಿಳಿಯುತ್ತದೆ. ವಿಶೇಷವಾಗಿ ಬಿರುಗಾಳಿಯ ನಡುವೆ ಜೀವ ಉಳಿಸಿಕೊಳ್ಳಲು ಹೋರಾಡುವ ಹಾಗೂ ರಭಸದಿಂದ ಹರಿಯುವ ನೀರಿನ ಸೆಳೆತಕ್ಕೆ ಸಿಕ್ಕ ಕ್ಯಾಪ್ಟನ್ನ ಜೀವ ಉಳಿಸುವ ದೃಶ್ಯಗಳು, ನಿಧಾನವಾಗಿ ಶುರುವಾಗಿ ಎದೆಬಡಿತವನ್ನು ಹೆಚ್ಚಿಸುವ ಮಟ್ಟಕ್ಕೆ ಕೊಂಡೊಯ್ಯುತ್ತವೆ. ನೋಡುಗರನ್ನು ಪಾತ್ರಧಾರಿಗಳನ್ನಾಗಿ ಮಾಡಿ, ಆ ಬಿಕ್ಕಟ್ಟಿನಲ್ಲಿ ಭಾಗಿಯಾದಂತೆ ಭಾಸವಾಗುತ್ತದೆ. ಅವರು ಆ ಬಿಕ್ಕಟ್ಟಿನಿಂದ ಹೊರಬಂದಾಗ ನೋಡುಗರು ನಿರಾಳ ನಿಟ್ಟುಸಿರು ಬಿಡುತ್ತಾರೆ.
ಇದನ್ನು ಓದಿದ್ದೀರಾ?: ಜಾಹ್ನವಿಯವರ ‘ಸೆಕ್ಸಿ ದುರಗ’, ವಾಣಿಯವರ ಅದ್ಭುತ ಅಭಿನಯ- ನಾಡಿನಾದ್ಯಂತ ನಡೆದಾಡಲಿ
ಈ ಚಿತ್ರದಲ್ಲಿ ಕೆಲವು ಸನ್ನಿವೇಶಗಳು ನಮ್ಮ ಚಿತ್ತ ಕೆಣಕುತ್ತವೆ. ಕಾಡಿನಲ್ಲಿ ನಡೆಯಲು ಬಂದ ಸೇನಾಯೋಧರ ಗುಂಪು ದೂರದ ಮರಕ್ಕೆ ಒಂದು ಬಾಟಲ್ ಕಟ್ಟಿ, ಗುರಿಯಿಟ್ಟು ಶೂಟ್ ಮಾಡುವ ಸ್ಪರ್ಧೆಯಲ್ಲಿ ನಿರತವಾಗಿರುತ್ತದೆ. ಅಲ್ಲಿಗೆ ಬಂದ ಡೆರ್ಸು, ಬಾಟಲ್ಗೇ ಏಕೆ ಗುರಿ ಇಡಬೇಕು, ದಾರಕ್ಕೆ ಹೊಡೆಯಬಹುದಲ್ಲ, ಗುರಿ ಇನ್ನಷ್ಟು ನಿಖರವಾಗುತ್ತದಲ್ಲ, ಬಾಟಲ್ ಉಳಿಯುತ್ತದಲ್ಲ ಎನ್ನುತ್ತಾನೆ. ಆ ಯೋಧರು ತಲೆ ಕೆರೆದುಕೊಂಡು ಯೋಚಿಸುತ್ತಿದ್ದಾಗ, ದಾರಕ್ಕೆ ಹೊಡೆದು ಬಾಟಲ್ ಎತ್ತಿಕೊಂಡು ಹೋಗುತ್ತಾನೆ.
ಕಾಡಿನ ಪ್ರಯಾಣವನ್ನು ಮುನ್ನಡೆಸುತ್ತಿರುವ ಡೆರ್ಸು ಇದ್ದಕ್ಕಿದ್ದಂತೆ ನಿಲ್ಲುತ್ತಾನೆ. ‘ಕ್ಯಾಪತಾನ್, ಹುಲಿ…’ ಎನ್ನುತ್ತಾನೆ. ಎಲ್ಲೂ ಕಾಣುವುದಿಲ್ಲ. ಯೋಧರೆಲ್ಲ ತಮ್ಮ ರೈಫಲ್ಗಳನ್ನು ಸಿದ್ಧಮಾಡಿಕೊಳ್ಳುತ್ತಾರೆ. ತಕ್ಷಣ ಡೆರ್ಸು, ‘ನಿನ್ನ ಗ್ರಹಚಾರ ಸರಿಯಿಲ್ಲ, ಸುಮ್ನೆ ಹೋಗ್ಬುಡು’ ಎಂದು ಹುಲಿಯೊಂದಿಗೆ ಮಾತನಾಡುತ್ತಾನೆ. ಆಗಲೂ ಕ್ಯಾಪ್ಟನ್ಗೆ ಹುಲಿ ಕಾಣುವುದಿಲ್ಲ. ಹುಲ್ಲಿನ ಪೊದೆಗಳ ನಡುವೆ, ಅತ್ತಿಂದಿತ್ತ ತಿರುಗಿದ ಹುಲಿ ಡೆರ್ಸು ಮುಂದೆ ಬಂದು ಘುರ್ ಎಂದು, ಕಾಡಿನಲ್ಲಿ ಮರೆಯಾಗುತ್ತದೆ.
ಡೆರ್ಸುವನ್ನು ಕ್ಯಾಪ್ಟನ್ ಬಲವಂತವಾಗಿ ಊರಿಗೆ ಕರೆದುಕೊಂಡು ಹೋಗುತ್ತಾನೆ. ಸಕಲ ಸುಸಜ್ಜಿತ ಮನೆ, ಅವನಿಗೇ ಆದ ಪ್ರತ್ಯೇಕ ಕೋಣೆ, ರುಚಿಯಾದ ಊಟ-ತಿಂಡಿ ಎಲ್ಲ ಸೌಲಭ್ಯ ಕೂತಲ್ಲಿಗೇ. ಕ್ಯಾಪ್ಟನ್ನ ಮಡದಿ ಮತ್ತು ಮಗ ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ. ಒಂದು ದಿನ ಕ್ಯಾಪ್ಟನ್ ಪತ್ನಿ ದುಡ್ಡು ಕೊಟ್ಟು ನೀರು ಖರೀದಿಸುವುದನ್ನು ಕಂಡ ಡೆರ್ಸು, ‘ನೀರನ್ನು ಕೊಂಡುಕೋತೀರಾ’ ಎನ್ನುತ್ತಾನೆ. ಎಲ್ಲರಿಗೂ ಗಾಬರಿ. ಮನೆಯಲ್ಲಿದ್ದು ಬೋರಾದಾಗ ಡೆರ್ಸು, ಕ್ಯಾಪ್ಟನ್ ಮಡದಿಗೆ, ‘ನಾನು ಸ್ವಲ್ಪ ಬೇಟೆಯಾಡಿಕೊಂಡು ಬರ್ತಿನಿ’ ಎಂದು ರೈಫಲ್ ತೆಗೆದುಕೊಂಡು ಸಿದ್ಧನಾಗುತ್ತಾನೆ. ಆಕೆ ‘ಇಲ್ಲಿ ಬೇಟೆಯಾಡುವುದು ನಿಷಿದ್ಧ, ಪ್ರಾಣಿಗಳನ್ನು ಕೊಂದರೆ ದಂಡ ಹಾಕುತ್ತಾರೆ’ ಎನ್ನುತ್ತಾಳೆ. ‘ಅಯ್ಯೋ ಅದು ನನ್ನ ಆಹಾರ’ ಎನ್ನುವ ಡೆರ್ಸುಗೆ ಕೈ ಕಟ್ಟಿಹಾಕಿದಂತಾಗುತ್ತದೆ. ಪ್ರಕೃತಿಯೊಂದಿಗೆ ಒಂದಾಗಿದ್ದ ಡೆರ್ಸು, ನಗರ ಜೀವನದಲ್ಲಿ ಮಂಕಾಗುತ್ತಾನೆ, ಅನ್ಯನಾಗುತ್ತಾನೆ.

ಕೊನೆಗೊಂದು ದಿನ, ಕ್ಯಾಪ್ಟನ್ ಕಾಲಿಗೆ ಬಿದ್ದು, ‘ನನ್ನನ್ನು ಕಾಡಿಗೆ ಬಿಟ್ಟುಬಿಡು, ಈ ಮನೆ ಕೋಟೆಯಂತಿದೆ, ಹೆದರಿಕೆ ಹುಟ್ಟಿಸುತ್ತದೆ’ ಎಂದು ಗೋಗರೆಯುತ್ತಾನೆ. ಕ್ಯಾಪ್ಟನ್ಗೆ ಡೆರ್ಸುವಿನ ಸ್ಥಿತಿ ಅರ್ಥವಾಗುತ್ತದೆ. ಆತನನ್ನು ಆತ್ಮೀಯವಾಗಿ ಆಲಿಂಗಿಸಿಕೊಂಡು, ರೈಫಲ್ ಕೊಟ್ಟು, ಇದು ನನ್ನ ನೆನಪಿಗೆ ಎಂದು ಹೇಳಿ ಕಾಡಿಗೆ ಕಳಿಸಿಕೊಡುತ್ತಾನೆ. ಚಿತ್ರದ ಕೊನೆಯ ಭಾಗ ತುಂಬ ಮರ್ಮಭೇದಕವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಕಥೆ ಅಲ್ಲ; ಪ್ರಕೃತಿಯಿಂದ ದೂರವಾಗುತ್ತಿರುವ ಮಾನವ ಸಮಾಜದ ದುರಂತದ ಪ್ರತೀಕವಾಗಿದೆ.
ಈ ಸಿನೆಮಾ ನಿಧಾನವಾಗಿ ಸಾಗುತ್ತದೆ. ಆದರೆ ಆ ನಿಧಾನದಲ್ಲೇ ಅದರ ಶಕ್ತಿ ಇದೆ. ಇಂದಿನ ವೇಗದ ಸಿನೆಮಾಗಳಿಗೆ ವಿರುದ್ಧವಾಗಿ ಈ ಚಿತ್ರ ಪ್ರೇಕ್ಷಕರನ್ನು ನಿಲ್ಲಿಸಿ ಯೋಚಿಸಲು ಪ್ರೇರೇಪಿಸುತ್ತದೆ. ಇಂದಿನ ವೇಗೋತ್ಕರ್ಷದ ಬದುಕು, ಕಂಫರ್ಟ್ ಜೋನ್, ಪರಿಸರ ಹಾನಿ, ಅಭಿವೃದ್ಧಿ ರಾಜಕಾರಣದ ನಡುವೆ ಈ ಸಿನೆಮಾ ತುಂಬ ಪ್ರಸ್ತುತವಾಗುತ್ತದೆ.
ಇದನ್ನು ಓದಿದ್ದೀರಾ?: ಆಂದ್ರೆ ಟಾರ್ಕೋವ್ಸ್ಕಿ ಚಿತ್ರಗಳ ಶಬ್ದಲೋಕ
ಚಿತ್ರದ ಛಾಯಾಗ್ರಹಣ ಅದ್ಭುತವಾಗಿದೆ. ಹಿಮಾಚ್ಛಾದಿತ ಮೈದಾನಗಳು, ಮಂಜಿನಿಂದ ಆವರಿಸಿದ ಕಾಡು, ಕಾಡಿನ ನಿಗೂಢತೆ, ನದಿ-ತೊರೆಗಳು, ಹಕ್ಕಿ-ಪಕ್ಷಿಗಳ ಕಲರವ ಪ್ರತಿ ಫ್ರೇಮ್ ಅನ್ನು ಚಿತ್ರಕಲೆಯಂತೆ ಕಡೆದಿಡಲಾಗಿದೆ. ಪ್ರಕೃತಿಯ ಸೌಂದರ್ಯವನ್ನು ಕೇವಲ ಹಿನ್ನೆಲೆಯಾಗಿ ಬಳಸದೇ, ಕಥೆಯ ಪ್ರಮುಖ ಪಾತ್ರವನ್ನಾಗಿ ಮಾಡಲಾಗಿದೆ. ಪ್ರಕೃತಿಯ ಕೋಪ, ಕರುಣೆ ಎರಡೂ ಎದ್ದು ಕಾಣುತ್ತದೆ. ಅದನ್ನು ಕರುಳಿಗಿಳಿಸುವ ಹಿನ್ನೆಲೆ ಸಂಗೀತ- ಎಲ್ಲಿ ಎಷ್ಟು ಬೇಕೋ ಅಷ್ಟು ಇದ್ದು ಚಿತ್ರವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಕ್ಯಾಪ್ಟನ್ ಆಗಿ ಯುರಿ ಸೋಲೊಮಿನ್, ಅಲೆಮಾರಿ ಸಂತನಾಗಿ ಮ್ಯಾಕ್ಸಿಂ ಮುನ್ಜುಕ್ ಮನೋಜ್ಞ ಅಭಿನಯ ನೀಡಿದ್ದಾರೆ.
ಸ್ನೇಹ, ಏಕಾಂತ, ವಯಸ್ಸು, ಮಾಗುವಿಕೆ, ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಭಾವ ಭಿತ್ತಿಗಿಳಿಸುವ ‘ಡೆರ್ಸು ಉಜಾಲಾ’ ಅಪರೂಪದ ಚಿತ್ರ. ಸಿನೆಮಾವನ್ನು ಕೇವಲ ಮನರಂಜನೆಯಾಗಿ ನೋಡುವವರಿಗಿಂತ, ಅದನ್ನು ಒಂದು ಕಲಾತ್ಮಕ ಅನುಭವವಾಗಿ ಅನುಭವಿಸಲು ಬಯಸುವವರಿಗಾಗಿ ಈ ಚಿತ್ರ.
ಚಿತ್ರ ವೀಕ್ಷಿಸಲು: https://www.youtube.com/watch?v=sFaL03SKEzE&t=8207s ಈ ಲಿಂಕ್ ಬಳಸಿ.

ಲೇಖಕ, ಪತ್ರಕರ್ತ



