ಶಿಕ್ಷಣ ನೀಡಬೇಕಾದ ಸರ್ಕಾರಿ ಶಾಲೆಯ ಹೆಡ್ಮಾಸ್ಟರ್ ಒಬ್ಬರು 11 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಹರಿಯಾಣ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು 52 ವರ್ಷದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಎಂದು ಗುರುತಿಸಲಾಗಿದೆ.
ಪೋಲಿಸರು ನೀಡಿದ ಮಾಹಿತಿಯ ಪ್ರಕಾರ, ಈ ಘಟನೆಯು ಆಗಸ್ಟ್ 11 ರಂದು ಮಧ್ಯಾಹ್ನ 1:30 ರಿಂದ 2:30 ರ ನಡುವೆ ಗ್ರಾಮದ ಸ್ಮಶಾನದ ಬಳಿ ನಡೆದಿದೆ. ನೊಂದ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣವೇ ತನಿಖೆ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯ ವಿರುದ್ಧ ಹೊಸ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪೋಕ್ಸೋ (POCSO – ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಗುರುವಾರ ಆತನನ್ನು ಬಂಧಿಸಿ ಮುಂದಿನ ತನಿಖೆ ನಡೆಸಲಾಗುತ್ತಿದೆ. ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳಂತೆ ಸಂತ್ರಸ್ತೆಯ ಗುರುತನ್ನು ಗೌಪ್ಯವಾಗಿಡಲಾಗಿದೆ ಎಂದು ಹರಿಯಾಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ಎಸ್ಎಚ್ಒ ಗುರ್ಬಚನ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪೊಲೀಸ್ ಅಧಿಕಾರಿ
ದೇಶದಲ್ಲಿ ಪೋಕ್ಸೋ ಪ್ರಕರಣಗಳ ಹೆಚ್ಚಳ
ದೇಶದಲ್ಲಿ ಪೋಕ್ಸೋ (POCSO – Protection of Children from Sexual Offences) ಪ್ರಕರಣಗಳ ಸಂಖ್ಯೆಯಲ್ಲಿ ಪ್ರತಿ ವರ್ಷ ಗಣನೀಯ ಏರಿಕೆ ಕಂಡುಬರುತ್ತಿದೆ. ಇದು ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸುವುದರ ಜೊತೆಗೆ, ಸಮಾಜದಲ್ಲಿ ಕಾನೂನಿನ ಜಾಗೃತಿ ಹೆಚ್ಚುತ್ತಿರುವುದನ್ನೂ ಸೂಚಿಸುತ್ತದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB – National Crime Records Bureau) ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳ ಅಧಿಕೃತ ದತ್ತಾಂಶದ ಪ್ರಕಾರ ದೇಶದಲ್ಲಿ ವರ್ಷಕ್ಕೆ ಸರಾಸರಿ 60,000 ಕ್ಕೂ ಹೆಚ್ಚು ಪ್ರಕರಣಗಳು ‘ಪೋಕ್ಸೋ ಕಾಯ್ದೆ’ಯಡಿ (POCSO Act) ದಾಖಲಾಗುತ್ತಿವೆ. ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಒಟ್ಟು ಪ್ರಕರಣಗಳಲ್ಲಿ ಶೇಕಡ 98ಕ್ಕಿಂತ ಹೆಚ್ಚು ಸಂತ್ರಸ್ತರು ಹೆಣ್ಣುಮಕ್ಕಳೇ ಆಗಿದ್ದಾರೆ. ಅದರಲ್ಲಿಯೂ 12 ರಿಂದ 18 ವರ್ಷದೊಳಗಿನ ಬಾಲಕಿಯರ ಮೇಲೆಯೇ ಹೆಚ್ಚಿನ ಪ್ರಮಾಣದ ದೌರ್ಜನ್ಯಗಳು ಜರುಗುತ್ತಿವೆ.
ಅದರಲ್ಲೂ ಮುಖ್ಯವಾಗಿ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ 95% ರಿಂದ 96% ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಕುಟುಂಬಸ್ಥರು, ನೆರೆಹೊರೆಯವರು, ಶಿಕ್ಷಕರು ಅಥವಾ ಪರಿಚಿತರೇ ಆಗಿರುತ್ತಾರೆ.
ನ್ಯಾಯಾಲಯಗಳಲ್ಲಿ ಪೋಕ್ಸೋ ಪ್ರಕರಣಗಳಲ್ಲಿ ವಿಧಿಸಲಾಗುವ ಶಿಕ್ಷೆಯ ಪ್ರಮಾಣ 30% ರಿಂದ 35% ರಷ್ಟಿದೆ. ಅಂದರೆ, ಪ್ರತಿ 100 ಪ್ರಕರಣಗಳಲ್ಲಿ ಕೇವಲ 30-35 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ. ಇನ್ನುಳಿದ ಬಹುಪಾಲು ಪ್ರಕರಣಗಳು ಸಾಕ್ಷ್ಯಾಧಾರಗಳ ಕೊರತೆ, ವಿಳಂಬಿತ ತನಿಖೆ ಅಥವಾ ವಿಚಾರಣೆಯ ಹಂತದಲ್ಲೇ ಖುಲಾಸೆಯಾಗುತ್ತಿವೆ. ವೇಗದ ಗತಿಯ ನ್ಯಾಯಕ್ಕಾಗಿ ದೇಶದಾದ್ಯಂತ ‘ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ಗಳನ್ನು’ (FTSC) ಸ್ಥಾಪಿಸಲಾಗಿದೆಯಾದರೂ, ಲಕ್ಷಾಂತರ ಪ್ರಕರಣಗಳು ಇನ್ನೂ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ.




