ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ತಮಿಳುನಾಡಿನ ಆರ್. ವೀರಮಣಿ ಪ್ರಕರಣ ಇದೀಗ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಪ್ರಕರಣವನ್ನು ಹಿಂದಿನ ಡಿಎಂಕೆ ಸರ್ಕಾರ ಸೂಕ್ತವಾಗಿ ನಿಭಾಯಿಸಲಿಲ್ಲ ಎಂದು ಆರೋಪಿಸಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ನಾಯಕ ಸಿ. ಜೋಸೆಫ್ ವಿಜಯ್, ಇದರ ಹಿಂದೆ ಯಾವ ರೀತಿಯ ಒಪ್ಪಂದವಾಗಿತ್ತು? ಎಂದು ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಧುರಾಂತಕಂ ವಿಧಾನಸಭಾ ಕ್ಷೇತ್ರದಲ್ಲಿ ಅಕ್ಟೋಬರ್ 6ರಂದು ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಚಾರ ನಡೆಸಿದ ವಿಜಯ್, ವೀರಮಣಿ ಪ್ರಕರಣವನ್ನು ಪ್ರಸ್ತಾಪಿಸಿದರು. “ತಮಿಳುನಾಡಿನ ಯುವತಿಯರು ಮತ್ತು ಮಕ್ಕಳನ್ನು ಹಲವು ವರ್ಷಗಳಿಂದ ಶೋಷಿಸಲಾಗುತ್ತಿದೆ. ಈ ಪ್ರಕರಣ ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲೇ ಬೆಳಕಿಗೆ ಬಂದಿದ್ದರೂ, ಅದರ ಹಿನ್ನೆಲೆ ಮತ್ತು ಪ್ರಕರಣವನ್ನು ಮೌನವಾಗಿ ಮುಚ್ಚಿಹಾಕಲಾಯಿತು” ಎಂದು ಆರೋಪಿಸಿದರು.
“ಯಾವ ರೀತಿಯ ಒಪ್ಪಂದವಾಗಿತ್ತು ಸರ್? ಇಡೀ ತಮಿಳುನಾಡು ಈ ಪ್ರಶ್ನೆಯನ್ನು ಕೇಳುತ್ತಿದೆ. ಸ್ಟಾಲಿನ್ ಅವರೇ, ಈ ವಿಚಾರದಲ್ಲಿ ಮಾತನಾಡಿ. ನಿಮ್ಮೊಂದಿಗೆ ಇರುವವರೂ ಮೌನವಾಗಿದ್ದಾರೆ. ಈ ಮೌನದ ಹಿಂದೆ ಯಾವುದಾದರೂ ಅಘೋಷಿತ ಒಪ್ಪಂದ ಅಥವಾ ಹೊಂದಾಣಿಕೆ ಇದೆಯೇ?” ಎಂದು ವಿಜಯ್ ಪ್ರಶ್ನಿಸಿದರು.
ಪ್ರಕರಣದ ತನಿಖೆಯಲ್ಲಿ ವಿಳಂಬ ಅಥವಾ ಸಾಕ್ಷ್ಯಗಳನ್ನು ಮುಚ್ಚಿಹಾಕಲು ಯಾರಾದರೂ ಪ್ರಯತ್ನಿಸಿರುವುದು ತನಿಖೆಯಲ್ಲಿ ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಜಯ್ ಈಗಾಗಲೇ ಪೊಲೀಸರಿಗೆ ಸೂಚಿಸಿದ್ದರು. ಪ್ರಕರಣದ ಆರಂಭಿಕ ತನಿಖೆ, ನಂತರ ಸಲ್ಲಿಸಲಾಗಿದ್ದ ಕ್ಲೋಸರ್ ವರದಿ ಹಾಗೂ ನ್ಯಾಯಾಲಯದ ಮಧ್ಯಪ್ರವೇಶ ಸೇರಿದಂತೆ ಹಿಂದಿನ ಕ್ರಮಗಳನ್ನೂ ಪರಿಶೀಲಿಸಲಾಗುತ್ತಿದೆ.
ಏನಿದು ಪ್ರಕರಣ?
2025ರ ಅಕ್ಟೋಬರ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ದೃಶ್ಯಗಳಿವೆ ಎನ್ನಲಾದ ಪೆನ್‌ಡ್ರೈವ್‌ವೊಂದನ್ನು ಮಕ್ಕಳ ಹಕ್ಕುಗಳ ಕಾರ್ಯಕರ್ತೆಯೊಬ್ಬರು ಪೊಲೀಸರಿಗೆ ನೀಡಿದ ಬಳಿಕ ಪ್ರಕರಣ ದಾಖಲಾಗಿತ್ತು. ತನಿಖೆಯ ಒಂದು ಹಂತದಲ್ಲಿ ಪೊಲೀಸರು ಸಂತ್ರಸ್ತೆಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಹಾಗೂ ಸಾಕಷ್ಟು ಪೂರಕ ಸಾಕ್ಷ್ಯಗಳಿಲ್ಲ ಎಂಬ ಸಬೂಬು ನೀಡಿ ಪ್ರಕರಣವನ್ನು ಮುಚ್ಚಲು ಕ್ಲೋಸರ್ ವರದಿ ಸಲ್ಲಿಸಿದ್ದರು. ಆದರೆ ವಿಶೇಷ POCSO ನ್ಯಾಯಾಲಯವು ಆ ವರದಿಯನ್ನು ತಿರಸ್ಕರಿಸಿ ಹೆಚ್ಚಿನ ತನಿಖೆಗೆ ಸೂಚಿಸಿತು. ಬಳಿಕ ಪ್ರಕರಣದ ತನಿಖೆ ವಿಸ್ತರಿಸಿ ಸಂತ್ರಸ್ತೆಯನ್ನು ಪತ್ತೆಹಚ್ಚಿ ಹೇಳಿಕೆ ದಾಖಲಿಸಲಾಗಿದೆ. ಇನ್ನೂ ಹಲವು ಅಪ್ರಾಪ್ತ ವಯಸ್ಸಿನಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದರೆನ್ನಲಾದವರು ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.
ಇದೇ ವಿಚಾರವನ್ನು ಮುಂದಿಟ್ಟುಕೊಂಡು ಡಿಎಂಕೆ ಸರ್ಕಾರದ ವಿರುದ್ಧ ವಿಜಯ್ ವಾಗ್ದಾಳಿ ನಡೆಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಮಾತನಾಡುವ ಡಿಎಂಕೆ, ಇಂತಹ ಪ್ರಕರಣದಲ್ಲಿ ಹಿಂದಿನ ತನಿಖೆಯ ವೇಳೆ ಏಕೆ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ವಿಜಯ್ ಗೆಲುವು | ತಮಿಳುನಾಡಿನ ಪ್ರತೀಕಾರ ರಾಜಕೀಯದ ಅಂತ್ಯವೇ? ಅಥವಾ ಸೌಹಾರ್ದ ರಾಜಕೀಯದ ಉದಯವೇ?
“ಈ ಮಕ್ಕಳ ನೋವು ಮತ್ತು ಸಂಕಟದ ಬಗ್ಗೆ ಮಾತನಾಡಲು ನಿಮಗೆ ಸಾಧ್ಯವಾಗದಿದ್ದರೆ, ಇಷ್ಟು ವರ್ಷಗಳಿಂದ ನೀವು ಯಾವ ರೀತಿಯ ರಾಜಕೀಯ ಮಾಡುತ್ತಿದ್ದೀರಿ?” ಎಂದು ವಿಜಯ್ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದರು. ಮುಂಬರುವ ಉಪಚುನಾವಣೆಯಲ್ಲಿ ಜನರು ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳಿಗೆ ತಕ್ಕ ಉತ್ತರ ನೀಡಬೇಕು ಎಂದೂ ಅವರು ಕರೆ ನೀಡಿದರು.
ಆದರೆ ವಿಜಯ್ ಮಾಡಿರುವ ಆರೋಪಗಳನ್ನು ಡಿಎಂಕೆ ತಳ್ಳಿಹಾಕಿದೆ. ಪಕ್ಷವನ್ನು ವೀರಮಣಿಯನ್ನು ರಕ್ಷಿಸಿದ ಆರೋಪಕ್ಕೆ ಗುರಿಪಡಿಸುವುದು ಸುಳ್ಳು ಮತ್ತು ಮಾನಹಾನಿಕರ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ತಮ್ಮ ಸರ್ಕಾರವು ಯಾರನ್ನೂ ರಕ್ಷಿಸಲು ಯಾವುದೇ ಆದೇಶ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.




