ಪಶ್ಚಿಮ ಬಂಗಾಳ ವೈದ್ಯಕೀಯ ಮಂಡಳಿಯಲ್ಲಿ (WBMC) 1996ರಿಂದ ನೋಂದಾಯಿಸಿಕೊಂಡಿರುವ ಸುಮಾರು 1.1 ಲಕ್ಷ ವೈದ್ಯರ ಶೈಕ್ಷಣಿಕ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಬಂಗಾಳ ಸರ್ಕಾರ ಮುಂದಾಗಿದೆ. ವೈದ್ಯಕೀಯ ನೋಂದಣಿ ದಾಖಲೆಗಳಲ್ಲಿ ನಕಲಿ ವೈದ್ಯರ ಹೆಸರುಗಳು ಕಂಡುಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಪರಿಶೀಲನೆಗೆ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಅಲ್ಲಿನ ಆರೋಗ್ಯ ಸಚಿವ ಶರದ್ವತ್ ಮುಖರ್ಜಿ ಮಾಹಿತಿ ನೀಡಿದ್ದಾರೆ. “ವಿಭಿನ್ನ ವಿಶ್ವವಿದ್ಯಾಲಯಗಳಿಂದ ವೈದ್ಯರು ಪಡೆದಿರುವ ಪ್ರಮಾಣಪತ್ರಗಳನ್ನು ಈ ಹೊಸ ತಪಾಸಣಾ ಪ್ರಕ್ರಿಯೆಯ ಮೂಲಕ ಮರುಪರಿಶೀಲನೆಗೆ ಒಳಪಡಿಸಲಾಗುತ್ತದೆ” ಎಂದಿದ್ದಾರೆ.
“ಸುಮಾರು ಮೂರು ದಶಕಗಳ ಅವಧಿಯ ಈ ವೈದ್ಯಕೀಯ ನೋಂದಣಿ ದಾಖಲೆಗಳ ಆಡಿಟ್ ನಡೆಸಲು ರಾಜ್ಯ ಸರ್ಕಾರವು ಹೊರಗಿನ ಸ್ವತಂತ್ರ ಏಜೆನ್ಸಿಯೊಂದನ್ನು ಬಳಸಿಕೊಳ್ಳಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಳಸುವ ‘ಕೆವೈಸಿ’ ಮಾದರಿಯಲ್ಲೇ ‘ಕೆವೈಡಿ’ (Know Your Doctor – ನಿಮ್ಮ ವೈದ್ಯರನ್ನು ತಿಳಿಯಿರಿ) ಎಂಬ ಪ್ರೋಟೋಕಾಲ್ ಅನ್ನು ಪರಿಚಯಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷ ಹಾಗೂ ವಿಡಿಯೋ ಆಧಾರಿತ ಪರಿಶೀಲನೆಗಳೆರಡೂ ಒಳಗೊಂಡಿರಲಿವೆ” ಎಂದಿದ್ದಾರೆ.
“ವಯೋಸಹಜ ಕಾರಣಗಳಿಂದ ಅಥವಾ ಸುದೀರ್ಘ ದೂರದಲ್ಲಿ ವಾಸಿಸುತ್ತಿರುವ ಕಾರಣ ನೇರವಾಗಿ ಪ್ರಯಾಣಿಸಲು ಸಾಧ್ಯವಾಗದ ಹಿರಿಯ ವೈದ್ಯರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ತಪಾಸಣೆ ನಡೆಸಲು ಸರ್ಕಾರ ಅನುಕೂಲ ಮಾಡಿಕೊಡಲಿದೆ. ಇಡೀ ಪ್ರಕ್ರಿಯೆಯಲ್ಲಿ ಅರ್ಹ ವೈದ್ಯರಿಗೆ ಯಾವುದೇ ರೀತಿಯ ಅನಗತ್ಯ ಕಿರುಕುಳ ಅಥವಾ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು” ಎಂದು ಸರ್ಕಾರ ಭರವಸೆ ನೀಡಿದೆ.
ಸರ್ಕಾರದ ಈ ನಿರ್ಧಾರವು ರಾಜ್ಯದಲ್ಲಿ ತೀವ್ರ ರಾಜಕೀಯ ಚರ್ಚೆ ಮತ್ತು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ಹಿಂದೆ TMC ಆಡಳಿತದಲ್ಲಿದ್ದಾಗ ಆರೋಗ್ಯ ಕ್ಷೇತ್ರದಲ್ಲಿ ನಡೆದ ಆಡಳಿತಾತ್ಮಕ ಲೋಪಗಳನ್ನು ಉಲ್ಲೇಖಿಸಿ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಭಾರತದ ಬೇರೆ ಯಾವ ರಾಜ್ಯದಲ್ಲೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಎಂದು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಲೇವಡಿ ಮಾಡಿದ್ದಾರೆ.
ಇನ್ನೊಂದೆಡೆ, ಟಿಎಂಸಿ ಸಂಸದ ಸೌಗತಾ ರಾಯ್ ಸರ್ಕಾರದ ಈ ಹೊಸ ಪರಿಶೀಲನಾ ಪ್ರಕ್ರಿಯೆಯನ್ನು ಕಟುವಾಗಿ ಟೀಕಿಸಿದ್ದು, ವೈದ್ಯರ ದಾಖಲೆಗಳನ್ನು ಈ ರೀತಿಯ ವಿಶೇಷ ಪರಿಶೀಲನೆಗೆ (SIR) ಒಳಪಡಿಸುವುದು ಅಸಮಂಜಸ ನಡವಳಿಕೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.



