ಏಪ್ರಿಲ್ ತಿಂಗಳಿನಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಸ್ವಾತಂತ್ರ್ಯಾ ನಂತರದ ದೇಶದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳ ಇತಿಹಾಸದಲ್ಲೇ ಅತ್ಯಧಿಕ ಮತದಾನಕ್ಕೆ ಸಾಕ್ಷಿಯಾಗಿದೆ. ಈ ಚುನಾವಣೆಯಲ್ಲಿ ದಾಖಲೆಯ 93.71%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಆಯೋಗವು ಶನಿವಾರ ಚುನಾವಣಾ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಳವು ಅತೀ ಹೆಚ್ಚು ಮತದಾನ ಕಂಡಿರುವ ರಾಜ್ಯವಾಗಿದೆ. ನಂತರದ ಎರಡನೇ ಅತ್ಯಧಿಕ ಮತದಾನವು 2013ರಲ್ಲಿ ತ್ರಿಪುರಾದಲ್ಲಿ ದಾಖಲಾಗಿದೆ. ಆ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರಾದಲ್ಲಿ 93.61% ಮತದಾನವಾಗಿತ್ತು ಎಂದು ಹೇಳಿದೆ.
ಇತ್ತೀಚೆಗೆ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದವು. ಮೇ 4ರಂದು ಮತ ಎಣಿಕೆ ಪ್ರಕ್ರಿಯೆಯು ಪೂರ್ಣಗೊಂಡಿತ್ತು. ಈ ಪೈಕಿ, ಅಸ್ಸಾಂ ರಾಜ್ಯವನ್ನು ಹೊರತುಪಡಿಸಿ, ಉಳಿದೆಲ್ಲ ರಾಜ್ಯಗಳಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಸಿತ್ತು. ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಹಾಕಲಾಗಿತ್ತು.
ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಬರೋಬ್ಬರಿ 91 ಲಕ್ಷಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ಹೊರದೂಡಲಾಗಿತ್ತು. ಇದರಲ್ಲಿ 27.14 ಲಕ್ಷ ಹೆಸರುಗಳನ್ನು ಸುಪ್ರೀಂ ಕೋರ್ಟ್ ನಿಯೋಜಿತ ನ್ಯಾಯಾಂಗ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದಾಗ್ಯೂ, ಈ ಬೃಹತ್ ಸಂಖ್ಯೆಯ ಮತದಾರರನ್ನು ಹೊರಗಿಟ್ಟು, ಚುನಾವಣೆ ನಡೆಸಲಾಗಿತ್ತು.



