ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಮು೦ಜಾನೆ ಉಂಡಿದ್ದರೆ ಛಂಜೆಮುಂದ ಡೇಗುವ ಮನುಷ್ಯನಾದ ಕೊರಚರ ಎಲುಗ ಒಂದಲ್ಲಾ ಒಂದು ಕಾರಣಕ್ಕೆ ಊರವರಿಗೆಲ್ಲಾ ಸುಪರಿಚಿತನು. ಅಗಸರ ಬೇಲಿ ಸಾಲಿನಲ್ಲಿ ಕಾಡುಬೆಕ್ಕು ಹಿಡಿದದ್ದು, ಪೂಜಾರಿ ಸಿದ್ದಪ್ಪನ ಮನೆಯಲ್ಲಿ ಉರಿಮಂಡಲಹಾವು ಹಿಡಿದದ್ದು, ಕಳ್ಳರ ಬಾವಿಯಲ್ಲಿ ತಳಸೇರಿದ್ದ ತಾಮ್ರದ ಕೊಡಪಾನ ತೆಗೆದದ್ದು ಇನ್ನು ಮುಂತಾದ ಸಣ್ಣಪುಟ್ಟ ಸಾಹಸಗಳಿಂದ ಎಲುಗ ಹನ್ನೆರಡುನೂರಾ ಇಪ್ಪತ್ತೊಂದು ಮನೆಗಳಿರುವ ಗ್ರಾಮವಾದ ಕೊಟ್ಟೂರಿನಲ್ಲಿ, ಸುವಿಖ್ಯಾತನಾಗಿರುವ ಸಬೂಳನ ದೇಹದ ವ್ಯಕ್ತಿ. ಹರುಕ ಬುರುಕ ಗಡ್ಡವನ್ನು ಆಗಾಗ್ಗೆ ತುರಿಸಿಕೊಳ್ಳುತ್ತ ಶರಣವ್ವನ ಚಾದಂಗಡಿ ತುಳಿದುಬಿಟ್ಟರೆ ಅನಾಯಾಸವಾಗಿ ಅರ್ಧ ಕಪ್ಪು ಚಾ ಸಿಕ್ಕದೆ ಇರುವುದಿಲ್ಲ. ಹುಸೇನಸಾಬಿಯ ಡಬ್ಬಿ ಅಂಗಡಿಮುಂದೆ ನಿಂತರೆ ಒಂದು ದೊಡ್ಡಂಬರ್ ಬೀಡಿ ಉರುಟುರುಟಾದ ಬೊಗಸೆಗೆ ಬೀಳುವುದು. ಹುಲುಲಿಹಳ್ಳದಲ್ಲಿ ಅಪರೂಪಕ್ಕೊಮ್ಮೆ ಮುಳುಗೇಳುವ ಎಲುಗನ ಸಾಟಿಗೆ ತಿವಿಯುವ ಲಚ್ಚುಮಿಯೇ ದಿನಾಲು ಉಂಬಾಕಿಕ್ಕುವುದು. ಮುಖಕ್ಕೆ ರೆಮ್ಮಿ ಸ್ನೋ ಹಚ್ಚಿಕೊಂಡು ಬಳೇ ಪತ್ತಲ ಉಟ್ಟುಕೊಳ್ಳುವ ಲಚ್ಚುಮಿ ಎಲುಗಗೆ ಕಡೇಲಲ್ಲ, ಅವರಿಬ್ಬರೂ ಚಿಗದೊಡ್ಡಪ್ಪನ ಮಕ್ಕಳು. ಗಡ್ಡದಲ್ಲಿ ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಕಾಣಿಸಿರುವ ಎಲುಗ ನವಗ್ರಹಗಳು ಕೂಡಿದ ವರ್ಷದಂದೇ ಬತ್ತನಳ್ಳಿ ರಾಮನ ಮಗಳು ಕೊಟ್ಟಿಯನ್ನು ಮದುವೆಯಾಗಬೇಕಿತ್ತು. ಕೆರೆಯ ಅಂಗಳದಲ್ಲಿ ವರ್ಷಕ್ಕೆ ನೂರು ಗಾಡಿಯಷ್ಟು ಗೊಬ್ಬರ ಕೂಡಿ ಹಾಕುವ ರಾಮನ ಮಗಳೆಂದಮೇಲೆ ಸಣ್ಣ ಮಾತೇನಲ್ಲ. ವಗ್ಗರಣೆ ಕೊಟ್ಟ ಸಾರೂ, ರಾಗಿ ಮುದ್ದೆ ಉಂಬುವ ಹೊಟ್ಟೆ ತುಂಬಿದ ಮಂದಿ. ಇಂಥಾತ ತನ್ನ ಮಗಳನ್ನು ಕೊಟ್ಟೂರಿನ ಎಲುಗಗೆ ಕೊಡಬೇಕೆಂದು ಅವರಿವರು ಮಧ್ಯಸ್ತಿಕೆ ವಹಿಸಿದಾಗ ಅಂತಸ್ತಿನ ಪ್ರಶ್ನೆ ಸಹಜವಾಗಿ ಎಂಬಂತೆ ಎದ್ದಿತ್ತು. ಎಲುಗಗೆ ಮಗಳನ್ನು ಕೊಡುವುದೂ ಒಂದೇ, ಬಸವನ ಬಾವಿ ತಗ್ಗಿಗೆ ದಬ್ಬುವುದೂ ಒಂದೇ ಎಂದು ಅರ್ಥ ಬರುವ ರೀತಿ ಮಾತಾಡಿದ್ದ. ಮೂಗ, ಕಲ್ಲಗ ಅಂಗ್ ಮಾಡಬ್ಯಾಡೆಣ್ಣೊ… ಒಂಚೂರು ನೋಡ್ ದಿಕ್ಕಿಲ್ದೋನು ಅಂತ ಕನಿಕರಪಟ್ಟಾಗ ರಾಯ “ಅವನಿಗೇನೈತಂತಾ ಮಗಳ್ನ ಕೊಡೋದು, ಇಪ್ಪತ್ತೈದು ಹಂದಿ ತೆರವು ಕಟ್ಟಿ ಮಾಡಿಕಳ್ಳಿ ಬ್ಯಾಡಂತೀನಾ” ಅಂದಿದ್ದ. ಲಚ್ಚುಮಿ ನಾಕನೇ ಬಾರಿಗೆ ರಾಮನನ್ನು ಉಡಿಕೆ ಮಾಡಿಕೊಂಡಿದ್ದಲ್ಲಿ ಆತ ತನ್ನ ಮಗಳನ್ನು ಚೌಕಾಸಿ ಮಾಡದೆ ಎಲುಗಗೆ ಕಟ್ಟದೆ ಇರುತ್ತಿರಲಿಲ್ಲ. ಇದೆಲ್ಲವನ್ನೂ ಮನಗಂಡೇ ಮಧ್ಯಸ್ತಿಕೆ ವಹಿಸಿದ್ದವರು ಅವತ್ತು ರಾತ್ರಿಯೇ ವಾಪಸಾಗಿದ್ದರು.
ಇದನ್ನು ಓದಿದ್ದೀರಾ?: ಬೊಳುವಾರು ಮಹಮ್ಮದ್ ಕುಂಞಿ ಅವರ ಕತೆ | ಒಂದು ತುಂಡು ಗೋಡೆ
ಅವತ್ತೆಲ್ಲ ರಚ್ಚೆ ಹಿಡಿದು ಕೂಗಾಡಿದ ಎಲುಗೆಗೆ ಮೊದಲು ಎಲ್ಲ ಇತ್ತು. ಅವನಪ್ಪನಾದ ಎಂಕ ಪ್ರಾತಃಕಾಲದಲ್ಲೇ ಗಡಂಗದ ಕಟ್ಟೆ ಹತ್ತಿ ಇದ್ದ ಮೂರೂ ಮುಕ್ಕಾಲೆಕರೆ ಅಡವಿ ಹೊಲ ಕಳೆದ. ಕಳ್ಳಿಗಿ ಹುಳಾಬಿದ್ದು ಹೊಂಟೋದ ಎಂಕ ಮಗಗೆ ಕ್ವಾರೆ ಚಿಪ್ಪು ಕೊಟ್ಟಿರಲಿಲ್ಲ. ಮೆಜಾರಿಟಿಗೆ ಸರಿಯಾಗಿ ಎಲುಗನ ಸುಪರ್ದಿಗೆ ಸಣ್ಣವು ದೊಡ್ಡವು ಕಲೆತು ಒಟ್ಟು ಮೂವತ್ತೊಂದು ಹಂದಿಗಳು ಬಂದಿದ್ದವು. ಕಟಗರ ಇಟೋಬಿನ ಮಾತು ಕೇಳಿ ಕಾಲಿಗೆ ಉರಿ ಕೊನೆ ಬಿಗಿದ್ದು ಹಾಸನದ ಲಾರಿಗೆ ಹಾಕಿದ್ದರೆ ಎಲ್ಡು ಸಾವಿರದಿನ್ನೂರಾ ಮುವತ್ತೈದು ರೂಪಾಯಿ ಬರುತ್ತಿದ್ದವು. ಕತ್ತಾಳೆ ನಾರನಿಂದ ಉರಿಕೊನೆ ಹೊಸೆದು ಉಪಜೀವಿಸಲಿಕ್ಕೂ ಗೊತ್ತರದಿದ್ದ ಎಲುಗ ಹಂದಿ ಮಾರಿದರೆ ಮುಂದೆ ಮಣ್ಣು ತಿನ್ನೋದು ಎಂದು ಕೊರಗಜ್ಜ ಬುದ್ದಿವಾದ ಹೇಳಿದ. ಅದೂ ಅಲ್ಲದೆ ಎಲುಗಗೆ ಹಂದಿಗಳೆಂದರೆ ತುಂಬ ಕಕ್ಕುಲಾತಿ, ಅಗಲಮೂತಿಯ ಅವು ತಮ್ಮದೇ ಆದ ಶೈಲಿಯಲ್ಲಿ ಕಟ್ಟಿದ್ದ ದೊಡ್ಡಿಯಲ್ಲಿ ಕೀರ್ ಕೀರ್ ಬುಸ್ ಬುಸ್ ಅಂತ ಗಲಾಟೆ ಮಾಡುವುದನ್ನು ಕೇಳುತ್ತಿದ್ದರೆ ಎಲುಗಗೆ ನಿದ್ದೆಯೇ ಬರುತ್ತಿತ್ತು. ಅವುಗಳ ಸಾಮೂಹಿಕ ಧ್ವನಿಯಲ್ಲಿ ವೀಣೆಯ ನಾದವನ್ನೋ, ಗಿಟಾರದ ಧ್ವನಿಯನ್ನೋ ಅಥವಾ ವಾದ್ಯವೃಂದದ ಗಾನವನ್ನೋ, ನಿಗೂಢವಾಗಿ ಗುರುತಿಸಿ ವಿಲಕ್ಷಣ ಸಂತೋಷ ಅನುಭವಿಸುತ್ತಿದ್ದ ಎಲುಗ ಕೇರಿಯಲ್ಲಿ ತುಸು ಐಲು ಎಂದು ಹೆಸರಾಗಿದ್ದ. ಕೇವಲ ಒಂದು ಮಗಿ ಹೆಂಡ ಕುಡಿದು ಪ್ರತಿಯೊಂದು ಹಂದಿಯ ಮೈಮೇಲೆ ಕೈಯಾಡಿಸಿ ವಿಚಿತ್ರವಾದ ಸ್ಪರ್ಶ ಸುಖ ಅನುಭವಿಸುತ್ತಿದ್ದ ಎಲುಗ ಒಳಗೊಳಗೇ ಲಚ್ಚುಮಿಯ ಬಗ್ಗೆ ತತ್ತಿಗಳನ್ನುದುರಿಸಿದ್ದುದು ಒಂದು ತಪ್ಪೇನಲ್ಲ. ನೂರೆಂಟು ಮಾನವ ಪ್ರೇಮವನ್ನು ಕ್ರೋಡೀಕರಿಸಿ ಹಂದಿ ಸಮುದಾಯವನ್ನು ಅಂತರಂಗದಲ್ಲಿಟ್ಟುಕೊಂಡು ಯುಗಗಳನ್ನು ವರ್ಷಗಳಂತೆಯೂ; ವರ್ಷಗಳನ್ನು ತಿಂಗಳುಗಳಂತೆಯೂ, ತಿಂಗಳುಗಳನ್ನು ದಿನಗಳಂತೆಯೂ ಕಳೆಯುತ್ತಿದ್ದ ಎಲುಗ. ಮುವ್ವತ್ತೊ೦ದು ಹಂದಿಗಳು ಸಹ ಶಿಸ್ತಿನ ಸಿಪಾಯಿಗಳಂತೆ ಎಲುಗನ ನೇತೃತ್ವದಲ್ಲಿ ಊರ ಹೊರಗಿನ ತಿಪ್ಪೆಗಳನ್ನು ಸೋಸಲು ಹೊರಡುತ್ತಿದ್ದವು. ಅವು ತಮ್ಮ ಪಾಡಿಗೆ ತಾವು ತಿಪ್ಪೆಗಳನ್ನೂ, ಬಯಲು ವ್ಯವಸ್ಥೆಯ ಸಾರ್ವಜನಿಕ ಪಾಯಖಾನೆ ನೈರ್ಮಲ್ಯವನ್ನು ಕಾಪಾಡುತ್ತಿರುವ ಸಂದರ್ಭದಲ್ಲಿ (ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದರೂ ಊರು ನೈರ್ಮಲ್ಯಕ್ಕೆ ಹೆಸರಾಗಿದ್ದರ ಗುಟ್ಟು ಎಲುಗನ ಹಂದಿಗಳೇ ಆಗಿತ್ತು.) ಎಲುಗ ಅಲ್ಲಲ್ಲಿ ಬೆದಕಿದಾಗ ಸಿಗುತ್ತಿದ್ದ ಕೂದಲು ಸಂಗ್ರಹಿಸಿ ಹರಪನಹಳ್ಳಿ ಸಾಬಿಗೆ ಮಾರಿ ರೂಪಾಯಿ ರೂಪಾಯಿವರೆ ಗಳಿಸುತ್ತಿದ್ದ. ಹಂದಿಗಳಲ್ಲಿದ್ದ ಜಾಣತನಕ್ಕೆ ಮೆಚ್ಚಬೇಕಾದ ಅಂಶವೆಂದರೆ ಅವು ಎಲ್ಲೇ ಹೇಗೆ ಮೆಯ್ದರೂ ಅವು ಸೆಗಣಿ ಹಾಕುತ್ತಿದ್ದುದು ಎಲುಗ ನಿರ್ಧರಿಸಿದ ಬಯಲು ಜಾಗದಲ್ಲಿ ಮಾತ್ರ. ಅಮವಾಸ್ಯೆಯ ರಾತ್ರಿಯೆಂದು ಮುಗಿಲು ತುಂಬ ಚೆಲ್ಲಿರುತ್ತಿದ್ದ ಚುಕ್ಕಿಗಳಂತೆ ಹಂದಿಗಳು ಉದುರಿಸುತ್ತಿದ್ದ ನೂರಾರು ಕುಪ್ಪೆಗಳು ಕಂಗೊಳಿಸುತ್ತಿದ್ದವು. ಕಣ್ತುಂಬ ಕುಪ್ಪೆಗಳನ್ನು ಹಂದಿಗಳ ಬಗ್ಗೆ ಕೃತಜ್ಞಾ ಭಾವದಿಂದ ನೋಡಿ ಸಂಗ್ರಹಿಸುತ್ತಿದ್ದ. ಅವುಗಳನ್ನು ವರ್ಷಕ್ಕೆರಡು ಬಾರಿ ಬೇಸಾಯಸ್ಥರಿಗೆ ಮಾರುವುದರ ಮೂಲಕ ನೂರಿನ್ನೂರು ಸಂಪಾದಿಸುತ್ತಿದ್ದ. ತನ್ನ ಮಂದಿಯ ಸಂಪ್ರೀತಿಗಾಗಿ ವರ್ಷಕ್ಕೆ ಮೂರು ನಾಕು ಬಾರಿ ಒಂದೊಂದು ಹಂದಿಯನ್ನೂ ತಲೆಕೆಳಗುಮಾಡಿ ಜೀವಂತವಾಗಿ ಶಿಲುಬೆಗೇರಿಸಿ ಬೆಂಕಿ ಹಚ್ಚುತ್ತಿದ್ದಾಗಂತೂ ಅವನ ಕರುಳು ಕಿತ್ತು ಹೊರಬರುತ್ತಿತ್ತು. ಸುಟ್ಟ ಮಾಂಸದ ಜೊತೆ ಮಗಿ ಹೆಂಡವನ್ನೂ ಇಟ್ಟುಕೊಂಡಾಗಂತೂ ಸ್ವರ್ಗ ಮೂರು ಚೋಟ ದೂರ ಇರುತ್ತಿತ್ತು. ಈ ತೆರನಾಗಿ ಸಂತೋಷಾಧಿಕ್ಯವನ್ನು ಪ್ರತಿದಿನವೂ ಹೊಂದುತ್ತಿದ್ದ ಎಲುಗ ಬದುಕುತ್ತಿದ್ದುದು ದಯಾಮಯನಾದ ಭಗವಂತಗೆ ಸರಿಬರಲಿಲ್ಲವೇನೋ! ಹಂದಿಯಿಂದ ರೋಗ ಬರ್‍ತದೆ, ಹಂದಿ ನಿರ್ಮೂಲನವೇ ರೋಗ ನಿರ್ಮೂಲನ ಇತ್ಯಾದಿ… ಇತ್ಯಾದಿ… ಘೋಷಣೆಗಳು ಕೇಳಿಬರತೊಡಗಿದವು. ಈ ವಿಷಯ ಎಲುಗಳ ಕಿವಿಗೆ ಬೀಳುವ ಹೊತ್ತಿಗೆ ಸುಟ್ಟಳ್ಳಿ ಕೊರಚರ ಹಂದಿಗಳನ್ನು ಪೋಲೀಸರು ಬೇಟೆ ಮಾಡಿದ್ದರು. ಎಲ್ಲಿ ಸರಕಾರಿ ಬಂದೂಕುಗಳು ತನ್ನ ಹಂದಿಗಳ ಕಡೆಗೆ ವಕ್ರಿಸುವವೋ ಎಂದು ಭಯದ ಅಂಚಿನಲ್ಲಿಯೂ ಎಲುಗ ಹಂದಿಸಂಗಾಟ ಹಂದಿಯಂತೆ ಬಿದ್ದಿರೋ ತನಗ್ಯಾಕೆ ಸರಕಾರದೋರು ಹೇಳುತ್ತಿರುವಂಥ ಜಡ್ಡುಗಾಪತ್ತು ಬರುತ್ತಿಲ್ಲವು ಎಂದು ಪರಿತಪಿಸುತ್ತಿದ್ದನು. ಹಂದಿಗಳನ್ನು ಆಳೆತ್ತರದ ಬೇಲಿ ನಡುವೆ ಕೂಡಿ ಹಾಕಿ ಮೈತುಂಬ ಕಣ್ಣುಮುಡಿದಿಕೊಂಡು ಕಾದುಕೊಂಡಿದ್ದನು. ಅಂಥ ಎಚ್ಚರದ ನಡುವೆಯೂ ಯಾವಾದಾದರೊಂದು ಹಂದಿ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಲೋ ಅಥವಾ ಸೇಡು ತೀರಿಸಿಕೊಳ್ಳಲೆಂದೋ ಅಸಹಾಯಕ ಸಿಟ್ಟಿನಿಂದ ಊರೊಳಗೆ ನುಗ್ಗಿ ಬಂದೂಕಿಗೆ ಬಲಿಯಾಗಿ ಬಿಡುತ್ತಿತ್ತು. ಆಗ ಎಲುಗ ತಾನೆ ಏನು ಮಾಡಿಯಾನು? ದುಃಖದ ಹುತ್ತದಲ್ಲಿ ತಾನೊಬ್ಬನೇ ಅವಿತು ಕೂತು ಪರಿತಪಿಸುತ್ತಿದ್ದನು.
ಇದನ್ನು ಓದಿದ್ದೀರಾ?: ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ
ಒಂದು ದಿನ ಇದ್ದಕ್ಕಿದ್ದಂತೆ ಕೆಲವು ಪೊಲೀಸು ಮಂದಿ ಸಶಸ್ತ್ರಧಾರಿಗಳಾಗಿ ವಕ್ರಿಸಿದರು. ದೊಡ್ಡಿ ನುಗ್ಗಲು ಮುನ್ನುಗ್ಗತೊಡಗಿದ್ದ ಅವರುಗಳ ದಾಪುಗಾಲುಗಳನ್ನೂ ಬಿಗಿಯಾಗಿ ಹಿಡಿದುಕೊಂಡು ರೋದಿಸಿ ಒದೆಸಿಕೊಂಡನು. ಬಡವ ಬುದ್ದೀ ಅಂದನು. ಬೂಟು ದಿರಿಸುಗಳ ಮೇಲೆ ಕಣ್ಣೀರು ಸುರಿಸಿದನು. ಆದರೂ ಪ್ರಯೋಜನವಾಗಿರಲಿಲ್ಲ. ಹಟ್ಟಿಬದಿಯ ದೊಡ್ಡಿಯಲ್ಲಿ ಒಂದೊಂದು ಹಂದಿ ಲಕ್ಷಸ್ವರ ತೆಗೆದಿದ್ದವು. ಪೊಲೀಸಪ್ಪರ ಹೆಜ್ಜೆಯ ಸದ್ದೇ ಅವಕ್ಕೆ ಎದೆ ದಡಲ್ಲೆನಿಸಿತ್ತು. ಆಗೊಮ್ಮೆ ಅಲ್ಲಿ ಈಗೊಮ್ಮೆ ಇಲ್ಲಿ ಗವ್ವನೆ ಗವಿದುಕೊಳ್ಳುತ್ತಿದ್ದ ಬಂದೂಕಿನ ನಳಿಗೆಯ ಮದ್ದಿನ ವಾಸನೆಯನ್ನು ಎಂಥ ಸಂದರ್ಭದಲ್ಲೂ ಗ್ರಹಿಸಬಹುದಾದಂಥ ಸೂಕ್ಷ್ಮ ಸಂವೇದನೆ ಅವಕ್ಕೆ ಈ ಮಧ್ಯೆ ಬಂದಿತ್ತು. ಪಾಯಖಾನೆ ಕಡೆಗಾಗಲೀ ತಿಪ್ಪೆ ಕಡೆಗಾಗಲೀ ಸರ್‍ರನೆ ನುಗ್ಗುವ ಧೈರ್ಯವನ್ನು ಅವು ಎಂದೋ ಕಳೆದುಕೊಂಡಿದ್ದ ಪರಿಣಾಮವಾಗಿ ಅವುಗಳು ಬಡಕಲು ಬಡಕಲಾಗಿ ಕಾಣಿಸುತ್ತಿದ್ದವು. ಕೆಲವು ಮಾರಗಲ ಉದ್ದದ ದೊಡ್ಡಿಯಲ್ಲಿ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬಿದ್ದಿದ್ದ ಅವು ಕೇವಲ ವರ್‍ರಕ್ ವರ್‍ರಕ್ ಅಂತ ಸದ್ದು ಮಾಡುವಷ್ಟರಲ್ಲಿ ಪೊಲೀಸರು ಪ್ರತ್ಯಕ್ಷರಾಗಿಬಿಟ್ಟಿದ್ದರು. ಯಾವ ಬೂಟುಗಾಲುಗಳನ್ನು ‘ಪಾಹಿಮಾಂ’ ಅಂತ ಅವುಚಿಕೊಂಡಿದ್ದನೋ ಆ ಬೂಟುಗಾಲುಗಳೇ ಅವನನ್ನು ಜಾಡಿಸಿ ತಳ್ಳಿದ ಪರಿಣಾಮವಾಗಿ ಎಲುಗ ಬರಕಲೀ ಸಿಕರೇಟಿನ ಬ್ಯಾಗಡಿಗಳಿಂದ ತುಂಬಿ ಲಕಲಕ ಹೊಳೆಯುತ್ತಿದ್ದ ಪುಟ್ಟ ತಿಪ್ಪೆಯ ಮೇಲೆ ಅಂಗಾತ ಬಿದ್ದಿದ್ದನು. ಸುಮಾರು ಹೊತ್ತು ಸುಮಾರು ಬಂದೂಕುಗಳು ದಡಲ್ಲು…ದಡಲ್ಲು… ಅಂತ ಮಾಡುತ್ತಿದ್ದ ಸದ್ದು ವರಕು ವರಕು ಸದ್ದಿನೊಡನೆ ಅಂತರ್ಧಾನವಾದ ಮೇಲೆ ಒಂದು ನಮೂನೆಯ ಕ್ರೂರ ಮೌನ ಆ ದೊಡ್ಡಿಯಲ್ಲಿ ನೆಲಸಿತು. ಹೃದಯವಿದ್ರಾವಕವಾಗಿ ಎಲುಗ ಒಂದೊಂದೆಜ್ಜೆ ಇಡುತ್ತ, ದೊಡ್ಡಿ ಪ್ರವೇಶಿಸಿ ಹುತಾತ್ಮಗಳಾಗಿ ಬಿದ್ದಿದ್ದ ಹಂದಿಗಳ ಅಂತರಾತ್ಮಗಳಿಗೆ ಕೇಳಿಸುವಂತೆ ಲಬೋ ಲಬೋ ಅತ್ತನು. ಪೊಲೀಸರಿಗೆ ಹೆದರಿ ತತ್ತಿಹಾಕಿ ಹಟ್ಟಿಯೊಳಗಡೆ ಅದುವರೆಗೂ ಅವಿತಿದ್ದ ಆಜುಬಾಜು ಕೊರಚರು ಒಬ್ಬೊಬ್ಬರಾಗಿ ನಿಟ್ಟುಸಿರಿಡುತ್ತ ಬಂದು ಮಣ್ಣಲ್ಲಿ ಮಣ್ಣಾಗಿ ಕಣ್ಣೀರಿಡುತ್ತಾ ಕಳೇಬರಗಳಲ್ಲಿ ಕಳೇಬರವೊಂದಾಗಲು ತಹತಹಿಸುತ್ತಿರುವವನಂತೆ ಎಲ್ಲರಿಗೂ ಕಂಡುಬಂದ ಎಲುಗನನ್ನು ಪರಿಪರಿಯಾಗಿ ಸಂತೈಸಿದರು. ತನ್ನ ಹಂದಿಗಳಿಗೆ ತಲಾ ಒಂದೊಂದು ಹೆಸರಿಟ್ಟಿದ್ದರೆ ಹೆಸರಿನ ಮೂಲಕ ಗುಣಗಾನ ಮಾಡುತ್ತಾ ಅಳಬಹುದಿತ್ತು ಎಂದು ಪಶ್ಚಾತ್ತಾಪಪಟ್ಟವನಂತೆ ಕ್ಷಣಹೊತ್ತು ಮುಖ ಮಾಡಿದ್ದ ಎಲುಗನನ್ನು ಕಲ್ಲಗ ಒತ್ತಾಯದಿಂದ ಗಡಂಗಿಗೆ ಕರೆದೊಯ್ದು ಎರಡು ಗಳಾಸು ಕುಡಿಸಿ ಸುಮ್ನಿರು ಪರಪಂಚ ದೊಡ್ಡದೈತಿ… ಎಂದುಕು ಎಡುಸ್ತಾವ್ರಾ ಊರುಕುಂಡು ಎಂದು ಹೇಳಿ ಸುಮ್ಮನಿರಿಸಿದನು.
ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು
ತಿರುಪತಿ ತಿಮಪ್ಪ ದೇವರಿಗೆ ರವಷ್ಟು ದಯವಿದೆ ಎಂದು ಎಲುಗಗೆ ನಂತರ ಯಾಕೆ ಹೊಳೆಯಿತೆಂದರೆ ಅವನು ಅವತ್ತು ಅಚಾನಕ್ ದೊಡ್ಡಿಗೆ ಪ್ರವೇಶಿಸಿದಾಗ ಅಷ್ಟು ಕಳೇಬರಗಳ ನಡುವಿನಿಂದ ಒಂದು ಹಂದಿ ಕಂದಮ್ಮ ಸಿನಿಮಾ ಹಿನ್ನೆಲೆ ಗಾಯಕಿಯಂತೆ ಲಘುವಾಗಿ ಸ್ವರ ಹೊರಡಿಸುತ್ತ ಹೊರಬರುತ್ತಿರಲು ತಿಣುಕುತ್ತಿರುವುದು ಕಂಡಿತು. (ಪೊಲೀಸರನ್ನು ಕಂಡಿದ್ದೇ ತುಂಬು ಬಸಿರಿಯಾಗಿದ್ದ ಹಂದಿ ಲಿಟಕ್ಕನೆ ಹಡೆದುಕೊಂಡಿತ್ತು.) ಹೋಗಿ ಎತ್ತಿಕೊಂಡ ಕೈಗೆ ಹಸಿಹಸಿಯಾದ ಲಸಿಗೆ ತಗುಲಿತು. ಹಟ್ಟಿಗೊಯ್ದು ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ಅದರ ಮೈ ತೊಳೆದ. ಅವರ ಕಿರುದನಿಯನ್ನು ಆಲಿಸಿದ. ಇದಕ್ಕೆ ತಾಯಿಯ ಮೊಲೆಯುಣ್ಣುವ ಭಾಗ್ಯ ಇಲ್ಲದಾಯಿತೇ ಎಂದು ಹಲುಬಿದ. ಕೊಳ್ಳಿ ಇರಬದುರಿಯ ಚಾದಂಗಡಿಯಿಂದ ನಾಕಾಣಿ ಹಾಲು ತಂದು ಪಜೀತಿಪಟ್ಟು ಕುಡಿಸಿದ. ಹಟ್ಟಿ ಎಂಭೋ ಪಟ್ಟಿಯನ್ನು ಗವ್ವನೆ ಕವಿದುಕೊಂಡಿದ್ದ ಕತ್ತಲಲ್ಲಿ ಅದರ ಲಿಂಗ ನಿರ್ಧಾರ ಮಾಡಲು ಎಲುಗನಂಥ ಮನುಷ್ಯನಿಂದ ಸಾಧ್ಯವಾಗಲಿಲ್ಲ. ಹಂತ ಹಂತವಾಗಿ ಬೆಳಕು ಹರಿದ ಸೊಲುಪ ಹೊತ್ತಿಗೆ ಬೆಳಕು ಬೆಳ್ಳಗೆ ಹರಡಿದ ಮೇಲೆ ಮರಿಯ ಹಿಂಗಾಲು ಕಿಸಿದನು. ಸಣ್ಣ ಶಿಶ್ನ ಕಂಡಿತು. ಭಪ್ಪರೆ ಬೋಳಿ ಮಗಂದು ಗಂಡು ಎಂದು ಗುನುಗಿದನು. ತನ್ನ ಮಾವನೇ ಈ ರೂಪ ಧರಿಸಿ ಬಂದಿರಬಹುದೇ ಎಂದು ಅನುಮಾನಿಸಿದನು. ಶ್ರೀಕೃಷ್ಣಪರಮಾತುಮ ದುಷ್ಟ ಶಿಕ್ಷಣ ಮಾಡಲು, ಶಿಷ್ಟ ರಕ್ಷಣೆ ಮಾಡಲೋಸುಗ ಹಂದಿರೂಪ ಧರಿಸಿದ್ದ ಎಂದು ಕೇರಿಯ ಯಜಮಾನ ಮನುಷ್ಯ ಸೂಕ್ರಪ್ಪಜ್ಞ ಹೇಳುತ್ತಿದ್ದುದು ನೆನಪಿಗೆ ಬಂತು. ಅಹಹಾ…ಅಂದನು ಅದೇ ಸ್ರೀಕುರಸ್ಣ ಪರಮಾತುಮನು ಈಗ ಹಂದಿ ರೂಪ ಧರಿಸಿರೋದು ದುಷ್ಟರಾದ ಪೊಲೀಸಪ್ಪಂದಿರನ್ನು ಶಿಕ್ಷಿಸುವುದಕ್ಕಾಗಿ ಎಂದು ಇದ್ದಕ್ಕಿದ್ದಂತೆ ಅಂದುಕೊಂಡನು. ರೋಮಾಂಚನ ಹುಟ್ಟಿತು. ನಡುಗಿನು. ಇಡೀ ಮುಖದ ತುಂಬ ಮುಗುಳ್ಳಗೆ ಎಂಬುವುದು ಢಳಾರನೆ ತುಂಬಿಕೊಂಡಿತು. ಇದಕ್ಕೆ ಯ್ಯೋನಂತ ಎಸರಿಡುವುದಪ್ಪಾ ಸಿವನೇ ಎಂದು ಯೋಚಿಸಿಯೇ ಯೋಚಿಸಿದನು. ಈ ಎಲ್ಲರ ಗಂದರ ಗೋಳದ ನಡುವೆ ಅವನ ಮಡ್ಡು ತಲೆಗೆ ಯಾವ ಹೆಸರೂ ಈಸಿಯಾಗಿ ಹೊಳೆಯದಿದ್ದಾಗ ಚವುಡ ಅಂತ ಹೆಸರಿಟ್ಟು ಕರೆದನು. ಆ ಹೆಸರು ಒಪ್ಪಿಗೆ ಎಂಬ ರೀತಿಯಲ್ಲಿ ಹಂದಿಮರಿ ಪುಟ್ಟ ಬಾಯಿ ತೆರೆದು ವರಕು ವರಕು ಅಂದಿತು. ದಾ…ಲವುಡಿ ಮಗಂದು ನನ್ಕೂಡ ಮಾತಾಡ್ತದೆ ಎಂದು ಅವನು ಅದರ ಕಂದುಬಣ್ಣದ ಕದಪಿಗೆ ಲೊಚಕ್ಕನೆ ಮುದ್ದುಕೊಟ್ಟನು.
ಹೀಗೆ ಎಲುಗನ ಕಣ್ಣಿನಂಗಳದಲ್ಲಿಯೇ ಚವುಡ ಎಂಬ ಹೆಸರು ಮುಡಿದುಕೊಂಡ ಹಂದಿಯು ಬಿದಿಗೆಯ ಚಂದಿರನಂತೆ ದಂಡುದುಂಡಗೆ, ಬೆಳ್ಳಬೆಳ್ಳಗೆ ಬೆಳೆಯತೊಡಗಿತು. ಒಂದೀಟು ಹೊಲಸು ತಿನ್ನುವುದು ಕಲಿಸಬಾರದೆಂದು ಅವನು ಚವುಡನನ್ನು ತನ್ನ ಕಣ್ಣಿನಿಂದ ತಪ್ಪಿಸಿಕೊಂಡು ಹೋಗದ ಹಾಗೆ ಕಾಯ್ದುಕೊಂಡಿದ್ದನು. ಮೊದಮೊದಲು ದಿನಕ್ಕೆರಡು ಬಾರಿ ಹಾಲು ಕುಡಿಯುತ್ತಿದ್ದ ಅದಕ್ಕೆ ಅದರ ಮೇಲ್ದವಡೆಯಲ್ಲಿ ಆರೂ, ಕೆಳದವಡೆಯಲ್ಲಿ ಏಳೂ ಹಲ್ಲುಗಳು ಮೊಳೆತಿರುವುದು ಖಾತ್ರಿ ಮಾಡಿಕೊಂಡು ತನ್ನ ಪಾಲಿನ ಊಟದಲ್ಲಿ ಪಾಲು ತೆಗೆದಿಟ್ಟು ಅದಕ್ಕೆ ತಿನ್ನಿಸುತ್ತಿದ್ದನು. ಸಭ್ಯಸ್ಥ ಕೊರಚನಿಗಿಂತಲೂ ನಾಗರಿಕವಾಗಿ ಬೆಳೆಯತೊಡಗಿದ ಚವುಡನ ಮೇಲೆ ಎಲ್ಲರಿಗೂ ಆಸ್ಥೆ ಇಲ್ಲದಿರಲಿಲ್ಲ. ಒಂದಿಬ್ಬರು ಎಲುಗನ ಮುಂದೆ ಬಾಯಿ ಹಾಕಿ ಹನಸಿ ಮಂಗಗಳಾಗಿದ್ದರು. ಚವುಡ ಬೇರೆಯಲ್ಲ ಚೌಡಾಪುರದ ದೇವರು ಚೌಡಮ್ಮ ಬೇರೆ ಅಲ್ಲ ಎಂದು ಅರ್ಥ ಬರುವಂತೆ ವಿವರಿಸಿ ಹೇಳಿ ಎಲ್ಲರಿಗೂ ಅದರ ಮೇಲೆ ಗೌರವ ಮೂಡಿಸಿದ್ದನು. ಕ್ರಮೇಣ ಇಡೀ ಕೇರಿಯ ಮಗನಂತೆ ದಿನಕ್ಕೊಂದು ಛಂದದಲ್ಲಿ ಬೆಳೆಯತೊಡಗಿ ಚವುಡಗೆ ಯಾವುದೇ ಅಳುಕು ಇರಲಿಲ್ಲ. ತನ್ನ ಭಾಷೆ ಎಲ್ಲರಿಗೂ ಅರ್ಥವಾಗುತ್ತಿದೆ ಎಂದು ತಿಳಿದುಕೊಂಡಿರುವಂತೆ ಅದು ಎಲುಗನ ಮುಂದೆ, ಕಲ್ಲುಗನ ಮುಂದೆ, ಸಕ್ರನ ಮುಂದೆ, ಬಾಳನ ಮುಂದೆ, ಲಚ್ಚುಮಿಯ ಮುಂದೆ ಹೀಗೆ ಎಲ್ಲರ ಮುಂದೆಯೂ ಅದು ವರಕು ಎರಕು ಅಂತ ಶಬ್ದ ಮಾಡುತ್ತಿದ್ದಿತು. ಆಗ ಕೆಲವರಾದರೂ ಹ್ಹ, ಹ್ಹ ಅಂತ ನಗುವುದರ ಜೊತೆಗೆ ಅದಕ್ಕೆ ತಿನ್ನಲು ಚೂರುಪಾರು ರೊಟ್ಟಿಯನ್ನಾದರೂ ಕೊಡುತ್ತಿದ್ದರು.
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ಕೇರಿಯ ಸಮಸ ಹಂದಿಗಳೆಲ್ಲ ಪೊಲೀಸರ ಬಂದೂಕುಗಳಿಗೆ ನಿರ್ನಾಮವಾದ ಮೇಲೆ ಎಲುಗನೂ ಸೇರಿದಂತೆ ಅನೇಕ ಮಂದಿ ಕೊರಚರ ಬದುಕು ಡೋಲಾಯಮಾನವಾಗಿತ್ತು. ಎಂಟಾಣೆ ಸೊಳೆಯರ ಸೆರಗಿಗೆ ಅಂಟಿದ ಸೋವಿ ದರದ ಘಮ್ಮಂದೆಣ್ಣೆಯಾಗಿತ್ತು. ಎಲ್ಲರಿಗೂ ತಮ್ಮ ಬದುಕಿನ ಫಜೀತಿ ಅರ್ಥವಾಗಿತ್ತು. ಮುಕ್ಕಾಲುವಾಸಿ ಮಂದಿ ಊರ ಸುತ್ತಮುತ್ತಲ ಚಿಲ್ಲರೆ ಪಲ್ಲರೆ ಕಳ್ಳತನ ಮಾಡತೊಡಗಿದ್ದರೆ ಇನ್ನು ಕೆಲವರು ಕೂದಲು ಯಾಪಾರ ಮಾಡಲು ಬಾಧ್ಯಸ್ಥರಾಗಿದ್ದರು. ಆದರೆ ಎಲುಗ ಮಾತ್ರ ಅತ್ತ ಕಳ್ಳತನವನ್ನೂ ಮಾಡದೆ, ಇತ್ತ ಕೂದಲು ಯಾಪಾರವನ್ನು ಸಹ ಮಾಡದೆ ಹೇಗೋ ಒಂದು ರೀತಿಯಲ್ಲಿ ಚವುಡನ ಕಣ್ ಪ್ರೀತಿ ನೋಡುತ್ತ ಬದುಕು ದೂಡುತ್ತಿದ್ದನು.
ಈ ರೀತಿಯಲ್ಲಿ, ತನ್ನೊಂದು ಹೊಟ್ಟೆ ಹೊರೆಯಲು ತಿಣುಕುತ್ತಿದ್ದ ಎಲುಗಗೆ ಬತ್ತನಳ್ಳಿಯ ರಾಮ ಅದು ಹೇಗೆ ತನ್ನ ಮಗಳು ಕೊಟ್ರಿಯನ್ನು ಮದುವೆ ಮಾಡಿಕೊಟ್ಟಾನು. ಮೊನ್ನೆ ಮೊನ್ನೆಯವರೆಗೂ ಕ್ವಟ್ರಿ ಎಲುಗನ ಕನಸಿನ ಹಚ್ಚಡದೊಳಗೆ ನುಗ್ಗಿ ಕಾಟ ಕೊಡುತ್ತಿದ್ದುದುಂಟು. ತಾಡಿಯನ್ನು ಮರೆಯಲೆಂದೋ ಅಥವಾ ಚವುಡನ ಮೇಲಿನ ಪ್ರೀತಿಗಾಗಿಯೋ ಎಲುಗ ಪ್ರೇಮದಿಂದ ವಂಚಿತನಾಗಿ ಬೆಳೆದಿರುತ್ತಿದ್ದ ಗಡ್ಡವನ್ನು ಬಹಳ ಬಹಳ ದಿನಗಳವರೆಗೆ ಹಜಾಮರ ಎಂಟಾಣೆ ಕತ್ತಿಗೆ ಒಪ್ಪಿಸುತ್ತಿರಲಿಲ್ಲ. ಗಂಟೆಗಟ್ಟಲೆ ಎಡಗೈಯನ್ನು ಗಡ್ಡದ ಮೇಲೂ, ಬಲಗೈಯನ್ನು ಚವುಡನ ಮೈಮೇಲೂ ಇಟ್ಟು ಕೂತುಬಿಡುತ್ತಿದ್ದನು. ತನ್ನ ಯಜಮಾನನ ಚಿಂತೆಯನ್ನು ಅರ್ಥಮಾಡಿಕೊಂಡಂತೆ ಚವುಡ ಒಮ್ಮೊಮ್ಮೆ ಜೋರಾಗಿ ವದರುವದು. ಹೀಗೆ ಎಲುಗಗೂ, ಚವುಡಗೂ ಜನ್ಮಾಂತರದ ಸಂಬಂಧವಿದ್ದರೂ ಇರಬಹುದೆಂದು ಕೊಳ್ಳಿ ಇರಬದುರಿ ಅವರಿವರ ಬಳಿ ಸವುಡು ಸಿಕ್ಕಾಗ ಆಡಿಕೊಳ್ಳುತ್ತಿದ್ದುದು ಉಂಟು. ಯಾರು ಏನೇ ಅಂದುಕೊಳ್ಳಲಿ ಎಲುಗ ಮಾತ್ರ ಚವುಡ ದಷ್ಟಪುಷ್ಟವಾಗಿ ಬೆಳೆದು ನಿಂತಿರುವುದು ಅರ್ಥಮಾಡಿಕೊಂಡು ಅದಕ್ಕೊಂದು ಹೆಣ್ಣು ತರಲು ಬಲಕುಂದಿ, ಹಂಚಿನಾಳು, ಸಿರಗುಂಪಿ, ಕುಡುತಿನಿ ಮುಂತಾದ ಊರುಗಳಿಗೆ ಹೋಗಿಬಂದ. ಬಹುಪಾಲು ಹಂದಿಗಳು ಪೊಲೀಸರ ಬದೂಕುಗಳಿಗೆ ಬಲಿಯಾಗಿದ್ದರಿಂದ ಉಳಿದವುಗಳಿಗೆ ಡಬ್ಬುಲ್ಲು ರೇಟು, ನೂರು ರೂಪಾಯಿಗಿಂತ ಕಡಿಮೆಗೆ ಒಂದು ಹಂದಿ ಸಿಕ್ಕುವುದು ಸಾಧ್ಯವಿರಲಿಲ್ಲ. ಚವುಡಗೆ ಸರಿಸಮನಾದ ಕಂದುಬಣ್ಣದ ಹರೆಯ ವಯಸ್ಸಿನ ಹೆಣ್ಣು ಹಂದಿಯೊಂದನ್ನು ಕೇವಲ ಐವತ್ತಕ್ಕೆ ಸಿಕ್ಕರೆ ಚವುಡವ್ವಗೆ ಕಾರುಣ್ಣುವಿಯದಿನ ಕಾಯಿ ಒಡೆಸೇನು ಅಂತ ಅಂದುಕೊಂಡೇ ಎಲುಗ ಇಡೀ ವಾರ ತಿರುಗಿದ್ದ. ತನ್ನ ಯೌವನದ ಹಾಗೆ ಚವುಡನ ಯೌವನವು ವೃಥಾ ವೇಸ್ಟಾಗಬಾರದೆಂದು ಅವನು ದೃಢಸಂಕಲ್ಪ ಮಾಡಿದವನಂತೆ ಮುಖ ಬಿಗಿದಿರುತ್ತಿದ್ದನು.
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
ಈ ಮಧ್ಯೆ ಯಜಮಾನನಾದ ಎಲುಗನು ತನಗೊಂದು ಹೆಣ್ಣು ತರಲು ವಾರಗಟ್ಟಲೆ ಹೋಗಿರುವನು ಎಂಬ ಅರಿವು ತಂದುಕೊಳ್ಳದೆ ಚವುಡನು ರಾತ್ರಿಯಾಯಿತೆಂದರೆ ಹಟ್ಟಿ ದಾಟುವುದನ್ನು ಇತ್ತೀಚೆಗೆ ಕಲಿತುಕೊಂಡಿದ್ದನು. ಒಂದೇ ನಮೂನೆಯ ಕೂಳು ತಿಂದೂ ತಿಂದು ಅದರ ನಾಲಗೆಯು ತುಸು ಹಳಸಿದಂತಾಗಿತ್ತು. ಅಗಲವಾದ ಮೂತಿಗೆ ಅಂಟಿಕೊಂಡಂತಿರುತ್ತಿದ್ದ ಮೂಗು ವಾಸನೆ ಹಿಡಿಯಲು ಸಹಜವಾಗಿ ಕಲಿತುಕೊಂಡಿತ್ತು. ಯಾವ ಪದಾರ್ಥ ಯಾವ ವಾಸನೆ ಇರುತ್ತದೆ ಎಂಬ ಜ್ಞಾನ ಚವುಡನ ಮೂಗಿನೊಳಗಿನ ತಂತುಗಳಲ್ಲಿ ಮೊಳೆತಿತ್ತು. ಮೈ ಕೈಕಾಲು ಜವ್ವ ಹಿಡಿದಂತಾಗಿ ಅದು ಸುಮ್ಮನೆ ಕುಂತಲ್ಲಿ ಕುಂಡ್ರದೆ ತೀರಾ ಸೋಜಿಗವಾಗಿ ಹಟ್ಟಿ ದಾಟುತ್ತಿತ್ತು. ಬೆಳಕಿಗೆ ಅದರಲ್ಲೂ ಬೀದಿಯ ವಿದ್ಯುತ್ ದೀಪಗಳಿಗೆ ಅಸಹ್ಯಪಟ್ಟುಕೊಂಡಂತೆ ಅದು ಬಸವನ ಬಾವಿ ತಗ್ಗನ್ನು ಮಾದಿಗರೋಣಿ ಚಲವಾದೇರ ಓಣಿಯಿಂದ ಹಾದು ಬ್ರಾಂಬ್ರ ಓಣಿಯ ಮೂಲಕ ಗೌಡರ ಅಥವಾ ಲಿಂಗಾಯ್ತರ ಓಣಿ ಸೇರುತ್ತಿತ್ತು. ಕೆಳಗೇರಿಯ ಓಣಿಗಳನ್ನು ದಾಟುವಾಗ ಅದು ಮೂಲೆ, ಹಾದಿಬದಿಯ ಕುಪ್ಪೆಗಳನ್ನು ಗಮನಿಸದೆ ಇರುತ್ತಿರಲಿಲ್ಲ. ಅಗಲವಿದ್ದ ತನ್ನ ಮೂತಿಯ ಸಹಾಯದಿಂದ ಮೇಲಿನ ಹಕ್ಕಳೆಯನ್ನು ಬಿಟ್ಟು ತಿರುಳನ್ನಷ್ಟೆ ತಿನ್ನುತ್ತಿದ್ದ ಜಾಣ ಹಂದಿಯದು. ತಿಂದನಂತರ ಅದು ಪುಲಕಗೊಂಡಿರುವಂತೆ ಸದ್ದು ಮಾಡುವುದು. ಮೂತಿಯನ್ನು ನೆಲಕ್ಕಂಟಿಸಿಕೊಂಡು ಚವುರಿಯಾಕಾರದ ಮೋಟು ಬಾಲವನ್ನು ಅರ್ಧ ಚಂದ್ರಾಕೃತಿಯಲ್ಲಿ ಅತ್ತಿತ್ತ ಬೀಸಾಡುತ್ತ ಬಸವನ ಬಾವಿ ತಗ್ಗಿನ ಹೆಣ್ಣು ಮಕ್ಕಳ ಪಾಯ್ಖಾನೆಯನ್ನು ಜಾಲಾಡಿ ಬ್ರಾಂಬ್ರ ಓಣಿ ಕಡೆ ಮುಖ ಮಾಡುತ್ತಿದ್ದ ಅದರ ಮೈತುಂಬ ಹೇಸಿಗೆ ಮೆತ್ತಿರಲಿಲ್ಲ. ಅನೇಕ ವಿಧದ ವಾಸನೆ ಅದರ ಮೈಮೂಲಕ ಹೊರ ಹಾಯುವುದು.
ರಾಮಭಟ್ಟರ ಮನೆಯ ಕಸವನ್ನೊಮ್ಮೆ ಜಾಲಾಡಿ ಬೃಂದಾವನದ ಕಡೆ ಹೋಗುತ್ತಲೆ ರಾಮ ರಾಮ ನಿನ್ನ ಪಾದಕ್ಕೆ ನನ್ನ ಸೇರಿಸ್ಕೊಂಡುಬಿಡು ಎಂದು ಅದೇ ತಾನೆ ಮಗ್ಗುಲು ಹೊರಳಿರುತ್ತಿದ್ದ ರಿಂದಮ್ಮ ಚವುಡನನ್ನು ಕಂಡು ಹೌಹಾರಿ ತೊಲಗಾಚಿ ಮುಂಡೇದೆ ಎಂದು ಗದರಿಸುತ್ತಿದ್ದುದು ಸರ್ವೆಸಾಮಾನ್ಯ. ಕೆಳಗೇರಿಯ ವಾಸನೆಯನ್ನು ಮೇಲಗೇರಿಯ ಓಣಿಯಲ್ಲಿ ಬಿತ್ತುತ್ತ ನಿಧಾನವಾಗಿ ನಡೆಯುವ ಅದರ ವೈಖರಿಯನ್ನು ನೋಡುವುದೇ ಒಂದು ಸೊಗಸು. ಅದು ಬರುತ್ತಿದೆ, ಅದನ್ನು ಗದರಿಸಿ ಗದುಮುವುದರ ಮೂಲಕ ಓಣಿಯ ನೈರ್ಮಲ್ಯವನ್ನು ಕಾಪಾಡಬೇಕೆಂದು ಶಪಥ ತೊಟ್ಟವಳಂತೆ ಎಚ್ಚರವಿರುತ್ತಿದ್ದ ಕುಂಬಾರ್‍ರ ನಿಂಗಮ್ಮಗೂ ಚವುಡಗೂ ಮಧ್ಯೆ ಒಮ್ಮೊಮ್ಮೆ ಕಬಡಿ ಆಟವೇ ನಡೆದುಬಿಡುವುದು. ಒಂದೆರಡು ಬಾರಿ ನಿಂಗಮ್ಮ ಗೆದ್ದಿರಬಹುದಾದರೂ, ಚವುಡಗೆ ಗೆಲುವೆಂಬುದು ತೃಣ. ಅದು ನಡೆದದ್ದೇ ರಾಜಬೀದಿ.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
ಹೀಗಾಗಿ ಚವುಡ ಅನೇಕ ಕಾರಣಗಳಿಂದ ಕೆಳಗೇರಿಯವರಿಗೆ ಪ್ರಿಯವಾಗಿದ್ದರೆ ಮೇಲಗೇರಿಯ ಎರಡು ಮೂರು ಓಣಿಗಳವರ ಸಾಮೂಹಿಕ ಕೋಪಕ್ಕೆ ಗುರಿಯಾಗಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. ಚವುಡಗೊಂದು ಹೆಣ್ಣು ಗಂಟುಹಾಕಿ ಅದರ ಸಂಸಾರ ಚಂದ್ರೋದಯವನ್ನು ಕಣ್ತುಂಬ ನೋಡಬೇಕೆಂಬ ಉಮೇದಿಯಲ್ಲಿದ್ದ ಎಲುಗ ದಿನಕ್ಕೆರಡೊಪ್ಪತ್ತು ಕಲಗಚ್ಚು ಹಾಕುತ್ತಿದ್ದರೂ ಸಹ ಅದಕ್ಕೆ ಬಸವನ ಬಾವಿಯ ತಗ್ಗು ತುಂಬ ಪ್ರಿಯವಾಗಿತ್ತು. ಸಾಮಾನ್ಯ ಹಂದಿಗಳಂತೆ ಚವುಡನೂ ಸಹ ಹೊಲಸಿಗೆ ಹಲ್ಲು ಹತ್ತಿರುವುದು ಎಲುಗಗೆ ಸಹಿಸಲಾಗಿರಲಿಲ್ಲ. ತನ್ನ ಪ್ರೀತಿ ವಿಶ್ವಾಸವನ್ನು ಕಡೆಗಣಿಸಿರುವ ಇದು ಇದ್ದರೆಷ್ಟು ಎಂದು ಒಮ್ಮೊಮ್ಮೆ ನಿರ್ಧರಿಸಿ ಸಮಾಧಾನ ತಂದುಕೊಂಡಿದ್ದು ಉಂಟು. ಚವುಡ ಎಲಗಗೆ ರವ್ವಸ್ಟು ಹೆದರುತ್ತಿತ್ತಾದರೂ ಲಚ್ಚುಮಿಗೆ ‘ಕೇರೇ’ ಮಾಡುತ್ತಿರಲಿಲ್ಲ. ಇಂಥ ಹಂದಿಯನ್ನು, ಅದರಲ್ಲೂ ವಯಸ್ಸಿಗೆ ಬಂದಿರುವ ಚವುಡನೆಂಬ ಹೆಸರಿನ ಹಂದಿಯನ್ನು ನಾಲ್ಕು ಮೂಲೆಯ ಒಂದು ದೊಡ್ಡಿಯಲ್ಲಿ ಕೂಡಿಹಾಕಲು ಅಸಾಧ್ಯ.
ಕ್ರಮ ಕ್ರಮೇಣ ಎಲುಗನೂ ಸಹ ತನ್ನ ಪ್ರೀತಿಯ (ಮಗನೋಪಾದಿಯಂತಿದ್ದ) ಸಾಕು ಹಂದಿಯ ವೈಯಕ್ತಿಕ ಸಾತಂತ್ರ್ಯಕ್ಕೆ ಧಕ್ಕೆ ತರದೆ ತನ್ನ ಪಾಡಿಗೆ ತಾನಿದ್ದುಬಿಟ್ಟ. ಚವುಡನ ಆವಶ್ಯಕತೆಗಳನ್ನು ಪೂರೈಸಲು ಯಾವುದೋ ರೀತಿಯ ಯೋಚನೆಗಳ ಗುಂಗಿನಲ್ಲಿದ್ದು ಬಿಡುತ್ತಿದ್ದ.
2
ಕೆಳಗೇರಿಯ ಮತ್ತು ಮೇಲಗೇರಿಗಳ ನಡುವೆ ಅಪರೂಪದ ಕ್ರಾಂತಿಕಾರಕ ಸೇತುವೆಯನ್ನು ಪೂರ್ಣಗೊಳಿಸಲು ದಿನನಿತ್ಯ ಹೋರಾಡುತ್ತಿದ್ದ ಚವುಡ ಪ್ರೀತಿ ವೈಷಮ್ಯಗಳ ದ್ವಂದ್ವದ ವಸ್ತುವಾಗಿತ್ತು. (ಊರಿನ ಕ್ರಾಂತಿಕಾರಿ ಕವಿ ಕೊಟ್ರಪ್ಪ ಚವುಡನನ್ನು ಅಸ್ಪೃಶ್ಯತಾ ನಿವಾರಣೆಗೆ ಹೋರಾಡುತ್ತಿರುವ ಕ್ರಿಯಾಶೀಲ ಹೋರಾಟಗಾರನಿಗೆ ಹೋಲಿಸಿ ಬರೆದಿದ್ದ ಎಪ್ಪತ್ತೆರಡು ಸಾಲಿನ ಒಂದು ಕವನ ಜಿಲ್ಲೆಯ ಪ್ರಮುಖ ವಾರಪತ್ರಿಕೆಯಾದ ಕ್ರಾಂತಿ ಜ್ಯೋತಿಯಲ್ಲಿ ಪ್ರಕಟವಾಗಿ ಅನೇಕ ಸಾಹಿತಿಗಳ ಮೆಚ್ಚುಗೆ ಗಳಿಸಿತ್ತು ಎಂಬುದನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬಹುದಾಗಿದೆ.)
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಒಂದು ದಿನ ರಾತ್ರಿ ಕೆಳಗೇರಿಯ ನೈರ್ಮಲ್ಯ ಕಾಪಾಡುತ್ತ ಚವುಡ ಮೇಗಳಗೇರಿಗೆ ಬರುವ ಹೊತ್ತಿಗೆ ಸಾಕಾಗಿತ್ತು. ವಾಸನೆ ಹೊತ್ತು ಘಮ್ಮನೆಣ್ಣೆ ಹಚ್ಚುತ್ತ ಬಂದ ಅದು ರಿಂದಮ್ಮನನ್ನಾಗಲಿ, ನಿಂಗಮ್ಮನನ್ನಾಗಲಿ ಲೆಕ್ಕಿಸದೆ ಮುಂದೆ ಮುಂದೆ ಸಾಗಿತು. ಎಸ್.ಡಿ.ಸಿ. ಸದಾಶಿವಯ್ಯನವರ ಅಂಗಳವನ್ನೊಮ್ಮೆ ಜಾಲಾಡಿ, ತೊಟ್ಟಿಲು ಮಠದ ಪಾದಗಟ್ಟೆ ಏರಿ ಬಲಕ್ಕೆ ಹೊರಳುವಾಗ ಮಾಜಿ ಗ್ರಾಮಪಂಚಾಯ್ತಿ ಸದಸ್ಯರೂ, ಓಲ್ಡ್ ಮದ್ರಾಸ್ ಎಸ್.ಎಸ್.ಎಲ್.ಸಿ. ಪದವೀಧರರೂ ಆಗಿದ್ದ ಜಾಟಗೆರೆ ಸಣ್ಣ ಸಿದ್ದನಗೌಡರ ಬಾಗಿಲು ತೆರೆದ ಮನೆ ಕಣ್ಣಿಗೆ ಬಿತ್ತು. ಒಂಬತ್ತು ಗಂಟೆಗೆಲ್ಲಾ ಗಪ್ಪನೆ ಮಲಗಿ ಬಿಟ್ಟಿರುತ್ತಿದ್ದ ಗೌಡರ ಎಂಟು ಅಂಕಣದ ಮನೆಯಲ್ಲಿ ಮಧ್ಯರಾತ್ರಿ ಸಮೀಪಿಸುತ್ತಿದ್ದರೂ ಲೈಟಿರುವುದಕ್ಕೊಂದು ಕಾರಣವಿದೆ. ಹೆಂಡತಿ ಮಕ್ಕಳು ಮರಿ ಕಟ್ಟಿಕೊಂಡು ನಾಗರ ಪಂಚಮಿಗೆ ಅಂತ ತನ್ನ ತವರಾದ ಕಾನಾಮಡುಗಿಗೆ ಹೋಗಿದ್ದರಿಂದಾಗಿ ಗೌಡರು ತಮ್ಮೆದೆಯ ಮೇಲೆ ನಿಡಿದಾಗಿ ಬಿದ್ದಿದ್ದ ಲಿಂಗದ ಕಾಯಿಯನ್ನು ಆಚೆ ಈಚೆ ಸರಿಸಾಡುತ್ತ ಎದ್ದಿದ್ದರು. ತಮ್ಮ ಕೈಗೆ ಬಂದಿರುವ ಮಗ ವಿರೂಪಾಕ್ಷ ಈಗ ಎಲ್ಲಿಗೆ ಹೋಗಿರಬಹುದು ಎಂದು ಯೋಚಿಸುತ್ತ ಒತ್ತಾಯವಾಗಿ ಒಂದ ಮಾಡಲು ಗೋಡೆಮರೆಯ ಕತ್ತಲಲ್ಲಿ ಕಾಲು ಕಿಸಿದು ಕೂತಿದ್ದ ಗೌಡರು ಕಳೆದ ವಾರದಿಂದ ಕೀಲು ನೋವಿನಿಂದ ನರಳುತ್ತಿದ್ದರು.
ಯಾವ ಮನೆಯಲ್ಲಿ ಯಾವ ಮನುಷ್ಯರಿದ್ದಾರೆ ಎಂದು ಪೂರ್ವಾಪರ ವಿವೇಚಿಸದ ಚವುಡನನ್ನು ತೆರೆದ ಬಾಗಿಲು ಸೂಜಿಗಲ್ಲಿನಂತೆ ಸೆಳೆಯಿತು. ಕೆಲವು ಬೆರಳುಗಳ ತನ್ನ ನಾಕುಪಾದಗಳನ್ನು ಎಂದೋ ಹಾಕಿದ್ದ ರಂಗವಲ್ಲಿಯ ಮಾಸಲು ಗೆರೆಗಳ ಮೇಲೆ ಊರುತ್ತ ಅದು ತಲಬಾಗಿಲು ಪ್ರವೇಶಿಸಿತು. ಬರೀ ತಿಪ್ಪೆಗಳನ್ನು ನೋಡಿ ಗೊತ್ತಿದ್ದ ಅದಕ್ಕೆ ಗೌಡರ ಮನೆ ಒಂದು ಪುಟ್ಟ ಪ್ರಪಂಚದಂತೆ ಕಂಡಿತು. ಆ ಫೋಟೋಗಳು, ಆ ಗೋಡೆಗಳು, ಆ ಸಿಮಿಂಟು ನೆಲಗಳು, ಪಡಸಾಲೆ, ನಡುಲು ಮನೆ, ಬಚ್ಚಲುಮನೆ, ಪೂಜೆಯ ಮನೆ, ಅಡುಗೆಮನೆ ಹೀಗೆ ಸಾಗಿದ ಚವುಡ, ಚಕ್ರವ್ಯೂಹದಂತಿದ್ದ ಆ ಮನೆಯ ಅಂತರಂಗದ ಕಡೆ ಸರಿಯತೊಡಗಿದ. ಅದು ಹೊರಗೆ ಹೋಗಲು ಯಾವ ಕಾರಣಕ್ಕಾಗಿ ಅವಸರಿಸೀತು?
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
ಉಚ್ಚೆ ಕೆಲಸ ಮುಗಿಸಿ ಗೌಡರು ಅಂಗಳದಲ್ಲಿ ನಿಂತು ಗಣೇಶ ಬೀಡಿ ಸೇದತೊಡಗಿದ್ದಾಗ ಒಳಗಿನಿಂದ ಏನೋ ಸಪ್ಪಳ ಕೇಳಿಸಿದಂತಾಗಿ ಬೀಡಿ ಬೀಸ್ಯಾಡಿ ಸರಸರ ಒಳನಡೆದರು. ತನ್ನ ಪೂಜ್ಯ ಮಾತೆಯವರ ಹೆಣದ ಭಾವಚಿತ್ರದ ಕಡೆ ಕಣ್ಣು ಕೂಡ ಹಾಕದೆ ಯಾರದು ಒಳಗಿರೋದು ಎಂದು ಕೂಗುತ್ತ ಪಡಸಾಲೆ ದಾಟುವುದರಲ್ಲಿದ್ದ ಅವರಿಗೆ ಒಂದು ಕಪ್ಪನೆಯ ಆಯಾತಾಕೃತಿ ಪೂಜೆಮನೆಯಿಂದ ಅಡುಗೆಮನೆಗೆ, ಅಡುಗೆ ಮನೆಯಿಂದ ಪೂಜೆಮನೆಗೆ ಸರಿದಾಡುತ್ತಿರುವುದು ಕಂಡು ಅವರಿಗೆ ಒಂದು ಕ್ಷಣ ಏನೂ ತೋಚಲಿಲ್ಲ. ಈ ಮನೆಯಲ್ಲಿ ಮಾನವ ಪ್ರಾಣಿ ವಾಸವಾಗಿರಬಹುದೆಂದು ಎಳ್ಳಷ್ಟೂ ಯೋಚಿಸಿರದಿದ್ದ ಚವುಡ ಕೇವಲ ಒಂದು ಹಂದಿ ಎಂದ ಗೌಡರಿಗೆ ಗೊತ್ತಾಗುವ ಹೊತ್ತಿಗೆ ಅವರು ಬಹಳಷ್ಟು ಬೆವತಿದ್ದರು. ಆಗ ಅವರಿಗೆ ಏನು ಮಾಡಲೂ ತೋಚಲಿಲ್ಲ. ಸೀದ ಹೊರ ನಡೆದು ಅಂಗಳದಲ್ಲಿ ನಿಂತು ಕೂಗುಹಾಕಿದರು. ಗೌಡರ ಮನೆಗೆ ಕಳ್ಳರು ನುಗ್ಗಿರಬಹುದೆಂದು ಅವಸರದಿಂದ ಎದ್ದು ಬಂದ ಐದಾರು ಮಂದಿಗೆ ಗೌಡರ ಮನೆಗೆ ನುಗ್ಗಿರುವುದು ಹಂದಿ ಎಂದು ಗೊತ್ತಾಗಿ ಬಹಳ ನಿರಾಶೆಯಾಯಿತು. ಒಬ್ಬೊಬ್ಬರಾಗಿ ಮುಚ್ಚಿದ್ದ ಕದದಲ್ಲಿ ತಲೆ ತೂರಿಸಿ ಹಂದಿಯ ಅಗಲ ಗಾತ್ರಗಳನ್ನು ಕಣ್ಣಿಂದ ತೂಗಿ ಕಳೆದರು. ಬಿಳಿ ಬಣ್ಣದ ಗೋಡೆಗಳ ನಡುವೆ ಹಂದಿಯೊಂದು ಇಷ್ಟು ಸುಂದರವಾಗಿ ಕಾಣಿಸಬಹುದೆಂದು ಅವರಾರೂ ಯೋಚಿಸಲಿಲ್ಲ. ಮಂಗನ ಹಳ್ಳಿಯ ಶಂಭಯ್ಯ ಶಾಸ್ತ್ರಿಗಳು ಒಂದು ಮನೆ ಹೊಕ್ಕ ಹಂದಿಯನ್ನು ಹೊರಗೆ ಬಿಟ್ಟರೆ ಬಾಗಿಲಿಗೆ ಬಂದ ಲಕ್ಷ್ಮಿಯನ್ನು ಕತ್ತು ಹಿಡಿದು ಹೊರಗೆ ತಳ್ಳಿದಂತೆಯೇ ಸರಿ ಎಂದು ವ್ಯಾಕರಣಬದ್ಧವಾಗಿ ನುಡಿದರು. ಹಿರಿಯ ಅನುಭವಿಗಳೂ, ಮೇಲಾಗಿ ಶಾಸ್ತ್ರಿಗಳೂ ಆದ ಶಂಭಯ್ಯನವರ ಮಾತು ಕಿತ್ತು ಹಾಕುವ ಧೈರ್ಯ ಅಲ್ಲಿ ಯಾರೊಬ್ಬರಿಗೂ ಇರಲಿಲ್ಲ. ಎಲ್ಲರೂ ಹೌದು ಬುದ್ದಿ, ಎಂದೇ ತಲೆ ಹಾಕಿದರು. ಯಾವ ಅರ್ಥದಲ್ಲಿ ಹಂದಿಯನ್ನು ಲಿಂಗಾಯ್ತರಾದ ತಮ್ಮ ಮನೆಯಲ್ಲಿಟ್ಟುಕೊಳ್ಳುವುದೆಂದು ಗೌಡರಿಗೆ ಹೊಳೆಯಲಿಲ್ಲ. ಸೊಳ್ಳೆಯನ್ನು ಕೊಂದರೂ ಮಹಾಪಾಪ ಬರುತ್ತದೆ ಎಂದು ಅಹಿಂಸೆಯನ್ನು ಒಪ್ಪಿಕೊಂಡಿದ್ದ ಗೌಡರ ಮನೆತನ ಉದ್ದಕ್ಕೂ ಬಡ್ಡಿ ವ್ಯಾಪಾರಕ್ಕೆ ತುಂಬಾ ಹೆಸರುವಾಸಿ. ಹತ್ತರ ನೋಟು ಮುರಿಸಲು ವಿಲವಿಲನೆ ಒದ್ದಾಡುತ್ತಿದ್ದ ಗೌಡರಿಗೆ ತಮ್ಮ ಮನೆಗೆ ಹಂದಿರೂಪದಲ್ಲಿ ಲಕ್ಷ್ಮಿ ಬಂದಿರಬಹುದೆಂದು ಅನ್ನಿಸಿದಾಗ ನಿಜಕ್ಕೂ ರೋಮಾಂಚನಗೊಂಡರು. ಶಾಸ್ತ್ರಿಗಳ ನೇತ್ರತ್ವದಲ್ಲಿ ಆರು ಮಂದಿ ತಲಾಕೊಂದೊಂದು ಚೂಪನೆಯ ಆಯುಧಗಳನ್ನು ಹಿಡಿದುಕೊಂಡು ಬಂದು ಒಳನುಗ್ಗಿದರು.
ಒಮ್ಮೊಮ್ಮೆಗೆ ಆಯುಧ ಸಮೇತ ಎದುರಾದ ಆರು ಮಂದಿಯನ್ನು ಕಂಡ ಹಂದಿ ಗಲಿಬಿಲಿಗೊಳಗಾಯಿತು. ಗೌಡ ನಿನ್ ಏಟು ಹಂದಿ ಕುತ್ತಿಗೆಗೆ ಬೀಳಬೇಕು. ಸಿವಸಿವಾ ಅಂತ ಹಾಕಿಬಿಡು ಎಂದು ಶಾಸ್ತ್ರಿಗಳು ಅಪ್ಪಣೆ ಕೊಡಿಸಿದಾಗ ಆತನ ಮೈಯೊಳಗೆ ಶಕ್ತಿ ತುಂಬಿಕೊಂಡಿತು. ಸಿವಾಸಿವಾ ಎಂದುಚ್ಚರಿಸಿ ನಡುಗುತ್ತಿದ್ದ ಕೈಯಿಂದ ಕೊಡಲಿ ಎತ್ತಿ ದುರುಗುಟ್ಟಿ ನೋಡುತ್ತಿದ್ದ ಹಂದಿಯ ಕುತ್ತಿಗೆಗೆ ಗುರಿ ಇಟ್ಟು ಬೀಸಿದ. ರಕ್ತ ಜಿಲ್ಲನೆ ಪುಟಿಯಿತು. ಪ್ರಾಣಾಂತಿಕ ಸಂದರ್ಭ ಎದುರಿಸಿ ಗೊತ್ತಿರದಿದ್ದ ಚವುಡ ವಿಲಕ್ಷಣ ಧ್ವನಿಗೈಯ್ಯುತ್ತಾ ಓಡಾಡತೊಡಗಿತು. ಶಾಸ್ತ್ರಿಗಳ ನಿರ್ದೇಶದಲ್ಲಿ ಆರೂ ಮಂದಿ ತಲಾ ನಾಕೈದು ಹೊಡೆತಗಳನ್ನು ಹಾಕುವುದರ ಮೂಲಕ ಹಂದಿಯನ್ನು ನೆಲಕ್ಕೆ ಒರಗಿಸಿದರು.
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಮನೆ ತುಂಬ ರಕ್ತ, ಅವರೆಲ್ಲ ಸಹಜವಾಗಿ ಬೆವತಿದ್ದರು. ಮುಖವನ್ನು ಒರೆಸಿಕೊಳ್ಳುತ್ತ, ಏದುಸಿರು ಬಿಡುತ್ತ ರವ್ವಸ್ಟು ರವ್ವಸ್ಟು ಬುಸುಕಾಡುತ್ತ ಬಿದ್ದಿದ್ದ ಹಂದಿಯನ್ನು ತದೇಕಚಿತ್ತದಿಂದ ನೋಡುತ್ತಿದ್ದರು. ಶಾಸ್ತಿಗಳಿಗೂ ಸುಮ್ಮನೆ ನಿಲ್ಲಲಾಗಲಿಲ್ಲ. ಅವರಿಗೆಂಥದೋ ಹುಮ್ಮಸ್ಸು ಬಂದು ಗೌಡನ ಕೈಯಿಂದ ಕೊಡಲೆ ಇಸಿದುಕೊಂಡು ತಾವೊಂದು ಎರಡು ಏಟು ಹಾಕಿದರು. ಶಾಸ್ತ್ರಿಗಳ ತಲೆಗೆ, ಹಣೆಗೆ ರಕ್ತ ಚಿಲ್ಲನೆ ಸಿಡಿದಾಗ ಹಂದಿಯ ಜರ್ಜರಿತ ದೇಹದಿಂದ ಇಡೀ ಪ್ರಾಣ ಹೊರಟುಹೋಯಿತು.
ಇಷ್ಟು ಮಂದಿಯ ದಯದಿಂದ ತಾನಿನ್ನು ಲಕ್ಷಾಧೀಶ್ವರನಾದಂತೆಯೇ ಲೆಕ್ಕ ಎಂದು ನಿರುಮ್ಮಳವಾಗಿ ಉಸಿರುಬಿಟ್ಟ ಗೌಡ ಕೈಕಟ್ಟಿ ಕೂಡ್ರಲಿಲ್ಲ. ನಡಲ ಮನೆಯ ನಡುವೆ ಒಂದು ತಗ್ಗು ತೆಗೆದು ರಕ್ತಸಿಕ್ತವಾಗಿದ್ದ ಉಳಿದ ಮಂದಿಯ ಸಹಾಯದಿಂದ ಹಂದಿಯ ಕಳೇಬರವನ್ನದರಲ್ಲಿಟ್ಟು ಮುಚ್ಚಿ ಹಾಕಿದ.
ಬಟ್ಟೆಗೆ ಸಿಡಿದಿರೋ ಈ ರಕ್ತ ಸಾಬೂನಿಗೆ ಹೋಗುವುದೋ ಇಲ್ಲವೋ ಎಂದು ಗೊಣಗಾಡುತ್ತ ಶಾಸ್ತ್ರಿಗಳು ಮಂದಿಯ ಹಿಂದೆ ಅಲ್ಲಿಂದ ತೆರಳಿದರು.
3
ಹುತ್ತದೊಳಕ್ಕೆ ಕೈತೋರಿಸಿ ಹಾವು ಹಿಡಿಯಬೇಕೆಂದು ನಿನ್ನೆ ಸಂಜೆ ಪ್ರಯತ್ನಿಸಿ ವಿಫಲನಾಗಿದ್ದ ಎಲುಗಗೆ ತಲೆ ಕೆಟ್ಟಿರಲಿಲ್ಲ ನಿಜ. ಆದರೆ ಅವನು ಕುಡಿದಿದ್ದ. ಕುಡಿದಿದ್ದಾಗಂತೂ ಅವನ ಗತ್ತು ಬದಲಾಗುತ್ತದೆ. ಕೊರಳಲ್ಲಿ ಎರಡೂ ಮಗ್ಗುಲುಗಳಿಂದ ಇಳಿಬಿಟ್ಟ ಹರಕು ವಲ್ಲಿಯನ್ನು ಎರಡು ಕೈಗಳಿಂದ ಹಿಡಿದುಕೊಂಡು ಥೇಟ್ ಜಾತಪ್ಪ ಧಣಿಯಂತೆ ನಡೆಯುವುದು ಮಾಮೂಲು. ಆದರೆ ನಿನ್ನೆ ದಿನ ಗಡಂಗಿನಲ್ಲಿ ಚಪ್ಪರದೊಳಗೆ ಅಂಬೊಡೆ ಮೆಣಸಿನಕಾಯಿ ಕರಿಯುವ ತಿಂದವ್ವ ಕ್ವಟ್ ಮುಂದಕೋಗಲೋ ಅಂತ ಎಲುಗನ ವಲ್ಲಿಯನ್ನು ಕಿತ್ತುಕೊಂಡಿದ್ದಳು. ಬೆಳಕು ಹರಿದರೆ ಮುಖ ತೋರಿಸದೆ ಇರಲಿಕ್ಕಾಗದು. ಆಕೆಯ ಮೇಲಿನ ಸಿಟ್ಟನ್ನು ಹಾವಿನ ಮೇಲೆ ತೋರಿಸಬೇಕೆಂದು ಪ್ರಯತ್ನಿಸಿದ್ದ.
ಇದನ್ನು ಓದಿದ್ದೀರಾ?: ಶಂಕರ ಮೊಕಾಶಿ ಪುಣೇಕರ ಅವರ ಕತೆ | ಬಿಲಾಸಖಾನ
ಅವನಿಗೊಂದೂ ಗೊತ್ತಿಲ್ಲ, ಮಲಗಿದ್ದೂ ಗೊತ್ತಿಲ್ಲ, ಎದ್ದದ್ದೂ ಗೊತ್ತಿಲ್ಲ, ಜಿಬುರುಗಣ್ಣು ಬಿಚ್ಚಿ ನೋಡಿದ. ಆದರೆ ಹೊತ್ತು ಬಿದ್ದಿರುವುದು. ಲಚ್ಚುಮಿ ತೊಡೆಮಟ ಸೀರೆವರಿಸಿ ತನ್ನ ಗಂಟಲೊಳಕ್ಕೆ ಎಡಗೈಯ ನಾಕು ಬೆರಳುಗಳನ್ನು ತೂರಿಸಿ ಕಫ ಕೀಳಲು ಪ್ರಯತ್ನ ನಡೆಸಿರುವುದು ಕಣ್ಣಿಗೆ ಬಿತ್ತು. ಎರಡು ಬಾರಿ ಗಟ್ಟಿಯಾಗಿ ಆಕಳಿಸಿ ಸದ್ದು ಮಾಡಿದ. ಎಲ್ಲಲ್ಲಿ ಹರಿದು ಚಪ್ಪಾಟಿಯಾಗಿದ್ದ ಧೋತರವನ್ನು ಹಿಂಭಾಗ, ಮುಂಭಾಗ ಕಾಣಿಸದ ಹಾಗೆ ಉಪಡಿಸಿಕೊಳ್ಳುತ್ತ ಎದ್ದ. ಕುಡಿತದ ಮಬ್ಬು ಇನ್ನೂ ಬಿಟ್ಟಿರಲಿಲ್ಲ. ಅವನು ಎದ್ದ ಕೂಡಲೆ ಚವುಡನ ಮುಖ ನೋಡಬೇಕಾಗಿತ್ತು. ಆತ ಆಕಳಿಸಿದ ಸದ್ದಿಗೆ ಪ್ರತಿಕ್ರಿಯೆಯಾಗಿ ದೊಡ್ಡಿಯಿಂದ ಗುರ್‍ರ್ ಏರ್‍ರಕ್ ಬುರ್‍ರ್ ಬುಸ್ ಇತ್ಯಾದಿ ಶಬ್ದಗಳು ಕೇಳಿಬರಲಿಲ್ಲ. ‘ವರೇ ಚಿತ್ತೋಡಾ ವರೇಯ್ ಚವುಡ’ ಚುಟ್ಟ ಹಚ್ಚಿಕೊಂಡು ಕೂಗಿದ. ಹ್ಞಾ ಇಲ್ಲ ಹ್ಞೂ ಇಲ್ಲ. ತೆಳ್ಳನೆ ಜುಳ್ಳಿಯಿಂದ ತಾನು ಚವುಡನನ್ನು ನಿನ್ನೆ ದಿನ ಒಂದೇ ಒಂದು ಬಾರಿ ಬಡಿದದ್ದು ನೆನಪಾಯಿತು. ಚಿವುಡನ ಸೂಕ್ಷ್ಮರುದರಕ್ಕೆ ಎಲ್ಲಿ ನೋವಾಗಿರುವುದೋ ಎಂಬ ಹಳಹಳಿಕೆ ಶುರುವಾಯಿತು. ಪಶ್ಚಾತಾಪಪಟ್ಟನು. ತಾನೊಂದು ಹೆಣ್ಣು ಹಂದಿಯಾಗಿ ಹುಟ್ಟಿದ್ದರೆ ತನ್ನನ್ನು ಚವುಡ ಲವ್ ಮಾಡದೇ ಇರುತ್ತಿರಲಿಲ್ಲ ಅಂದುಕೊಂಡನು. ತಾನು ಹೆಣ್ಣು ಹಂದಿಯಾಗಿ ಹುಟ್ಟುವುದಕ್ಕಾಗಲಿ; ಚವುಡನ ಕೂಡ ಲವ್ ಮಾಡಿಸಿಕೊಳ್ಳುವುದಕ್ಕಾಗಲೀ ಪೂರುವ ಜನುಮದ ಸುಕುರುತವಿರಬೇಕೆಂದು ಯೋಚಿಸಿದನು. ಮನುಷ್ಯರ ನಡುವೆ ಈ ನಮೂನೆಯ ಮನುಷ್ಯನಾಗಿರುವುದಕ್ಕಿಂತ ಹಂದಿಯಾಗಿ ಹುಟ್ಟಿದಲ್ಲಿ ಎಷ್ಟೋ ಬೆಲೆ, ಗವುರವ ಇರುತ್ತಿತ್ತು ಎಂದು ಇತ್ಯಾದಿಯಾಗಿ ಯೋಚಿಸುತ್ತ ಎಲುಗ ದೊಡ್ಡಿ ಬಾಗಿಲಿಗೆ ಬಂದಿದ್ದಾಗ ಪಶ್ಚಾತ್ತಾಪದಿಂದ ಪಾಪಪ್ರಜ್ಞೆಯಿಂದ ಅವನು ಕೇವಲ ಮುಷ್ಟಿಯಷ್ಟಾಗಿದ್ದ.
ಚವುಡಾ ಬಾರಯ್ಯಾ ಚವುಡಾ ಎಕ್ಕಡುನ್ನಾಡ್ರಾ ಎಂದು ಎರಡು ಬಾರಿ ಕೂಗಿ ನೋಡಿದ. ಉತ್ತರ ಬರಲಿಲ್ಲ. ಮೂಲೆ ಮೂಲೆ ಬಗ್ಗಿ ಬಗ್ಗಿ ಬೆದಕೀ ಬೆದಕಿದ. ಚವುಡ ಎಲ್ಲೂ ಕಾಣಿಸಲಿಲ್ಲ. ಲಚ್ಚುಮಿಯನ್ನು ಕೇಳಿದರೆ ನಂಗೇ ಇದೇ ಕೆಲ್ಸವಾ ಎಂದು ಮುಖ ಸೊಟ್ಟು ಮಾಡಿದಳು. ಹುಡಿ ಮಣ್ಣಿನಿಂದ ಹಲ್ಲುಜ್ಜುವುದು ಮರೆತು ಕಿವುಡ, ಸಕ್ರ, ರಾಮ, ದ್ಯಾಮ, ಹೀಗೆ ಎಲ್ಲರ ಮನೆ ಎಡಬಲ, ಹಿಂದೇ ಮುಂದೆ, ಕೆಳಗೆ ಮ್ಯಾಗೆ ಎಲ್ಲ ಹುಡುಕಿದ. ತನ್ನ ಪ್ರಾಣ ಶಕ್ತಿಯನ್ನು ಮೂಗಿಗೆ ಆಹ್ವಾನಿಸಿ ನೋಡಿದ. ವಾಸನೆ ಸುಧಾ ಇಲ್ಲ. ಬೇವಿನ ಮರದ ಕೆಳಗೆ ನಿಂತು, ತಾಯವ್ವನ ಕಟ್ಟೆ ಏರಿ ಕೀರಲು ಧ್ವನಿ ತೆರೆದ. ಎಲ್ಲೂ ಇಲ್ಲ ಚವುಡ.
ಓಹ್! ಚವುಡ ಎಲ್ಲೂ ಇಲ್ಲ.
ಮಣನೆಣದ, ಹೊಳಪುಗಣ್ಣಿನ, ತ್ರಿಕೋನಾಕೃತಿ ಮುಖದ, ಚುರುಕು ಮೂಗಿನ ಮೋಟು ಬಾಲದ, ಮೂರು ಮಣ ತೂಕದ ತುಂಟ ಚವುಡ ಎಲ್ಲೂ ಕಾಣಿಸ್ತಾ ಇಲ್ಲ.
ಚವುಡವ್ವನ ವರಪ್ರಸಾದದಿಂದ ಹುಟ್ಟಿದ್ದ ಚವುಡ ಎಲ್ಲೂ ಕಾಣಿಸ್ತಾ ಇಲ್ಲ.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
ಶಿಷ್ಟರಾದ ಕೊರಚರ ರಕ್ಷಣೆಗಾಗಿ, ದುಷ್ಟರಾದ ಪೊಲೀಸಪ್ಪಂದಿರನ್ನು ಶಿಕ್ಷಿಸುವುದಕ್ಕಾಗಿ ಮತ್ತೆ ಹಂದಿ ರೂಪದಲ್ಲಿ ತನ್ನ ಹಟ್ಟಿಯಲ್ಲಿ ಹದಿಮೂರನೇ ಅವತಾರ ಎತ್ತಿದ್ದಂಥ ಚವುಡ, ಇಲ್ಲ… ಇಲ್ಲ… ಎಲ್ಲೂ… ಇಲ್ಲ.
ಕೇರಿ ಕೇರಿಗೆ ಹೋಗಿ ಮನೆಮನೆಗೆ ಹೋಗಿ ಚವುಡಾ ಚವುಡಾ ಅಂತ ಕೂಗಿದೆ. ಎಲ್ಲೂ ಪತ್ತೆಯಾಗಲಿಲ್ಲ. ಯಾರನ್ನು ಕೇಳಿದರೂ ಅಲಕ್ಷೆಯ ನಗೆ ನಕ್ಕರು. ತಾನು ಹಾವು ಹಿಡಿದೋರ ಮನೆಗಳು, ಕೊಡಪಾನ ತೆಗೆದ ಆಳವಾದ ಬಾವಿಗಳು, ಮರ ಗಿಡಗಳು, ಬೇಲಿಸಾಲುಗಳು ಎಲ್ಲ ಕಡೆ ಹುಡುಕಿ ಹುಡುಕಿ ಸುಸ್ತಾದ.
ಚವುಡನಿಲ್ಲದ ಮನೆ ಮಸೀದಿಯಂತೆ ಕಂಡಿತು. ಚವುಡನಿಲ್ಲದ ಕೇರಿ ಸುಡುಗಾಡಿನಂತೆ ಕಂಡಿತು. ಚವುಡನಿಲ್ಲದ ಬದುಕು ಒಂದು ಬದುಕೇ ಅಂತ ಪ್ರಶ್ನಿಸಿಕೊಂಡ. ಆದರೆ ಅಂತರಂಗದಲ್ಲಿ ನಿಗೂಢವಾಗಿ ಕೂತಿದ್ದು ನಿಟ್ಟುಸಿರುಗಳನ್ನು ಸೃಷ್ಟಿಸತೊಡಗಿದ್ದ ಚವುಡನ ನೆನಪು ಕೇವಲ ಭಯಂಕರವಷ್ಟೇ ಅಲ್ಲ. ಕೊರಚರವನಾದ ಎಲುಗನೇ ಚವುಡನೆಂಬ ಹಂದಿಯು, ಚವುಡನೆಂಬ ಹಂದಿಯೇ ಕೊರಚರವನೆಂಬ ಎಲುಗ, ಎರಡೂ ಬೇರೆ ಬೇರೆ ಆಗಿರಲಿಲ್ಲ. ಎಲುಗನ ದೇಹದೊಳಗಿನಿಂದ ಚವುಡನೆಂಬ ಪ್ರಾಣ ಕದಲಿ ಹೋಗಿರಬಹುದೇ? ಲಚ್ಚುಮಿ ತಟ್ಟೆಯಲ್ಲಿಡುತ್ತಿದ್ದ ಮುದ್ದಿ ಇಂಡಿಯನ್ನು ಉಣ್ಣಲಾಗದೆ ಉಣ್ಣುತ್ತಿದ್ದ. ಹಸಿವೆಗೂ ಮೀರಿದ ಸಂಕಟ ಹೊಟ್ಟೆಯಲ್ಲಿ; ಯಾರೋ ತನ್ನ ಹಂದಿ ಕದ್ದುಕೊಂಡು ಹೊಯ್ದಿದ್ದಾರೆ ಅನ್ನಿಸಿತು. ಕಂಪ್ಲಿಂಟು ಕೊಟ್ಟೇ ತೀರಬೇಕೆಂದು ಠೇಷಣ್ಣಿನ ಬಳಿಗೆ ಹೋಗಿದ್ದ, ಮಾದರ್‌ಛೋದ್ ಗೆಟ್ ಔಟ್ ಅಂತ ಗದರಿಸಿಬಿಟ್ಟಿತ್ತು ಕನಿಷ್ಠಬಿಲ್ಲೆ.
ಒಂದು ದಿನ ಅಲ್ಲ, ಎರಡು ದಿನ ಅಲ್ಲ ದಿನಗಟ್ಟಲೆ ಚವುಡನಿಗಾಗಿ ತಲಾಷೆ ನಡೆಸಿದ ಎಲುಗಗೆ ತನ್ನ ಹಂದಿ ಚಿವುಡ ಮಾಯವಾಗಿರುವುದು ಲಿಂಗಾಯ್ತರ ಓಣಿಯಲ್ಲಿ ಎಂಬ ಸುಳಿವು ಸಿಕ್ಕಿತು. ಬ್ಯಾಂಬ್ರ ಓಣಿಯಲ್ಲಿ ಕೋಳಿ ಮಾಯವಾಗುವ ರೀತಿಯಲ್ಲಿಯೇ ಲಿಂಗಾಯ್ತರ, ಜಂಗಮರ ಓಣಿಯಲ್ಲಿ ತನ್ನ ಪೊಗದಸ್ತಾದ ಹಂದಿ ಚವುಡ ಮಾಯ ಆಗಿದ್ದರೂ ಆಗಿರಬಹುದು ಅನ್ನಿಸಿತು.
ಯಃಕಶ್ಚಿತ್ ಹಂದಿಯ ಮೇಲಿರುವ ಎಲುಗನ ನಿರ್ವಾಜ ಪ್ರೇಮವನ್ನು ಕಂಡೋ; ತಾನು ತೆಗೆದುಕೊಂಡ ಐನೂರಕ್ಕೆ ಡಿಕಿರಿತಂದು ಮನೆ ಜಪ್ತಿ ಮಾಡಿಸಿದ್ದನಲ್ಲಾ ಗೌಡ ಎಂಬ ಹಳೇ ಸಿಟ್ಟನ್ನು ನೆನಪು ಮಾಡಿಕೊಂಡೋ ಏನೋ ಒಟ್ಟಿನಲ್ಲಿ ತಿಪ್ಪಜ್ಜಿ ವಿಷಕಂಠಪ್ಪ ಎಲುಗನಿಗೆ ತನ್ನೋಣಿಯಲ್ಲಿ ಚವುಡ ಮಾಯವಾದ ಬಗೆಯನ್ನು ವರ್ಣನೆ ಮಾಡಿ ಹೇಳಿದ. ಹಾ ಹಂಗಾರೆ ಅಂತ ಕುದ್ದುಬಿಟ್ಟನು ಎಲುಗ. ಹಾ ಒಂದ್ ಕೈಯಿ ನೋಡ್ಕಂಡೇ ಬುಡ್ತೀನಿ ಸಾವ್ಕಾರ ಆಗಿದ್ರೆ ಅವ್ನು ಮನೀಗಾಗಿದ್ದಾನು ಎಂದು ಸರಸರ ಗೌಡನ ಮನೆಕಡೆ ಹೆಜ್ಜೆ ಹಾಕಿದ; ಬಡವನ ಕೋಪ ದವಡೆಗೆ ಮೂಲ ಎಂದು ಗೊತ್ತಿದ್ದರು ಸಹ.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಗೌಡನ ಮನೆ ಅಂಗಳದಲ್ಲಿ ನಿಂತು “ಯಾವ ಸೂಳ್ಯಾಮಗ ನನ್ ಹಂದೀನ ಮನ್ಯಾಗ ಉಕ್ಕಂಡಿರಾದು. ಬರ್‍ಲಿ ಗಂಡ್ಸಾಗಿದ್ರೆ ನೋಡ್ಕಂತೀನಿ” ಎಂದು ಬಗೆಬಗೆಯ ಉಪಮೆ, ಶಬ್ದಾಲಂಕಾರಗಳನ್ನು ಬಳಸಿ ಬಯ್ದು ಕೂಗಾಡಿದ. ಎಲುಗ ತನ್ನ ಅಂಗಳದಲ್ಲಿ ವಕ್ರಿಸಿರುವುದು ಕಂಡು ಗೌಡ ಆಗಲೆ ಇಂಗು ತಿಂದ ಮಂಗ ಆಗಿದ್ದನು. ತನ್ನ ಗೌಡಿಕಿ ಮನ್ತೆನದ ಮಾನ ಮರುವಾದೆ ಎಲುಗನ ಬಾಯಿಯ ಮೂಲಕ ಹರಾಜಾಗದಿರಲೆಂದು ನಾಲ್ಕು ಶಬ್ದಗಳಲ್ಲಿ ಮೂರು ಇಂಗ್ಲೀಷ್ ಶಬ್ದಗಳನ್ನು ಬಳಸಿ ನೋಡಿದನು. ಇಂಥದಕ್ಕೆ ಎಲುಗ ಮೈಟ್ ಮಾಡಲಿಲ್ಲ. ಆಗಲೇ ಸಪೋರ್ಟಿಗೆ ಬಂದು ನಿಂತಿದ್ದ ಕೊರಚರ ಕೇರಿಯ ಕಲ್ಲಿಗ, ದ್ಯಾವಗರು ಕೋಪೋದ್ರಿಕ್ತನಾಗಿದ್ದ ಎಲುಗನನ್ನು ರಟ್ಟೆಹಿಡಿದು ಕರೆದುಕೊಂಡೊಯ್ದು ಎರಡು ಗಳಾಸು ಕಂಟ್ರಿ ಕುಡಿಸಿದರು.
ಕೈಯಲ್ಲಿ ಒಂದು ದೊಣ್ಣೆ ಹಿಡಿದುಕೊಂಡು ಅಂಗಳ ಕೈತಂದ ಎಲುಗನ ಹೊಸ ಅವತಾರವನ್ನು ನೋಡಿ ಗೌಡರು ಬಾಯಿ ಒಣಗಿಸಿಕೊಂಡರು. ಇಂಗೆಲ್ಲ ಮಾತಾಡಿದ್ರೆ ಬೇಷಿರಾಕಿಲ್ಲ ನೋಡ್ ಅಂದರು. ಹತ್ತಿಪ್ಪತ್ತು ಕೊಟ್ಟು ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿ ವಿಫಲರಾದರು. ಲಕ್ಷ ಕೊಟ್ರೂ ಬಿಡಾಕಿಲ್ಲ ಅಂದು ಬಿಟ್ಟ ಎಲುಗ. ಅಷ್ಟರಲ್ಲಿ ಒಬ್ಬ ಯಃಕಶ್ಚಿತ್ ಕೊರಚರವ ಅಂಗಳದಲ್ಲಿ ನಿಂತು ತನ್ನ ಮರುವಾದೆ ಮೂರು ಕಾಸಿಗೆ ಹರಾಜಾಗುವುದೆಂದರೇನು; ಮೊದಲೇ ಪಿತ್ತ ವಿಕಾರವಾಗಿದ್ದ ಗೌಡ ಸಡ್ಡುಹೊಡೆಯುವ ಧೈರ್ಯ ಮಾಡಿದ. ಲಚ್ಚುಮಿಯ ಪರಿಚಯವಿದ್ದ ವಿರುಪಾಕ್ಷಿಯ ಮಾತುಗಳಿಗೂ ದಮ್ಮಡಿ ಬೆಲೆ ಸಿಕ್ಕಲಿಲ್ಲ. ನನ್ ಹಂದೀ ನನ್ ಹಂದೀ ಎಂದು ಅಂಗಳದಲ್ಲೇ ವಕ್ರಿಸಿದ್ದ ಎಲುಗ ಕದಲುವ ಸೂಚನೆ ಕಂಡುಬರಲಿಲ್ಲ.
ಸಂಜೆ ಸುಮಾರಿಗೆ ಗೌಡನ ಅಹವಾಲು ಮನ್ನಿಸಿ ಎಲುಗನನ್ನು ಎಳೆದುಕೊಂಡು ಹೊತ್ತೊಯ್ದು ಒದ್ದರು. ಬುರುಡಿಗೆ ಬಿಸಿನೀರು ಕಾಯಿಸುತ್ತಿದ್ದಾಗ ನನ್ ಚವುಡನ್ನ ಖೂನಿ ಮಾಡ್ಯಾನ ಆ ಗೌಡ ಅಂತ ಚೀರಾಡಿದ. ಮತ್ತೆ ಪತಪತ ಒದೆಗಳು ಬಿದ್ದವು. ಒದೆಗಳಿಗೆ ಬಣ್ಣ ರುಚಿ ವಾಸನೆ ಇರುತ್ತದೆ ಎಂದು ಅರಿವಾಯಿತು. ಠಾಣೆಯಲ್ಲಿ ಸತ್ತರೆ ತಲೆನೋವೆಂದು ಕನಿಷ್ಟಬಿಲ್ಲೆಗಳೇ ಎಲುಗನನ್ನು ಹೊತ್ತೊಯ್ದು ಅವನ ಹಟ್ಟಿ ಬಳಿ ಬೀಸ್ಯಾಡಿ ಬಂದರು.
ಕೊಟ್ಟೂರೇಶ್ವರನ ದಯೆಯಿಂದಲೂ, ಲಚ್ಚುಮಿಯ ಶೈತ್ಯೋಪಚಾರದಿಂದಲೂ ವಾರ ಕಳೆಯುವಷ್ಟರಲ್ಲಿ ಎಲುಗ ಮತ್ತೆ ಗೆಲುವಾದ. ಗೆಲುವಾದ ಮೈಯೊಳಗೆ ನೂರು ಮುಖ ಪಡೆದಿರುವ ಚವುಡ. ಪ್ರಾಣದ ಪ್ರಾಣ ಚವುಡ, ಗಾಳಿ, ನೀರು, ಕೂಳು ಎಲ್ಲ ಚವುಡ, ಚವುಡನಿಗಾಗಿ ಪ್ರಾಣ ಸಹ ಕೊಟ್ಟೆನು ಎಂದು ಎಲುಗ ಅಮವಾಸ್ಯೆಯ ದಿನ ಅಂದರೆ ಗುರುವಾರ ಅಂದುಕೊಂಡ. ಇಷ್ಟವಿಲ್ಲದ ಮನಸ್ಸಿನಿಂದ ಸುಟ್ಟಳ್ಳಿಗೆ ಹೋಗಿ ಕೂದಲು ಯಾಪಾರ ಮುಗಿಸಿಕೊಂಡು ಬಂದ. ಗೌಡನ ಮನೆಯಲ್ಲಿ ಸದ್ದಿಲ್ಲದೆ ಮಣ್ಣಿನಲ್ಲಿ ಮಲಗಿರುವ ಚವುಡ ಕೈಬೀಸಿ ಕರೆಯುವಂತಾಯಿತು. ಜೇಬಿನಲ್ಲಿದ್ದಷ್ಟು ರೊಕ್ಕ ತೆತ್ತು ಕಂಠದ ಮಟ ಕುಡಿದು ಗೌಡನ ಮನೆ ಅಂಗಳದಲ್ಲಿ ನಿಂತು ಬರ್‍ರಲೇ ಹೊರಾಕ ಗಂಡಸುರಾದ್ರೆ ಎಂದು ಕೂಗು ಹಾಕಿದಾಗ ಗ್ಯಾಸ್ಟ್ರಿಕ್ ಟ್ರಬಲ್ಲು ಇದ್ದ ಗೌಡ ಈಸಿಚೇರಿನ ಮೇಲೆ ಮುಖ ಕಿವುಚಿ ವಿಲಕ್ಷಣ ಸದ್ದು ಮಾಡಿದೆ. ನಾಯಿ ತಡವೋದು ಬ್ಯಾಡ, ಹೇಸಿಗೆ ಮೇಲೆ ಕಲ್ಲು ಹಾಕುವುದು ಬ್ಯಾಡ ಎಂದು ನಿರ್ಧರಿಸಿದವನಂತೆ ನಿರ್ಲಿಪ್ತನಾಗಿ ಕೂತೇ ಇದ್ದ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
”ಚವುಡ ಎದ್ದು ಬಾರ, ನಿನ್ನ ಉಗುದಿರೋ ನೆಲ ಸೀಳಿಕೊಂಡು ಎದ್ದು ಬಾರೋ ಗೆಳೆಯಾ, ಮ್ಯಾಲ ದಪ್ಪನಾಗಿ ಇಟ್ಟಿರೋ ಬಂಡೆ ಸೀಳಿಕೊಂಡು ಎದ್ದು ಬಾರೋ, ಸಿರಿಕುರುಷ್ಣ ಪರಮಾತುಮನೇ, ನೀನು ಬಂದಂಗ ಕಾಣೂದಿಲ್ಲ, ಲಿಂಗಾಯ್ತರ ಮನಿಸಿಕ್ಕೈತಂತ ಒಳಾಗ ಬೆಚ್ಚಗೆ ಮಲಿಕ್ಕಂಬಿಟ್ಟಿದ್ದೀ. ನಿನ್ ಸಂಗಾಟ ನಾನೂ ಮಲಿಕ್ಕಾಳ್ಳಾಕ ತಯ್ಯಾರು. ಬರ್‍ರಲೇ ನನ್ನೂ ಕೊಲ್ರ್ ಬರ್ರೊ ಗಂಡ್‌ಸ್ರಾದ್ರೆ ತಗಂಬರ್ರಿ ಬಡಗೀ ಕೊಡ್ಲಿ ಕುಡುಗೋಲು” ಎಲುಗನ ಪ್ರತಿಯೊಂದು ಶಬ್ದ ಪಟಾಕಿಯಂತೆ ಸಿಡಿಯಿತು. ಸುತ್ತ ನಿಂತಿತ್ತು ನಾನಾ ಅಭಿರುಚಿಯ ಜನ.
”ಮನೀಗೆ ಬಂದ ಲಕ್ಷ್ಮಿಯಂಥ ಹಂದೀನ ಕ್ವಂದು ಉಗೆಯೋದ್ನ ಎಂಥೋರು ಬಿಟ್ಟಾರಲೋ ಎಲುಗ ಅದ್ರ ರಿಣಾ ಅಷ್ಟಕ್ಕೆ ಇದ್ದೀತಂತ ಮರ್‍ತು ಬಿಡು,” “ದೊಡ್ಡೋರು ಹೆಂಗೆ ಮಾಡಿದ್ರೂ ಛಂದ” ಎಂದೊಬ್ಬ ಯಜಮಾನ ಎಲುಗನ ದುಃಖವನ್ನು ಅರ್ಥಮಾಡಿಕೊಂಡು ತಿಳಿಹೇಳಿದ.
ಬೆಂಕಿಯ ಕುಂಡವಾಗಿದ್ದ ಕಣ್ಣುಗಳಿಂದ ಗೌಡನ ಮನೆಯನ್ನು ಸುಡುವ ರೀತಿಯಲ್ಲಿ ನೋಡಿದ. ಅದು ಮೊದಲೇ ಚದುರಕಲ್ಲಿನ ಮನೆ. ಸುಡಲಿಲ್ಲ. ಅಲ್ಲಿಂದ ಎಲುಗ ಡೊಂಕಬಂಕ ಹೆಜ್ಜೆ ಹಾಕುತ್ತ ಹಟ್ಟಿ ಕಡೆ ನಡೆದ. ದಾರಿಯಲ್ಲಿ ಹನುಮಂತದೇವರ ಗುಡಿ ಬಂತು. ಸೊಟ್ಟಮುಖದ ಹನುಮಂತಪ್ಪನನ್ನು ಕಂಡವನೆ ಎಲುಗ ಮತ್ತೆ ಬೆಂಕಿಯಾದ. ಧಡ್ ಧಡ್ ಅಂತ ಗರ್ಭಗುಡಿವರೆಗೆ ನಡೆದು ”ನೀನ್ಯಾವ ಸೀಮೇದೇವ್ರಲೇ ಹೊರಾಗೊಂದು ಬಾ ಒಂದ್ ಕೈ ನೋಡ್ಕಂತೀನಿ… ಮಂಗ್ಯ ನಾಡಾ ಮಂಗ್ಯಾ… ಗೌಡನಂಥೋರಿಗೆ ನಿನ್ನಂಥ ಮಂಗ ದೇವರುಗಳ ಸಪೋರ್ಟ್ ಸಿಕ್ಕಿರೋದ್ರಿಂದ್ಲೆ ನನ್ನ ಚವುಡನ್ನ ಕ್ವಂದು ಬಿಟ್ರು. ಪೊಲೀಸ್ರ ಕಳಿಸಿ ಸಾಯೋ ಹಂಗ ಬಡ್ಸಿದ್ರು. ಎಲ್ಲಾ ನಿನ್ನಿಂದ್ಲೆ. ನಿನ ಮುಂದ ತುಪ್ಪದ ದೀಪ ಹಚ್ತಾರಂತ ನೀನು ಇದ್ಕೆಲ್ಲ ಕುಮ್ಮುಕ್ಕು ಕೊಡ್ತಾ ಇದ್ದೀ ಅಲ್ಲ. ನೀನಿಂಗೆ ಇರು… ನಾಳೆ ಸುತ್ತಿಗೆ ತಂದು ನಿನ್ನ ಚೂರುಚೂರು ಮಾಡ್ಲಿಲ್ಲ ನಾನ್ ನಮಪ್ಗೇ ಹುಟ್ಟಿಲ್ಲ” ಎಂದು ಬಯ್ಯುತ್ತ ಅಳುತ್ತ ಚೀರುತ್ತ ಇದ್ದ ಎಲುಗನನ್ನು ಯಾರೊಬ್ಬರೂ ತಡವುವ ಸಾಹಸ ಮಾಡಲಿಲ್ಲ. ಸುತ್ತಾನ್ನಾ ಕಡೆ ನಿಂತಿದ್ದ ಬಹಳಷ್ಟು ಜನ ಎಲುಗನನ್ನು ಹುಚ್ಚರ ಪಟ್ಟಿಗೆ ಸೇರಿಸಿ ತಾವು ಮಾತ್ರ ತೆಪ್ಪಗೆ ಇದ್ದರು.
4
ದಿನಕ್ಕಳೆದಂತೆ ಚವುಡನ ನೆನಪು ಊರಲ್ಲೊಂದೇ ಅಲ್ಲ ಕೇರಿಯಲ್ಲೂ ಸಹ ಎಳ್ಳಷ್ಟೂ ಉಳಿದಿರಲಿಲ್ಲ. ಮಾಮೂಲಿ ಮನುಷ್ಯ ಎಲುಗನ ಹೃದಯದಲ್ಲಿ ಚವುಡನ ನೆನಪು ಎಳ್ಳುಕಾಳಷ್ಟು ಮಾತ್ರ ಇತ್ತು. ಮರಬದ ಈರಣ್ಣನ ಬೇಟೆಗೆ ಹೋಗಿದ್ದಾಗ ಸುಲಭವಾಗಿ ಸಿಕ್ಕುಬಿದ್ದಿದ್ದ ಕಾಡುಹಂದಿಯನ್ನು ತನ್ನ ಕೈಯಾರೆ ಬಿಟ್ಟುಬಿಟ್ಟಿದ್ದ. ಬಲೆಯಲ್ಲಿ ವರ್ ವರ್‍ರಕ್ ಸದ್ದು ಮಾಡುತ್ತಿದ್ದ ಕಾಡುಹಂದಿ ಥೇಟ್ ತನ್ನ ಚವುಡನೇ ಅನ್ನಿಸಿತ್ತು. ನೆಣದಲ್ಲಿ ಕೇಪಿಟ್ಟು ಸ್ಫೋಟಿಸಿ ಹಂದಿಯನ್ನು ಚೂರುಚೂರು ಮಾಡಲು ಎಲುಗಗೆ ಮನಸ್ಸು ಬಂದಿರಲಿಲ್ಲ. ಕೈಗೆ ಸಿಕ್ಕ ಮಿಕವನ್ನು ಬಿಟ್ಟಿದ್ದ ಎಲುಗನ ಜೊತೆ ಕೇರಿಯಲ್ಲಿ ಜಗಳವಾಗಿತ್ತು. ತಮಗೂ ಎಲುಗನಿಗೂ ಸಂಬಂಧವೇ ಇಲ್ಲ ಅನ್ನೋ ರೀತಿಯಲ್ಲಿ ಕೇರಿಯವರಿದ್ದರು. ಯಾರ ಗೊಡವೆಗೂ ಹೋಗದೆ ಎಲುಗ ತನ್ನ ಪಾಡಿಗೆ ತಾನು ಕೂದಲು ಯಾಪಾರ ಮಾಡುತ್ತ ಸಣ್ಣ ಪುಟ್ಟ ಕೆಲಸ ಮಾಡುತ್ತ ದಿನಗಳನ್ನು ನೂಕುತ್ತಿದ್ದನು.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ದಿನಗಳು ಹುಟ್ಟುತ್ತಿದ್ದವು. ಆದರೆ ಅವು ಸಾಯುವಾಗ ಮಾತ್ರ ತುಂಬ ನರಳುತ್ತಿದ್ದವು. ಸತ್ತ ದಿನಗಳು ಮಾತ್ರ ಹುಟ್ಟಿಬರಲು ಸಾಧ್ಯವೇ ಇರಲಿಲ್ಲ. ಸತ್ತ ದಿನಗಳು ಮತ್ತೆ ಹುಟ್ಟುವುದು ಸಾಧ್ಯವಿದ್ದಿದ್ದರೆ ದಾರುಣವಾದ ಹತ್ಯೆಗೆ ಈಡಾಗಿ ವೀರಮರಣವನ್ನಪ್ಪಿದ್ದ ಚವುಡನೂ ಸಹ ಹೊಸ ದೇಹ, ಹೊಸ ಮನಸ್ಸು ಪಡೆದು ಹುಟ್ಟಿ ಬರುತ್ತಿದ್ದನು. ಆ ಭಾಗ್ಯ ಎಲುಗಗೆ ಇರಲಿಲ್ಲ.
ಲಚ್ಚುಮಿಯ ಹಟ್ಟಿಗೆ ದಿನಂಪ್ರತಿ ಬಂದು ಅಕ್ಕಿಕಾಳು ಉದುರಿಸುತ್ತಿದ್ದುದನ್ನು ಕೊಳ್ಳಿ ಇರಬದುರಿ ನಿಲ್ಲಿಸಿದ್ದ. ಗೌಡನ ಏಕಮಾತ್ರ ಪುತ್ರ ವಿರುಪಾಕ್ಷಿ ಕಲೆಬಿದ್ದ ಮೇಲೆ ತಾನ್ಯಾವ ಲೆಕ್ಕ ಎಂದುಕೊಂಡಿರಬಹುದು ಇರಬದುರಿ.
ಇರುಪಾಕ್ಸಿ ಬಂದ ಹೊಸತರದಲ್ಲಿ ಹಟ್ಟಿ ಕಿಲೀನಾಗಿಟ್ಟುಕೋ ಅಂತ ಹೇಳಿದ್ದ. ಕಿಲೀನಾಗಿಟ್ಟುಕೊಂಡರೆ ಕೂಳು ಓಗೋದಿಲ್ಲ ಅಂತ ಕಿಲಕಿಲ ನಗೆಯಾಡಿದ್ದಳು ಲಚ್ಚುಮಿ. ಕದ್ದುಮುಚ್ಚಿ ಕಳ್ಳಬಂದಾಗ ರಾತ್ರಿ ಯಾಕ ಬರ್‍ತಿ? ಅಗಲತ್ತಿನಾಗ ಬಾ ಗಂಡುಸಾಗಿದ್ರೆ ಎಂದು ತಮಾಷೆ ಮಾಡಿದ್ದಳು. ಅವರ ಕಿಲಕಿಲ ನಗೆಗಳು, ತಮಾಷೆಗಳು ಇರುಪಾಕ್ಸಿಯನ್ನು ಕಟ್ಟಿ ಹಾಕಿದ್ದವು. ತನ್ನ ತಂದೆಯ ಕಣ್ಣುಗಳ ಬೇಲಿಯನ್ನು ಹಾರಿ ಕೊರಚರ ಕೇರಿಗೆ ಬರುವುದೊಂದು ದೊಡ್ಡ ಮಾತೇ ಆಗಿತ್ತು. ಇಂಥ ಇರುಪಾಕ್ಸಿ ಹಗಲೊತ್ತಿನಲ್ಲಿ ಡೈರೆಕ್ಕಾಗಿ ಲಚ್ಚುಮಿಯ ಹಟ್ಟಿಗೆ ಬಂದು ಕದ ತಟ್ಟ್ಯಾನ? ಹೇಗೋ ಒಂದು ರೀತಿ ಹಾಗೂ ಹೀಗೂ ಗಿರಾಕಿಯಲ್ಲ. ಹಾಗೆ ನೋಡಿದರೆ ಓಣಿಗೊಬ್ಬರಂತೆ ಉಂಟು. ಅಂಥ ಪರ್ಸನಾಲಿಟಿ ಲಚ್ಚುಮಿಯದು. ಈ ಮಧ್ಯೆ ಬಿದ್ದ ಮಳೆಯಿಂದಾಗಿ ಕೇರಿಯಲ್ಲಿ ಜಖಂ ಆದ ಅನೇಕ ಗುಡಿಸಲುಗಳ ಪೈಕಿ ಲಚ್ಚುಮಿಯದು ಸಹ ಒಂದು. ಅಲ್ಲಿ ರಂಗವಲ್ಲಿ ಹಾಕಿದ್ದೆ, ಅಡುಗೆಮನೆಗೆ ಸಿಮಿಂಟು ಮಾಡಿಸಿದ್ದೆ ಎಂದು ಗೋಳಾಡುತ್ತಿದ್ದ ಆಕೆಗೆ ತನ್ನ ಹಟ್ಟಿಯಲ್ಲಿ ಆಶ್ರಯ ನೀಡಿದ್ದ ಎಲುಗ. ಎಲುಗನಾದರೋ ಒಬ್ಬೊಂಟಿ. ಊರು ಹೋಗು ಅನ್ನುತ್ತಿದೆ. ಸುಡುಗಾಡು ಬಾ ಅನ್ನುತ್ತಿದೆ. ಹಂಗಾಯ್ತು ಅವನ ಮೈ ಎಂಬೋದು. ಕೂದಲ ಯಾಪಾರ, ಊರವರಿಗೆ ಸಣ್ಣಪುಟ್ಟ ಸೇವೆ ಅದು ಇಲ್ಲಂದರೆ ಹೊಟ್ಟೆಯಲ್ಲಿ ಅಣ್ಣನಂತೆ ನೋಡಿಕೊಳ್ಳುವ ಲಚ್ಚುಮಿ ಇದ್ದಳು. ಹೇಗೋ ಒಂದು ರೀತಿ ಬದುಕು ನಡೆಯುತ್ತಿತ್ತು. ರಾತ್ರಿ ಹೊತ್ತಿನಲ್ಲಿ ಲಚ್ಚುಮಿ ಹಾಕಿದ ಉಗುಳು ದಾಟುತ್ತಿರಲಿಲ್ಲ ಎಲುಗ. ಖಾರಾಸೇವು, ಮೆಣಸಿನಕಾಯಿ, ಕ್ವಾಟರು ಬಾಟಲಿ ಇತ್ಯಾದಿಯಾಗಿ ನಿರ್ವಂಚನೆಯಿಂದ ಸರಬರಾಜು ಮಾಡುತ್ತಿದ್ದ. ಇದರಿಂದಾಗಿ ಉಳಿಯುತ್ತಿದ್ದ ಚಿಲ್ಲರೆ ಪಲ್ಲರೆಯಲ್ಲಿ ಗ್ಲಾಸೋ ಅರ್ಧ ಗ್ಲಾಸೋ ಹೊಟ್ಟೆಗೆ ಹಾಕಿ ಮಲಗಿಕೊಂಡು ಬಿಡುತ್ತಿದ್ದ.
ಒಂದು ದಿನ ಮಧ್ಯಾಹ್ನಕ್ಕೆ ಬಂದ ಗಿರಾಕಿಯೊಬ್ಬ ಲಚ್ಚುಮಿಯನ್ನು ವಾರಕ್ಕೆ ಇಂತಿಷ್ಟು ಅಂತ ಮಾತಾಡಿ ಬಳ್ಳಾರಿಗೆ ಕರೆದುಕೊಂಡುಹೋದ. ಲಚ್ಚುಮಿ ಹೋಗುವ ಮೊದಲು ಎಲುಗನ ಕೈಗೆ ಹತ್ತು ರೂಪಾಯಿ ಇಟ್ಟಳು. ಬಹಳ ದಿನಕ್ಕೆ ಕೈಗೆ ಬಿದ್ದ ಹತ್ತು ರೂಪಾಯಿ ನೋಟು ನೋಡಿ ಅವನು ಹಿರಿಹಿರಿ ಹಿಗ್ಗಿದ. ಹೊತ್ತು ಮುಣುಗುತ್ತಲೇ ಗಡಂಗಿಗೆ ನುಗ್ಗಿ ಒಂದೇ ಸಾರಿಗೆ ಎರಡು ಗ್ಲಾಸು ಕುಡಿದುಬಿಟ್ಟ. ಮೈಯೊಳಗೆ ಎಂಥದೋ ಆವೇಶ ತುಂಬಿದಂತಾಯಿತು. ಭೂಮಿ ಹಗುರಾಗುತ್ತಿರುವಂತೆ, ತಾನು ಎಲ್ಲಿಗೋ ತರಗೆಲೆಯಾಗಿ ದಾರಿ ಹೋಗುತ್ತಿರುವಂತೆ ಭಾಸವಾಯಿತು. ಹಾರಿ ಹಾರಿ ಬಹುದೂರ ಹಾರಿ ಸ್ವರ್ಗ ಲೋಕ ಸೇರಿದಂತೆ, ಅಲ್ಲಿ ಹಂಸತೂಲಿಕಾ ತಲ್ಪದ ಮೇಲೆ ಬಂಗಾರದ ಮೈ ಪಡೆದು ಚವುಡ ಮಲಗಿರುವಂತೆಯೂ ಅವನನ್ನು ದೇವತಾ ಕನ್ನಿಕೆಯರು ಚಾಮರ ಬೀಸಿ, ಸುಗಂಧ ಲೇಪನಗಳನ್ನು ಹಚ್ಚುತ್ತ ಸೇವಿಸುತ್ತಿರುವಂತೆಯೂ ಕಂಡಿತು… ಓಹ್ ಚವುಡಾ ಚವೂಡಾ ನನ್ ಚವೂಡ ಎಂದು ಎಲುಗ ಒಂದೇ ಸಮನೆ ಬಡಬಡಿಸತೊಡಗಿದ… “ನಿಂಗೆ ನಿಜವಾಗ್ಲೂ ತಲೆಕೆಟ್ಟೈತಲೇ ಎಲುಗ, ನಿನ್ ಹಂದೀನ ಗೌಡ ಕೊಂದ್ ಹಾಕಿ ವರ್ಷಾಯ್ತು ಇನ್ನೂ ಮರ್‍ತಿಲ್ಲಲ್ಲಾ” ಎಂದು ಗಡಂಗಿನ ಚಿನ್ನಪ್ಪ ತಿಳಿಹೇಳಿದ. ನಂತರ ವಾಸ್ತವದ ಅರಿವಾಯಿತು. ತಲೆ ಗರಗರ ತಿರುಗಿ ಸರಿಹೋಯಿತು. ಪಲ್ಲಂಗದ ಮೇಲೆ ಮಲಗಿ ದೇವತಾ ಕನ್ನಿಕೆಯರಿಂದ ಚವುಡ ಸೇವಿಸಿಕೊಳ್ಳುತ್ತಿರುವುದು ಸುಳ್ಳೇ? ಸಿಟ್ಟುಬಂತು. ಅವುಡುಗಚ್ಚಿದ, ಮುಷ್ಟಿಬಿಗಿದ, ಇನ್ನೊಂದು ಗಳಾಸು ಕುಡಿದು ದೇಹದಲ್ಲಿ ಹೊಡ ಮುರಿದು ಏಳುತ್ತಿದ್ದ ಚವುಡನನ್ನು ಮರೆಯಲು ಪ್ರಯತ್ನಿಸಿದ. ಎಲುಗ ಕುಡಿದಷ್ಟು ಮೈಯೊಳಗೆ ನೂರು ಮೈ ಪಡೆಯುತ್ತಿತ್ತು ಚವುಡಹಂದಿಯು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಕುಡಿದೂ ಕುಡಿದೂ ಸುಸ್ತಾಗಿ ಭಾರವಾದ ಹೆಜ್ಜೆಗಳನ್ನು ಒಂದೊಂದಾಗಿ ಇಡುತ್ತ ಹಟ್ಟಿಗೆ ಬಂದ. ಹಟ್ಟಿಯ ತುಂಬ ಮೆತ್ತಿದ್ದ ಕತ್ತಲಲ್ಲಿ ಎಲ್ಲಿ ನೋಡಿದರಲ್ಲಿ ಚವುಡ…ಚವೂಡ… ಕದ ಮುಚ್ಚಿದ ಒದ್ದೆ ನೆಲ ಸೂಜಿಗಲ್ಲಿನಂತೆ ಸೆಳೆಯಿತು. ಬಿದ್ದುಕೊಂಡ.
*
ಚವುಡಾ… ಚವೂಡಾ…
ದಯೆತೋರಿ ನನ್ನ ಒಮ್ಮೆ ನೋಡ…
………..
ನಿದ್ದೆಯಲ್ಲದ ನಿದ್ದೆಯಲ್ಲಿ ಮಲಗಿದ್ದ ಎಲುಗನ ಮೈಯೊಳಗೆ ಕವಿಯೊಬ್ಬ ಅವತರಿಸಿದ್ದ. ಹಂದಿ ಹೊಕ್ಕ ಮನೆಗೆ, ಕಲ್ಲಿನ ಗೋಡೆಗಳು. ಉಕ್ಕಿನ ಛಾವಣಿಗಳು, ಉರುಳಾಡಿದ. ಕಟಕರಿಸುತ್ತಿರುವ ಹಲ್ಲುಗಳು, ಕಣ್ಣು ಬಿಚ್ಚುವನು. ಹಟ್ಟಿಯ ಮುರುಕು ತಡಿಕೆಗಳು ಕಾಣಿಸುವವು. ಮತ್ತೆ ಮುಚ್ಚುವನು… ಪುಟ್ಟ ಚವುಡಗೆ ತಾನು ಹಾಲು ಕುಡಿಸುತ್ತಿದ್ದುದು… ಮರಿ ಹಟ ಮಾಡುತ್ತಿದ್ದುದು… ಎಲ್ಲ ನೆನಪಾಗುವುದು. ಒಂದರ ಹಿಂದೆ ಒಂದರಂತೆ ನೆನಪುಗಳು ದಾಪುಗಾಲು ಹಾಕುತ್ತಿವೆ… ಮೈ ತುಂಬ ಸಾವಿರ ಮಂದಿ. ಒಬ್ಬೊಬ್ಬರ ಕೈಯಲ್ಲೂ ಒಂದೊಂದು ಆಯುಧ ಅವರೆಲ್ಲ ತನ್ನನ್ನೇ ಕೊಚ್ಚಿಹಾಕಿದರೆ… ಏನಿದೆ ತನ್ನ ಕೈಯಲ್ಲಿ ಹತ್ತು ಬೆರಳುಗಳಿಗೂ ಚೂಪನೆಯ ಉಗುರುಗಳುಂಟು. ಅಷ್ಟೆ, ಅಷ್ಟೆ ಸಾಕು… ಮನೆಹೊಕ್ಕ ಹಂದಿಯನ್ನು ಹೊರಬಿಟ್ಟರೆ… ಮನೆಗೆ ಬಂದ ಲಕ್ಷ್ಮಿಯನ್ನೇ ಹೊರಗೆ ಗದುಮಿದಂತೆಯೇ ಲೆಕ್ಕ: ಅಬ್ಬಾ ತನ್ನ ಚವುಡ…ಮಹಾಲಕ್ಷ್ಮಿ… ನಿದ್ದೆ ಹತ್ತುತ್ತಿಲ್ಲ. ಮೈಯೊಳಗೆ ಸಾವಿರ ಆಯುಧಗಳು ಝಳಪಿಸುತ್ತಿರುವುವು.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ಧಡ್ …ಧಡ್ ಹೆಜ್ಜೆ ಸದ್ದು…ಯಾರೋ ಹಟ್ಟಿ ಕಡೆ ಬರುತ್ತಿರುವಂಥ ಸದ್ದು… ಎಲ್ಲೋ ಕೇಳಿದಂತಿದೆ. ಯಾರವಿರಬಹುದು ಅವು? ನೆರಕೆ ಸಂದಿಯಲ್ಲಿಣುಕಿ ನೋಡಿದ. ವ್ಯಕ್ತಿಯೊಂದು ನಡೆದು ಬರುತ್ತಿರುವುದು, ಅದೇ ದಪ್ಪ ಅದೇ ಎತ್ತರ…ಹೌದು ಅವನೇ…ಗೌಡನ ಮಗ ಇರುಪಾಕ್ಸಿ…ಹಂದಿ ಜೀವಂತವಾಗಿ ಹೊರಗೆ ಹೋದರೆ…ನಗು ಬಂತು, ತಡೆಹಿಡಿದ, ಲಚ್ಚುಮಿ…ಲಚೂಮಿ…ಈಚಲುಗರಿ ಕೊಯ್ಯುವ ಚೂಪನೆಯ ಕಿರು ಕುಡುಗೋಲನ್ನು ದುಪ್ಪಟಿಯೊಳಗೆ ಹುದುಗಿಸಿಕೊಂಡು ಮಲಗಿದ…ಲಚ್ಚುಮಿ…ಲಚ್ಚುಮಿ… ಈಗ್ಲೆ ಮಲಗಿಬಿಟ್ಟಿದ್ದೀಯ…ಇರುಪಾಕ್ಸಿ ಗುನಗುತ್ತ ಕದ ಓರೆಮಾಡಿ ಒಳಗೆ ಬರುವನು. ಕವಿದುಕೊಂಡಿರುವ ಕತ್ತಲಲ್ಲಿ ಕಡ್ಡಿ ಗೀರುವನು. ಏಯ್ ಲಚ್ಚುಮಿ ಎಷ್ಟು ನಿದ್ದೆ ಹತ್ತಿಬಿಟೈತೆ ನಿನಗೆ? ಕ್ವಾಟ್ರು ತರಿಸಬೇಕಾಗಿತ್ತು. ಆ ಹಾಳಾದ ಎಲುಗ ಎಲ್ಲಿ ಹೋಗ್ಯಾನ ಸುಡುಗಾಡಿಗೆ? ಓಹ್ ನಿದ್ದೆ ಹತ್ತಿಬಿಟ್ಟಿತಲ್ಲಪ್ಪಾ ಇವ್ಳಿಗೆ? ಕೈಯಲ್ಲಿದ್ದ ಕಡ್ಡಿ ನಂದುವುದು… ಬಂದು ಮಲಗಿದ್ದ ಆಕೃತಿ ಹಿಡಿದು ಅಲುಗಾಡಿಸುವನು. ಆ ಆಕೃತಿ ಮಿಂಚಿನಂತೆ ಎದ್ದು ಕೈಯಲ್ಲಿದ್ದ ಕುಡುಗೋಲನ್ನು ಗುರಿ ಇಟ್ಟು ಬೀಸುತ್ತದೆ…ಹ್ಹಾ…ಅಯ್ಯೋ ಮತ್ತೆ…ಮತ್ತೆ…ಏಟುಗಳು… ಕತ್ತಲಲ್ಲಿ ಹರಿಯುವುದು ಕೆಂಪು…
ಎಲುಗ ಕೈಗಂಟಿದ ಕೆಂಪನ್ನು ಧೋತರಕ್ಕೆ ಒರೆಸಿಕೊಳ್ಳುತ್ತ ಹಟ್ಟಿಯ ನಡುವೆ ತಗ್ಗು ತೋಡಲು ಆ ಮೂಲೆಯಲ್ಲಿ ಗುದ್ದಲಿ ತರಲು ನಾಲ್ಕು ಹೆಜ್ಜೆ ಆ ಕಡೆ ಹಾಕಿದನು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಕುಂ. ವೀರಭದ್ರಪ್ಪ (1953): ಕುಂ.ವೀ. ಎಂದೇ ಪ್ರಸಿದ್ಧರಾಗಿರುವ ಕುಂಬಾರ ವೀರಭದ್ರಪ್ಪ ಎಂ.ಎ. (ಕನ್ನಡ) ಪದವೀಧರರು. ಕುಂ. ವೀರಭದ್ರಪ್ಪ 1953ರ ಅಕ್ಟೋಬರ್ 1ರಂದು ಜನಿಸಿದ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಅವರು, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ಕೆಲವು ಪ್ರಕಟಿತ ಕೃತಿಗಳು: ‘ಇನ್ನಾದರೂ ಸಾಯಬೇಕು’ (1982), ‘ಡೋಮ ಮತ್ತಿತರ ಕಥೆಗಳು'(1985), ‘ಕುಂ.ವೀ.-ಆಯ್ದ ಕಥೆಗಳು’ (1985) ‘ಭಗವತಿ ಕಾಡು’ (1990), ‘ನಿಜಲಿಂಗ’ (1994), ‘ಸುಶೀಲಿ ಎಂಬ ನಾಯಿಯೂ ವಾಗಿಲಿ ಎಂಬ ಗ್ರಾಮವೂ’ (1995), ‘ಅಪೂರ್ವ ಚಿಂತಾಮಣಿ ಕಥೆ’ (1995) (ಎಲ್ಲ ಕಥಾಸಂಗ್ರಹಗಳು); ‘ಕಪ್ಪು’ (1981), ‘ಬೇಲಿ ಮತ್ತು ಹೊಲ’ (1982), ‘ಆಸ್ತಿ’ (1983), ‘ಕೆಂಡದ ಮಳೆ’ (1986), ‘ಬೇಟೆ’ (1986), ‘ಪಕ್ಷಿಗಳು’ (1989), ‘ಪ್ರತಿದ್ವಂದಿ’ (1987), ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ (1992), ‘ಹನುಮ’ (1996)- ಎಲ್ಲ ಕಾದಂಬರಿಗಳು. ಇವರ ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’, ‘ಬೇಟೆ’, ‘ಬೇಲಿಯ ಹೂಗಳು’, ‘ಕೆಂಡದ ಮಳೆ’, ‘ಕೂರ್ಮಾವತಾರ’ ಕತೆಗಳು ನಾಟಕಗಳಾಗಿ, ಚಲನಚಿತ್ರಗಳಾಗಿ ತೆರೆ ಕಂಡಿವೆ. ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನೂ ಗಳಿಸಿವೆ. ಆಂಧ್ರದ ಹಿರೇಹಳ್ಳದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿ ಈಗ ನಿವೃತ್ತರಾಗಿದ್ದಾರೆ. ಇವರು ಸೃಜನಶೀಲ ಸಾಹಿತ್ಯದಿಂದ ಸೃಜನೇತರ ಸಾಹಿತ್ಯದತ್ತಲೂ ಹೊರಳಿಕೊಂಡವರು. ಚಾಪ್ಲಿನ್ ಕುರಿತು ಮಹತ್ವದ ಕೃತಿಯೊಂದನ್ನು ಬರೆದರು. ಶಾಮಣ್ಣ, ಯಾಪಿಲ್ಲು ಮತ್ತು ಅರಮನೆ ಕಾದಂಬರಿಗಳನ್ನು ಬರೆದರು. ಅರಮನೆ ಕೃತಿಗೆ 2007ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.




