ಹಿಂದು ಮತ್ತು ಮತ್ತೊಂದು ಧರ್ಮೀಯರ ನಡುವೆ ನಡೆಯುವ ವಿವಾಹವನ್ನು ಕೇವಲ ಹಿಂದು ವಿವಾಹ ಕಾಯ್ದೆಯಡಿ ನೋಂದಣಿ ಮಾಡಿಕೊಂಡ ಮಾತ್ರಕ್ಕೆ ಅದಕ್ಕೆ ಕಾನೂನುಬದ್ಧ ಮಾನ್ಯತೆ ಸಿಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಕ್ರೈಸ್ತ ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬರು ಹಿಂದು ಯುವತಿಯೊಂದಿಗಿನ ತಮ್ಮ ವಿವಾಹವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ವಿ. ಕಾರ್ತಿಕೇಯನ್ ಮತ್ತು ನ್ಯಾಯಮೂರ್ತಿ ಎಸ್. ರವಿಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 5 ಮತ್ತು 8 ಅನ್ನು ಉಲ್ಲೇಖಿಸಿರುವ ನ್ಯಾಯಪೀಠ, “ಈ ಕಾಯ್ದೆಯಡಿ ಕೇವಲ ಇಬ್ಬರು ಹಿಂದುಗಳ ನಡುವೆ ಮಾತ್ರ ವಿವಾಹ ನೆರವೇರಿಸಲು ಸಾಧ್ಯ. ಹಿಂದು ಮತ್ತು ಮತ್ತೊಂದು ಧರ್ಮವನ್ನು ಪಾಲಿಸುವ ವ್ಯಕ್ತಿಯ ನಡುವಿನ ವಿವಾಹವನ್ನು ಈ ಕಾಯ್ದೆಯಡಿ ನೋಂದಾಯಿಸಿದ ಮಾತ್ರಕ್ಕೆ ಅದು ಸಿಂಧುವಾಗುವುದಿಲ್ಲ. ಅಂತಹ ಅಂತರ್-ಧರ್ಮೀಯ ವಿವಾಹಗಳಿಗೆ ಭಾರತೀಯ ಕ್ರೈಸ್ತ ವಿವಾಹ ಕಾಯ್ದೆ ಅಥವಾ ವಿಶೇಷ ವಿವಾಹ ಕಾಯ್ದೆಯಡಿ ಮಾತ್ರ ಕಾನೂನು ಮಾನ್ಯತೆ ಪಡೆಯಲು ಅವಕಾಶವಿದೆ,” ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ ಏನು?
ಅರ್ಜಿದಾರರಾದ ಕ್ರೈಸ್ತ ಯುವಕನಿಗೆ ತನ್ನ ಸಂಬಂಧಿಯೂ ಆಗಿದ್ದ ಹಿಂದು ಯುವತಿಯ ಪರಿಚಯವಿತ್ತು. 2009ರ ಫೆಬ್ರವರಿ 20ರಂದು ಬೇರೊಬ್ಬರ ಮದುವೆಗೆ ಸಾಕ್ಷಿಯಾಗಿ ಸಹಿ ಹಾಕಲು ಚೆನ್ನೈಗೆ ಬರುವಂತೆ ಯುವತಿ ಕರೆಸಿಕೊಂಡಿದ್ದರು. ಆದರೆ, ವಂಚನೆಯಿಂದ ತನ್ನದೇ ಮದುವೆ ನೋಂದಣಿ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಯುವಕ ಆರೋಪಿಸಿದ್ದ. ಮದುವೆಯಾದಾಗಿನಿಂದ ತಾವು ಒಟ್ಟಿಗೆ ವಾಸಿಸಿಲ್ಲವಾದ್ದರಿಂದ ವಿವಾಹವನ್ನು ರದ್ದುಗೊಳಿಸಬೇಕೆಂದು ಕೋರಿ ಆತ ಚೆನ್ನೈ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಆದರೆ, ಯುವಕನ ಧರ್ಮದ ಕುರಿತಾದ ಸಾಕ್ಷ್ಯಗಳಲ್ಲಿ ಗೊಂದಲವಿದೆ ಎಂದು ಹೇಳಿದ್ದ ಕೌಟುಂಬಿಕ ನ್ಯಾಯಾಲಯವು 2019ರ ನವೆಂಬರ್ 13ರಂದು ವಿಚ್ಛೇದನ ನೀಡಲು ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯುವಕ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಯ ವೇಳೆ ಕೆಳಹಂತದ ನ್ಯಾಯಾಲಯದ ತಪ್ಪನ್ನು ತಿದ್ದಿದ ಹೈಕೋರ್ಟ್, “ಬ್ಯಾಪ್ಟಿಸಂ ಕೇವಲ ಮತಾಂತರಗೊಂಡಾಗ ಮಾತ್ರವಲ್ಲ, ಕ್ರೈಸ್ತ ಕುಟುಂಬದಲ್ಲಿ ಹುಟ್ಟಿದವರು ಒಂದು ಚರ್ಚ್ ಪಂಗಡದಿಂದ ಮತ್ತೊಂದು ಪಂಗಡಕ್ಕೆ ಸೇರಿದಾಗಲೂ ನಡೆಯುತ್ತದೆ. ಅರ್ಜಿದಾರರ ಪೋಷಕರು ಕೂಡ ಕ್ರೈಸ್ತರಾಗಿರುವ ದಾಖಲೆಗಳಿವೆ” ಎಂದು ಗಮನಿಸಿತು.
ಮುಂದುವರಿದು, “ಭಾರತದಂತಹ ಬಹುಧರ್ಮೀಯ ದೇಶದಲ್ಲಿ, ಒಂದು ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದಂತೆ ಕಾಣುವ ಹೆಸರನ್ನು ವ್ಯಕ್ತಿಯೊಬ್ಬ ಹೊಂದಿದ್ದಾನೆ ಎಂಬ ಒಂದೇ ಕಾರಣಕ್ಕೆ ಆತನ ಧರ್ಮವನ್ನು ನಿರ್ಧರಿಸಲು ಅಥವಾ ಊಹಿಸಲು ಸಾಧ್ಯವಿಲ್ಲ. ಕೇವಲ ಹೆಸರಿನ ಆಧಾರದ ಮೇಲೆ ವ್ಯಕ್ತಿಯ ಧಾರ್ಮಿಕ ಗುರುತನ್ನು ತಿರಸ್ಕರಿಸುವುದು ಸರಿಯಲ್ಲ” ಎಂದು ಸ್ಪಷ್ಟಪಡಿಸಿತು.
ಕಾನೂನುಬಾಹಿರವಾಗಿ ನೋಂದಣಿಯಾಗಿದ್ದ ವಿವಾಹವನ್ನು ಅಸಿಂಧು ಎಂದು ಘೋಷಿಸಲು 16 ವರ್ಷಗಳು ಬೇಕಾಯಿತು ಎಂದು ವಿಷಾದ ವ್ಯಕ್ತಪಡಿಸಿದ ನ್ಯಾಯಾಲಯ, ಭವಿಷ್ಯದಲ್ಲಿ ಇಂತಹ ವ್ಯಾಜ್ಯಗಳನ್ನು ತಪ್ಪಿಸಲು ಈ ತೀರ್ಪಿನ ಪ್ರತಿಯನ್ನು ನೋಂದಣಿ ಮಹಾಪರಿವೀಕ್ಷಕರಿಗೆ ಕಳುಹಿಸುವಂತೆ ಮತ್ತು ಅವರು ಅದನ್ನು ರಾಜ್ಯದ ಎಲ್ಲಾ ವಿವಾಹ ನೋಂದಣಾಧಿಕಾರಿಗಳಿಗೆ ರವಾನಿಸುವಂತೆ ನಿರ್ದೇಶನ ನೀಡಿದೆ.



