ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚು ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (55) ಅವರಿಗೆ ಅಮೆರಿಕದ ಫೆಡರಲ್ ನ್ಯಾಯಾಲಯ ಶುಕ್ರವಾರ 235 ತಿಂಗಳುಗಳ (19 ವರ್ಷ 7 ತಿಂಗಳು) ಜೈಲು ಶಿಕ್ಷೆ ವಿಧಿಸಿದೆ. ಅಮೆರಿಕದ ಪ್ರಜೆಯನ್ನು ಹತ್ಯೆ ಮಾಡಲು ರೂಪಿಸಿದ್ದ ಈ ಸಂಚನ್ನು ನ್ಯಾಯಾಧೀಶ ವಿಕ್ಟರ್ ಮರೆರೊ ‘ಅಮೆರಿಕದ ಸಾರ್ವಭೌಮತ್ವದ ಮೇಲಿನ ದಾಳಿ’ ಎಂದು ಬಣ್ಣಿಸಿದ್ದಾರೆ.
ಶಿಕ್ಷೆ ಪೂರ್ಣಗೊಂಡ ಬಳಿಕ ಗುಪ್ತಾ ಅವರನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಸುಪಾರಿ ಹತ್ಯೆಗೆ ಸಂಚು, ಸುಪಾರಿ ಹತ್ಯೆ ಹಾಗೂ ಅಕ್ರಮ ಹಣ ವರ್ಗಾವಣೆ ಸಂಚು ಸೇರಿದಂತೆ ಮೂರು ಆರೋಪಗಳನ್ನು ಗುಪ್ತಾ ಕಳೆದ ಫೆಬ್ರುವರಿ 13ರಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದರು. ಈ ಆರೋಪಗಳಿಗೆ ಗರಿಷ್ಠ 40 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿತ್ತು.
ಪ್ರಾಸಿಕ್ಯೂಷನ್ 24 ವರ್ಷಕ್ಕೂ ಹೆಚ್ಚು (293 ತಿಂಗಳು) ಶಿಕ್ಷೆಗೆ ಕೋರಿದ್ದರೆ, ಭಾರತದ ಮಾಜಿ ಅಧಿಕಾರಿಯ ಒತ್ತಡದಿಂದ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ವಾದಿಸಿದ ರಕ್ಷಣಾ ವಕೀಲರು 12 ವರ್ಷಗಳಿಗೆ (144 ತಿಂಗಳು) ಶಿಕ್ಷೆ ಇಳಿಸಲು ಮನವಿ ಮಾಡಿದ್ದರು. ನ್ಯಾಯಾಲಯದಲ್ಲಿ ಮಾತನಾಡಿದ ಗುಪ್ತಾ, ಪನ್ನುನ್, ಸಿಖ್ ಸಮುದಾಯ ಹಾಗೂ ತಮ್ಮ ಕುಟುಂಬದ ಕ್ಷಮೆಯಾಚಿಸಿ ಶಿಕ್ಷೆಯನ್ನು ಒಪ್ಪಿಕೊಂಡರು.
ಅಮೆರಿಕದ ನೆಲದಲ್ಲಿ ಹಿಂಸಾಚಾರಕ್ಕೆ ಯತ್ನಿಸುವವರು ಎಲ್ಲೇ ಇದ್ದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಈ ತೀರ್ಪು ಸ್ಪಷ್ಟ ಎಚ್ಚರಿಕೆ ಎಂದು ಅಮೆರಿಕದ ಅಟಾರ್ನಿ ಜೇಮಿ ಮೆಕ್‌ಡೊನಾಲ್ಡ್ ಹೇಳಿದರು. ಈ ಸಂಚಿನಿಂದ ತಮ್ಮ ಜೀವಕ್ಕೆ ನಿರಂತರ ಬೆದರಿಕೆ ಉಂಟಾಗಿ, ಭದ್ರತೆಯ ನಡುವೆ ಬದುಕುವಂತಾಗಿದೆ ಎಂದು ಪನ್ನುನ್ ನ್ಯಾಯಾಲಯದಲ್ಲಿ ತಿಳಿಸಿದರು.
‘ರಾ’ದ ಮಾಜಿ ಅಧಿಕಾರಿ ವಿಕಾಸ್ ಯಾದವ್ ಸೂಚನೆಯಂತೆ ಗುಪ್ತಾ, ಪನ್ನುನ್ ಹತ್ಯೆಗೆ 1 ಲಕ್ಷ ಡಾಲರ್ ಸುಪಾರಿ ನೀಡಲು ಮುಂದಾಗಿ, 2023ರ ಜೂನ್‌ನಲ್ಲಿ 15 ಸಾವಿರ ಡಾಲರ್ ಮುಂಗಡ ಪಾವತಿಸಿದ್ದರು. ಆದರೆ ಸುಪಾರಿ ಹಂತಕ ಅಮೆರಿಕದ ರಹಸ್ಯ ಅಧಿಕಾರಿಯಾಗಿದ್ದರಿಂದ ಸಂಚು ಬಯಲಾಯಿತು. 2023ರ ಜೂನ್ 30ರಂದು ಪ್ರಾಗ್‌ನಲ್ಲಿ ಬಂಧಿತರಾದ ಗುಪ್ತಾ ಅವರನ್ನು 2024ರ ಜೂನ್‌ನಲ್ಲಿ ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು.
ಈ ಸಂಚು ಶಸ್ತ್ರಾಸ್ತ್ರ ಹಾಗೂ ಮಾದಕವಸ್ತು ಸಾಗಣೆ ಚರ್ಚೆಗಳನ್ನೂ ಒಳಗೊಂಡಿತ್ತು ಹಾಗೂ ಕೆನಡಾದಲ್ಲಿ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ನಂಟಿತ್ತು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ. ಪ್ರಕರಣದ ಮತ್ತೊಬ್ಬ ಆರೋಪಿ ವಿಕಾಸ್ ಯಾದವ್ ಇನ್ನೂ ಬಂಧನಕ್ಕೊಳಗಾಗಿಲ್ಲ. ಯಾದವ್ ಈಗ ಸರ್ಕಾರಿ ಸೇವೆಯಲ್ಲಿಲ್ಲ ಎಂದು ಭಾರತ ಈ ಹಿಂದೆ ಸ್ಪಷ್ಟಪಡಿಸಿತ್ತು.
ಅಮೆರಿಕದ ಆರೋಪಗಳ ಹಿನ್ನೆಲೆಯಲ್ಲಿ ಭಾರತ 2023ರ ನವೆಂಬರ್‌ನಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ್ದು, ವ್ಯಕ್ತಿಯೊಬ್ಬರ ವಿರುದ್ಧ ಕಾನೂನು ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿರುವುದಾಗಿ ಕೇಂದ್ರ ಗೃಹ ಸಚಿವಾಲಯ 2025ರ ಜನವರಿಯಲ್ಲಿ ತಿಳಿಸಿತ್ತು. ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಗುಪ್ತಾ, ಜೈಲಿನಲ್ಲಿ ಯೋಗ ಮತ್ತು ಧ್ಯಾನದ ಮೊರೆ ಹೋಗಿರುವುದಾಗಿ ಉಲ್ಲೇಖಿಸಿದ್ದಾರೆ.



