ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ತತ್ವಾದರ್ಶಗಳಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ, ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಗೆ ನವೆಂಬರ್ 20ರಂದು ದೂರು ಸಲ್ಲಿಸಲಾಗಿದೆ.
ನವೆಂಬರ್ 13ರಂದು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ವಿಡಿಯೋದಲ್ಲಿ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಅವರನ್ನು ಕಳ್ಳ ಹಾಗೂ ಕೊಲೆಗಾರನಂತೆ ಬಿಂಬಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಹೇಳಿಕೆಗಳು ಬಸವತತ್ವ ಅನುಯಾಯಿಗಳು, ಕನ್ನಡಿಗರು ಹಾಗೂ ಪ್ರಗತಿಪರರ ಭಾವನೆಗಳಿಗೆ ನೋವುಂಟುಮಾಡಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಹಿನ್ನೆಲೆಯಲ್ಲಿ ರವಿ ಹಂಜ್ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಇದೇ ವೇಳೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಕನ್ಹರಿ ಸ್ವಾಮೀಜಿಯವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯಲ್ಲಿ ಡಾ. ರವಿ ಬಿರಾದಾರ, ಅರವಿಂದ ಕುಲಕರ್ಣಿ, ಪ್ರಭುಗೌಡ ಪಾಟೀಲ, ಅಡಿವೆಪ್ಪ ಸಾಲಗಲ್ಲ, ಅಕ್ಷಯಕುಮಾರ ಅಜಮನಿ ಸೇರಿದಂತೆ ಬಸವಪರ, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.



