ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಸೋಮೇಶ್ವರ ವಿಧಾನಸಭಾ ಕ್ಷೇತ್ರದ ತ್ರಿವೇಣಿ ಘಾಟ್‌ನಲ್ಲಿರುವ ಸ್ಮಶಾನ ಪ್ರದೇಶದಲ್ಲಿ ಇಬ್ಬರು ವಿದ್ಯಾರ್ಥಿಗಳು ಟೇಬಲ್ ಟೆನ್ನಿಸ್ ಅಭ್ಯಾಸ ಮಾಡುತ್ತಿರುವ ಚಿತ್ರಗಳು ವೈರಲ್ ಆದ ನಂತರ, ರಾಜ್ಯದ ಕ್ರೀಡಾ ಮೂಲಸೌಕರ್ಯಗಳ ಸ್ಥಿತಿಗತಿ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಮುಖ್ಯವಾಗಿ ಉತ್ತರಾಖಂಡದ ಕ್ರೀಡಾ ಸಚಿವರಾದ ರೇಖಾ ಆರ್ಯ ಅವರ ಕ್ಷೇತ್ರದಲ್ಲೇ ಕ್ರೀಡೆಯ ಪರಿಸ್ಥಿತಿ ಹೀಗಿರುವುದು ವಿಪಕ್ಷಗಳು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಇಂಟರ್ ಕಾಲೇಜಿನ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಾದ ಕ್ರಿಶ್ ಮತ್ತು ಯುವರಾಜ್ ಬೋರಾ, ಶಾಲೆಯ ರಜಾದಿನಗಳಲ್ಲಿ ಅಭ್ಯಾಸ ಮಾಡಲು ಸೂಕ್ತ ಸಾರ್ವಜನಿಕ ಮೈದಾನ ಅಥವಾ ಕ್ರೀಡಾಂಗಣವಿಲ್ಲದೆ, ಅಂತಿಮ ಸಂಸ್ಕಾರದ ವೇಳೆ ಶವಗಳನ್ನು ಇರಿಸುವ ಜಾಗವನ್ನೇ ತಾತ್ಕಾಲಿಕ ಅಂಕಣವಾಗಿ ಬಳಸಿಕೊಂಡಿದ್ದರು. ಈ ದೃಶ್ಯಗಳ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಒಲಿಂಪಿಕ್ ಕ್ರೀಡಾಕೂಟ ತುಮಕೂರಿನ ಹೊಸ ಇತಿಹಾಸ : ಸಚಿವ ಡಾ: ಜಿ. ಪರಮೇಶ್ವರ
ಈ ಘಟನೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಅಲ್ಮೋರಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೂಪೇಂದ್ರ ಭೋಜ್ ಅವರು “ಮಕ್ಕಳು ತರಬೇತಿಗಾಗಿ ಸ್ಮಶಾನವನ್ನು ಬಳಸಬೇಕಾಗಿ ಬಂದಿರುವುದು ಅತ್ಯಂತ ಶೋಚನೀಯ ಮತ್ತು ದುರದೃಷ್ಟಕರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮೇಶ್ವರ ಕ್ಷೇತ್ರವು ಉತ್ತರಾಖಂಡದ ಕ್ರೀಡಾ ಸಚಿವರಾದ ರೇಖಾ ಆರ್ಯ ಅವರ ಸ್ವಕ್ಷೇತ್ರವಾಗಿದೆ. ಸಚಿವರ ಕ್ಷೇತ್ರದಲ್ಲೇ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಮೂಲಸೌಕರ್ಯ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ, ಅಲ್ಮೋರಾ ಜಿಲ್ಲಾಧಿಕಾರಿ ಅಂಶುಲ್ ಸಿಂಗ್ ಅವರು ತಕ್ಷಣ ಗಮನಹರಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಂತರ ಜಿಲ್ಲಾ ಶಿಕ್ಷಣಾಧಿಕಾರಿ ರವಿ ಮೆಹ್ತಾ ಅವರ ಸೂಚನೆಯಂತೆ, ವಿದ್ಯಾರ್ಥಿಗಳಿಗೆ ರಜಾದಿನಗಳಲ್ಲೂ ಶಾಲಾ ಆವರಣದಲ್ಲೇ ಟೇಬಲ್ ಟೆನ್ನಿಸ್ ಅಭ್ಯಾಸ ಮಾಡಲು ವಿಶೇಷ ಅನುಮತಿ ನೀಡಲಾಗಿದೆ.




