ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಸೆಪ್ಟಂಬರ್ 17ರಂದು ಹತ್ತನೇ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ ಈ ಸಮ್ಮೇಳನವು ಏಕಪಕ್ಷೀಯವಾಗಿರದೆ, ತಾಲೂಕಿನ ಎಲ್ಲರನ್ನೂ ಒಳಗೊಂಡಂತೆ ಸಾಹಿತ್ಯ ಸಮ್ಮೇಳನ ನಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಮದ್ದೂರು ತಾಲೂಕ ಘಟಕ ಖಂಡಿನೀಯ ವ್ಯಕ್ತಪಡಿಸಿದೆ.
ಈ ಕುರಿತು ಮದ್ದೂರು ತಾಲೂಕು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ, “ಮದ್ದೂರು ತಾಲೂಕಿನಲ್ಲಿ ನಡೆಯಲಿರುವ 10ನೇ ತಾಲೂಕು ಸಾಹಿತ್ಯ ಸಮ್ಮೇಳನದ ದಿನಾಂಕವನ್ನು ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕವು ತಾಲೂಕಿನ ಸಾಹಿತಿಗಳು, ಕನ್ನಡಪರ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ನಿಗದಿಪಡಿಸಿರುವುದು ಖಂಡನೀಯ. ಸಾರ್ವಜನಿಕ ಸ್ವರೂಪದ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಪ್ರಜಾಸತ್ತಾತ್ಮಕವಾಗಿ ರೂಪಿಸಬೇಕು” ಎಂದು ಆಗ್ರಹಿಸಿದರು.
“ತಾಲೂಕು ಸಾಹಿತ್ಯ ಸಮ್ಮೇಳನವೆಂದರೆ ಕೇವಲ ವೇದಿಕೆ ನಿರ್ಮಿಸಿ, ಗಣ್ಯರನ್ನು ಕರೆಸಿ, ಉದ್ಘಾಟನೆ ಮಾಡಿ, ಭಾಷಣ ಮಾಡಿಸಿ, ಊಟ ಹಾಕಿಸಿ ಮುಗಿಸುವ ಕಾರ್ಯಕ್ರಮವಲ್ಲ. ಅದು ಆ ತಾಲೂಕಿನ ಸಾಹಿತ್ಯ, ಭಾಷೆ, ಇತಿಹಾಸ, ಜನಪದ, ಕೃಷಿ ಬದುಕು, ಸಾಮಾಜಿಕ ಚಳವಳಿಗಳು, ಕಲೆ, ರಂಗಭೂಮಿ, ಶಿಕ್ಷಣ, ಪತ್ರಿಕೋದ್ಯಮ, ಹೊಸ ತಲೆಮಾರಿನ ಬರವಣಿಗೆ ಹಾಗೂ ಸಮಕಾಲೀನ ಸಮಸ್ಯೆಗಳು ಒಂದೇ ವೇದಿಕೆಯಲ್ಲಿ ಚರ್ಚೆಯಾಗುವ ಒಂದು ಸಾರ್ವಜನಿಕ ನುಡಿಹಬ್ಬವಾಗಬೇಕು” ಎಂದರು.
“ಸಾಹಿತ್ಯ ಸಮ್ಮೇಳನಗಳು ಕೇವಲ ಜಾತ್ರೆಯ ಸ್ವರೂಪ ಪಡೆಯದೆ, ಸಮ್ಮೇಳನ ನಡೆಯುವ ಪ್ರದೇಶಕ್ಕೆ ಸಂಬಂಧಿಸಿದ ಸಾಹಿತ್ಯಿಕ, ಐತಿಹಾಸಿಕ ಹಾಗೂ ಸಾಮಾಜಿಕ ವಿಷಯಗಳ ಕುರಿತು ಚಿಂತನ-ಮಂಥನ ನಡೆಯಬೇಕು. ಹೀಗಾಗಿ ಮದ್ದೂರು ತಾಲೂಕು ಸಾಹಿತ್ಯ ಸಮ್ಮೇಳನವು ಮದ್ದೂರು ಪಟ್ಟಣದ ಕೆಲವೇ ಪದಾಧಿಕಾರಿಗಳ ಕಾರ್ಯಕ್ರಮವಾಗಬಾರದು; ಇಡೀ ತಾಲೂಕಿನ ಸಾಂಸ್ಕೃತಿಕ ಪ್ರತಿನಿಧಿಯಾಗಬೇಕು” ಎಂದು ಹೇಳಿದರು.

“ಸಮ್ಮೇಳನದ ಮೊದಲ ಹೆಜ್ಜೆಯೇ ದಿನಾಂಕ ನಿಗದಿ. ಆದರೆ ಸಮ್ಮೇಳನದ ದಿನಾಂಕವನ್ನು ಮೂರ್ನಾಲ್ಕು ಜನರು ಕುಳಿತು ಘೋಷಿಸುವ ಬದಲು ಮೊದಲು ಪೂರ್ವಭಾವಿ ಸಮಾಲೋಚನಾ ಸಭೆ ನಡೆಸುವುದು ಆರೋಗ್ಯಕರ ಪದ್ಧತಿ. ಆ ಸಭೆಗೆ ಕನಿಷ್ಠ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಪದಾಧಿಕಾರಿಗಳು, ಹಿಂದಿನ ತಾಲೂಕು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರು, ತಾಲೂಕಿನ ಹಿರಿಯ ಸಾಹಿತಿಗಳು, ಯುವ ಲೇಖಕರು ಮತ್ತು ಕವಿಗಳು, ಮಹಿಳಾ ಸಾಹಿತಿಗಳು, ದಲಿತ-ಬಂಡಾಯ ಸಾಹಿತ್ಯ ವಲಯದ ಪ್ರತಿನಿಧಿಗಳು, ಜನಪದ ಕಲಾವಿದರು, ರಂಗಭೂಮಿ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಶಿಕ್ಷಕರು ಮತ್ತು ಉಪನ್ಯಾಸಕರು, ಶಾಲಾ-ಕಾಲೇಜುಗಳ ಪ್ರತಿನಿಧಿಗಳು, ವಿದ್ಯಾರ್ಥಿ ಸಂಘಟನೆಗಳು, ಪತ್ರಕರ್ತರು, ಪ್ರಕಾಶಕರು, ಪುಸ್ತಕ ಮಾರಾಟಗಾರರು, ರೈತ, ಕಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು, ಮದ್ದೂರು ತಾಲೂಕಿನ ವಿವಿಧ ಹೋಬಳಿ ಹಾಗೂ ಗ್ರಾಮೀಣ ಪ್ರದೇಶಗಳ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದೇ ಏಕಪಕ್ಷೀಯವಾಗಿ ದಿನಾಂಕ ನಿಗದಿ ಪಡಿಸಿರುವುದು ಖಂಡನೀಯ” ಎಂದರು.
“ನಾವು ಸಾಹಿತ್ಯ ಸಮ್ಮೇಳನಕ್ಕೆ ವಿರೋಧಿಗಳಲ್ಲ; ಸಾಹಿತ್ಯ ಸಮ್ಮೇಳನವನ್ನು ಕೆಲವೇ ವ್ಯಕ್ತಿಗಳ ಕಾರ್ಯಕ್ರಮವನ್ನಾಗಿ ಮಾಡುವುದಕ್ಕೆ ವಿರೋಧಿಗಳು. ಸಮ್ಮೇಳನ ನಡೆಯಲಿ, ಅದ್ದೂರಿಯಾಗಿ ನಡೆಯಲಿ; ಆದರೆ ಮದ್ದೂರು ತಾಲೂಕಿನ ಸಾಹಿತಿಗಳು, ಕನ್ನಡಪರರು, ಕಲಾವಿದರು, ಶಿಕ್ಷಕರು, ವಿದ್ಯಾರ್ಥಿಗಳು, ಮಹಿಳೆಯರು, ಯುವಜನರು, ಜನಪದ ಕಲಾವಿದರು ಮತ್ತು ಸಮಾಜದ ಎಲ್ಲ ವರ್ಗಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಯಲಿ. ಕನ್ನಡ ಸಾಹಿತ್ಯ ಪರಿಷತ್ತು ಯಾರೊಬ್ಬರ ವೈಯಕ್ತಿಕ ಸಂಸ್ಥೆಯಲ್ಲ; ಕನ್ನಡ ಸಾಹಿತ್ಯ ಸಮ್ಮೇಳನ ಯಾರೊಬ್ಬರ ಸ್ವಂತ ಕಾರ್ಯಕ್ರಮವೂ ಅಲ್ಲ. ಅದು ತಾಲೂಕಿನ ಸಮಸ್ತ ಕನ್ನಡಿಗರ ನುಡಿಹಬ್ಬವಾಗಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಚನಕಾರರ ವೈಚಾರಿಕತೆಯಲ್ಲಿ ನಾಗರ ಪಂಚಮಿ
“ಮದ್ದೂರಿನ 10ನೇ ತಾಲೂಕು ಸಾಹಿತ್ಯ ಸಮ್ಮೇಳನ ಯಾರಿಗಾಗಿ ಮತ್ತು ಯಾರನ್ನೆಲ್ಲ ಒಳಗೊಂಡು ನಡೆಸಲಾಗುತ್ತಿದೆ? ಎನ್ನುವುದೇ ಮುಖ್ಯ. ಸಮ್ಮೇಳನದ ಯಶಸ್ಸನ್ನು ವೇದಿಕೆಯ ಅಲಂಕಾರ, ಜನಸಂದಣಿ ಅಥವಾ ಖರ್ಚಿನಿಂದ ಅಳೆಯಬಾರದು; ಎಷ್ಟು ಹೊಸ ಧ್ವನಿಗಳಿಗೆ ಅವಕಾಶ ಸಿಕ್ಕಿತು, ಮದ್ದೂರಿನ ಎಷ್ಟು ಪ್ರಶ್ನೆಗಳು ಚರ್ಚೆಯಾದವು, ಎಷ್ಟು ಸ್ಥಳೀಯ ಸಾಹಿತ್ಯ ದಾಖಲಾಯಿತು ಮತ್ತು ಎಷ್ಟು ಜನರನ್ನು ಒಳಗೊಂಡಿತು ಎಂಬುದಕ್ಕೆ ಸಾಕ್ಷಿಯಾಗಬೇಕು” ಎಂಬುದು ಕರವೇ ಮದ್ದೂರು ತಾಲೂಕು ಘಟಕದ ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ ಅವರ ಅಭಿಪ್ರಾಯವಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷೆ ಪ್ರಭಾವತಿ ಬೋರೇಗೌಡ, ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಪುಟ್ಟರಾಜು, ಮದ್ದೂರು ಪಟ್ಟಣ ಘಟಕದ ಅಧ್ಯಕ್ಷ ಮಹಾದೇವು, ಪಟ್ಟಣ ಘಟಕದ ಅಧ್ಯಕ್ಷೆ ಮದ್ದೂರು ಗೀತಾ, ಚಿಕ್ಕರಸೀಕೆರೆ ಹೋಬಳಿಯ ಅಧ್ಯಕ್ಷ ಅರೆ ಚಾಕನಹಳ್ಳಿ ಶಿವರಾಜು, ಆತಗೂರು ಹೋಬಳಿ ಅಧ್ಯಕ್ಷ ಲೋಕೇಶ್, ಕೊಪ್ಪ ಹೋಬಳಿ ಅಧ್ಯಕ್ಷ ಮಂಜೇಶ್ ಗೌಡ ಹಾಗೂ ತೇಜಸ್ ಇದ್ದರು.





