ವರದಕ್ಷಿಣೆ ಬೇಡಿಕೆಯ ನಿರಂತರ ಕಿರುಕುಳ ಮತ್ತು ನವಜಾತ ಶಿಶುವಿನ ಮಾರಾಟದ ವಿಚಾರದಲ್ಲಿ ಯುವತಿಯೊಬ್ಬರನ್ನು ಆಕೆಯ ಪತಿ ಮತ್ತು ಅತ್ತೆಯ ಮನೆಯವರು ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಪ್ರಕರಣದಲ್ಲಿ ಹತ್ಯೆಯಾದ ಯುವತಿಯ ಪತಿ ಸೈಫುಲ್ಲಾ (37), ಆತನ ಪೋಷಕರು ಹಾಗೂ ಇತರ ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
“ಸಂತ್ರಸ್ತ ಯುವತಿ ಮತ್ತು ಸೈಫುಲ್ಲಾ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರ್ಥಿಕ ಸಂಕಷ್ಟದ ಕಾರಣಕ್ಕಾಗಿ ಪತಿ ಸೈಫುಲ್ಲಾ ತಮ್ಮ ನವಜಾತ ಗಂಡು ಮಗುವನ್ನು ಮಾರಾಟ ಮಾಡಿದ್ದನು. ಇದು ದಂಪತಿಗಳ ನಡುವೆ ದೊಡ್ಡ ಮಟ್ಟದ ಜಗಳಕ್ಕೆ ಕಾರಣವಾಗಿತ್ತು. ಅಲ್ಲದೆ, ವರದಕ್ಷಿಣೆಗಾಗಿ ಯುವತಿಗೆ ಸೈಫುಲ್ಲಾ ಪದೇ-ಪದೇ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನು” ಎಂದು ಮೃತ ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.
ಮಗಳನ್ನು ಕಳೆದುಕೊಂಡು ತಂದೆ ಬಾಬು ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ನಾವು ಅವರಿಗೆ ಹಣ, ಒಡವೆಗಳನ್ನು ಕೊಟ್ಟಿದ್ದೆವು. ಹಾಸನದಲ್ಲಿ ವಾಸಿಸಲು ಮನೆಯನ್ನೂ ವ್ಯವಸ್ಥೆ ಮಾಡಿಕೊಟ್ಟಿದ್ದೆವು. ಆದರೂ ಅವರ ಕಿರುಕುಳ ಮಾತ್ರ ಎಂದಿಗೂ ನಿಲ್ಲಲಿಲ್ಲ. ನಾವು ಹಲವು ಬಾರಿ ಪಂಚಾಯಿತಿ ನಡೆಸಿ ರಾಜಿ ಸಂಧಾನಕ್ಕೆ ಪ್ರಯತ್ನಿಸಿದ್ದೆವು. ಆದರೆ, ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಈಗ ಅವರು ನನ್ನ ಮಗಳನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ” ಎಂದು ಕಣ್ಣೀರು ಹಾಕಿದ್ದಾರೆ.
ಈ ಹಿಂದೆ ನಡೆದಿದ್ದ ಕಿರುಕುಳದ ಘಟನೆಗಳ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೂ, ಪೊಲೀಸರು ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ಸಂತ್ರಸ್ತೆಯ ಸಹೋದರ ಆರೋಪಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಬಕ್ರೀದ್ ಹಬ್ಬದ ದಿನದಂದು ಸಂತ್ರಸ್ತೆಯ ಮೇಲೆ ಆಕೆಯ ಪತಿ ಹಾಗೂ ಅತ್ತೆಯ ಮನೆಯವರು ತೀವ್ರವಾಗಿ ಹಲ್ಲೆ ನಡೆಸುವುದನ್ನು ತಾವು ಕಣ್ಣಾರೆ ಕಂಡಿರುವುದಾಗಿ ಹೇಳಿದ್ದಾರೆ. ಈ ಭೀಕರ ಹಲ್ಲೆಯ ನಂತರವೇ ಮಹಿಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಪತಿ ಸೈಫುಲ್ಲಾ ಹಣಕ್ಕಾಗಿ ಮತ್ತೊಂದು ಮಗುವನ್ನೂ ಮಾರಾಟ ಮಾಡಲು ಯತ್ನಿಸಿದ್ದನು. ಆದರೆ ಸಂತ್ರಸ್ತೆ ಅದನ್ನು ತೀವ್ರವಾಗಿ ವಿರೋಧಿಸಿದ್ದರು ಎಂದು ಮೃತ ಯುವತಿಯ ಸಹೋದರಿ ಆರೋಪ ಮಾಡಿದ್ದಾರೆ.
ಈ ಲೇಖನ ಓದಿದ್ದೀರಾ?: ವರದಕ್ಷಿಣೆ ಎಂಬ ಬಲಿಪೀಠದಿಂದ ಹೆಣ್ಣುಮಕ್ಕಳ ರಕ್ಷಣೆ ಯಾವಾಗ?
ಸದ್ಯ ಪೊಲೀಸರು ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ, ಮಧ್ಯಪ್ರದೇಶದ ಭೋಪಾಲ್ನ ತ್ವಿಶಾ ಶರ್ಮಾ, ಉತ್ತರ ಪ್ರದೇಶದ ನೋಯ್ಡಾದ ದೀಪಿಕಾ ನಾಗರ್ ಹಾಗೂ ನಿಕ್ಕಿ ಬಾಟಿ ಎಂಬ ಯುವತಿಯು ಇದೇ ವರದಕ್ಷಿಣೆ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ಈ ವರದಕ್ಷಿಣೆ ಪಿಡುಗಿನ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ಸಮಯದಲ್ಲಿ, ಚನ್ನರಾಯಪಟ್ಟಣದ ಈ ಘಟನೆ ನಡೆದಿದೆ.




