ದೆಹಲಿಯ ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸುವ ವೇಳೆ ‘ಸನಾತನ ಧರ್ಮ’ಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಲೋಕಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಸಂಸದ ಪಪ್ಪು ಯಾದವ್ ಹಾಗೂ ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಅವಧೇಶ್ ಪ್ರಸಾದ್ ವಿರುದ್ಧ ವಾರಾಣಸಿಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಂಸತ್ ಭವನದ ಆವರಣದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಾಗ, ಅಯೋಧ್ಯೆಯ ರಾಮಮಂದಿರ ನಿರ್ಮಾಣದ ದೇಣಿಗೆಯಲ್ಲಿ ಭ್ರಷ್ಟಾಚಾರ ನಡೆದಿದೆ (‘ಚಂದಾ ಚೋರಿ’) ಎಂದು ಬಿಂಬಿಸುವ ಅಣಕು ಪ್ರದರ್ಶನವನ್ನು ವಿಪಕ್ಷಗಳು ಆಯೋಜಿಸಿದ್ದವು. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಈ ಘಟನೆಯ ಕುರಿತು ವಾರಾಣಸಿಯ ಸಾಧು-ಸಂತರ ಪರವಾಗಿ ‘ಪಾತಾಳಪುರಿ ಪೀಠಾಧೀಶ್ವರ ಜಗದ್ಗುರು ಬಾಲಕ್ ದೇವಾಚಾರ್ಯ’ ಅವರು ಶನಿವಾರ ದೂರು ದಾಖಲಿಸಿದ್ದಾರೆ. ಸನಾತನ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುವ ‘ಭಗವಾ’ (ಕೇಸರಿ) ವಸ್ತ್ರವನ್ನು ಅವಮಾನಿಸಿದ ಕೃತ್ಯವು ಸಾಧು-ಸಂತರ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ ಎಂದು ಅವರು ದೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ಕೋಟ್ಯಂತರ ಹಿಂದೂಗಳ ನಂಬಿಕೆಯನ್ನು ಉದ್ದೇಶಪೂರ್ವಕವಾಗಿ ಅಣಕಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಂಸತ್ ಆವರಣದಲ್ಲಿ ದೇಣಿಗೆ ಕಳ್ಳತನವನ್ನು ಬಿಂಬಿಸುವ ನಾಟಕವಾಡಲು ಪಪ್ಪು ಯಾದವ್ ಅವರು ಕೇಸರಿ ವಸ್ತ್ರ ಧರಿಸಿ ಸಾಧುವಿನ ವೇಷ ಹಾಕಿದ್ದರು ಮತ್ತು ರಾಹುಲ್ ಗಾಂಧಿ ಹಾಗೂ ಅವಧೇಶ್ ಪ್ರಸಾದ್ ಅವರು ಹುಂಡಿಗೆ ಹಣ ಹಾಕುವಂತೆ ಸನ್ನೆ ಮಾಡುತ್ತಿದ್ದರು. ರಾಜಕೀಯ ಪ್ರತಿಭಟನೆಗಾಗಿ ಕೇಸರಿ ವಸ್ತ್ರವನ್ನು ಬಳಸಿಕೊಂಡು ಸನಾತನ ಸಂಪ್ರದಾಯ ಹಾಗೂ ಶ್ರೀರಾಮನನ್ನು ಅವಮಾನಿಸಲಾಗಿದೆ. ಇದು ದಿಢೀರ್ ಪ್ರತಿಕ್ರಿಯೆಯಾಗಿರದೆ, ಸನಾತನ ಧರ್ಮವನ್ನು ಅಣಕಿಸುವ ಸಲುವಾಗಿ ಪ್ರತಿಯೊಬ್ಬರ ಪಾತ್ರವನ್ನು ನಿಗದಿಪಡಿಸಿ ಮಾಡಿದ ಪೂರ್ವನಿಯೋಜಿತ ಹಾಗೂ ಸಂಘಟಿತ ಕೃತ್ಯವಾಗಿದೆ ಎಂದು ದೇವಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೂರಿನ ಆಧಾರದ ಮೇಲೆ ಕಾಶಿ ವಲಯದ ಡಿಸಿಪಿ ಗೌರವ್ ಬನ್ಸ್ವಾಲ್ ಅವರು ಪ್ರಕರಣ ದಾಖಲಿಸಿಕೊಂಡಿರುವುದನ್ನು ದೃಢಪಡಿಸಿದ್ದಾರೆ. ಸಂಸದರಾದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್, ಅವಧೇಶ್ ಪ್ರಸಾದ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 (ಗುಂಪುಗಳ ನಡುವೆ ದ್ವೇಷ ಬಿತ್ತುವುದು), 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು), 302 (ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶ) ಮತ್ತು 3(5) (ಸಾಮಾನ್ಯ ಉದ್ದೇಶದೊಂದಿಗೆ ಹಲವರು ಸೇರಿ ಮಾಡಿದ ಅಪರಾಧ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.




