ಮತದಾನದ ಹಕ್ಕು ಮೂಲಭೂತವಾದುದು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹರು ಹೊರಗುಳಿಯದಂತೆ ಪಾರದರ್ಶಕತೆ, ಸರಿಯಾದ ನೋಟಿಸ್ ಮತ್ತು ಸಾಕಷ್ಟು ಅವಕಾಶ ನೀಡುವುದು ಅತ್ಯಗತ್ಯ. ಸರ್ಕಾರ, ಚುನಾವಣಾ ಆಯೋಗ ಮತ್ತು ನಾಗರಿಕರು ಒಟ್ಟಾಗಿ ಈ ಪ್ರಕ್ರಿಯೆಯನ್ನು ನಿಖರ ಹಾಗೂ ನ್ಯಾಯಯುತವಾಗಿ ನಡೆಸಬೇಕು.
ಕೋಲಾರದಲ್ಲಿ ಹಲವಾರು ಜನರು 2023ರ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಮತದಾನ ಮಾಡಿದ್ದರೂ ಕೂಡ 2025ರ ಮತದಾರರ ಪಟ್ಟಿಯಿಂದ ಹಲವಾರು ಮಂದಿ ಹೆಸರು ರದ್ದಾಗಿದ್ದು, ಎಸ್‌ಐಆರ್ ಫಾರಂ ಬರದೆ ಇರುವಂಥವರು ತುಂಬಾ ಆಘಾತಕ್ಕೆ ಒಳಾಗಾಗಿದ್ದಾರೆ.
2023, 2024ರಂದು ಚುನಾವಣೆಯಲ್ಲಿ ಮತದಾನ ಮಾಡಿದ್ದರೂ 2025ರಲ್ಲಿ ಕೆಲವರ ಹೆಸರುಗಳು ಡಿಲೀಟ್ ಆಗಲು ಕಾರಣವೇನು…? ಕರ್ನಾಟಕ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದಾಗ ಕೆಲವು ಮತದಾರರು ತಮ್ಮ ಪೋಲಿಂಗ್ ಬೂತ್‌ನ ಬಿಎಲ್‌ಒ ಬಳಿ ಐಡಿ ಕಾರ್ಡ್ ತೆಗೆದುಕೊಂಡು ಹೋಗಿ ಎನ್ಯೂಮರೇಶನ್ ಫಾರಂ ಕೇಳಿದಾಗ ಅವರ ಫಾರಂ ಬಂದೇ ಇಲ್ಲ ಎನ್ನುವ ಮಾಹಿತಿ ಅವರಿಗೆ ತಿಳಿದಿದೆ. ಬಳಿಕ ಅಂಥವರು ತೀವ್ರ ಭಯಭೀತರಾಗಿದ್ದಾರೆ. ಯಾಕೆಂದರೆ ನಾವು ಸುಮಾರು ವರ್ಷಗಳಿಂದ ಸಕ್ರಿಯವಾಗಿ ಮತ ಹಾಕುತ್ತಿದ್ದರೂ ನಮ್ಮ ಹೆಸರು ಮತದಾನ ಪಟ್ಟಿಯಿಂದ ಡಿಲೀಟ್ ಆಗಿರುವುದು ನಮಗೆ ಗೊತ್ತೇ ಇಲ್ಲ ಈಗಷ್ಟೇ ಗೊತ್ತಾಗಿದೆ ಎಂದು ತಲ್ಲಣಗೊಂಡಿದ್ದಾರೆ.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಯಾವುದೇ ಮತದಾರರ ಹೆಸರು ತೆಗೆಯುವ ಮುನ್ನ ಬಿಎಲ್ಒ ಪರಿಶೀಲನೆ ಮಾಡಿ ನೋಟಿಸ್ ನೀಡಿದ ಬಳಿಕ ಅವರ ಹೆಸರು ತೆಗಿಯಬೇಕು. ಮೃತಪಟ್ಟವರು, ಸ್ಥಳಾಂತರಗೊಂಡವರು ಅವರ ಹೆಸರು ಪರಿಶೀಲನೆ ಬಳಿಕ ರದ್ದಾಗಬಹುದು. ಆದರೆ ಆ ರೀತಿಯಲ್ಲಿ ನಡೆಯದೆ ಜೀವಂತವಾಗಿರುವ ಬಹುತೇಕ ಮತದಾರರ ಹೆಸರು ರದ್ದಾಗಿರುವುದಕ್ಕೆ ಹೊಣೆ ಯಾರು? ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು.
ಹೆಸರು ಡಿಲೀಟ್ ಆದವರು ತಕ್ಷಣ ಏನು ಮಾಡಬೇಕು ಗೋತ್ತಾ….?
ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲಿ ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಪರಿಶೀಲನೆ ಮಾಡಬೇಕು. ಇಲ್ಲದಿದ್ದರೆ ಬಿಎಲ್ಒ ಬಳಿ ಹೋಗಿ ಕಳೆದ ಚುನಾವಣೆಯಲ್ಲಿ ಮತಚಲಾಯಿಸಿದ ವಿವರಗಳನ್ನು ನೀಡಬೇಕು ಹಾಗೂ ತಕ್ಷಣವೇ ಫಾರ್ಮ್ ನಂ 6 ಭರ್ತಿ ಮಾಡಿ ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಮತದಾನ ಮಾಡಿ ಜೀವಂತವಾಗಿರುವವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದರೆ ಅಂಥವರು ಕೂಡಲೇ ಈ ಕೆಲಸ ಮಾಡಬೇಕು.
ಕೋಲಾರ ಜಿಲ್ಲೆಯೊಂದರಲ್ಲೇ ಅಲ್ಲ; ರಾಜ್ಯದ ಎಲ್ಲಾ ಕಡೆ ಈ ರೀತಿಯ ಸಮಸ್ಯೆ ಉಂಟಾಗಿದ್ದು, ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ, ಎಸ್ ಐ ಆರ್ ಫಾರಂ ಬಂದಿಲ್ಲಾ ಎಂದು ಸುಮ್ಮನೆ ಇರದೇ ಕೂಡಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬರುವುದಿಲ್ಲ, ಮತದಾನ ಎನ್ನುವುದು 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯರ ಹಕ್ಕು. ಅದನ್ನು ನಾವು ಪಡೆಯಲೇಬೇಕು.
ಕೋಲಾರ ತಹಶೀಲ್ದಾರ್ ಶ್ರೀನಿವಾಸ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ” 2025ರ ವೋಟರ್ ಲಿಸ್ಟ್‌ನಲ್ಲಿ ಮತದಾರರ ಹೆಸರು ಇದ್ದರೆ ಅಂಥವರಿಗೆಲ್ಲರಿಗೂ ಎಸ್‌ಐಆರ್ ಫಾರಂ ಬಂದಿದೆ. ಕೋಲಾರದಲ್ಲಿ ಸರಿಸುಮಾರು ಶೇ.91ರಷ್ಟು ಮ್ಯಾಪಿಂಗ್ ಆಗಿದೆ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿರುವಂಥವರು ಬಿಎಲ್‌ಒ ಬಳಿ ಫಾರಂ ನಂ 6ನ್ನು ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು. ವೋಟರ್ ಲಿಸ್ಟ್‌ನಲ್ಲಿ ಹೆಸರು ಇಲ್ಲದಿದ್ದರೆ ನಾಟ್ ಫೌಂಡ್ ಅಂತ ಬರುತ್ತದೆ. ಅವರು ಕೂಡಲೇ ಸಂಬಂಧಪಟ್ಟ ಬೂತ್‌ನ ಬಿಎಲ್ಒಗೆ ಫಾರಂ ನಂ 6ನ್ನು ಕೊಡಬೇಕು. ಇದರ ಬಗ್ಗೆ ನಗರಸಭೆಯಿಂದ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ” ಎಂದು ನೀಡಿದರು.
ಎಸ್‌ಐಆರ್ ಪ್ರಕ್ರಿಯೆಯ ಉದ್ದೇಶ ಶುದ್ಧ ಮತ್ತು ನಿಖರ ಮತದಾರರ ಪಟ್ಟಿ ಸಿದ್ಧಪಡಿಸುವುದಾಗಿದೆ(ಮೃತರು, ಸ್ಥಳಾಂತರ, ನಕಲಿ ಹೆಸರುಗಳನ್ನು ತೆಗೆಯುವುದು). ಆದರೆ ಅನೇಕ ಅರ್ಹ ಮತದಾರರು—ವಿಶೇಷವಾಗಿ ಹಿರಿಯರು, ವಲಸೆ ಕಾರ್ಮಿಕರು, ಫಾರಂ ಭರ್ತಿ ಮಾಡದವರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಅಪಾಯ ಎದುರಿಸುತ್ತಿದ್ದಾರೆ. 2023 ಮತ್ತು 2024ರಲ್ಲಿ ಮತ ಹಾಕಿದವರ ಹೆಸರು ಕೂಡ ರದ್ದಾಗುತ್ತಿರುವುದು ಪ್ರಕ್ರಿಯೆಯಲ್ಲಿನ ಲೋಪಗಳು, ತರಬೇತಿ ಕೊರತೆ ಮತ್ತು ಅರಿವಿನ ಕೊರತೆಯನ್ನು ತೋರುತ್ತದೆ.
ಇದನ್ನೂ ಓದಿದ್ದೀರಾ? ರಾಯಚೂರು | ಎಸ್‌ಐಆರ್: ಎಎಸ್‌ಡಿಡಿಒ ಅಡಿ 2.54 ಲಕ್ಷ ಮಂದಿ ಮತದಾರರ ಹೆಸರಿಗೆ ಕತ್ತರಿ ಭೀತಿ
- ಮತದಾನದ ಹಕ್ಕು ಮೂಲಭೂತವಾದುದು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹರು ಹೊರಗುಳಿಯದಂತೆ ಪಾರದರ್ಶಕತೆ, ಸರಿಯಾದ ನೋಟಿಸ್ ಮತ್ತು ಸಾಕಷ್ಟು ಅವಕಾಶ ನೀಡುವುದು ಅತ್ಯಗತ್ಯ. ಸರ್ಕಾರ, ಚುನಾವಣಾ ಆಯೋಗ ಮತ್ತು ನಾಗರಿಕರು ಒಟ್ಟಾಗಿ ಈ ಪ್ರಕ್ರಿಯೆಯನ್ನು ನಿಖರ ಹಾಗೂ ನ್ಯಾಯಯುತವಾಗಿ ನಡೆಸಬೇಕು.




