ರಿಪಬ್ಲಿಕ್ ಟಿವಿ ಮತ್ತು ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಬಾಂಬೆ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಚಾನೆಲ್‌ನ ನಿರಂತರ ವರದಿ ಮತ್ತು ಇತ್ತೀಚಿನ ಹಲವು ಲೇಖನಗಳು ತಮ್ಮ ಖ್ಯಾತಿಗೆ ಹಾನಿಯುಂಟು ಮಾಡಿದೆ ಎಂದು ಆರೋಪಿಸಿರುವ ಅಂಬಾನಿ ಪ್ರಸಾರಕ್ಕೆ ತಡೆಯಾಜ್ಞೆ ಕೋರಿದ್ದಾರೆ.
ನ್ಯಾಯಮೂರ್ತಿ ಮಿಲಿಂದ್ ಜಾಧವ್ ನೇತೃತ್ವದ ಏಕಸದಸ್ಯ ಪೀಠವು ಏಪ್ರಿಲ್ 1ರಂದು ಇದರ ವಿಚಾರಣೆ ನಡೆಸಲಿದೆ. ತಾವು ಕಂಪನಿಗಳ ನಿರ್ವಹಣಾ ಜವಾಬ್ದಾರಿಯಿಂದ ಹೊರಬಂದ ನಂತರವೂ, ಆ ಕಂಪನಿಗಳ ಹಣಕಾಸಿನ ಅವ್ಯವಹಾರಗಳಿಗೆ ತಮ್ಮನ್ನೇ ಹೊಣೆಗಾರರನ್ನಾಗಿ ಬಿಂಬಿಸಲಾಗಿದೆ ಎಂದು ಅನಿಲ್ ಅಂಬಾನಿ ವಾದಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ‘ದೇಶದ ಶತ್ರು’ ಎಂದ ಅರ್ನಬ್ ಗೋಸ್ವಾಮಿ: ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ
ಹಾಗೆಯೇ ಯಾವುದೇ ರಿಲಯನ್ಸ್ ಗ್ರೂಪ್ ಕಂಪನಿಗಳಲ್ಲಿ ಸಿಇಒ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಸೇರಿದಂತೆ ವ್ಯವಸ್ಥಾಪಕ, ಕಾರ್ಯಾಚರಣೆ ಅಥವಾ ಕಾರ್ಯನಿರ್ವಾಹಕ ಪಾತ್ರವನ್ನು ನಾನು ಎಂದಿಗೂ ನಿರ್ವಹಿಸಿಲ್ಲ ಎಂದು ಅಂಬಾನಿ ಹೇಳಿದ್ದಾರೆ. ಈ ಕಂಪನಿಗಳು ಪ್ರತ್ಯೇಕ ಘಟಕಗಳಾಗಿದ್ದು, ಅದರ ದೈನಂದಿನ ನಿರ್ವಹಣೆ ಅಥವಾ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ತಾನು ಭಾಗಿಯಾಗಿಲ್ಲ ಎಂದು ಮಾನನಷ್ಟ ಮೊಕದ್ದಮೆಯಲ್ಲಿ ಅನಿಲ್ ಉಲ್ಲೇಖಿಸಿದ್ದಾರೆ.
ಈ ಸಂಗತಿಗಳ ಬಗ್ಗೆ ತಿಳಿದಿದ್ದರೂ, ಅರ್ನಬ್ ಮಾಧ್ಯಮವು ‘ದುರುದ್ದೇಶಪೂರ್ವಕವಾಗಿ ಮತ್ತು ಬೇಜವಾಬ್ದಾರಿಯಿಂದ’ ಈ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ತನಿಖೆಗಳು ಮತ್ತು ಅಂಬಾನಿಯ ವೈಯಕ್ತಿಕ ವಿಚಾರಗಳ ನಡುವೆ ಸಂಬಂಧ ಸೃಷ್ಟಿಸುತ್ತಿದೆ ಎಂದು ದೂರಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಕಟ್ಟಾ ಬೆಂಬಲಿಗನಾಗಿದ್ದ ಅರ್ನಬ್ ಗೋಸ್ವಾಮಿಯ ಇತ್ತೀಚಿನ ನಡೆಗಳು ಮತ್ತು ವರದಿಗಾರಿಕಾ ಶೈಲಿಯಲ್ಲಿ ಕಂಡುಬಂದ ಬದಲಾವಣೆಗಳು ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ವಿರುದ್ಧವಾಗಿ ಮಾತನಾಡಲು ಶುರು ಮಾಡಿದ್ದಾರೆ. ಇವೆಲ್ಲವುದರ ನಡುವೆ ಅನಿಲ್ ಅಂಬಾನಿ ಬಗ್ಗೆಯೂ ಹಲವಾರು ಸುದ್ದಿಗಳನ್ನು ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ನೀತಿಗಳನ್ನು ಮತ್ತು ನಿರ್ಧಾರಗಳನ್ನು ನೇರವಾಗಿ ಪ್ರಶ್ನಿಸಲು ಆರಂಭಿಸಿದ್ದಾರೆ. ಗೋದಿ ಮೀಡಿಯಾ ಎಂಬ ಹಣೆಪಟ್ಟಿಯಿಂದ ಹೊರಬರಲು ಅರ್ನಬ್ ಈ ಪ್ರಯತ್ನ ಮಾಡುತ್ತಿರಬಹುದು ಎಂದು ಹೇಳಲಾಗುತ್ತಿದೆ.




