ದೇಶದಲ್ಲಿರುವ 20 ರಿಂದ 29 ವಯಸ್ಸಿನ 6.30 ಕೋಟಿಯಷ್ಟು ಇರುವ ಪದವೀಧರರಲ್ಲಿ 1.10 ಕೋಟಿ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಯನ ವರದಿ ಹೇಳಿದೆ.
‘ದಿ ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ – 2026’ ಅಧ್ಯಯನ ವರದಿಯಲ್ಲಿ ‘ಕೇವಲ 7 ಶೇಕಡಾದಷ್ಟು ಯುವಕರು ಮಾತ್ರ ಪದವಿ ಪಡೆದ ಒಂದು ವರ್ಷದೊಳಗೆ ಉತ್ತಮ ವೇತನವಿರುವ ಸ್ಥಿರ ಉದ್ಯೋಗವನ್ನು ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
15 ರಿಂದ 25 ವಯಸ್ಸಿನ ಶೇ. 40ರಷ್ಟು ಪದವೀಧರರು ಹಾಗೂ 25 ರಿಂದ 29 ವಯಸ್ಸಿನ ಶೇ. 20ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪದವೀಧರರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಪದವೀಧರರ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ’ ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. 1983ರಿಂದ 2023ರವರೆಗೆ ಅಂದರೆ, 40 ವರ್ಷಗಳ ಸರ್ಕಾರದ ಹಲವು ಮಾಹಿತಿ ಮೂಲಗಳನ್ನು ಪಡೆದು, ಅದರ ಅಂಕಿ ಅಂಶಗಳನ್ನು ಆಧರಿಸಿ ವಿದ್ಯಾಭ್ಯಾಸ ಮತ್ತು ಉದ್ಯೋಗದ ಸ್ಥಿತಿಗತಿಗಳನ್ನು ಅಧ್ಯಯನ ಕೈಗೊಳ್ಳಲಾಗಿದೆ.
49 ಕೋಟಿಯಿಂದ 57.2 ಕೋಟಿಗೆ ದೇಶದ ಉದ್ಯೋಗಸ್ಥರ ಸಂಖ್ಯೆ ಏರಿಕೆಯಾಗಿದೆ. 2021-22 ಮತ್ತು 2023-24ರ ನಡುವೆ ಶೇ 71ರಿಂದ ಶೇ 74ಕ್ಕೆ ಉದ್ಯೋಗಸ್ಥ ಪುರುಷರ ಪ್ರಮಾಣ ಏರಿಕೆಯಾಗಿದ್ದರೆ, ಉದ್ಯೋಗಸ್ಥ ಮಹಿಳೆಯರ ಪ್ರಮಾಣ ಶೇ. 26ರಿಂದ ಶೇ 34ಕ್ಕೆ ಏರಿದೆ. ಇದು ಕೋವಿಡೋತ್ತರ ಬೆಳವಣಿಗೆ ಎನ್ನುವುದು ಉಲ್ಲೇಖನೀಯ. ಇನ್ನು, 4 ಕೋಟಿ ಉದ್ಯೋಗಗಳು 2021-22 ಮತ್ತು 2023-24ರ ನಡುವೆ ಸೃಷ್ಟಿಯಾಗಿದೆ. ಈ ಪೈಕಿ 3.8 ಕೋಟಿಯಷ್ಟು ಮಹಿಳೆಯರೇ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿಯಾಗಿದೆ ವಿನಃ ಪುರುಷರು ಮತ್ತು ಮಹಿಳೆಯರ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ ಎಂದು ಕೂಡ ಅಧ್ಯಯನ ವರದಿ ಹೇಳಿದೆ. ಇದು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ದೇಶದ ಆರ್ಥಿಕತೆ ಏರಿಳಿತವಾಗುತ್ತಲೇ ಇದ್ದು, ಉದ್ಯೋಗಕ್ಕಾಗಿ ಯುವ ಜನಾಂಗ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗಕ್ಕಾಗಿ ವಿದೇಶಗಳಿಗೆ ವಲಸೆ ಹೋಗುವ ಬೆಳವಣಿಗೆ ಇತ್ತೀಚಿಗಿನ ವರ್ಷಗಳಲ್ಲಿ ಹೆಚ್ಚಳವಾಗಿದೆ.
ವರದಿಯಲ್ಲಿ ಉಲ್ಲೇಖಿಸಲಾಗಿರುವ ಈ ಪ್ರಮುಖ ಅಂಶಗಳೆಲ್ಲವೂ ದೇಶದಲ್ಲಿನ ಯುವಕರ ಸಾಮರ್ಥ್ಯವನ್ನು ಉದ್ಯೋಗ ಸೃಷ್ಟಿ ಮಾಡುವುದರ ಮೂಲಕ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ದೇಶದಲ್ಲಿ ಉದ್ಯೋಗ ಮಾಡುವ ಸಾಮರ್ಥ್ಯವುಳ್ಳವರು ದೇಶದ ಒಟ್ಟು ಜನಸಂಖ್ಯೆಯ ಮೂರನೇ ಒಂದರಷ್ಟು, ಅಂದರೆ ಶೇ.33ರಷ್ಟು ಇದ್ದಾರೆ. ಆದರೆ, ಅವರನ್ನು ಉದ್ಯೋಗ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಯುವಕರನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳದೆ ಇರುವುದರಿಂದ ದೇಶದ ಆರ್ಥಿಕತೆಗೆ ಯುವ ಸಮೂಹ ಯಾವ ರೀತಿಯಲ್ಲಿ ಬೆನ್ನೆಲುಬಾಗಿ ಮಾರ್ಪಾಡಾಗಬಹುದು ಎನ್ನುವುದು ಅಂದಾಜಿಗೂ ಸಿಗುತ್ತಿಲ್ಲ.
ಇದನ್ನೂ ಓದಿ : ಇರಾನ್ ಯುದ್ಧಕ್ಕೆ ಹೂಥೀಗಳ ಪ್ರವೇಶ: ಹಡಗು ಸಂಚಾರಕ್ಕೆ ಮತ್ತೊಂದು ಬಿಕ್ಕಟ್ಟು!
ವರದಿಯ ಪ್ರಮುಖಾಂಶಗಳು
1) ಕಳೆದೊಂದು ದಶಕದಲ್ಲಿ ದೇಶದ ಅರ್ಥಿಕತೆಯಲ್ಲಿ ಅಸಮಾನತೆ ಇರುವುದರಿಂದ ಪದವಿಯ ಬಳಿಕ ಯುವಕರಿಗೆ ಸರಿಯಾದ ಸಮಯದಲ್ಲಿ ಉದ್ಯೋಗವನ್ನು ಪಡೆಯುವುದೇ ಸವಾಲಾಗಿದೆ. ಉದ್ಯೋಗಕ್ಕಾಗಿ ಅಲೆಯಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪದವಿ ಪಡೆದು ಒಂದು ವರ್ಷದೊಳಗೆ ಸ್ಥಿರ ಉದ್ಯೋವನ್ನು ಪಡೆಯುವವರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.
2) 2004 ರಿಂದ 2023ರ ನಡುವೆ ಪ್ರತಿವರ್ಷ 50 ಲಕ್ಷ ಮಂದಿ ಪದವಿಯನ್ನು ಹೊಂದುತ್ತಿದ್ದಾರೆ. ಇವರಲ್ಲಿ ಕೇವಲ ಅಂದಾಜು 28 ಲಕ್ಷ ಮಂದಿ ಮಾತ್ರ ಉದ್ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಉದ್ಯೋಗ ಭದ್ರತೆಯ ಗ್ಯಾರಂಟಿ ಇಲ್ಲ. ಪದವೀಧರರಿಗೆ ತಕ್ಕಷ್ಟು ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಉದ್ಯೋಗ ಸೃಷ್ಟಿಯಾಗುವುದಕ್ಕೆ ಪೂರಕ ವಾತಾವರಣವೂ ಇಲ್ಲ. ದೇಶದಾದ್ಯಂತ ಇರುವ ಕಾಲೇಜುಗಳಿಂದ ಪ್ರತಿವರ್ಷ ಸಹಸ್ರ ಸಂಖ್ಯೆಯಲ್ಲಿ ಪದವಿ ಮುಗಿಸಿ ಹೊರ ಬರುತ್ತಾರೆ. ಒಂದು ಸ್ಥಿರ ಉದ್ಯೋಗಕ್ಕಾಗಿ ವರ್ಷಾನುಗಟ್ಟಲೆ ಅಲೆಯಬೇಕಾಗಿದೆ.
3) ಪದವಿ ಪಡೆದವರು ಉದ್ಯೋಗಸ್ಥರಾದ ಬಳಿಕ ಆರಂಭದಲ್ಲಿ ಪಡೆಯುವ ಸಂಬಳ ಪದವಿಯನ್ನು ಹೊಂದದೆ ಇರುವವರ ಆದಾಯಕ್ಕಿಂತ ಎರಡು ಪಟ್ಟು ಅಧಿಕಾವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಅನುಭವ ಪಡೆದಂತೆ ಸಂಬಳವೂ ಅಧಿಕವಾಗುತ್ತಾ ಸಾಗುತ್ತದೆ.
4) ಪುರುಷರ ಆದಾಯ ಬಹುತೇಕ ಸ್ಥಿರವಾಗಿದೆ. ಹಂತ ಹಂತವಾಗಿ ಅವರ ಸಂಬಳ ಕೂಡ ಏರಿಕೆಯಾಗುತ್ತಿದೆ. ಇನ್ನು, ಪುರುಷರು ಮತ್ತು ಮಹಿಳೆಯರ ಅಂತರ ಇಳಿಮುಖವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
5) ಎಸ್‌ಸಿ/ಎಸ್‌ಟಿ ಸಮುದಾಯಗಳ ಯುವಜನರು ತಮ್ಮ ಕುಲ/ಸಮುದಾಯ ಸಂಬಂಧಿ ವೃತ್ತಿಗಳಲ್ಲಿ ಭಾಗಿಯಾಗುವ ಪ್ರಮಾಣ ಇಳಿಕೆಯಾಗಿದೆ. 1983ರಲ್ಲಿ ಎಸ್‌ಸಿ/ಎಸ್‌ಟಿ ಜನರ ಪೈಕಿ ಶೇ. 40 ಮಂದಿ ಚರ್ಮ ಮತ್ತು ಪಾದರಕ್ಷೆ ಉದ್ಯಮದಲ್ಲಿ ತೊಡಗಿದ್ದರು. 2023ರ ಹೊತ್ತಿಗೆ ಈ ಪ್ರಮಾಣವು ಶೇ. 24ಕ್ಕೆ ಕಡಿಮೆಯಾಗಿದೆ. ಯುವಕರಲ್ಲಿ ಕುಲಕಸುಬು ಮಾಡುವ ಆಸಕ್ತಿ ಕಡಿಮೆಯಾಗುತ್ತಿದೆ ಎನ್ನುವುದನ್ನು ಇದು ತೋರಿಸುತ್ತದೆ.
6) ಉದ್ಯೋಗಕ್ಕಾಗಿ ಅಲೆದಾಡಿ ವಲಸೆ ಹೋಗುವ ಪ್ರವೃತ್ತಿ ಹೆಚ್ಚಳವಾಗುತ್ತಿದೆ. ಆರ್ಥಿಕತೆಯಿಂದ ಹಿಂದುಳಿದಿರುವ ರಾಜ್ಯ/ಪ್ರದೇಶಗಳಿಂದ ಆರ್ಥಿಕತೆಯಲ್ಲಿ ಮುಂದುವರಿದ ರಾಜ್ಯ/ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದು ದೇಶದ ಆರ್ಥಿಕತೆ ಎಲ್ಲೆಡೆ ಸ್ಥಿರ ಮತ್ತು ಸಮಾನವಾಗಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ.
7) ಕೃಷಿ ಕ್ಷೆತ್ರದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಳವಾಗಿದೆ. ವಯಸ್ಸು ಮತ್ತು ಲಿಂಗದ ಬೇಲಿಯನ್ನು ದಾಟಿ ಕೆಲಸವನ್ನು ಮಾಡುವವರು ಕೃಷಿ ಕ್ಷೇತ್ರವನ್ನೇ ತಮ್ಮ ಆದಾಯದ ಮೂಲವನ್ನಾಗಿಸಿಕೊಂಡವರ ಸಂಖ್ಯೆಯು ಹೆಚ್ಚಳವಾಗಿದೆ. ಆದಾಗ್ಯೂ, 20-29 ವರ್ಷದೊಳಗಿನ ಯುವಕರು ಕೃಷಿಯಿಂದ ಬೇರೆ ಕಡೆಗೆ ಮುಖ ಮಾಡುತ್ತಿದ್ದಾರೆ. ಕಳೆದೊಂದು ದಶಕದಿಂದ (2017ರಿಂದ) ಈ ಬೆಳವಣಿಗೆ ಹೆಚ್ಚಾಗಿ ಕಂಡು ಬರುತ್ತಿದೆ. ಕೃಷಿಯನ್ನೇ ಗಳಿಕೆಯ ಮೂಲವನ್ನಾಗಿಸಿಕೊಂಡ ಯುವ ಮತ್ತು ವಯಸ್ಕ ಮಹಿಳೆಯರ ಸಂಖ್ಯೆ ಏರಿಕೆಯಾಗುತ್ತಿದೆ.
8) ಕೃಷಿಯೇತರ ಉದ್ಯೋಗಗಳಲ್ಲಿ ಪುರುಷರು ಮತ್ತು ಮಹಿಳೆಯರು ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದಾರೆ. ಪ್ರೊಡಕ್ಷನ್ ಕ್ಷೇತ್ರಗಳಲ್ಲಿ (ತಯಾರಿಕಾ ಘಟಕಗಳಲ್ಲಿ) ಯುವತಿಯರು ಹೆಚ್ಚಾಗಿ ಉದ್ಯೋಗ ಪಡೆಯುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಯುವಕರು ವ್ಯಾಪಾರ, ಸಾರಿಗೆ, ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.
9) ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆಯೇ, ಯುವಕ- ಯುವತಿಯರ ಸಂಖ್ಯೆ ಈ ಕ್ಷೇತ್ರದಲ್ಲಿ ಉದ್ಯೋಗ ಪಡೆಯುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. 2023ರಲ್ಲಿ ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಯುವ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಪಡೆದಿತ್ತು. ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳಲ್ಲಿ ತೊಡಗಿಕೊಂಡಿದ್ದ ಯುವಕರ ಪ್ರಮಾಣ ಶೇ 12.9ರಷ್ಟು ಇದ್ದಿದ್ದರೆ, ಮಹಿಳೆಯರ ಪ್ರಮಾಣ ಶೇ 18.1ರಷ್ಟಿತ್ತು. ಇದು ಇಂತಹ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯುವಕರಿಗಿಂತ ಯುವತಿಯರೇ ಹೆಚ್ಚು ಉದ್ಯೋಗಸ್ಥರಾಗಿರುವುದನ್ನು ತೋರಿಸುತ್ತದೆ.
10) 2023ರ ಅಂಕಿ ಅಂಶಗಳ ಪ್ರಕಾರ, ಶೇ.23.1ರಷ್ಟು ಯುವತಿಯರು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರೆ, ಕೇವಲ ಶೇ. 5.4ರಷ್ಟು ಮಂದಿ ಯುವಕರು ಈ ಕ್ಷೇತ್ರದಲ್ಲಿ ಉದ್ಯೋಗಸ್ಥರಾಗಿದ್ದರು. ಶೇ. 13.5ರಷ್ಟು ಯುವತಿಯರು ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿದ್ದರೆ, ಶೇ. 13.9ರಷ್ಟು ಯುವಕರು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಉದ್ಯೋಗಸ್ಥರಾಗಿದ್ದರು.




