ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಯ ಬಿಕ್ಕಟ್ಟು ಮುಂದುವರಿದಿರುವ ಹೊತ್ತಿನಲ್ಲೇ, ನಟ-ರಾಜಕಾರಣಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ವಿರುದ್ಧ ‘ವಿಡುತಲೈ ಚಿರುತೈಗಳ್ ಕಚ್ಚಿ’ (ವಿಸಿಕೆ) ತೀವ್ರವಾಗಿ ವಾಗ್ದಾಳಿ ನಡೆಸಿದೆ. ಸರ್ಕಾರ ರಚಿಸಲು ಬಹುಮತ ಕ್ರೋಢೀಕರಿಸುವ ನಿಟ್ಟಿನಲ್ಲಿ ಇತರ ಪಕ್ಷಗಳ ನಾಯಕರನ್ನು ನೇರವಾಗಿ ಭೇಟಿಯಾಗಿ ಮಾತನಾಡುವ ಬದಲು, ಕೇವಲ ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಬೆಂಬಲ ಕೇಳಿರುವ ಟಿವಿಎಕೆ ನಡೆಯನ್ನು ವಿಸಿಕೆ ಕಟುವಾಗಿ ಟೀಕಿಸಿದೆ.
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಸಿಕೆ ಪ್ರಧಾನ ಕಾರ್ಯದರ್ಶಿ ಸಿಂತನೈ ಸೆಲ್ವನ್, “ಸರ್ಕಾರ ರಚಿಸಲು ಸ್ಪಷ್ಟ ಬಹುಮತ ಇಲ್ಲದ ಈ ಸಂದರ್ಭದಲ್ಲಿ, ವಿಜಯ್ ಅವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿತ್ತು. ಬೆಂಬಲ ಕೇಳಲು ಇತರ ಪಕ್ಷಗಳ ನಾಯಕರನ್ನು ಅವರು ಮುಖಾಮುಖಿಯಾಗಿ ಭೇಟಿ ಮಾಡಿ ಚರ್ಚಿಸಬೇಕಿತ್ತಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡಿನಲ್ಲಿ ತುಮಕೂರು ಮೂಲದ ಕನ್ನಡಿಗನ ಜಯಭೇರಿ; ಟಿವಿಕೆ ಪಕ್ಷದಿಂದ ಸುನಿಲ್ ಆನಂದ್ ಶಾಸಕ
“ಎರಡನೇ ಹಂತದ ನಾಯಕರ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರ ವಹಿಸುವ ಬಗ್ಗೆ ಹಾಗೂ ರಾಜ್ಯಪಾಲರ ಮೂಲಕ ಬಿಜೆಪಿ ತಮಿಳುನಾಡಿಗೆ ಪ್ರವೇಶಿಸುವುದನ್ನು ತಡೆಯುವ ಅಗತ್ಯದ ಬಗ್ಗೆ ವಿಜಯ್ ಅವರು ಮುಕ್ತವಾಗಿ ಚರ್ಚಿಸಬೇಕಿತ್ತಲ್ಲವೇ? ಕೇವಲ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, ಅದಕ್ಕೆ ಪ್ರತಿಕ್ರಿಯಿಸಿ ಎಂದು ಬೆಂಬಲ ಕೇಳುವುದನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?” ಎಂದು ಸೆಲ್ವನ್ ಖಾರವಾಗಿ ಕೇಳಿದ್ದಾರೆ.
ಸರ್ಕಾರ ರಚನೆಯ ಈ ಮಹತ್ವದ ಹಂತದಲ್ಲಿ, ವಿಜಯ್ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ ಹಾಗೂ ಅವರು ಬೇರೆಯವರ ಮಾತಿಗೆ ಕಟ್ಟುಬಿದ್ದು ದಾರಿ ತಪ್ಪುತ್ತಿದ್ದಾರೆ ಎಂಬುದು ವಿಸಿಕೆ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.




