ಹಿರಿಯ ಕಾಂಗ್ರೆಸ್ ನಾಯಕ ವಿ ಡಿ ಸತೀಶನ್ ಅವರನ್ನು ಕೇರಳದ ಮುಂದಿನ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿ ಪಕ್ಷದ ಕಾರ್ಯಕರ್ತನೋರ್ವ ಆತ್ಮಹತ್ಯೆ ಮಾಡಲು ಯತ್ನಿಸಿದ ಘಟನೆ ಶುಕ್ರವಾರ ಕೇರಳದ ಕೊಟ್ಟಾಯಂನ ಕಡುತುರುತಿಯ ಕುರುಪಂತರ ಜಂಕ್ಷನ್‌ನಲ್ಲಿ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತ ಫ್ರಾನ್ಸಿಸ್ ಜಾನ್, ಜಂಕ್ಷನ್‌ನಲ್ಲಿ ತನ್ನ ಆಟೋರಿಕ್ಷಾ ಪಿಕಪ್ ವಾಹನದ ಹಿಂಭಾಗಕ್ಕೆ ಹತ್ತಿ ಸತೀಶನ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದಾರೆ. ಅದಾದ ಬಳಿಕ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ ಸಿಎಂ ಸ್ಥಾನಕ್ಕಾಗಿ ಸ್ಪರ್ಧೆ ಬಿಗಿ: ಕಾಂಗ್ರೆಸ್‌ನ ಉನ್ನತ ನಾಯಕರನ್ನು ಭೇಟಿಯಾದ ರಮೇಶ್ ಚೆನ್ನಿತ್ತಲ
ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಅನಾಹುತವನ್ನು ತಪ್ಪಿಸಿದ್ದಾರೆ. ಕಾಡುತುರುತಿ ಪೊಲೀಸರು ಫ್ರಾನ್ಸಿಸ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯವನ್ನು ತಿಳಿದೂ ಮಾಡಿದ್ದಕ್ಕಾಗಿ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118(ಇ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕವಾಗಿ ಈ ಕೃತ್ಯವು ರಾಜಕೀಯ ಪ್ರೇರಿತವಾಗಿದೆ ಎಂದು ತಿಳಿದುಬಂದಿದೆ. ಆ ವ್ಯಕ್ತಿಗೆ ಯಾವುದೇ ವೈಯಕ್ತಿಕ ಅಥವಾ ಮಾನಸಿಕ ಆರೋಗ್ಯ ಸಮಸ್ಯೆಗಳು ಇದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಇನ್ನು ಸತೀಶನ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿ ಕೇರಳದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ ಈ ಘಟನೆ ನಡೆದಿದೆ. ಪುತುಪ್ಪಳ್ಳಿ ಮತ್ತು ಕೊಟ್ಟಾಯಂನ ಇತರ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸತೀಶನ್ ಅವರನ್ನು ಬೆಂಬಲಿಸಿ ಮೆರವಣಿಗೆಗಳನ್ನು ನಡೆಸಲು ಮುಂದಾಗಿದ್ದಾರೆ.
ಇನ್ನು ಪೆರಾವೂರ್, ತೋಡುಪುಳ, ಎರ್ನಾಕುಲಂ ಮತ್ತು ಪರವೂರು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸತೀಶನ್ ಪರವಾಗಿ ಮೆರವಣಿಗೆಗಳು ನಡೆದಿದೆ.
ಸತೀಶನ್ ಹೊರತುಪಡಿಸಿ, ಕೆ ಸಿ ವೇಣುಗೋಪಾಲ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಕೂಡಾ ಕೇರಳ ಸಿಎಂ ರೇಸ್‌ನಲ್ಲಿದ್ದಾರೆ. ವೇಣುಗೋಪಾಲ್ ಶಾಸಕರಾಗಿಲ್ಲದಿದ್ದರೂ ಹೆಚ್ಚಿನ ಶಾಸಕರು ವೇಣುಗೋಪಾಲ್ ಅವರು ಸಿಎಂ ಆಗುವುದಕ್ಕೆ ಬೆಂಬಲ ಸೂಚಿಸುತ್ತಿರುವುದು ಕಾಂಗ್ರೆಸ್ ಬೆಂಬಲಿಗರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




