ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ಉಡುಪಿ ಜಿಲ್ಲೆಗೆ ನಿನ್ನೆ ಸಂಜೆಯ ಮಳೆ ತಂಪೆರೆದಿದೆ. 37ರಿಂದ 45 ಡಿಗ್ರಿ ತಾಪಮಾನದ ನಡುವೆ ನಲುಗಿದ್ದ ಕಲ್ಬುರ್ಗಿಯ ಕೆಲವೆಡೆ ನಿನ್ನೆ ಮಳೆಯಾಗಿದೆ. ಮುಂದಿನ 2 ದಿನಗಳು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಅಂದಾಜಿಸಿದೆ.
ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ನಿನ್ನೆ ಸಂಜೆ ಆಲಿಕಲ್ಲು ಸಮೇತ ಮಳೆ ಸುರಿದಿದೆ. ಜಿಲ್ಲೆಯ ಕಾಳಗಿ, ಕೋಡ್ಲಿ, ಕುಡಳ್ಳಿ ಗ್ರಾಮಗಳಲ್ಲೂ ಕೆಲಕಾಲ ಧಾರಾಕಾರ ಮಳೆಯಾಗಿದ್ದು ಸಂಜೆಯ ವೇಳೆಗೆ ತುಂತುರು ಮಳೆಯ ಸಿಂಚನವಾಗಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೆಲವು ಭಾಗಗಳಲ್ಲಿ ಜಡಿಮಳೆ ಸುರಿದಿದ್ದು ಅಲ್ಲಲ್ಲಿ ಆಲಿಕಲ್ಲು ಬಿದ್ದ ವರದಿಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 48 ಗಂಟೆಗಳವರೆಗೂ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು ಸಂಜೆ ಅಥವಾ ರಾತ್ರಿಯ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಇಂದು ಸಂಜೆ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 30ರಿಂದ 40 ಕಿಲೊಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ> ಉಡುಪಿ | ಕಾದ ಸಮುದ್ರ: ಬರಿದಾದ ಮೀನುಗಾರರ ಬದುಕು
ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮೇ 8 ಮತ್ತು 9 ರಂದು ಗುಡುಗು ಸಹಿತ ಮಳೆಯಾಗುವ ಸಂಭವವಿದ್ದು, ಉತ್ತರ ಒಳನಾಡಿನ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮೇ 8ರಂದು ಧಾರಾಕಾರ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ನಡುವೆಯೂ ತಾಪಮಾನ ಏರಿಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೆಲ ದಿನಗಳವರೆಗೂ 38ರಿಂದ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸುಡು ಧಗೆಯ ನಡುವೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
ಪೋಸ್ಟ್ ಹಂಚಿಕೊಳ್ಳಿ:




