ಪಶ್ಚಿಮ ಬಂಗಾಳದ ಮಾಜಿ ಉಪ ಸಭಾಪತಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಿರಿಯ ನಾಯಕ ಆಶಿಶ್ ಬ್ಯಾನರ್ಜಿ ಅವರು ಶವವಾಗಿ ಪತ್ತೆಯಾಗಿದ್ದಾರೆ. ಅವರ ಮೃತದೇಹವು ಬೀರ್‌ಭೂಮ್ ಜಿಲ್ಲೆಯ ರಾಂಪುರ್‌ಹಾಟ್‌ನ ಹಟ್ಟಲ ಪಾರಾದಲ್ಲಿರುವ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಘಟನಾ ಸ್ಥಳದಿಂದ ಆತ್ಮಹತ್ಯೆ ಪತ್ರವೊಂದನ್ನು ವಶಪಡಿಸಿಕೊಂಡಿರುವ ಪೊಲೀಸರು, ಮರಣದ ಹಿಂದಿನ ನಿಖರ ಕಾರಣವನ್ನು ತಿಳಿಯಲು ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಡೆತ್‌ನೋಟ್‌ನಲ್ಲಿ, ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬ್ಯಾನರ್ಜಿ ಬರೆದಿದ್ದಾರೆ. ಅಲ್ಲದೆ, ರಾಜಕೀಯ ಪ್ರವೇಶಿಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಆಶಿಶ್ ಬ್ಯಾನರ್ಜಿ ಅವರು 2001 ರಿಂದ 2026 ರವರೆಗೆ ರಾಂಪುರ್‌ಹಾಟ್ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಶಾಲಾ ಶಿಕ್ಷಣ ಮತ್ತು ಕೃಷಿ ಇಲಾಖೆಗಳ ಸಚಿವರಾಗಿ ಹಾಗೂ ವಿಧಾನಸಭಾ ಉಪ ಸಭಾಪತಿಯಾಗಿ ಸೇವೆಯಲ್ಲಿದ್ದರು. ಇತ್ತೀಚೆಗೆ ನಡೆದ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಧ್ರುವ ಸಹಾ ವಿರುದ್ಧ 24,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನುಭವಿಸಿದ್ದರು. ನಂತರ, ಅವರು ಸಕ್ರಿಯ ರಾಜಕೀಯದಿಂದ ಕೊಂಚ ದೂರ ಉಳಿದಿದ್ದರು.
ಬಂಗಾಳದಲ್ಲಿ ಟಿಎಂಸಿಯ 15 ವರ್ಷಗಳ ಆಡಳಿತ ಅಂತ್ಯಗೊಂಡ ನಂತರದ ಬದಲಾದ ರಾಜಕೀಯ ಸನ್ನಿವೇಶದ ಮಧ್ಯೆ ಈ ಘಟನೆ ಸಂಭವಿಸಿದೆ. ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.



