ಮರಣದಂಡನೆ ಶಿಕ್ಷೆಗೆ ಜಾಗತಿಕವಾಗಿ ತಾತ್ಕಾಲಿಕ ತಡೆ ಹೇರುವಂತೆ ಎಲ್ಲ ರಾಷ್ಟ್ರಗಳಿಗೆ ಕರೆ ನೀಡುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಕರಡು ನಿರ್ಣಯವನ್ನು ಭಾರತ ವಿರೋಧಿಸಿದೆ. ನಿರ್ಣಯದ ವಿರುದ್ಧ ಮತ ಚಲಾಯಿಸಿದೆ.
ಮರಣದಂಡನೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಉದ್ದೇಶದಿಂದ ವಿಶ್ವದ ಎಲ್ಲ ರಾಷ್ಟ್ರಗಳು ತಮ್ಮಲ್ಲಿರುವ ಗಲ್ಲುಶಿಕ್ಷೆ ಕಾನೂನಿಗೆ ತಡೆ ನೀಡಬೇಕೆಂದು ನಿರ್ಣಯದಲ್ಲಿ ಪ್ರಸ್ತಾಪಿಸಲಾಗಿತ್ತು. 193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಮರಣದಂಡನೆ ಬಳಕೆ ಮೇಲೆ ತಡೆ’ ಎಂಬ ಶೀರ್ಷಿಕೆಯಡಿ ಈ ನಿರ್ಣಯವನ್ನು ಮೆಕ್ಸಿಕೋ ಮಂಡಿಸಿತ್ತು.
“ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಸೂಕ್ತ ಕಾನೂನು ಶಿಕ್ಷೆಗಳನ್ನು ನಿರ್ಧರಿಸುವುದು, ತಮ್ಮದೇ ಆದ ಕಾನೂನು ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಪ್ರತಿಯೊಂದು ದೇಶಗಳ ಸಾರ್ವಭೌಮ ಹಕ್ಕು. ಆದಾಗ್ಯೂ, ಮರಣದಂಡನೆಯನ್ನು ರದ್ದುಗೊಳಿಸುವ ದೃಷ್ಟಿಯಿಂದ ಎಲ್ಲ ರಾಷ್ಟ್ರಗಳು ಗಲ್ಲುಶಿಕ್ಷೆಗೆ ತಡೆ ನೀಡಬೇಕು. ಈಗಾಗಲೇ ಮರಣದಂಡನೆಯನ್ನು ರದ್ದುಗೊಳಿಸಿರುವ ರಾಷ್ಟ್ರಗಳು ಅದನ್ನು ಮತ್ತೆ ಜಾರಿಗೆ ತರಬಾರದು” ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಾಗಿದೆ.
“ಮರಣದಂಡನೆಯ ಬಳಕೆಯನ್ನು ಹಂತ-ಹಂತವಾಗಿ ನಿರ್ಬಂಧಿಸಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮಾಡಿದ ಅಪರಾಧಗಳಿಗೆ ಅಥವಾ ಅಪರಾಧ ನಡೆದ ಸಮಯದಲ್ಲಿ ಆರೋಪಿಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಿತ್ತು ಎಂಬುದನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಾಗದ ಪ್ರಕರಣಗಳಲ್ಲಿ ಗಲ್ಲುಶಿಕ್ಷೆಯನ್ನು ವಿಧಿಸಬಾರದು” ಎಂದು ಎಲ್ಲ ರಾಷ್ಟ್ರಗಳಿಗೆ ಸೂಚಿಸಲಾಗಿದೆ.

ಜೊತೆಗೆ, “ಗರ್ಭಿಣಿಯರು, ಮಾನಸಿಕ ಅಥವಾ ಬೌದ್ಧಿಕ ಅಸಮರ್ಥತೆ ಹೊಂದಿರುವವರು ಹಾಗೂ ವೃದ್ಧರಿಗೆ ಮರಣದಂಡನೆ ವಿಧಿಸುವುದನ್ನು ನಿರ್ಬಂಧಿಸಬೇಕು. ಕಡ್ಡಾಯವಾಗಿ ಮರಣದಂಡನೆ ವಿಧಿಸುವ ನಿಯಮಗಳನ್ನು ರದ್ದುಗೊಳಿಸುವ ಮೂಲಕ ಗಲ್ಲುಶಿಕ್ಷೆಗೆ ಒಳಪಡುವ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು” ಎಂದು ನಿರ್ಣಯ ಪ್ರತಿಪಾದಿಸಿದೆ.
ಈ ಲೇಖನ ಓದಿದ್ದೀರಾ?: ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?
ಈ ನಿರ್ಣಯದ ಮೇಲೆ ಶುಕ್ರವಾರ ಮತದಾನ ನಡೆದಿದೆ. ನಿರ್ಣಯದ ಪರವಾಗಿ ಒಟ್ಟು 133 ರಾಷ್ಟ್ರಗಳು ಮತ ಚಲಾಯಿಸಿದರೆ, 33 ರಾಷ್ಟ್ರಗಳು ವಿರುದ್ಧವಾಗಿ ಮತ ಹಾಕಿವೆ ಹಾಗೂ 16 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ. ಬಹುಮತದ ಬೆಂಬಲದೊಂದಿಗೆ ನಿರ್ಣಯ ಅಂಗೀಕಾರಗೊಂಡಿದೆ.
ಆದಾಗ್ಯೂ, ನಿರ್ಣಯದ ವಿರುದ್ಧ ಮತ ಚಲಾಯಿಸಿದ ರಾಷ್ಟ್ರಗಳಲ್ಲಿ ಭಾರತ, ಅಮೆರಿಕ, ಚೀನಾ, ಜಪಾನ್, ಪಾಕಿಸ್ತಾನ, ಸೌದಿ ಅರೇಬಿಯಾ, ಇರಾನ್, ಇರಾಕ್, ಬಹ್ರೇನ್, ಈಜಿಪ್ಟ್, ಕುವೈತ್, ಮಾಲ್ಡೀವ್ಸ್, ಒಮಾನ್ ಹಾಗೂ ಕತಾರ್ ಸೇರಿದಂತೆ ಒಟ್ಟು 33 ರಾಷ್ಟ್ರಗಳು ಸೇರಿಸಿವೆ.


