ಕಾಂಗ್ರೆಸ್ಸಿನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿ ಸ್ಪರ್ಧಿಸುತ್ತಿರುವ ಹುರಿಯಾಳುಗಳಿಗೆ “ಕಾಂಗ್ಬಿಜೆಪಿ” ಎಂಬುದಾಗಿ ‘ಹೈಬ್ರೀಡ್’ ಹೆಸರಿಟ್ಟಿದ್ದಾರೆ ಅಸ್ಸಾಮಿನ ‘ಜೆನ್ ಝೀ’ ಮತದಾರರು.
ಬಿಜೆಪಿಯ ಮುಖ್ಯಮಂತ್ರಿ ಹಿಮಂತ ಸರ್ಮ ಸೇರಿದಂತೆ ಕಾಂಗ್ರೆಸ್ಸಿನ ಸುಮಾರು 30 ಮಂದಿ ನಾಯಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ ಕಳೆದ 10 ವರ್ಷಗಳಲ್ಲಿ. ಬಿಜೆಪಿಯಲ್ಲಿ 35 ವರ್ಷಗಳ ಕಾಲ ಇದ್ದರೂ ಟಿಕೆಟ್ ನಿರಾಕರಿಸಿದ ಕಾರಣ ನೀಡಿ ಹೊರಬಿದ್ದಿರುವ ಜಯಂತಕುಮಾರ್ ದಾಸ್, ದಿಸ್ಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಬ್ರ್ಯಾಂಡ್ ರಾಜಕಾರಣದಿಂದ ಬೇಸತ್ತಿರುವುದಾಗಿ ಹೇಳುವ ಅವರು ‘ತೃಣಮೂಲ ಬಿಜೆಪಿ’ ಎಂಬ ಹೊಸ ಪಾರ್ಟಿ ಸ್ಥಾಪಿಸುತ್ತಾರಂತೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಡಿಎನ್‌ಎ ಹೊಂದಿರುವ ತಮ್ಮ ಹೊಸ ಪಕ್ಷ ತನ್ನ ಪ್ರತಿಸ್ಪರ್ಧಿಗಳನ್ನು ಸೋಲಿಸಲಿದೆಯಂತೆ.
ಇದನ್ನು ಓದಿದ್ದೀರಾ? ಮಾಂಸಾಹಾರಕ್ಕೆ ವಿರೋಧವಿಲ್ಲ ಎಂದು ಮೀನು ಮಾಲೆ ಧರಿಸಿ ಬಿಜೆಪಿ ಪ್ರಚಾರ!
ದಿಸ್ಪುರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೀರಾ ಬೋರ್ಠಾಕೂರ್ ಗೋಸ್ವಾಮಿ ಈ ಹಿಂದೆ ಬಿಜೆಪಿಯಲ್ಲಿದ್ದವರು. 2018ರಲ್ಲಿ ಹೊರಬಿದ್ದು ಕಾಂಗ್ರೆಸ್ ಸೇರಿದ್ದರು. ಕೋಮು ಧೃವೀಕರಣ ಸ್ಪೆಷಲಿಸ್ಟ್ ಆಗಿದೆ ಬಿಜೆಪಿ ಎಂಬುದು ಅವರ ದೂರು. ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರದ್ಯುತ್ ಬೊರ್ದೊಲೋಯ್ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ತೊರೆದವರು.
ಜನ ಪಕ್ಷಾಂತರ ಮಾಡುತ್ತಾರೆ, ಆದರೆ ಬೋರ್ದೊಲೋಯ್ ಪಕ್ಷಾಂತರವು ಅಪ್ಪಟ ಅಧಿಕಾರದ ದುರಾಶೆಯಿಂದ ಕೂಡಿದೆ ಎಂಬುದು ಗೋಸ್ವಾಮಿ ಅನಿಸಿಕೆ. ಕಾಂಗ್ರೆಸ್ಸಿನಲ್ಲಿದ್ದು ಕಳೆದುಕೊಂಡ ಅಧಿಕಾರ ಬಿಜೆಪಿಯಲ್ಲಿ ಸಿಕ್ಕಿದೆ ಎನ್ನುತ್ತಾರೆ ಬೋರ್ದೋಲೋಯ್




