ಬಿಜೆಪಿಯವರು ನಾವು ಮಾಂಸ ಮೀನು ತಿಂತೀವಿ, ಮಾಂಸಾಹಾರ ಸೇವನೆಗೆ ಬಿಜೆಪಿ ವಿರೋಧ ಇಲ್ಲ ಎಂದು ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕವಾಗಿ ಹೇಳಬೇಕಾದ ಪರಿಸ್ಥಿತಿಯನ್ನು ತಲುಪಿದೆ ಭಾರತೀಯ ಜನತಾ ಪಾರ್ಟಿ.
ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಯಾವುದಕ್ಕೂ ಸಿದ್ಧ. ತಾನು ಅಧಿಕಾರದಲ್ಲಿರುವ ಗೋವಾ ಮತ್ತು ಈಶಾನ್ಯ ಭಾರತದಲ್ಲಿ ಬೀಫ್ ಸೇವನೆಯ ವಿರುದ್ಧ ಚಕಾರ ಎತ್ತಲಿಲ್ಲ. ಬದಲಿಗೆ ತನಗೆ ಯಾವ ಅಭ್ಯಂತರವೂ ಇಲ್ಲ ಎಂದು ಚುನಾವಣೆಗಳಲ್ಲಿ ಸಾರಿ ಹೇಳಬೇಕಾಯಿತು.
ಸ್ವಾಮಿ ವಿವೇಕಾನಂದರಿಗೆ ಮಾಂಸಾಹಾರ ಬಹು ಪ್ರಿಯವಾಗಿತ್ತು ಎಂಬ ಬರೆಹಗಳನ್ನು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಪಕ್ಷ ಪರಿವಾರದವರು ಬಹುವಾಗಿ ವಿರೋಧಿಸಿ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಟ್ರೋಲ್ ಮಾಡಿದ್ದುಂಟು.
“ಕಾಳೀ ಮಾತೆ ಮಟನ್ ಸೇವಿಸುತ್ತಾಳೆಂದು ಸ್ವಾಮಿ ವಿವೇಕಾನಂದರೇ ಹೇಳಿದ್ದರು. ಎಲ್ಲ ಬಂಗಾಳಿಗಳು ಮತ್ತು ಬಿಹಾರಿಗಳು ಮಟನ್ ತಿಂತಾರೆ. ಯಾರಾದರೂ ನಿಲ್ಲಿಸಲು ಬಂದರೆ, ಅಂತಹ ನಿರ್ಬಂಧವನ್ನು ಚಚ್ಚಿ ಹಾಕುತ್ತೇನೆ” ಎಂಬುದಾಗಿ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಹೇಳಿಕೆ ನೀಡಿದ್ದಾರೆ. ಮಾಂಸಾಹಾರ ಮಾರಾಟವನ್ನು ನಿರ್ಬಂಧಿಸುವುದಾಗಿ ಬಿಹಾರದ ಉಪಮುಖ್ಯಮಂತ್ರಿ ವಿಜಯಕುಮಾರ್ ಸಿನ್ಹಾ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದರು.
ದೆಹಲಿಯಿಂದ ಬರುವವರು ಬಂಗಾಳವನ್ನು ಆಕ್ರಮಿಸಲು ಬಿಡಕೂಡದು. ಅವರಿಗೆ ಬಂಗಾಳದ ಸಂಸ್ಕೃತಿ ಏನೆಂದೇ ಗೊತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಂಸಾಹಾರ ಸೇವನೆಯನ್ನು ತಡೆಯಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಚುನಾವಣಾ ಪ್ರಚಾರದಲ್ಲಿ ಆಪಾದಿಸಿದ್ದಾರೆ. ಬಿಜೆಪಿಗೆ ಭೀತಿಯ ರಾವು ಬಡಿದಿದೆ, ಅದಕ್ಕೇ ಅದರ ಉಮೇದುವಾರರು ಕುತ್ತಿಗೆಗೆ ಮೀನಿನ ಮಾಲೆ ಹಾಕಿಕೊಂಡು ತಿರುಗುತ್ತಿದ್ದಾರೆ. ಬಂಗಾಳದಲ್ಲಿ ಮೀನು ತಿನ್ನಲು ಬಿಡುವುದಿಲ್ಲವೆಂದು ಬಿಜೆಪಿಯ ನಾಯಕರು ದೆಹಲಿಯಲ್ಲಿ ಹೇಳುತ್ತಾರೆ. ಅದೇ ಪಕ್ಷದ ಸ್ಥಳೀಯ ನಾಯಕರನ್ನು ಸೋಲಿನ ದಿಗಿಲು ಕಾಡಿದೆ. ಅಭ್ಯರ್ಥಿಗಳು ಮೀನು ಹಿಡಿದು ಪ್ರಚಾರದಲ್ಲಿ ತೊಡಗಿದ್ದಾರೆಂದು ಲೇವಡಿ ಮಾಡಿದ್ದಾರೆ ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಕುನಾಲ್ ಘೋಷ್.
ಇದನ್ನು ಓದಿದ್ದೀರಾ? ಸರ್ವರನ್ನೂ ತಬ್ಬುವವಳು ತಾಯಿ ಗಂಗೆ; ಇಫ್ತಾರ್ ಊಟದಿಂದ ಆಕೆಯ ಉದಾರ ಮಡಿಲು ಮಲಿನವಾಗದು
ಶರದ್ವತ್ ಮುಖರ್ಜಿ ಮತ್ತು ಶಿಯಾಮಿಕ್ ಭಟ್ಟಾಚಾರ್ಯ ಅವರಂತಹವರು ಬಿಜೆಪಿ ಕುರಿತ ಈ ಗ್ರಹಿಕೆಯನ್ನು ತೊಡೆದು ಹಾಕಲು ಕಠಿಣವಾಗಿ ಶ್ರಮಿಸಿದ್ದಾರೆ. ಜನಸಂಘವನ್ನು ಹುಟ್ಟಿ ಹಾಕಿದ ಶ್ಯಾಮಪ್ರಸಾದ್ ಮುಖರ್ಜಿ ಬಂಗಾಳಿಯಾಗಿದ್ದರು ಎಂಬ ಅಂಶವನ್ನು ಮತದಾರರ ಮುಂದೆ ಮಂಡಿಸತೊಡಗಿದ್ದಾರೆ.
ಎರಡು ತಿಂಗಳ ಹಿಂದೆ ಜನವರಿಯಲ್ಲಿ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಹಿಂದುತ್ವ ಸಂಘಟನೆಯೊಂದು ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದ ಸುತ್ತಮುತ್ತ ಚಿಕನ್ ಪಫ್ಸ್ ಮಾರುತ್ತಿದ್ದ ವ್ಯಕ್ತಿಯನ್ನು ಹಿಡಿದು ಥಳಿಸಲಾಗಿತ್ತು. ರಾಜ್ಯ ಬಿಜೆಪಿ ನಾಯಕರು ಈ ಥಳಿಸುವಿಕೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ನವರಾತ್ರಿಯ ಸಂದರ್ಭದಲ್ಲಿ ಮೀನು ಮಾಂಸ ಮಾರಾಟ ಮಾಡದಂತೆ ದೇಶಾದ್ಯಂತ ಹೇರಲಾದ ನಿರ್ಬಂಧ ಬಂಗಾಳದಲ್ಲಿ ಆತಂಕ ಹುಟ್ಟಿಸಿತ್ತು.




